ಇಂದು ನಾವು ವಿಜ್ಞಾನ ಯುಗದಲ್ಲಿ ವಾಸಿಸುತ್ತಿದ್ದೇವೆ ಹಾಗೂ ತಂತ್ರಜ್ಞಾನದಲ್ಲಿ ಅದ್ಭುತ ಮುನ್ನಡೆ ಸಾಧಿಸಿದ್ದೇವೆ. ವಿಜ್ಞಾನದ ಪದ್ಧತಿಯು ಪ್ರಯೋಗಮೂಲವಾಗಿದ್ದು ಪ್ರಮಾಣೀಕರಿಸಲು ಸಾಧ್ಯವಾಗದ್ದನ್ನು ಅದು ತಳ್ಳಿಹಾಕುತ್ತದೆ. ಆದರೆ, ಭಾರತೀಯ ಪರಂಪರೆಯಲ್ಲಿ ಜೀವನದ ಎಲ್ಲ ಸಂಗತಿಗಳನ್ನೂ ದೈವೀಮಯಗೊಳಿಸಬಹುದು ಎಂಬುದನ್ನು ವೇದ ಮತ್ತು ಉಪನಿಷತ್ ಋಷಿಗಳು ನಂಬಿದ್ದರು. ಪರಿಪೂರ್ಣತೆಯೆಡೆಗೆ ಕೊಂಡೊಯ್ಯಲು ವಿಶ್ವಶಕ್ತಿಗಳೊಡನೆ ಸಂಪರ್ಕ ಏರ್ಪಡಿಸಲಾಗದ ಯಾವ ಕ್ರಿಯೆಯೂ ಸಮಗ್ರ ಎನಿಸಲಾರದು ಎಂಬುದು ಋಷಿಗಳ ಅಭಿಮತವಾಗಿತ್ತು. ಬದುಕು ಮತ್ತು ಸಾವು ಒಂದಕ್ಕೊಂದು ತಳಕು ಹಾಕಿಕೊಂಡಿದೆ. ಸಾವು ಇರುವುದರಿಂದ ಬದುಕು ಅಶಾಶ್ವತ ಎನ್ನುವ ಸತ್ಯ ಆಧ್ಯಾತ್ಮಿಕ ಹುಡುಕಾಟಕ್ಕೆ ಆಸರೆ ನೀಡುತ್ತದೆ. ಮರಣಾನಂತರ ಏನು ಎನ್ನುವುದರ ಬಗ್ಗೆ ನಮ್ಮ ಚಿಂತನೆ ಏನೇನೂ ಸಾಲದು. ಭೌತಿಕ ಶರೀರವು ಇಲ್ಲವಾದಾಗ ಆ ಜೀವವು ಬೇರೊಂದು ನೆಲೆಯಲ್ಲಿ ಅತಂತ್ರವಾಗಿರುತ್ತದೆ ಎಂದು ಮರಣಾನಂತರದ ಸ್ಥಿತಿಯ ಬಗ್ಗೆ ನಾನಾ ರೀತಿಯ ಚಿಂತನೆಗಳು ಇವೆ. ಈ ಕಾರಣದಿಂದಲೇ ಆ ಜೀವಿಗೆ ಸದ್ಗತಿ ಸಿಗುವಂತೆ ಮಾಡಲು ನೆರವಾಗಲು ಶ್ರಾದ್ಧ ಕರ್ಮಗಳನ್ನು ನೆರವೇರಿಸಲಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಅಧ್ಯಾತ್ಮಿಕ ರೀತಿ-ನೀತಿಗಳೆಲ್ಲ ಮೌಡ್ಯ ಎಂದು ತಳ್ಳಿಹಾಕುವುದೂ ಇದೆ.
