Advertisement

ಅಹಂಕಾರಿ ಬೆಳವಣಿಗೆ ಹೊಂದಲಾರ: ಡಾ|ರವಿ

01:45 PM Feb 17, 2018 | |

ಪುತ್ತೂರು: ತಾನು ಎಲ್ಲವನ್ನೂ ತಿಳಿದುಕೊಂಡಿದ್ದೇನೆ ಎಂದು ಅಹಂಕಾರ ಪಡುವವನು ಯಾವುದೇ ಕ್ಷೇತ್ರದಲ್ಲಿ ಬೆಳವಣಿಗೆ ಹೊಂದಲಾರ. ನಿರಂತರ ಕಲಿಕೆಯ ಹುಮ್ಮಸ್ಸು, ಮನಸ್ಸು ಹೊಂದಿರುವವ ಮಾತ್ರ ಸಾರ್ವತ್ರಿಕ ಗೌರವ ಪಡೆಯುವ ಸಾಧನೆ ಮಾಡಲು ಸಾಧ್ಯ ಎಂದು ದ.ಕ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಎಂ.ಆರ್‌. ರವಿ ಅವರು ಹೇಳಿದರು.

Advertisement

ಸಂತ ಫಿಲೋಮಿನಾ ಪ್ರೌಢಶಾಲೆಯ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ ದ.ಕ. ಜಿಲ್ಲಾ ಮಟ್ಟದ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆ ಮತ್ತು ಶೇ. 100 ಎಸೆಸೆಲ್ಸಿ ಫಲಿತಾಂಶ ದಾಖಲಿಸಿದ ಶಾಲೆಗಳಿಗೆ ಅಭಿನಂದನೆ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ನಾಯಕತ್ವದ ಕೊರತೆ
ನಮ್ಮ ದೇಶದಲ್ಲಿ ನಾಯಕರಿಗೆ ಕೊರತೆ ಇಲ್ಲ. ಆದರೆ ಪರಿಣಾಮಕಾರಿ ನಾಯಕತ್ವದ ಕೊರತೆ ಇದೆ. ನಾಯಕತ್ವದ ಗುಣಪರಿಣಾಮಕಾರಿಯಾಗಿ ಬೆಳೆಯುವ ಆವಶ್ಯಕತೆ ಇದೆ. ದೇಶದಲ್ಲಿ ಕ್ರಾಂತಿ ನಡೆಯುತ್ತದೆ ಎಂಬ ನಂಬಿಕೆಯಿಲ್ಲ. ಇದು ಬದಲಾವಣೆಯ ಮೂಲಕ ಪ್ರಗತಿ ಕಂಡ ದೇಶ. ಇಲ್ಲಿ ಕ್ರಾಂತಿ ಯಾವತ್ತೂ ನಡೆದಿಲ್ಲ. ಕ್ರಾಂತಿ ನಡೆಯುವುದಿದ್ದರೆ ಅದು ಶಿಕ್ಷಣ ಕ್ಷೇತ್ರದಿಂದ ಮಾತ್ರ ಸಾಧ್ಯ. ಅತಿರೇಕಗಳಿಂದ ಜರ್ಝರಿತಗೊಂಡಿರುವ ಈ ದೇಶದಲ್ಲಿ ಶಿಕ್ಷಕ ಕೂಡ ಸದಾ ಕಲಿಯುವ ಮನಸ್ಸು ಹೊಂದುವ ಮೂಲಕ ಏನಾದರೂ ಬದಲಾವಣೆ ತರಲು ಸಾಧ್ಯ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಶ್ರಾಂತ ಪ್ರಾಂಶುಪಾಲ ಪ್ರೊ| ಮಾಧವ ಭಟ್‌ ಮಾತನಾಡಿ, ಬುದ್ಧಿವಂತ ವಿದ್ಯಾರ್ಥಿಗಿಂತಲೂ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗೆ ಶಿಕ್ಷಕನ ಆವಶ್ಯಕತೆ ಇದೆ. ವಿಷಯವನ್ನು ಅರ್ಥ ಮಾಡಿಕೊಳ್ಳಲು ಹೋರಾಟ ಮಾಡುವ ಮಕ್ಕಳ ಜತೆ ಶಿಕ್ಷಕರು ನಿಲ್ಲಬೇಕು. ಸೋತಾಗಲೂ ಬದುಕು ಕಟ್ಟಿಕೊಳ್ಳುವುದನ್ನು, ಸೋಲಿನ ನಡುವೆಯೂ ಆತ್ಮವಿಶ್ವಾಸ ಕುಸಿಯದಂತೆ ನೋಡಿಕೊಳ್ಳುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದರು.

