Advertisement

ನೇತ್ರಾವತಿಯ ರೋದನಕ್ಕೆ ಕಿವಿಯಾಗದಿದ್ದರೆ?

01:03 PM Sep 04, 2017 | |

ಈ ಯೋಜನೆಯ ಮುಖಾಂತರ ಸರಕಾರವು ಬಯಲು ಸೀಮೆ, ಮಲೆನಾಡು, ಕರಾವಳಿ ಜನತೆಗೆ ವಂಚನೆ ಮಾಡುತ್ತಿದೆ. ಸದ್ಯದಲ್ಲೇ ಬರುವ ಚುನಾವಣೆಯ ಮತಗಳ ಹಿತ ದೃಷ್ಟಿಯಿಂದ ಹಾಗೂ ಚುನಾವಣಾ ಆರ್ಥಿಕ ಅಗತ್ಯಕ್ಕೋಸ್ಕರ ಈ ಅಸಂಬದ್ಧ ಯೋಜನೆಯ ಆತುರ ಅಷ್ಟೇ. 

Advertisement

ಈ ಜಗತ್ತಿನಲ್ಲಿ ಅತಿ ಹೆಚ್ಚು ಅಧ್ಯಯನಕ್ಕೊಳಪಟ್ಟ ವಸ್ತು ಅಂದರೆ ನೀರು. ಅದೇ ರೀತಿ ಈ ಜಗತ್ತಿನಲ್ಲಿ ಅತ್ಯಂತ ಹೆಚ್ಚು ನಿರ್ಲಕ್ಷಕ್ಕೊಳಪಟ್ಟ ವಸ್ತು ಕೂಡಾ ಅದುವೇ. ಹೊಳೆ ಇಲ್ಲದ ಊರಲ್ಲಿ ಬೆಳೆ ಇಲ್ಲ, ಬೆಳೆ ಇಲ್ಲದ ಊರಲ್ಲಿ ಕಳೆ ಇಲ್ಲ ಎಂಬ ಮಾತಿದ್ದರೂ ದ.ಕ. ಜಿಲ್ಲೆಯಲ್ಲಿ ಹೊಳೆ ಹೊಳೆಯುವಂತಿದ್ದರೂ ಹೊಳೆಯನ್ನು ಉಳಿಸುವವರಿಲ್ಲ ಎಂಬಂತಾಗಿದೆ. ಹೌದು ದ.ಕ. ಜಿಲ್ಲೆಯ ಜೀವನದಿ ನೇತ್ರಾವತಿಯನ್ನು ಅದರ ವಿರುದ್ಧ ದಿಕ್ಕಿಗೆ ಬಲಾತ್ಕಾರವಾಗಿ ತಿರುಗಿಸುವ ಯೋಜನೆಯಿಂದಾಗಿ ನೇತ್ರಾವತಿಯು ರೋದಿಸುವಂತಾಗಿದೆ. ಅಳುತಿರುವ ನೇತ್ರಾ ವತಿಯ ರೋದನಕ್ಕೆ ಕಿವಿಯಾಗದಿದ್ದರೆ ಇಲ್ಲಿ ಭವಿಷ್ಯದಲ್ಲಿ ಆಗಲಿರುವ ಪ್ರಾಕೃತಿಕ ದುರಂತಕ್ಕೆ ಕರಾವಳಿಯ ಜನರೇ ಆಹ್ವಾನ ನೀಡಿದಂತಾಗಬಹುದು. ಬಯಲು ಸೀಮೆಯಲ್ಲಿ ನೀರಿಗೆ ಬರವಿದೆ ಎಂಬ ಕಾರಣಕ್ಕೆ 2001ರಲ್ಲಿ ಜಿ.