ಭಾರತೀಯ ಮೂಲದ ತತ್ವಶಾಸ್ತ್ರ ಪರಂಪರೆಗಳಲ್ಲಿ ಭೌತಿಕವಾಗಿ ಮರಣ ಹೊಂದಿದ ಜೀವಿ ಜೈವಿಕ ತುಡಿತದ ಪ್ರಭಾವದಿಂದ ಮುಕ್ತವಾಗದೇ ತನ್ನ ಸುರಕ್ಷಿತ ತಾಣದ ಕಡೆಗೆ ಹೋಗಲಾರದು. ಶ್ರಾದ್ಧ ಪ್ರಕ್ರಿಯೆ ಪ್ರಾಣಮಯ ಸ್ಥಿತಿಯಲ್ಲಿರುವ ಜೀವಿಗೆ ಸದ್ಗತಿ ದೊರಕಿಸಲು ನೆರವಾಗುತ್ತದೆ ಎನ್ನುವುದು ವ್ಯಾಪಕವಾಗಿ ಅಂಗೀಕರಿಸಲಾದ ಲೋಕದೃಷ್ಟಿ ಮತ್ತು ಅಗಲಿದ ವ್ಯಕ್ತಿಗೆ ಪ್ರೀತಿ ಗೌರವ ತೋರಿಸುವ ಆಚರಣೆಯೂ ಕೂಡ.
ಆದರೆ, ನಮ್ಮ ಪಿತೃಪ್ರಧಾನ ಸಮಾಜ ವ್ಯವಸ್ಥೆಯಲ್ಲಿ ಎಲ್ಲಾ ಅವಕಾಶಗಳೂ ಪುರುಷ ಪಕ್ಷಪಾತಿಯಾಗಿ, ತಮ್ಮ ಹೆತ್ತವರಿಗೆ ಹಾಗೂ ಸಂಬಂಧಿಗಳಿಗೆ ಶ್ರಾದ್ಧ ಮಾಡುವ ಹಕ್ಕನ್ನು ಮಹಿಳೆಯರಿಗೆ ಕೊಡಲಾಗಿಲ್ಲ. ಇದರಿಂದ ಗಂಡು ಸಂತತಿ ಇಲ್ಲದವರಿಗೆ ಸದ್ಗತಿ ಸಿಗುವುದಿಲ್ಲ ಎಂದು ಭಾವಿಸಲಾಗುತ್ತದೆ. ಇದರಿಂದ ಹೆಣ್ಣುಗಳನ್ನು ಅಸಡ್ಡೆ ಮಾಡುವುದು ಮತ್ತು ಗಂಡು ಸಂತಾನಕ್ಕಾಗಿ ಹಾತೊರೆಯುವುದು ಸಾಮಾನ್ಯ ಸಂಗತಿಯಾಗಿದೆ. ಸಮಾಜದಲ್ಲಿ ಪುರುಷ ಪ್ರಧಾನತೆ ಇನ್ನೂ ಉಳಿದುಕೊಂಡಿದೆಯಾದರೂ ಅದನ್ನು ಮರುವಿಮರ್ಶಿಸಿ ನಮ್ಮ ಸಂಪ್ರದಾಯಗಳಲ್ಲಿ ಮಹಿಳೆಯನ್ನು ಭಾಗಿಯಾಗುವಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ.
ಮಹಾರಾಷ್ಟ್ರದಲ್ಲಿ ಇಂದು ಮಹಿಳೆಯರೇ ವೈದಿಕವಾಗಿ ಎಲ್ಲ ರೀತಿಯ ವೈದಿಕ ಕರ್ಮ ಮಾಡುವುದನ್ನು ಕಲಿತಿದ್ದಾರೆ. ಮಹಿಳೆಯರಿಂದಾಗಿ ಕಡಿಮೆ ಖರ್ಚಿನಲ್ಲಿ ವೈದಿಕ ಕರ್ಮ ಮಾಡುವುದು ಹೆಚ್ಚು ಪ್ರಸಿದ್ಧಿ ಕಂಡಿದೆ. ಇನ್ನು ಮಾತೃಗಯಾದಲ್ಲಿ ಹೆಣ್ಣುಗಳೇ ತಮ್ಮ ಹೆತ್ತವರಿಗೆ ಶ್ರದ್ಧೆಯಿಂದ ಶ್ರಾದ್ಧ ಮಾಡುವ ಏರ್ಪಾಡುಗಳೂ ಇವೆ. ಗುಜರಾತಿನ ಸಿದ್ಧಾಪುರ ಎಂಬಲ್ಲಿ ಬಿಂದು ಸರೋವರದಲ್ಲಿ ಸ್ನಾನಮಾಡಿ ಶ್ರಾದ್ಧ ಮಾಡಿದರೆ ಸತ್ತವರಿಗೆ ಸದ್ಗತಿ ದೊರೆಯುತ್ತದೆ ಎಂಬ ಪ್ರತೀತಿಯೂ ಇದೆ. ಮತ್ತು ಸ್ತ್ರೀಯರೇ ತಮ್ಮ ಸಂಬಂಧಿಕರಿಗೆ ಶ್ರಾದ್ಧ ಮಾಡಿಸಲು ಎಲ್ಲ ಅನುಕೂಲಗಳನ್ನೂ ಇಲ್ಲಿ ಕಲ್ಪಿಸಿಕೊಡಲಾಗುತ್ತದೆ.
