ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು 500 ರೂ. ಮತ್ತು 1,000 ರೂ. ಕರೆನ್ಸಿ ನೋಟುಗಳನ್ನು ಅಮಾನ್ಯಗೊಳಿಸಿದ ಹತ್ತು ತಿಂಗಳ ಬಳಿಕ ಸರಕಾರ ಗಣೇಶ ಚತುರ್ಥಿಯ ದಿನದಂದು ಹೊಸ 200 ರೂ. ನೋಟುಗಳನ್ನು ಬಿಡುಗಡೆಗೊಳಿಸಿದೆ. ಆದರೆ ಈ ಹೊಸ ನೋಟುಗಳು ಸದ್ಯ ದೇಶದ ಎಲ್ಲ ಎಟಿಎಂ ಗಳಲ್ಲಿ ಸಿಗುವುದಿಲ್ಲ ಎಂಬುದನ್ನು ಅರಿತು ಗ್ರಾಹಕರು ನಿರಾಶರಾಗಿದ್ದಾರೆ.
ಎಟಿಎಂಗಳಲ್ಲಿ 10, 20 ಮತ್ತು 50ರ ನೋಟುಗಳು ಸಿಗದಿರುವಂತೆಯೇ 200 ರೂ. ನೋಟುಗಳು ಸಿಗುವುದಿಲ್ಲ; ಕಾರಣ ಎಟಿಎಂ ಮಶೀನ್‌ಗಳಲ್ಲಿ ಈ ನೋಟುಗಳಿಗೆ ಕಾನ್‌ಫಿಗರೇಶನ್ ಮಾಡಿರುವುದಿಲ್ಲ ಎಂದು ಮೂಲಗಳು ಹೇಳಿವೆ.
ಹಾಗಾಗಿ 200 ರೂ. ಹೊಸ ನೋಟುಗಳು ಸದ್ಯಕ್ಕೆ ಬ್ಯಾಂಕಿನ ಶಾಖೆಗಳಲ್ಲಿ ಮಾತ್ರವೇ ಸಿಗುತ್ತವೆ; ಕ್ರಮೇಣ ಅವುಗಳ ಚಲಾವಣೆ ಮಾರುಕಟ್ಟೆಗಳಲ್ಲಿ ಬಿರುಸು ಪಡೆದಂತೆಯೇ ಅವು ಜನರ ಕೈಗಳಲ್ಲಿ ಸರಾಗವಾಗಿ ಓಡಾಡಲು ತೊಡಗುತ್ತವೆ ಎಂದು ಮೂಲಗಳು ಹೇಳಿವೆ.
500 ರೂ. ನೋಟುಗಳಿಗಿಂತ ಸ್ವಲ್ಪ ಮಟ್ಟಿನ ಸಣ್ಣ ಗಾತ್ರದಲ್ಲಿರುವ 200 ರೂ. ಹೊಸ ನೋಟುಗಳನ್ನು ಸದ್ಯ 2 ಲಕ್ಷ ಎಟಿಎಂ ಗಳಲ್ಲಿ ಮಾತ್ರವೇ ಕಾನ್‌ಫಿಗರ್ ಮಾಡಲಾಗಿದೆ. ಈ ಸಂಖ್ಯೆ ಬಹಳ ನಗಣ್ಯವಿದೆ. ಹಾಗಿದ್ದರೂ ಕಾಲಕ್ರಮದಲ್ಲಿ ದೇಶದ ಎಲ್ಲ ಎಟಿಎಂ ಗಳಲ್ಲಿ 200 ರೂ. ನೋಟು ಸಿಗುವುದಕ್ಕೆ ಕಾನ್‌ಫಿಗರೇಶನ್ ಮಾಡಲಾಗುವುದು ಎಂದು ಮೂಲಗಳು ಹೇಳಿವೆ.
200 ರೂ. ಹೊಸ ನೋಟು ಕಡು ಹಳದಿ ಬಣ್ಣದಲ್ಲಿದ್ದು ಮಹಾತ್ಮಾ ಗಾಂಧಿ (ಹೊಸ) ಸರಣಿಗೆ ಆಗಿರುವ ಹೊಸ ಸೇರ್ಪಡೆಯಾಗಿದೆ; ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ಸಹಿ ಇದೆ. ಹಿಂಭಾಗದಲ್ಲಿ ಸಾಂಚಿ ಸ್ತೂಪದ ಚಿತ್ರವಿದ್ದು ಇದು ದೇಶದ ಸಾಂಸ್ಕೃತಿಕ ಪರಂಪರೆಯ ದ್ಯೋತಕವಾಗಿದೆ.