ಸಮಾಜದ ನೋವು ಕಡಿಮೆ ಮಾಡುವ, ಸಂಪತ್ತಿನ ಸಮಾನ ಹಂಚಿಕೆ ಮಾಡುವ ಕೆಲಸವನ್ನು ನಿಜಕ್ಕೂ ಶಿಕ್ಷಣ ಮಾಡಬೇಕಿತ್ತು. ಅಂಕಗಳು, ವ್ಯಕ್ತಿತ್ವದ ಗೌರವಕ್ಕಿಂತಲೂ ವ್ಯಕ್ತಿ ಮುಖ್ಯ ಎಂಬುದನ್ನು ನೋಡಿಕೊಂಡು ನಮ್ಮ ಶಿಕ್ಷಣ ಸಾಗಬೇಕು ಎಂದು ಅಭಿಪ್ರಾಯಪಟ್ಟರು.

Advertisement

ಗೌರವಾರ್ಪಣೆ
ಕಳೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಪಡೆದ ಜಿಲ್ಲೆಯ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳನ್ನು ರಾಜ್ಯ ಶಿಕ್ಷಕ ಕಲ್ಯಾಣನಿಧಿ ಬೆಂಗಳೂರು ಮತ್ತು ಶಿಕ್ಷಣ ಇಲಾಖೆ ವತಿಯಿಂದ ಗೌರವಿಸಲಾಯಿತು.

ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ, ಮೂಡುಬಿದ್ರೆ ಕ್ಷೇತ್ರ ಶಿಕ್ಷಣಾಧಿಕಾರಿ ಆಶಾ, ಸುಳ್ಯದ ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪಲಿಂಗೇ ಗೌಡ, ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಗುರುಪ್ರಸಾದ್‌, ಮಂಗಳೂರು ಉತ್ತರ ಮತ್ತು ದಕ್ಷಿಣದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಂಜುಳಾ ಮತ್ತು ಲೋಕೇಶ್‌, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್‌, ಮಂಗಳೂರು ಡಯಟ್‌ ಪ್ರಾಂಶೂಪಾಲರಾದ ಸಿಪ್ರಿಯಾನ್‌ ಮೊಂತೇರೊ, ಸರ್ವ ಶಿಕ್ಷಣ  ಅಭಿಯಾನದ ಗೀತಾ, ಜೇಮ್ಸ್‌ ಕುಟಿನ್ಹೋ, ವಿಷಯ ಪರಿವೀಕ್ಷಕರಾದ ರಾಧಾಕೃಷ್ಣ, ಪುರುಷೋತ್ತಮ ಮತ್ತು ಶಂಕರಪ್ಪ ಬುದ್ನಾಳ್‌ ಉಪಸ್ಥಿತರಿದ್ದರು.

ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ವೈ. ಶಿವರಾಮಯ್ಯ ಸ್ವಾಗತಿಸಿ, ವಿಷಯ ಪರಿವೀಕ್ಷಕರಾದ ಸಮಂತ್‌ ಕಾರ್ಯಕ್ರಮ ನಿರ್ವಹಿಸಿದರು. ದ.ಕ. ಜಿ.ಪಂ., ಶಿಕ್ಷಣ ಇಲಾಖೆ, ಜಿಲ್ಲಾ ಉಪನಿರ್ದೇಶಕರ ಕಚೇರಿ ಮಂಗಳೂರು ಇವುಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಅದೃಷದ ಕಾಲದಲ್ಲಿ 
ಇಂದು ತಂತ್ರಜ್ಞಾನದ ಕಾರಣದಿಂದ ಎಲ್ಲ ಮಾಹಿತಿಗಳು ವಿದ್ಯಾರ್ಥಿಗಳಿಗೆ ಬೆರಳ ತುದಿಯಲ್ಲಿ ಸಿಗುತ್ತಿವೆ. ಇಂಥ
ಸಂದರ್ಭದಲ್ಲಿ ಮಕ್ಕಳಿಗೆ ಹೊಸದಾಗಿ ಏನು ನೀಡಬಹುದು ಎಂಬುದರ ಕಡೆಗೆ ಗಮನಹರಿಸಬೇಕು. ತಮ್ಮ ಮುಂದಿರುವುದು ವಿದ್ಯಾರ್ಥಿಗಳಲ್ಲ, ಅವರು ಕೂಡ ಶಿಕ್ಷಕರೇ ಎಂಬುದನ್ನು ಶಿಕ್ಷಕರು ಅರ್ಥ ಮಾಡಿಕೊಳ್ಳಬೇಕು ಎಂದು ಡಾ| ಮಾಧವ ಭಟ್‌ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next