ಇಂತಹ ಸಂದರ್ಭಗಳಲ್ಲಿ ಸ್ತ್ರೀಯರೂ ತಮ್ಮ ನಿರ್ಣಯ ತೆಗೆದುಕೊಳ್ಳುವ ಹಂತದಲ್ಲಿ ಮುಂದುವರೆದು ಭಾಗವಹಿಸುವುದೂ ಅಗತ್ಯವಿದೆ. ಎಲ್ಲಾ ಅವಕಾಶಗಳೂ ಪುರುಷಪಕ್ಷಪಾತಿಯಾಗಿ ಮಹಿಳಾ ವಿಚಾರದಲ್ಲಿ ಹೆಣ್ಣಿನ ಗ್ರಹಿಕೆಯನ್ನು ಅಪವಾಖ್ಯಾನ ಮಾಡಿ ಹೆಣ್ಣು ಕೂಡ ಅದನ್ನೇ ಒಪ್ಪಿ ಆ ಮಾದರಿಯನ್ನೇ ನಿಜವೆಂದು ಗ್ರಹಿಸಿಬಿಡುತ್ತಾರೆ.
ನನ್ನ ನಿಕಟ ಸಂಬಂಧಿ ನಿವೃತ್ತರಾದವರು ಒಬ್ಬಂಟಿಯಾಗಿ ಅಪಘಾತದಲ್ಲಿ ತೀರಿದಾಗ ಅವರ ಅಂತ್ಯಸಂಸ್ಕಾರ ಹೊಣೆಯನ್ನು ವಹಿಸಲು ಸಂಬಂಧಿಕರು ಏನೇನೋ ನೆಪದಲ್ಲಿ ತಪ್ಪಿಸಿಕೊಂಡಾಗ ಆ ಜವಾಬ್ದಾರಿಯನ್ನು ಒಂದು ಸವಾಲು ಎಂದೋ, ಕರ್ತವ್ಯ ಎಂದೋ ನಾನೇ ನಿರ್ವಹಿಸಿದೆ. ಈ ಪ್ರಕ್ರಿಯೆ ಬಗ್ಗೆ ನನಗೆ ಗೊಂದಲವಿದ್ದರೂ ಸ್ತ್ರೀಯರೂ ಇದನ್ನು ಮಾಡಬಲ್ಲರು ಎಂದು ತೋರಿಸುವುದೂ ನನಗೆ ಮುಖ್ಯವಾಗಿತ್ತು.