ಎಸ್‌. ಪರಮಶಿವಯ್ಯನವರು ನೇತ್ರಾವತಿ ನದಿ ತಿರುವು ಎಂಬ ಯೋಜನೆಯಲ್ಲಿ ನೇತ್ರಾವತಿ ಯಿಂದ ಸಮುದ್ರಕ್ಕೆ ಸೇರಲಿರುವ ವ್ಯರ್ಥ ನೀರನ್ನು ಬಯಲು ಸೀಮೆಗೆ ತಿರುಗಿಸುವುದೆಂಬ ವರದಿಯನ್ನು ನೀಡಿರುತ್ತಾರೆ. ನದಿ ಹರಿದು ಸಮದ್ರವನ್ನು ಸೇರುವುದು ನೈಸರ್ಗಿಕ ನಿಯಮವಾಗಿದ್ದು ಈ ನಿಯಮದ ಹಕ್ಕು ಸ್ವಾಮ್ಯವನ್ನು ಕಸಿದುಕೊಳ್ಳಲು ಯಾರಿಗೂ ಅಧಿಕಾರವಿಲ್ಲ. ನದಿ ನೀರು ಸಮುದ್ರ ಸೇರುವುದಲ್ಲದೆ ಮತ್ತೆ ಎಲ್ಲಿ ಸೇರಬೇಕು? ನದಿ ನೀರು ಸಮುದ್ರದಲ್ಲಿ ವ್ಯರ್ಥವಾಗುತ್ತಿದೆ ಎಂದಾದರೆ ಇಂದು ಪಶ್ಚಿಮ ಘಟ್ಟದಿಂದ ಹರಿದು ಬರುವ ನದಿಗಳೆಲ್ಲ ಅರಬ್ಬಿ ಸಮುದ್ರ, ಬಂಗಾಳ ಕೊಲ್ಲಿಯನ್ನು ಸೇರಿ ಸಮುದ್ರ ನೀರು ಉಕ್ಕಿ ಮುಂಬಯಿ, ಚೆನ್ನೆç, ಮಂಗಳೂರು ನಗರಗಳೆಲ್ಲ ಮುಳುಗಬೇಕಿತ್ತಲ್ಲಾ? ನದಿ ನೀರು ಸಮುದ್ರ ಸೇರಿದ ನಂತರ ಅದರಲ್ಲಿ ವ್ಯರ್ಥ ನೀರು-ಸಮರ್ಥ ನೀರು ಅಂತ ವಿಂಗಡಿಸಲು ಯಾವ ಮಾನದಂಡವೂ ಇಲ್ಲ. ನೇತ್ರಾವತಿ ನದಿಯಿಂದ ವಾರ್ಷಿಕವಾಗಿ 437 ಟಿಎಂಸಿ ನೀರು ಸಮುದ್ರಕ್ಕೆ ಸೇರುತ್ತಿದ್ದು ಅದೇ ನೀರು ಆವಿಯಾಗಿ ಮೋಡವಾಗಿ ಪಶ್ಚಿಮ ಘಟ್ಟದತ್ತ ಸಾಗಿ ಮಳೆಯಾಗಿ ಮತ್ತೆ ಸಮುದ್ರ ಸೇರುವ ನೈಸರ್ಗಿಕ ಚಕ್ರದ ಕ್ರಿಯೆಯು ನಮ್ಮ ನದಿ ತಿರುವು ಯೋಜನಾಕಾರರಿಗೆ ಕಾಣಿಸುವುದಿಲ್ಲ. ಅವರಿಗೆ ಕಾಣಿಸುವುದು ಪಾಣೆಮಂಗಳೂರು ಮತ್ತು ತೊಕ್ಕೊಟ್ಟಿನ ಸೇತುವೆಯ ಕೆಳಗಿನ ನೇತ್ರಾವತಿ ನೀರು ಮಾತ್ರ. ವ್ಯರ್ಥ ನೀರು ಎಂಬ ಮಾತಿಗೇ ಅರ್ಥವಿಲ್ಲ. ಅದು ನೇತ್ರಾವತಿಯಲ್ಲಿ ಅರ್ಥ ಹುಡುಕುವ ರಾಜಕಾರಣಿಗಳಿಗೆ ತಿಳಿಯುತ್ತಿದೆಯೇ? 

