Advertisement

ಮುನಿಯಪ್ಪ ಬೆಂಬಲಿಸಲು ಸಾಧ್ಯವೇ ಇಲ್ಲ

09:48 PM Apr 01, 2019 | Team Udayavani |

ಕೋಲಾರ: ಉಂಡ ಮನೆಗೆ ದ್ರೋಹ ಬಗೆಯುವ ಸಂಸ್ಕೃತಿಯ ಮಹಾನುಭಾವ ಕೆ.ಎಚ್‌.ಮುನಿಯಪ್ಪ ನಡವಳಿಕೆಗೆ ಅವರ ಕಾಂಗ್ರೆಸ್‌ ಪಕ್ಷದಲ್ಲೇ ಆಕ್ರೋಶವಿದೆ. ಇಂತಹ ಮಹಾದ್ರೋಹಿ ಜಗತ್ತಿನಲ್ಲೇ ಇಲ್ಲ ಎಂದು ಶಾಸಕ ಕೆ.ಶ್ರೀನಿವಾಸಗೌಡ ವಾಗ್ಧಾಳಿ ನಡೆಸುವ ಮೂಲಕ ಮೈತ್ರಿಗೆ ಸೆಡ್ಡು ಹೊಡೆದರು.

Advertisement

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ನಿವಾಸದಲ್ಲಿ ಸೋಮವಾರ ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು, 2004ರ ಲೋಕಸಭೆ ಚುನಾವಣೆಯಲ್ಲಿ ಕೋಲಾರದಿಂದ ಕೇವಲ 9500 ಮತಗಳ ಅಂತರದಿಂದ ಮುನಿಯಪ್ಪ ಆಯ್ಕೆಯಾಗಿದ್ದರು. ಲೋಕಸಭೆ ಕ್ಷೇತ್ರದ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಜನ ಇವರನ್ನು ತಿರಸ್ಕರಿಸಿದ್ದರು. ವೇಮಗಲ್‌ ವಿಧಾನಸಭಾ ಕ್ಷೇತ್ರದಲ್ಲಿ ಕೃಷ್ಣಬೈರೇಗೌಡರು 72000 ಮತಗಳ ಲೀಡ್‌ ಕೊಡಿಸಿದ್ದಕ್ಕೆ ಗೆದ್ದಿದ್ದರು ಎಂದು ತಿಳಿಸಿದರು.

ಕಾರ್ಯಕರ್ತರಿಗೆ ಗೊತ್ತಿದೆ: ಮುನಿಯಪ್ಪ ಗೆಲ್ಲಿಸಲು ಶ್ರಮಿಸಿದ ನಮ್ಮನ್ನೇ ಮುಗಿಸಲು ಕೆ.ಎಚ್‌.ಮುನಿಯಪ್ಪ ಕೋಲಾರ ವಿಧಾನಸಭೆ ಕ್ಷೇತ್ರಕ್ಕೆ ಒಬ್ಬರನ್ನು ಯಾವುದೋ ಊರಿನಿಂದ ತಂದುಬಿಟ್ಟು, ನನ್ನನ್ನು ಎರಡು ಬಾರಿ ಸೋಲಿಸಲು ಎಷ್ಟು ಕೆಲಸ ಮಾಡಿದರು ಎಂಬುದು ಕ್ಷೇತ್ರದ ಮತದಾರರಿಗೆ, ಜೆಡಿಎಸ್‌ ಕಾರ್ಯಕರ್ತರಿಗೆ ಗೊತ್ತಿದೆ ಎಂದು ಹೇಳಿದರು.

ಕಳೆದ ಬಾರಿಯೂ ಸಾಮಾಜಿಕ ನ್ಯಾಯದ ನೆಪದಲ್ಲಿ ಕೆ.ಎಚ್‌.ಮುನಿಯಪ್ಪ ಅಲ್ಪಸಂಖ್ಯಾತರನ್ನು ಕರೆತಂದರು. ಮನಸ್ಸಿನಲ್ಲಿ ಒಂದು ಇಟ್ಟುಕೊಂಡು ಸಾಮಾಜಿಕ ನ್ಯಾಯ ಎಂದು ನಾಟಕವಾಡಿದ್ದು, ಅವರ ಉದ್ದೇಶ ವರ್ತೂರು ಪ್ರಕಾಶ್‌ ಅವರನ್ನು ಗೆಲ್ಲಿಸುವುದಾಗಿತ್ತು. ಆದರೆ, ಕ್ಷೇತ್ರದ ಮತದಾರರು ಇದಕ್ಕೆ ಅವಕಾಶ ನೀಡಲಿಲ್ಲ. ನನ್ನನ್ನು ಆಯ್ಕೆ ಮಾಡಿದ್ದಾರೆ ಎಂದು ನುಡಿದರು.

