ನಿನ್ನ ಹೆಸರು, ಕುಲ, ಗೋತ್ರ ತಿಳಿದುಕೊಳ್ಳೋಕೆ ನಾನು ಮಾಡಿದ ಕಸರತ್ತುಗಳು ಒಂದಾ, ಎರಡಾ? ನೀನು ಯಾರ ಜೊತೆಯೂ ಹೆಚ್ಚು ಮಾತಾಡಲ್ಲ ಅಂತ ಕೇಳಿದ್ದೆ. ಅದೊಂದು ದಿನ ನಾನು ಕಾಲೇಜಿನಿಂದ ಮನೆಗೆ ಬಂದಾಗ ನೀನು ನನ್ನ ತಂಗಿಯ ಜೊತೆ ಪಟ ಪಟ ಅಂತ ಮಾತಾಡ್ತಿದ್ದೆ…
ಬೆಳಗ್ಗೆಯ ಸಮಯ. ಅಮ್ಮ ಒಂದೇ ಸಮನೆ, “ಏಳ್ಳೋ ತಡವಾಯಿತು. ಕಾಲೇಜೆ ಹೋಗಲ್ವ ?’ ಅಂತ ನನ್ನನ್ನು ಕೂಗಿ ಎಚ್ಚರಿಸೋ ಪ್ರಯತ್ನದಲ್ಲಿದ್ದಳು. ಅಂತೂ ಅಮ್ಮನ ಒತ್ತಾಯಕ್ಕೆ ಎದ್ದು, ರೆಡಿಯಾಗಿ, ಗೇಟಿನ ಬಳಿ ಬಂದಾಗ ಪಕ್ಕದ ಮನೆಯಾಚೆ ಅಂಗಳಕ್ಕೆ ರಂಗೋಲಿ ಇಡುತ್ತಿದ್ದ ನೀನು ಕಂಡೆ.
ಮಾರುದ್ದ ಜಡೆ, ಹಣೆಯಲ್ಲಿ ಪುಟ್ಟ ಚುಕ್ಕೆ, ಹಾಲಿನಂಥ ಮೈ ಬಣ್ಣ, ಮೂಗಿನಂದಕ್ಕೆ ಮೂಗುತಿ,ಕೆಂಗುಲಾಬಿ ಬಣ್ಣದ ತುಟಿ, ತುಟಿಯಂನಚಿನಲ್ಲಿ ನಸು ನಗು… ನಿನ್ನನ್ನು ನೋಡಿದ ಆ ಕ್ಷಣವೇ ಹೃದಯದಲ್ಲೇನೋ ಹೊಸ ರಾಗ ಮೂಡಿತು. ಅಲ್ಲಾ, ಇಷ್ಟು ದಿನ ಮನೆ ಪಕ್ಕವೇ ಇದ್ದರೂ ನೀನು ನನ್ನ ಕಣ್ಣಿಗ್ಯಾಕೆ ಬಿದ್ದಿರಲಿಲ್ಲ? ನೀನು ರಂಗೋಲಿ ಹಾಕಲು, ಅಂಗಳಕ್ಕೆ ಬರುವ ಸಮಯದಲ್ಲಿ ನಾನು ಎದ್ದೇ ಇರುತ್ತಿರಲಿಲ್ಲ ಬಿಡು. ಆದರೆ, ಮೊಬೈಲ್‌ನಲ್ಲಿ ಅಲಾರಾಂ ಕೂಡಾ ಇಡಬಹುದು ಅಂತ ಅವತ್ತೇ ನಂಗೆ ಗೊತ್ತಾಗಿದ್ದು. ಈಗೀಗ ಅಮ್ಮನಿಗಿಂತ ಮುಂಚೆ ನಾನೇ ಏಳುತ್ತೇನೆ ಗೊತ್ತಾ? ಹಾಲು, ಪೇಪರ್, ಜಾಗಿಂಗ್ ಅಂತ ನೂರು ನೆಪ ಹೇಳಿ, ನಿಮ್ಮ ಮನೆ ಅಂಗಳದ ಕಡೆಗೆ ಒಂದು ಕಣ್ಣಿಡುತ್ತೇನೆ. ಆದರೂ, ಒಂದು ದಿನ ಕೂಡಾ ನೀನು ನನ್ನತ್ತ ತಿರುಗಿ ನೋಡಿಲ್ಲ.