ಇಪ್ಪತ್ತು ವರ್ಷಗಳ ಹಿಂದೆ ನೇತ್ರಾವತಿಯಲ್ಲಿ ವರ್ಷಪೂರ್ತಿ ನೀರು ತುಂಬಿ ಹರಿಯುತ್ತಿತ್ತು ಆಗಿನ ನೇತ್ರಾವತಿಗೂ ಈಗ ಬಡಕಲಾಗಿರುವ ನೇತ್ರಾವತಿಗೂ ವ್ಯತ್ಯಾಸ ಗಮನಿಸಿದರೆ ಭವಿಷ್ಯದಲ್ಲಿ ದ.ಕ. ಜಿಲ್ಲೆಗೆ ನೀರಿನ ಸಮಸ್ಯೆ ಶಾಶ್ವತವಾಗಬಹುದು. ಕಳೆದ ಬಾರಿ ರಾಜ್ಯ ಸರಕಾರವೇ ದ.ಕ. ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯೆಂದು ಘೋಷಣೆ ಮಾಡಿರುತ್ತದೆ. ಹಾಗಿರುವಾಗ ಬರ ಪೀಡಿತ ಜಿಲ್ಲೆಯಿಂದ ಬರಪೀಡಿತ ಜಿಲ್ಲೆಗಳಿಗೆ ನೀರಿನ ಹರಿವು ಎಂದರೆ ಏನರ್ಥ? ಯಾವುದೇ ನದಿ ತಿರುವು ಯೋಜನಾಕಾರರು ನದಿ ಹರಿವಿನ ಕೆಳಭಾಗದ ಸಮೀಕ್ಷೆ ಮಾಡುವುದಿಲ್ಲ. ನದಿಯ ಮೂಲ ಸ್ಥಾನದಲ್ಲಿ ನೀರಿನ ಇಂಗಿತ, ಅಲ್ಲಿನ ಮಳೆಯ ಪ್ರಮಾಣ, ಅಲ್ಲಿನ ನೈಸರ್ಗಿಕ ಸೆಲೆ ಹೇಗಿದೆ ಎಂಬುದನ್ನು ಅಧ್ಯಯನ ಮಾಡಬೇಕು. ಇಂದು ನೇತ್ರಾವತಿಯ ನದಿ ಮೂಲಗಳ ಎಲ್ಲಾ ತಾಣಗಳಲ್ಲೂ ಮಾನವನ ಹಸ್ತಕ್ಷೇಪದಿಂದಾಗಿ ನೆಮ್ಮದಿ ಕಳೆದುಕೊಳ್ಳುವಂತಾಗಿದೆ. ನದಿ ಮೂಲವಿರುವ ಅತೀ ಸೂಕ್ಷ್ಮ ಜೀವವೈವಿಧ್ಯತಾ ಪ್ರದೇಶಗಳಲ್ಲಿ ಜಲವಿದ್ಯುತ್‌ ಯೋಜನೆ, ಗಣಿಗಾರಿಕೆ, ಅರಣ್ಯ ಅತಿಕ್ರಮಣ, ರೆಸಾರ್ಟ್‌ ನಿರ್ಮಾಣ, ಕಾಡ್ಗಿಚ್ಚು, ವನ್ಯಜೀವಿಗಳಬೇಟೆ ಇತ್ಯಾದಿಗಳಿಂದ ವರ್ಷದಿಂದ ವರ್ಷಕ್ಕೆ ಮಳೆ ನೀರು ಇಂಗಿತವಾಗುವ ಪ್ರಮಾಣ ಕಡಿಮೆಯಾಗುತ್ತಿದೆ. ನದಿ ಮೂಲ ಪ್ರದೇಶದ ಹುಲ್ಲುಗಾವಲು ಮತ್ತು ಶೋಲಾರಣ್ಯದ ವ್ಯಾಪ್ತಿ ಕಡಿಮೆಯಾಗುತ್ತಾ ಅಲ್ಲಿ ಕಾಫಿ, ರಬ್ಬರ್‌ ತೋಟಗಳ ಎಸ್ಟೇಟ್‌ ನಿರ್ಮಾಣವಾಗುತ್ತಿದೆ. ಈ ರೀತಿ ಆಕ್ರಮಣಗಳಿಂದ ನೇತ್ರಾವತಿ ನದಿಯ ಮೂಲಸ್ಥಾನಗಳಲ್ಲಿ ಮಳೆ ಕಡಿಮೆಯಾಗುತ್ತಿದ್ದು ಅಥವಾ ಮಳೆ ಸುರಿದರೂ ಮಳೆ ನೀರು ಇಂಗುವ ಪ್ರಮಾಣ ಕಡಿಮೆಯಾಗುತ್ತಿದ್ದು ನದಿಯ ಹರಿವು ಸೊರಗುತ್ತಿದೆ. ನೇತ್ರಾವತಿ ನದಿಯ ಹುಟ್ಟು ಕುದುರೆಮುಖದ ಎಳನೀರು ಘಾಟಿಯ ಬಂಗ್ರಬಲಿಕೆೆ ಅರಣ್ಯ ಪ್ರದೇಶವು ಮಾನವ ಚಟುವಟಿಕೆಗಳಿಂದ ಹಾಗೂ ಅರಣ್ಯ ಅತಿಕ್ರಮಣದಿಂದ ನಿಧಾನ ವಾಗಿ ತನ್ನ ತನುವನ್ನು ಕಳೆದುಕೊಂಡಿದೆ.

