Advertisement

ಸವಾಲುಗಳಿಗೆ ಬೆನ್ನು ಹಾಕುವವ ಏನನ್ನೂ ಸಾಕಾರಗೊಳಿಸಲಾರ: ಶ್ರೀಶ ಭಟ್‌

04:50 AM Jul 21, 2017 | Harsha Rao |

ನೆಹರೂನಗರ : ಸಾಧನೆಯೆಡೆಗೆ ಹೆಜ್ಜೆ ಇಡುವವನಿಗೆ ಸವಾಲುಗಳು ಸಹಜ. ಆದರೆ ಅವುಗಳನ್ನು ಎದುರಿಸಿ ಮುನ್ನೆಡೆದಾಗ ಮಾತ್ರ ಯಶಸ್ಸು ನಮ್ಮದಾಗುತ್ತದೆ. ಸವಾಲು ಗಳಿಗೆ ಬೆನ್ನು ಹಾಕುವವನು ಏನನ್ನೂ ಸಾಕಾರ ಗೊಳಿಸಲಾರ ಎಂದು ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ, ಮಂಗಳೂರು ವಿವಿ ಸಂಶೋಧನ ಅಭ್ಯರ್ಥಿ ಶ್ರೀಶ ಭಟ್‌ ಅವರು ಹೇಳಿದರು.

Advertisement

ವಿವೇಕಾನಂದ ಕಾಲೇಜಿನ ವಿಜ್ಞಾನ ವಿಭಾಗಗಳ ಆಶ್ರಯದಲ್ಲಿ ವಿಜ್ಞಾನ ಸಂಘದ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿ, ಸೋಲೇ ಗೆಲುವಿನ ಸೋಪಾನ ಎನ್ನುವ ಬೀಜಮಂತ್ರ ನಮ್ಮನ್ನು ಮತ್ತೆ ಪ್ರೇರೇಪಿಸಬಲ್ಲುದು ಎಂದರು.

ವಿದ್ಯಾರ್ಥಿಗಳು ಕನಸುಗಳನ್ನು ಹೆಣೆಯ ಬೇಕು. ಆ ಕನಸುಗಳು ಸಾûಾತ್ಕಾರಗೊಳ್ಳಲು ಅವಿರತ ಪ್ರಯತ್ನ ಸಾಗುತ್ತಲೇ ಇರಬೇಕು. ಯಶಸ್ಸಿಗೆ ಅಡ್ಡಹಾದಿ ಇಲ್ಲ ಎಂಬುದು ಸರ್ವವಿಧಿತ. ಕೇವಲ ಅಂಕ ಗಳಿಕೆಯೊಂದೇ ಜೀವನದ ಪರಮ ಉದ್ದೇಶವಾಗಬಾರದು. ಶೈಕ್ಷಣಿಕವಾಗಿ ರ್‍ಯಾಂಕ್‌ ಹೊಂದಿದವರೂ ಜೀವನದಲ್ಲಿ ಸೋತ ಉದಾಹರಣೆಗಳು ಬೇಕಾದಷ್ಟಿವೆ. ಹಾಗಾಗಿ ನಮ್ಮ ಶೈಕ್ಷಣಿಕ ಸಾಧನೆಗೂ, ಜೀವನದ ಯಶಸ್ಸಿಗೂ ಅನೇಕ ಸಂದರ್ಭಗಳಲ್ಲಿ ಸಂಬಂಧವೇ ಇರಲಾರದು ಎಂದು ಹೇಳಿದರು.

ಸಮಯ ಹೊಂದಿಸಬೇಕು
ಕಾಲೇಜಿನ ಪ್ರಾಂಶುಪಾಲ ಡಾ| ಪೀಟರ್‌ ವಿಲ್ಸನ್‌ ಪ್ರಭಾಕರ್‌ ಮಾತನಾಡಿ, ಅನೇಕರು ಸಮಯವಿಲ್ಲ ಎಂದು ಹಲುಬುತ್ತಾರೆ. ಆದರೆ ಪ್ರತಿಯೊಬ್ಬನಿಗೂ 24 ಗಂಟೆ ಮಾತ್ರವೇ ಇರುವುದು ಹಾಗೂ ಈ ಪ್ರಪಂಚದ ಸಾಧ ಕರೆಲ್ಲರೂ ಆ ನಿಗದಿತ ಸಮಯವನ್ನೇ ಹೊಂದಿಸಿ ಅಮೋಘವಾದುದನ್ನು ಸೃಷ್ಟಿಸಿದ್ದಾರೆ ಎಂಬುದು ಮನನಾರ್ಹ. ವಿಜ್ಞಾನದ ವಿದ್ಯಾರ್ಥಿಗಳು ಗ್ರಾಮೀಣ ಭಾಗದ ಜನರಿಗೆ ಸಹಕಾರಿಯಾಗುವ, ಮಕ್ಕಳಿಗೆ ಉಪಕಾರಿಯೆನಿಸುವ ಮಾದರಿ ತಯಾರಿಯಲ್ಲಿ ತೊಡಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಜಯರಾಮ ಭಟ್‌ ಎಂ.ಟಿ. ಮಾತನಾಡಿ, ಪ್ರಸ್ತುತ ದಿನಗಳಲ್ಲಿ ವಿಜ್ಞಾನದ ವಿದ್ಯಾರ್ಥಿಗಳಿಗೆ ಅನೇಕಾನೇಕ ವಿದ್ಯಾರ್ಥಿ ವೇತನಗಳು ಲಭ್ಯವಿವೆ. ಅವುಗಳನ್ನು ಅರಿತು ಆ ಪ್ರಯೋಜನವನ್ನು ಪಡೆದುಕೊಳ್ಳಬೇಕು. ವಿಜ್ಞಾನದ ಕಲಿಕೆ ದೇಶದ ಅಭಿವೃದ್ಧಿಗೆ ಪೂರಕ ಎಂದರು.

Advertisement

ಶೈಕ್ಷಣಿಕ ನಿರ್ದೇಶಕ ಡಾ| ವಿಘ್ನೇಶ್ವರ ವರ್ಮುಡಿ ಉಪಸ್ಥಿತರಿದ್ದರು.ವಿಜ್ಞಾನ ಸಂಘದ ಸಂಯೋಜಕ, ಪ್ರಾಧ್ಯಾಪಕ ಪ್ರೊ| ಶಿವಪ್ರಸಾದ್‌ ಕೆ.ಎಸ್‌. ಪ್ರಸ್ತಾವನೆಗೈದರು.

ವಿಜ್ಞಾನ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಸ್ವಾಗತಿಸಿ, ಕಾರ್ಯದರ್ಶಿ ಸುಕನ್ಯಾ ವಂದಿಸಿದರು. ವಿದ್ಯಾರ್ಥಿನಿಯರಾದ ರಂಜಿತಾ ಹಾಗೂ ತುಷಾರ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next