ಫ್ಯಾಷನ್ ಜಗತ್ತು, ದಿನದಿನಕ್ಕೂ ಬದಲಾಗುತ್ತಿರುತ್ತದೆ. ಇವತ್ತಿನ ಟ್ರೆಂಡ್ ನಾಳೆ ಹಳೆಯದಾಗಿ, ನಾಡಿದ್ದು ಮಾಯವೇ ಆಗಿಬಿಡಬಹುದು. ಹಾಗಾಗಿ, ಟ್ರೆಂಡ್‌ಗೆ ತಕ್ಕಂತೆ ನಾವೂ ಬದಲಾಗುತ್ತಿರಬೇಕು. ಹೊಸತೊಂದು ಫ್ಯಾಷನ್‌ನ ಡ್ರೆಸ್ ಮಾರುಕಟ್ಟೆಗೆ ಬಂದಿದೆ ಅಂತಾದಾಗ, ಎಲ್ಲರೂ ಮುಗಿಬಿದ್ದು ಅದನ್ನು ಖರೀದಿಸುತ್ತಾರೆ. ಆದರೆ, ಆ ಸ್ಟೈಲ್ ತಮಗೆ ಸೂಟ್ ಆಗುತ್ತದೋ ಇಲ್ಲವೋ ಅಂತ ಯೋಚಿಸುವುದೇ ಇಲ್ಲ. ಅಂಥವರಿಗಾಗಿ ಇಲ್ಲಿ ಕೆಲವೊಂದಷ್ಟು ಟಿಪ್ಸ್‌ಗಳಿವೆ. ಹೊಸ ಡ್ರೆಸ್ ಖರೀದಿಸುವ ಮುನ್ನ ಇವುಗಳ ಕಡೆಗೆ ಗಮನ ಹರಿಸಿದರೆ ಒಳ್ಳೆಯದು.
ಬಾಡಿ ಶೇಪ್: ಮುಖವನ್ನು ಹೇಗೆ ದುಂಡುಮುಖ, ಚೌಕ ಮುಖ, ನೀಳಮುಖ ಅಂತ ಹೇಳುತ್ತೇವೆಯೋ ಹಾಗೆಯೇ, ದೇಹವನ್ನು ಕೂಡಾ ಆ್ಯಪಲ್ ಶೇಪ್, ಅವರ್‌ಗ್ಲಾಸ್ ಶೇಪ್, ರೌಂಡ್ ಶೇಪ್, ಪಿಯರ್ ಶೇಪ್ ಇತ್ಯಾದಿಯಾಗಿ ವಿಂಗಡಿಸಬಹುದು. ಹೊಸ ಫ್ಯಾಷನ್, ದೇಹದ ಆಕಾರಕ್ಕೆ ಹೊಂದುತ್ತದೆಯೇ ಅಂತ ಮೊದಲು ತಿಳಿದುಕೊಳ್ಳಬೇಕು.
ಬಣ್ಣ: ಫ್ಯಾಷನ್‌ಲೋಕದಲ್ಲಿ ಟ್ರೆಂಡಿಂಗ್‌ನಲ್ಲಿರುವ ಬಣ್ಣ ಯಾವುದೆಂದು ತಿಳಿದು, ಆ ಬಣ್ಣ ನಮ್ಮ ಮೈ ಬಣ್ಣಕ್ಕೆ ಒಪ್ಪುತ್ತದೆಯೋ ಅಂತ ಗುರುತಿಸಿಕೊಂಡು ಬಟ್ಟೆ ಖರೀದಿಸುವುದು ಉತ್ತಮ. ಉದಾಹರಣೆಗೆ, ಕಪ್ಪು ಬಣ್ಣದ ಬಟ್ಟೆಯಲ್ಲಿ ಯಾವುದೋ ಹೊಸ ಫ್ಯಾಷನ್ ಶುರುವಾಗಿದೆ ಅಂದುಕೊಳ್ಳಿ. ಆ ಬಣ್ಣವೇ ನಿಮಗೆ ಮ್ಯಾಚ್ ಆಗದಿದ್ದರೆ, ಅದು ಎಷ್ಟೇ ಗ್ರ್ಯಾಂಡ್ ಫ್ಯಾಷನ್ ಆಗಿದ್ದರೂ ಪ್ರಯೋಜನವಿಲ್ಲ. ಇದನ್ನು ಯೋಚಿಸದೆ ಬಟ್ಟೆ ಖರೀದಿಸಿದರೆ, ಫ್ಯಾಷನ್ ಹೋಗಿ ಅಭಾಸವಾಗಿ ಬಿಡಬಹುದು.
ಫ್ಯಾಬ್ರಿಕ್: ಶಿಫಾನ್, ಕಾಟನ್, ಸಿಲ್ಕ್, ಜಾರ್ಜೆಟ್… ಹೀಗೆ, ಹೊಸ ಸ್ಟೈಲ್‌ನ ಬಟ್ಟೆಯನ್ನು ಯಾವ ಫ್ಯಾಬ್ರಿಕ್‌ನಲ್ಲಿ ಧರಿಸಿದರೆ ಹೆಚ್ಚು ಆರಾಮದಾಯಕ ಅಂತ ಅರಿತುಕೊಳ್ಳಿ.
ಯಾವ ಸಂದರ್ಭ?: ಹೊಸ ಸ್ಟೈಲ್‌ನ ದಿರಿಸನ್ನು ಯಾವ ಸಂದರ್ಭದಲ್ಲಿ ಧರಿಸಬೇಕೆಂದು ಬಯಸಿದ್ದೀರಿ ಅನ್ನುವುದೂ ಕೂಡಾ ಮುಖ್ಯ. ಉದಾಹರಣೆಗೆ: ಹೊಸ ಬಟ್ಟೆಯನ್ನು ಆಫೀಸ್‌ಗೆ ಧರಿಸುವುದಾದರೆ ಕಾಟನ್, ಲಿನನ್, ಖಾದಿಯಂಥ ಫ್ಯಾಬ್ರಿಕ್‌ನಲ್ಲಿ ಕೊಳ್ಳುವುದೂ, ಕ್ಯಾಶುವಲ್ ಆಗಿ ಧರಿಸುವುದಾದರೆ ಶಿಫಾನ್, ಜಾರ್ಜೆಟ್‌ನಂಥ ಫ್ಯಾಬ್ರಿಕ್‌ನಲ್ಲಿ ಖರೀದಿಸುವುದು ಜಾಣತನ.
ಪ್ರಿಂಟ್, ಡಿಸೈನ್: ಬಟ್ಟೆಯ ಮೇಲಿನ ಪ್ರಿಂಟ್ ಮತ್ತು ಡಿಸೈನ್ ಅನ್ನು ಕೂಡಾ, ನೀವು ಯಾವ ಸಂದರ್ಭದಲ್ಲಿ ಧರಿಸುತ್ತೀರಿ ಎಂಬುದರ ಮೇಲೆ ಆಯ್ದುಕೊಳ್ಳಬೇಕಾಗುತ್ತದೆ. ಬೋಲ್ಡ್ ಅನ್ನಿಸುವ ಪ್ರಿಂಟ್, ಡಿಸೈನ್‌ಗಳನ್ನು ಆಫೀಸ್‌ಗೆ, ಸಾಂಪ್ರದಾಯಕ ಸಮಾರಂಭಗಳಿಗೆ ಧರಿಸಲಾಗುವುದಿಲ್ಲ.