ನೇತ್ರಾವತಿಯ ಉಪನದಿಯಾಗಿರುವ ಬಂಡಾಜೆ ಹೊಳೆ ಉಗಮಬಾಗುವ ಕಡ್ತಕಲ್‌ ಅರಣ್ಯ ಪ್ಯಾಪ್ತಿಯಲ್ಲಿ ಹಾಗೂ ಮೃತ್ಯುಂಜಯ ನದಿ ಉಗಮವಾಗುವ ಮಧುಗುಂಡಿ ಅರಣ್ಯ ಪ್ರದೇಶಗಳಲ್ಲಿ ರೆಸಾರ್ಟ್‌, ಆಕ್ರಮ ಎಸ್ಟೇಟ್‌ಗಳಿಂದಾಗಿ ಮಳೆ ಕಡಿಮೆಯಾಗುತ್ತಿದೆ. ಚಾರ್ಮಾಡಿ ಘಾಟಿಯಲ್ಲಿ ಅಣಿಯೂರು ಹೊಳೆ, ಸುನಾಲ ಹೊಳೆ, ನೆರಿಯಾ ಹೊಳೆಯ ಹರಿವು ಇರುವಲ್ಲಿ ಜಲವಿದ್ಯುತ್‌ ಯೋಜನೆ, ಶಿರಾಡಿ ಘಾಟಿಯ ಕೆಂಪು ಹೊಳೆ ಉಗಮ ಪ್ರದೇಶದಲ್ಲಿ ಈಗಾಗಲೇ ಮಂಗಳೂರು ಬೆಂಗಳೂರು ರಾ ಹೆದ್ದಾರಿ, ರೈಲ್ವೇ ಟ್ರಾಕ್‌ ನಿರ್ಮಾಣದಿಂದ ಅದಲ್ಲದೇ ಎತ್ತಿನ ಹೊಳೆ ಯೋಜನೆಯ ಕಾಮಗಾರಿಯಾಗಿ, ಗುಂಡ್ಯ ಜಲವಿದ್ಯುತ್‌ ಯೋಜನೆ, ಮಾರುತಿ ಪವರ್‌ ಪ್ರಾಜೆಕ್ಟ್ನಿಂದಾಗಿ ಕೆಂಪು ಹೊಳೆ ಕರಗಿದೆ. ಭೈರಾಪುರ ಘಾಟಿಯ ಎತ್ತಿನಭುಜ ಕಣಿವೆಯಿಂದ 