ಶವದ ಅಗ್ನಿಸಂಸ್ಕಾರ ಮಾಡಿದ ಮೇಲೆ ಮರುದಿನ ಆ ಚಿತಾಭಸ್ಮ ಮತ್ತು ಎಲುಬುಗಳನ್ನು ಒಟ್ಟು ಮಾಡಲಾಯಿತು. ಒಂದು ಮಡಕೆಯಲ್ಲಿ ಒಂದಿಷ್ಟು ಎಲುಬುಗಳನ್ನು ಮತ್ತು ಚಿತಾಭಸ್ಮವನ್ನು ಎಳನೀರು ಮತ್ತು ಹಾಲು ಚಿಮುಕಿಸಿ ಇಟ್ಟು ಉಳಿದೆಲ್ಲ ಎಲುಬು ಮತ್ತು ಚಿತಾಭಸ್ಮವನ್ನು ಫಲ್ಗುಣಿ ನೀರಿನಲ್ಲಿ ಚಿಮುಕಿಸಿ ಪಿಂಡ ಪ್ರದಾನ ಮಾಡಲು ಇಟ್ಟ ಎಲುಬುಗಳನ್ನು ಶ್ರಾದ್ಧದ ಕರ್ಮ ಮಾಡುವಲ್ಲಿ ತೆಗೆದುಕೊಂಡು ಹೋದೆ. ಪುರೋಹಿತರು ಹೇಳಿದಂತೆ ಶುದ್ಧಿ ಸ್ನಾನಮಾಡಿ ಬಿಳಿ ಸೀರೆ ಉಟ್ಟು ಪಿಂಡ ಪ್ರದಾನ ಮಾಡಲು ಕುಳಿತುಕೊಂಡೆ. ಅಘ ಸಂಯೋಜನೆ ಶುರುವಾಯಿತು. ಪುರೋಹಿತರು ಅಲ್ಲಿ ಮೂರು ಶಿಲೆ ತುಂಡುಗಳನ್ನು ಇರಿಸಿ ಅದರಲ್ಲಿ ಸತ್ತ ಪಿತೃ, ಪಿತಾಮಹ ಹಾಗೂ ಪ್ರಪಿತಾಮಹರಿಗೆ ಸ್ಥಾನ ಕೊಟ್ಟರು. ಮಂತ್ರೋಚ್ಚಾರ ಮಾಡುತ್ತ, ಪಿತೃ ವಸುರೂಪನೆಂದು ಪಿತಾಮಹ ರುದ್ರರೂಪನೆಂದು ಹಾಗೂ ಪ್ರಪಿತಾಮಹ ಆದಿತ್ಯ ರೂಪನೆಂದು ಮೃತಪಟ್ಟವರ ಪಿಂಡವನ್ನು ಉಳಿದ ಪಿಂಡದ ಜತೆ ಸೇರಿಸಲಾಯಿತು. ಆತ ಆತ್ಮವು ಮೋಕ್ಷದತ್ತ ಚಲಿಸುವಂತೆ ಮಂತ್ರೋಚ್ಛಾರ ಮೂಲಕ ಮಾಡುವುದು ಎಂದು ಪುರೋಹಿತರು ವಿವರಿಸಿದರು. ಅತಂತ್ರವಾಗಿದ್ದ ಜೀವಿಯನ್ನು ತನ್ನ ಪಿತ ಹಾಗೂ ಪಿತಾಮಹರಲ್ಲಿ ಸೇರುವಂತೆ ನೆರವೇರಿಸುವ ಕ್ರಿಯೆ ಇದು. ಪ್ರಾಣಮಯಿ ಜೀವಿಯನ್ನು ಭೌತಿಕ ಜಗತ್ತಿನಾಚೆಗೆ ಇರುವ ಸೂಕ್ಷ್ಮ ಜಗತ್ತಿನೆಡೆಗೆ ಕೊಂಡೊಯ್ಯಲು ನೆರವಾಗುವ ಈ ವಿಧಿವಿಧಾನ ನಮ್ಮ ಭಾರತೀಯ ವೈದಿಕ ವ್ಯವಸ್ಥೆಯ ಒಂದು ಆಚರಣೆ. ಮರಣ ಹೊಂದಿದ ಅತಂತ್ರ ಜೀವಿಗೆ ಸದ್ಗತಿ ಹುಡುಕಲು ಏನೆಲ್ಲಾ ಮಾಡಬೇಕು ಎಂದಿರುವ ಭಾರತೀಯ ಪ್ರಾಚೀನ ವಿಧಾನ. ಈ ಮೂಲಕ ಪರಂಪರೆಯನ್ನು ಒಳಗೊಳ್ಳುವುದು ಮಾತ್ರವಲ್ಲ, ಬದುಕಿನ ಹೆಚ್ಚಿನ ಮಗ್ಗುಲುಗಳನ್ನು ತಿಳಿಯುವುದರ ಕಡೆಗೆ ಸಾಗಲು ಸಾಧ್ಯ.
ಕೆ. ತಾರಾ ಭಟ್