ಕೆಎಚ್‌ಎಂನಿಂದ ಸರ್ಕಾರ ನಡೆಯುತ್ತಿಲ್ಲ: ತಾನು ಬಡವ ಎಂದು ಹೇಳಿಕೊಂಡು ಸರ್ಕಾರದಿಂದ 4 ಎಕರೆ ಜಮೀನು ಪಡೆದುಕೊಂಡ ಈತ 410 ಎಕರೆ ಜಮೀನು ಮಾಡಿಕೊಂಡಿದ್ದಾರೆ. ಇಂತಹ ದರೋಡೆಕೋರಗೆ ಓಟ್‌ ಹಾಕಬೇಕೇ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಕೆಎಚ್‌ಎಂ ಅವರಿಂದ ಸರ್ಕಾರ ನಡೆಯುತ್ತಿಲ್ಲ, ಎರಡು ಪಕ್ಷದ ಶಾಸಕರು ಇದ್ದಾರೆ. ಕುಮಾರಸ್ವಾಮಿ 5 ವರ್ಷ ಮುಖ್ಯಮಂತ್ರಿ ಆಗಿ ಇರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ತೀರ್ಮಾನಕ್ಕೆ ಬದ್ಧ: ರಾಜ್ಯದಲ್ಲಿ ಮೈತ್ರಿ ಸರ್ಕಾರ ಇದೆ. ಲೋಕಸಭೆ ಚುನಾವಣೆಯುಲ್ಲಿ ಮೈತ್ರಿ ಮಾಡಿಕೊಂಡಿದ್ದರಿಂದ ಇಕ್ಕಟ್ಟಿನ ಸ್ಥಿತಿಯಲ್ಲಿದ್ದೇವೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮತ್ತೆ ಕ್ಷೇತ್ರದ ಕಾರ್ಯಕರ್ತರ ಸಭೆ ಕರೆದು ಚರ್ಚಿಸೋಣ. ಕಾರ್ಯಕರ್ತರ ತೀರ್ಮಾನಕ್ಕೆ ಬದ್ಧ ಎಂದು ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ಕಾರ್ಯಕರ್ತರು, ನಾವ್ಯಾರೂ ಕೆ.ಎಚ್‌.ಮುನಿಯಪ್ಪ ಅವರಿಗೆ ಓಟ್‌ ಮಾಡುವುದಿಲ್ಲ. ಹತ್ತು ವರ್ಷಗಳಲ್ಲಿ ನಿಮಗೆ ಏನು ಕೆಲಸ ಕೊಟ್ಟಿದ್ದರು ಎಂಬುದು ಗೊತ್ತು. ಕೆರೆಗಳಲ್ಲಿ ನೀರಿಲ್ಲ, ಕೆ.ಸಿ. ವ್ಯಾಲಿ ಯೋಜನೆಯಡಿ ಬರುತ್ತಿದ್ದ ನೀರಿಗೂ ಅಡ್ಡಿ ಹಾಕಿದ್ದಾರೆ ಎಂದು ಘೋಷಣೆ ಕೂಗಿದರು.

ಹೊಡೆಯೋಕೆ ಬರ್ತಾರೆ: ನಮಗೆ ನೀರು ಕೊಡುವವರಿಗೆ ಓಟು ಹಾಕೋಣ ಎಂದು ನುಡಿದರೆ, ಹಳ್ಳಿಗಳಲ್ಲಿ ಕೆಎಚ್‌ಎಂಗೆ ಓಟು ಹಾಕಿ ಎಂದು ಮತ ಕೇಳಿದರೆ ಜನ ಹೊಡೆಯೋದಕ್ಕೆ ಬರುತ್ತಾರೆ. ಈ ಬಾರಿ ಬಿಜೆಪಿಗೆ ಮತ ನೀಡೋಣ, 5 ವರ್ಷಗಳಲ್ಲಿ ಕೆಲಸ ಮಾಡಿದ್ದರೆ ಮುಂದೆ ಅವರನ್ನೂ ಸೋಲಿಸೋಣ ಎಂದು ಬಹುತೇಕ ಕಾರ್ಯಕರ್ತರು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಒಕ್ಕಲಿಗರ ಸಂಘದ ನಿರ್ದೇಶಕ ವಕ್ಕಲೇರಿ ರಾಮು, ಜೆಡಿಎಸ್‌ ತಾಲೂಕು ಅಧ್ಯಕ್ಷ ಮೂರಾಂಡಹಳ್ಳಿ ಗೋಪಾಲ್‌, ಮುಖಂಡ ಶ್ರೀಕೃಷ್ಣ, ಎಪಿಎಂಸಿ ಅಧ್ಯಕ್ಷ ವಡಗೂರು ನಾಗರಾಜ್‌, ಕೋಚಿಮುಲ್‌ ನಿರ್ದೇಶಕ ರಾಮಕೃಷ್ಣೇಗೌಡ,ಅಶ್ವತ್ಥ್, ಬೆಳಮಾರನಹಳ್ಳಿ ಆನಂದ್‌ ಉಪಸ್ಥಿತರಿದ್ದರು.

2004ರ ಲೋಕಸಭೆ ಚುನಾವಣೆಯಲ್ಲಿ ನಾವು ಯಾರನ್ನು ಗೆಲ್ಲಿಸಿದ್ದೆವೋ ಆತನೇ ನನ್ನನ್ನು ಪಕ್ಷದಿಂದ ಆಚೆಗೆ ಹಾಕಿದರು. ಕಳೆದ ಬಾರಿ ಕಾಂಗ್ರೆಸ್‌ಗೆ ಸೇರ್ಪಡೆ ಸಂಬಂಧ ದೆಹಲಿಗೆ ಕರೆದುಕೊಂಡು ಹೋಗಿ ರಾಹುಲ್‌ ಗಾಂಧಿ ಮನೆಯಲ್ಲಿ ಇದ್ದರೂ ಇಲ್ಲ ಎಂದು ಹೇಳಿ ಕಳುಹಿಸಿದ್ದರು. ನಂತರ ನಾನೇ ಹೋಗಿ ಭೇಟಿ ಮಾಡಿ ಬಂದಿದ್ದಾಯಿತು. ಇಂತಹ ದ್ರೋಹಿ ಈ ಜಗತ್ತಿನಲ್ಲೇ ಇಲ್ಲ.
-ಕೆ.ಶ್ರೀನಿವಾಸಗೌಡ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next