ಹರಿದು ಬರುವ ಕಪಿಲಾ ಹೊಳೆಗೆ ಶಿಶಿಲ ಭೈರಾಪುರ ಎಸ್ತೆ ನಿರ್ಮಾಣದಿಂದ ಹಾನಿಯಾಗಲಿದೆ. ಕುಮಾರಧಾರ ನದಿಯ ಹರಿವು ಈಗಾಗಲೇ ಹಲವಾರು ವರ್ಷಗಳಿಂದ ಕಡಿಮೆಯಾಗಿದೆ. ಯಾವುದೇ ನದಿಯ ಜೀವಂತಿಕೆಗೆ ಅದರ ಉಪನದಿಗಳ ಪಾತ್ರವು ಪ್ರಧಾನವಾಗಿರುತ್ತದೆ. ನೇತ್ರಾವತಿಯ ಎಲ್ಲಾ ಉಪನದಿಗಳ ಪರಿಸ್ಥಿತಿ ಹೀಗಿರುವಾಗ ವಾರ್ಷಿಕವಾಗಿ ಸಮುದ್ರಕ್ಕೆ ಸೇರುವ ನೀರು ಎಷ್ಟು ಎಂಬುದನ್ನು ಗಮನಿಸಬೇಕಾದದ್ದೇ. ನೈಸರ್ಗಿಕ ವಾಗಿ ಸಮುದ್ರ ಸೇರಬೇಕಾದ ಸಮರ್ಥ ನೀರೇ ಸಮುದ್ರ ಸೇರದೇ ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಕಡಿಮೆಯಾಗುತ್ತಿರುವಾಗ ಇನ್ನು ವ್ಯರ್ಥ ನೀರು ಯಾವುದು?

Advertisement

ಎತ್ತಿನಹೊಳೆ ಯೋಜನೆಯಲ್ಲಿ 24 ಟಿಎಂಸಿ ನೀರು ಲಭಿಸು ವುದೆಂಬ ಲೆಕ್ಕಾಚಾರದಿಂದ 13,700 ಕೋಟಿ ವೆಚ್ಚದಲ್ಲಿ ಎತ್ತಿನಹೊಳೆ ಯೋಜನೆಯ ಕಾಮಗಾರಿ ಆರಂಭಿಸಿದ ಸರಕಾರ 2000 ಕೋಟಿ ರೂಪಾಯಿ ಹಣವನ್ನು ಯೋಜನೆಗೆ ಖರ್ಚು ಮಾಡಿ ಪಶ್ಚಿಮಘಟ್ಟದ ಸೂಕ್ಷ್ಮಅರಣ್ಯ ಪ್ರದೇಶವನ್ನು ಹಾಳು ಮಾಡಿ ಇದೀಗ ಎತ್ತಿನಹೊಳೆ ಯೋಜನೆಯಲ್ಲಿ ನೀರು ಲಭ್ಯವಾಗದು ಎಂದು ಪರೋಕ್ಷವಾಗಿ ಒಪ್ಪಿಕೊಂಡು ನೇತ್ರಾವತಿಯು ಸಾಗರ ಸಂಗಮವಾಗುವಲ್ಲಿದಂದಲೇ 40 ಟಿಎಂಸಿ ನೀರು ಬೆಂಗಳೂರಿಗೆ ಕೊಂಡೊಯ್ಯುವುದೆಂದು ಇನ್ನೊಂದು ನೂತನ ಯೋಜನೆಗೆ ಅಣಿಯಾಗುತ್ತದೆ. ಎತ್ತಿನಹೊಳೆ ಯೋಜನಾ ಪ್ರದೇಶವಾದ ಸಕಲೇಶಪುರದ ಹಿರಿದನಹಳ್ಳಿ ಕಡಗರಹಳ್ಳಿ, ಹೆಗ್ಗದ್ದೆ, ಕುಂಬರಡಿ, ಮಾರನಹಳ್ಳಿ, ಹೆಬ್ಬಸಾಲೆಯು ಸಮುದ್ರ ಮಟ್ಟದಿಂದ 3,876 ಅಡಿಗಳಷ್ಟು ಎತ್ತರದಲ್ಲಿದ್ದು ಅಲ್ಲಿಂದ 600 ರಿಂದ 800 ಅಡಿಗಳಷ್ಟು ಎತ್ತರಕ್ಕೆ ನೀರು ಎತ್ತಲು 370 ಮೆಗಾವ್ಯಾಟ್‌ನಷ್ಟು ಕರೆಂಟ್‌ ಬೇಕಾಗಿರುವಾಗ ಈಗ ಸಮುದ್ರ ಮಟ್ಟದಿಂದ ಅಂದರೆ ಸುಮಾರು 4000 ಅಡಿಗಳಷ್ಟು ಎತ್ತರಕ್ಕೆ ನೀರನ್ನು ಎತ್ತಲು ಇನ್ನೆಷ್ಟು ಬೃಹತ್‌ ಪ್ರಮಾಣದ ವಿದ್ಯುತಿನ ಅಗತ್ಯವಿರಬಹುದು? 

