ಮೆಲ್ಬೊರ್ನ್:ಕೋವಿಡ್ 19 ವೈರಸ್ ಜಗತ್ತಿನಾದ್ಯಂತ ತೀವ್ರ ಆತಂಕ ಹುಟ್ಟಿಸಿರುವ ನಡುವೆಯೇ ಮಹತ್ವದ ಬೆಳವಣಿಗೆಯೊಂದರಲ್ಲಿ ಮಾರಣಾಂತಿಕ ಕೋವಿಡ್ 19 ವೈರಸ್ ಅನ್ನು 48 ಗಂಟೆಯಲ್ಲಿ ಕೊಲ್ಲಬಹುದು ಎಂದು ಆಸ್ಟ್ರೇಲಿಯಾದ ವಿಜ್ಞಾನಿಗಳು ತಿಳಿಸಿದ್ದಾರೆ.
ಆಸ್ಟ್ರೇಲಿಯಾದ ಮೆಲ್ಬೊರ್ನ್ ನ ಜೀವ ವಿಜ್ಞಾನ ಸಂಶೋಧನಾ ಇನ್ಸ್ ಟಿಟ್ಯೂಟ್(ಬಿಡಿಐ) ಹಾಗೂ ಪೀಟರ್ ಡೋಹೆರಟೈ ಇನ್ಸ್ ಟಿಟ್ಯೂಟ್ ಆಫ್ ಇನ್ ಫೆಕ್ಷನ್ ಆ್ಯಂಡ್ ಇಮ್ಯೂನಿಟಿ ಜಂಟಿ ಸಂಶೋಧನೆಯಲ್ಲಿ ಮಾರುಕಟ್ಟೆಯಲ್ಲಿ ಈಗಾಗಲೇ ಲಭ್ಯವಿರುವ ಆ್ಯಂಟಿ ಪ್ಯಾರಾಸೈಟಿಕ್ ಔಷಧ ಉಪಯೋಗಿಸುವ ಮೂಲಕ ವೈರಸ್ ಅನ್ನು 48ಗಂಟೆಯಲ್ಲಿ ಕೊಲ್ಲಬಹುದಾಗಿದೆ ಎಂದು ಕಂಡುಕೊಂಡಿರುವುದಾಗಿ ವರದಿ ತಿಳಿಸಿದೆ.
ಮೋನಾಶ್ ಜೀವ ವಿಜ್ಞಾನ ಸಂಶೋಧನಾ ಇನ್ಸ್ ಟಿಟ್ಯೂಟ್ ನ ಡಾ.ಕೈಲಿ ವಾಗ್ ಸ್ಟಾಪ್ ನೇತೃತ್ವದ ಅಧ್ಯಯನ ತಂಡದ ಪ್ರಕಾರ, ವಿವಿಧ ಪರಾವಲಂಬಿ ಸೋಂಕುಗಳಿಗೆ ಚಿಕಿತ್ಸೆ ನೀಡಲು ಬಳಸುವ “ಐವರ್ಮೆಕ್ಟನ್” ಕೋವಿಡ್ 19 ಸೋಂಕನ್ನು 48 ಗಂಟೆಗಳಲ್ಲಿ ಕೊಲ್ಲುವ ಸಾಮರ್ಥ್ಯ ಹೊಂದಿದೆ ಎಂದು ವಿವರಿಸಿದೆ.
ಕೇವಲ ಒಂದು ಡೋಸ್ ಕೇವಲ 48 ಗಂಟೆಯಲ್ಲಿ ಆರ್ ಎನ್ ಎ ವೈರಸ್ ಅನ್ನು ತೆಗೆದು ಹಾಕಬಲ್ಲ ಸಾಮರ್ಥ್ಯ ಹೊಂದಿರುವುದನ್ನು ಸಂಶೋಧನೆಯಲ್ಲಿ ಪತ್ತೆಹಚ್ಚಿರುವುದಾಗಿ ತಿಳಿಸಿದ್ದಾರೆ. ಕೇವಲ 24ಗಂಟೆಯಲ್ಲಿ ವೈರಸ್ ಪ್ರಮಾಣ ಇಳಿಕೆಯಾಗಿರುವುದು ಕಂಡುಬಂದಿದೆ ಎಂದು ಡಾ.ವಾಗ್ ಸ್ಟಾಪ್ ತಿಳಿಸಿದ್ದಾರೆ.
ಅಲ್ಲದೇ ಐವರ್ಮೆಕ್ಟನ್ ಎಫ್ ಡಿಎ(ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್)ನಿಂದ ಮಾನ್ಯತೆ ಪಡೆದಿದೆ. ಇದು ಎಚ್ ಐವಿ, ಡೆಂಗ್ಯೂ, ಇನ್ ಫ್ಲೂಯೆಂಜಾ ಹಾಗೂ ಜೀಕಾ ವೈರಸ್ ನಂತಹ ಮಾರಣಾಂತಿಕ ವೈರಸ್ ವಿರುದ್ಧ ಬಳಸಬಹುದಾಗಿದೆ ಎಂದು ತಿಳಿಸಿದ್ದಾರೆ.