ನಿನ್ನ ಹೆಸರು, ಕುಲ, ಗೋತ್ರ ತಿಳಿದುಕೊಳ್ಳೋಕೆ ನಾನು ಮಾಡಿದ ಕಸರತ್ತುಗಳು ಒಂದಾ, ಎರಡಾ? ನೀನು ಯಾರ ಜೊತೆಯೂ ಹೆಚ್ಚು ಮಾತಾಡಲ್ಲ ಅಂತ ಕೇಳಿದ್ದೆ. ಅದೊಂದು ದಿನ ನಾನು ಕಾಲೇಜಿನಿಂದ ಮನೆಗೆ ಬಂದಾಗ ನೀನು ನನ್ನ ತಂಗಿಯ ಜೊತೆ ಪಟ ಪಟ ಅಂತ ಮಾತಾಡ್ತಿದ್ದೆ… ನೀನು ನನ್ನ ತಂಗಿಯ ಕ್ಲಾಸ್‌ಮೇಟ್ ಅಂತ ಗೊತ್ತಾಗಿದ್ದೇ ಅವಾಗ! ಆಹಾ, ಹುಡುಕುತ್ತಿದ್ದ ಬಳ್ಳಿ, ಕಾಲಿಗೇ ಬಂದು ತೊಡರಿಕೊಂಡಷ್ಟು ಖುಷಿಯಾಯ್ತು. ನಿನ್ನ ಪರಿಚಯ ಮಾಡುತ್ತಾ ತಂಗಿ, “ಇವಳು ನನ್ನ ಫ್ರೆಂಡ್ ವೈಶಾಲಿ. ಪಕ್ಕದ ಮನೆಗೆ ಹೊಸದಾಗಿ ಬಂದಿದ್ದಾರೆ. ನಂದೇ ಕ್ಲಾಸ್ ಕೂಡಾ’ ಅಂದಾಗ ನೀನು, ತುಸು ನಕ್ಕು ಹಾಯ್! ಅಂದಿದ್ದೆ. ಅಷ್ಟಕ್ಕೇ ನನ್ನ ಪುಟ್ಟ ಹೃದಯ ಎಷ್ಟು ಖುಷಿಪಟ್ಟಿತು ಗೊತ್ತಾ?
ಒಂದೆರಡು ಬಾರಿ ತಂಗಿಯ ಜೊತೆಗೆ ನಿನಗೂ ಸೈನ್ಸ್, ಮ್ಯಾಥ್ಸ್ ಹೇಳಿಕೊಟ್ಟಿದ್ದೇನೆ ಅನ್ನೋದನ್ನು ಬಿಟ್ಟರೆ, ನೀನು ಮಾತಿಗೆ ಸಿಕ್ಕೇ ಇಲ್ಲ. ಮನಸಿನ ಭಾವನೆಗಳನ್ನು ನಿನ್ಮುಂದೆ ಹೇಳಿಕೊಳ್ಳಬೇಕು ಅಂತ ಅದೆಷ್ಟು ಬಾರಿ ರಿಹರ್ಸಲ್ ಮಾಡಿದ್ದೆನೋ, ಲೆಕ್ಕವಿಟ್ಟಿಲ್ಲ. ಕೊನೆಗೂ ಮೊನ್ನೆ, ಹೇಗೋ ಧೈರ್ಯ ಮಾಡಿ ಪ್ರೇಮ ನಿವೇದನೆ ಮಾಡಿಬಿಟ್ಟೆ. ಭಾವನೆಗಳ ಭಾರವನ್ನು ನಿನ್ನೆದುರು ಹರವಿ ಹಗುರಾಗಿ, ನಿನ್ನ ಮುಖ ನೋಡಿದರೆ ಮೌನದಲ್ಲೇ ನಕ್ಕು ಹೋಗಿಬಿಟ್ಟೆಯಲ್ಲ?! ಆ ನಗುವಿನ ಅರ್ಥವೇನು? “ಮೌನಂ ಸಮ್ಮತಿ ಲಕ್ಷಣಂ’ ಅಂತ ತಿಳಿಯಲಾ ಅಥವಾ ಇವನ್ಯಾರೋ ಲೂಸು ಅಂತ ಸುಮ್ಮನಾದೆ ಅಂದುಕೊಳ್ಳಲಾ?
ನಿನ್ನ ನಗುವಿನ ಒಗಟನ್ನು ಬಿಡಿಸು. ಆದಷ್ಟು ಬೇಗ ನಿನ್ನ ಉತ್ತರವನ್ನು ತಿಳಿಸು.
ಇಂತಿ ನಿನ್ನವನಾಗಲು ಕಾಯುತ್ತಿರುವ
ಸುಹಾನ್