ನದಿಯ ಸಿಹಿ ನೀರು ಸಮುದ್ರದ ಉಪ್ಪು ನೀರಿಗೆ ಸೇರಿ ಮತ್ಸ್ಯಜೀವಿಗಳ ಸಂತಾನೋತ್ಪತ್ತಿಗೆ ಉಪಯುಕ್ತತೆಯಾಗಿದ್ದು ಈ ಯೋಜನೆಯಿಂದ ಕರಾವಳಿಯ ಬೃಹತ್‌ ಉದ್ಯಮವಾಗಿರುವ ಮೀನುಗಾರಿಕೆಗೂ ಸಮಸ್ಯೆಯಾಗಿ ಬೆಸ್ತರ ಬದುಕು ದುಸ್ತರ ವಾಗುವ ಸಾಧ್ಯತೆ ಇದೆ. ಎತ್ತಿನಹೊಳೆ ಕಾಮಗಾರಿ ಮಾಡಿ 24 ಟಿಎಂಸಿ ನೀರು ಲಭಿಸುವುದಿಲ್ಲವೆಂಬ ಲೆಕ್ಕಾಚಾರದಲ್ಲಿ ಇದೀಗ ಅಲ್ಲಿನ ಅಣೆಕಟ್ಟುಗಳಿಗೆ ಸಮುದ್ರ ಸೇರುವಲ್ಲಿಂದ ನೀರನ್ನು ಎತ್ತಿ ತುಂಬಿಸಲಾಗುವುದೆಂಬ ಸರಕಾರದ ಈ ಯೋಜನೆಯ ಗೂಡಾರ್ಥವೇನೆಂದರೆ ಎತ್ತಿನಹೊಳೆಯಲ್ಲಿ ಸಾಕಷ್ಟು ನೀರು ಲಭಿಸುವುದಿಲ್ಲವೆಂಬ ಪರೋಕ್ಷ ಒಪ್ಪಿಗೆಯಾದಂತಾಗಿಲ್ಲವೇ? ನೇತ್ರಾವತಿ ತಿರುವು ಆಗಲಿ, ಎತ್ತಿನಹೊಳೆ ಯೋಜನೆಯಾಗಲಿ… ಈ ಯೋಜನೆಯು ಚಾಲನೆಯಾಗದೇ ಇರುವಾಗಲೇ ದ.ಕ. ಜಿಲ್ಲೆಯ ಈ ವರ್ಷದ ಮಳೆಯ ಪ್ರಮಾಣವನ್ನು ಮತ್ತೆ ಈಗಿರುವ ತಾಪವನ್ನು ಗಮನಿಸಿದರೆ ನೈಸರ್ಗಿಕ ಪರಿಸ್ಥಿತಿ ಯಾವ ರೀತಿ ಅಲ್ಲೋಲ ಕಲ್ಲೋಲವಾಗಿದೆ ಎಂದು ತಿಳಿಯಬಹುದು. ಇನ್ನು ಈ ಯೋಜನೆಯಾದರೆ ದ.ಕ. ಜಿಲ್ಲೆಯ ಭೀಕರ ಪರಿಸ್ಥಿತಿ ಹೇಗಿರಬಹುದು?  ನದಿಯ ನೆಮ್ಮದಿಗೆ ಧಕ್ಕೆಯಾದರೆ ಒಂದು ನದಿಯೇ ಅಳಿದು ಹೋದರೆ ಅದರ ಜವಾಬ್ದಾರರು ಯಾರು? ಇಂದಿನ ಆಧುನಿಕ ತಂತ್ರಜಾnನದಲ್ಲಿ ಏನನ್ನು ಬೇಕಾದರೂ ಸೃಷ್ಟಿಸಬಹುದು ಆದರೆ ಒಂದು ನದಿ ಅಳಿದು ಹೋದರೆ ನದಿಯನ್ನು ಮತ್ತೆ ಮರು ಸೃಷ್ಟಿಸಲು ಯಾವ ವಿಜಾnನ ತಂತ್ರಜಾnನದಿಂದಲೂ ಸಾಧ್ಯವಿಲ್ಲ. ಯಾವುದೇ ಸರಕಾರವು ನದಿ ತಿರುವು, ನದಿ ಜೋಡಣೆ ಮಾಡುವ ಬದಲು ಪಶ್ಚಿಮಘಟ್ಟದ ಹಾಗೂ ನದೀ ಮೂಲಗಳ ರಕ್ಷಣೆಮಾಡಬೇಕಾದದ್ದು ಅತ್ಯಗತ್ಯ. ಮಳೆನೀರನ್ನು ಶೇಖರಣೆ ಮಾಡಿ ವರ್ಷ ಪೂರ್ತಿ ಹೊಳೆಯನ್ನು ಜೀವಂತವಾಗಿರಿಸುವ 

ಪಶ್ಚಿಮ ಘಟ್ಟದ ಹುಲ್ಲುಗಾವಲು, ಶೋಲಾರಣ್ಯದ ಕಣಿವೆ ಭಾಗಗಳಲ್ಲಿ ನದಿ ಮೂಲಗಳಿರುವ ಸೂಕ್ಷ್ಮ ಪ್ರದೇಶಗಳಲ್ಲಿ ಪರಿಸರ ವಿನಾಶಕ ಯೋಜನೆಗಳನ್ನು ಮಾಡುವುದನ್ನು ಮೊದಲು ತಡೆಹಿಡಿಯಬೇಕು. ಎತ್ತಿನ ಹೊಳೆ ಯೋಜನೆಯನ್ನು ಆರಂಭಿಸಿದ್ದೇ ಬಯಲು ಸೀಮೆಗೆ ನೀರು ಸರಬರಾಜು ಮಾಡುವು ದೆಂಬ ಲೆಕ್ಕಾಚಾರದಲ್ಲಿ….. ಇದೀಗ ಈ ನೂತನ ಯೋಜನೆಯ ಪ್ರಕಾರ ನೇತ್ರಾವತಿ ನದಿಯನ್ನು ನೇರವಾಗಿ ಬೆಂಗಳೂರಿಗೆ ಕೊಂಡೊಯ್ಯುವುದಂತೆ. ಹಾಗಾದರೆ ಬಯಲು ಸೀಮೆಯ ವರಿಗೆ ಇಷ್ಟರವರೆಗೆ ಸುಳ್ಳು ಹೇಳಿ ನೀರಿನ ನೆಪದಲ್ಲಿ ಮತಗಳಿಸುವ ತಂತ್ರವಾಗಿತ್ತೇ? ಎತ್ತಿನಹೊಳೆ ಯೋಜನೆಯಾಗಲಿ, ನೇತ್ರಾವತಿ ತಿರುವು ಯೋಜನೆಯಾಗಲಿ ಬಯಲು ಸೀಮೆಯವರಿಗೆ ನೀರುಣಿ ಸುವ ಯೋಜನೆಯಾಗಿರದೆ ಬೆಂಗಳೂರಿನ ಇಂಡಸ್ಟ್ರಿಯಲ್‌ ಮಾಫಿಯಾದ ಕೈವಾಡವೇ? ಇದು ಬೆಂಗಳೂರಿನ ಕೈಗಾರಿಕೆಗಳ ಮತ್ತು ಕೆಲವು ರಾಜಕಾರಣಿಗಳ, ಗುತ್ತಿಗೆದಾರರ ಒಂದು ಸೂಟ್‌ಕೇಸ್‌ ಸಂಬಂಧ‌ಕ್ಕೆ ಮಾತ್ರ ಸೀಮಿತವೇ? ಕೆಲವು ಪ್ರಶ್ನೆಗಳಿಗೆ ಉತ್ತರಗಳೇ ಇರುವುದಿಲ್ಲ, ಕೆಲವು ಉತ್ತರಗಳಿಗೆ ಪ್ರಶ್ನೆಗಳೇ ಸರಿಹೊಂದುವುದಿಲ್ಲ ಎಂಬಂತಾಗಿದೆ ಈ ಅಸಂಬದ್ಧ ಯೋಜನೆ. ಈ ಯೋಜನೆಯ ಮುಖಾಂತರ ಸರಕಾರವು ಬಯಲು ಸೀಮೆ, ಮಲೆನಾಡು, ಕರಾವಳಿ ಜನತೆಗೆ ವಂಚನೆ ಮಾಡುತ್ತಿದೆ. ಸದ್ಯದಲ್ಲೇ ಬರುವ ಚುನಾವಣೆಯ ಮತಗಳ ಹಿತ ದೃಷ್ಟಿಯಿಂದ ಹಾಗೂ ಚುನಾವಣಾ ಆರ್ಥಿಕ ಅಗತ್ಯಕ್ಕೋಸ್ಕರ ಈ ಅಸಂಬದ್ಧ ಯೋಜನೆಯ ಆತುರ ಅಷ್ಟೇ. ಈ ಯೋಜನೆಯನ್ನು ತಡೆ ಹಿಡಿದು ನೇತ್ರಾವತಿ ನದಿಯನ್ನು ಉಳಿಸುವ ಕಾಳಜಿ ಮತ್ತು ಜವಾಬ್ದಾರಿ ಕರಾವಳಿಯ ಪ್ರತಿಯೊಬ್ಬ ನಾಗರಿಕನದ್ದೂ ಆಗಿರಬೇಕು. ಕರಾವಳಿಯ ಯಾವೊಬ್ಬ ಜನ ಪ್ರತಿನಿಧಿಯೂ ನೇತ್ರಾವತಿ ನದಿಯನ್ನು ಉಳಿಸುವಲ್ಲಿ ವಿಫಲರಾಗಿದ್ದು ಜನ ರಿಂದಲೇ ನದಿ ಸಂರಕ್ಷಣೆಯ ಆಂದೋಳನವಾಗಬೇಕು. ನೇತ್ರಾವತಿ ನದಿಯು ತುಳುನಾಡಿನ ಪ್ರಾಕೃತಿಕ, ಸಾಮಾಜಿಕ, ಧಾರ್ಮಿಕ ವಿಚಾರಗಳಲ್ಲಿ ಅವಿನಾಭಾವ ಸಂಬಂಧ ಹೊಂದಿರುವುದರಿಂದ ಇಲ್ಲಿನ ಜೀವನಾಡಿಯಾಗಿರುವ ನದಿಯ ಉಳಿವು ಎಲ್ಲರ ಹೊಣೆಗಾರಿಕೆಯಾಗಿರುತ್ತದೆ.

ದಿನೇಶ್‌ ಹೊಳ್ಳ

Advertisement

Udayavani is now on Telegram. Click here to join our channel and stay updated with the latest news.

Next