Advertisement
ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಹಾಗೂ ನಿಗಮ ಮಂಡಳಿ ಅವಕಾಶ ಸಿಗದಿದ್ದಕ್ಕೆ ಅಸಮಾಧಾನ ಗೊಂಡಿರುವ ಶಾಸಕ ಡಾ.ಕೆ.ಸುಧಾಕರ್ ಕಾಂಗ್ರೆಸ್ ತೊರೆದು ಕಮಲ ಹಿಡಿತಾರಾ ಎಂಬ ಊಹಾಪೋಹದ ಚರ್ಚೆ ಲೋಕಸಭಾ ಚುನಾವಣೆಫಲಿತಾಂಶ ಹೊರ ಬಿದ್ದ ಬಳಿಕ ಬಿರುಸುಗೊಂಡಿದ್ದು, ಶಾಸಕರ ಸದ್ಯದ ರಾಜಕೀಯ ನಡೆ ಕುತೂಹಲಕಾರಿಯಾಗಿದೆ.
Related Articles
Advertisement
ಹೀಗಾಗಿ ಮೈತ್ರಿ ಸರ್ಕಾರದ ವಿರುದ್ಧ ಬಹಿರಂಗ ವಾಗಿಯೇ ಅಸಮಾಧಾನ ಹೊರ ಹಾಕುತ್ತಿರುವ ಶಾಸಕರು ಪಕ್ಷ ತೊರೆಯುವ ಚಿಂತನೆಯಲ್ಲಿದ್ದಾರೆಂದು ಅವರ ಆಪ್ತ ಮೂಲಗಳು ಹೇಳುತ್ತಿವೆ.
ಅತೃಪ್ತರ ಜೊತೆ ಸಂಪರ್ಕ: ಲೋಕ ಫಲಿತಾಂಶ ಬಳಿಕ ಬಿಜೆಪಿ, ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯಲು ಆಪರೇಷನ್ ಕಮಲಕ್ಕೆ ಮತ್ತೆ ಕೈ ಹಾಕಿದೆಯೆಂಬ ಮಾತು ಕೇಳಿ ಬರುತ್ತಿರುವ ಬೆನ್ನಲ್ಲೇ ಕ್ಷೇತ್ರಕ್ಕೆ ಕಾಲಿಡದೇ ಬೆಂಗಳೂರಿನಲ್ಲಿ ಬೀಡು ಬಿಟ್ಟು ಕಾಂಗ್ರೆಸ್‌ನ ಕೆಲ ಅತೃಪ್ತ ಶಾಸಕರ ಜೊತೆ ನಿಕಟ ಸಂಪರ್ಕದಲ್ಲಿದ್ದಾರೆಂಬ ಮಾತು ಕೇಳಿ ಬರುತ್ತಿದೆ.
ಹೀಗಾಗಿಯೇ ಮಾಜಿ ಸಚಿವ ಕಾಂಗ್ರೆಸ್‌ನ ಅತೃಪ್ತ ಶಾಸಕರ ಬಣದ ನಾಯಕರಾಗಿರುವ ರಮೇಶ್ ಜಾರಕಿಹೊಳಿ ಭಾನುವಾರ ಖುದ್ದು ಶಾಸಕ ಡಾ.ಕೆ.ಸುಧಾಕರ್ ಮನೆಗೆ ಭೇಟಿ ನೀಡಿರುವುದು ಆಪರೇಷನ್ ಕಮಲಕ್ಕೆ ಒಳಾಗುತ್ತಾರೆಂಬ ಊಹಾಪೋಹಗಳಿಗೆ ರೆಕ್ಕೆಪುಕ್ಕ ಬಂದಂತಾಗಿದೆ.
ಬಿಜೆಪಿ ಸೇರಿದರೆ ಸಚಿವ ಸ್ಥಾನದ ಕನಸು ನನಸು ಮಾಡಿಕೊಳ್ಳಬಹುದೆಂಬ ಆಕಾಂಕ್ಷೆ ಹೊಂದಿದ್ದಾರೆ ಎನ್ನಲಾಗುತ್ತಿದೆ. ಮಾಜಿ ಸಿಎಂ ಎಸ್.ಎಂ.ಕೃಷ್ಣರನ್ನು ಭೇಟಿ ಮಾಡಿರುವುದು ಸೌಜನ್ಯದ ಭೇಟಿಯೆಂದು ಹೇಳುತ್ತಿದ್ದರೂ ಇದೇ ಸಂದರ್ಭದಲ್ಲಿ ಎಸ್.ಎಂ.ಕೃಷ್ಣ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತಿತರ ಬಿಜೆಪಿ ನಾಯಕರು ಸೇರಿ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಎಡೆಮಾಡಿ ಕೊಟ್ಟಿದೆ.
ಈ ಹಿಂದೆಯೆಲ್ಲಾ ಆಪರೇಷನ್ ಕಮಲದ ಮೊದಲ ಪಟ್ಟಿಯಲ್ಲಿರುವ ಶಾಸಕ ಸುಧಾಕರ್ ಅವರು ಹಿಂದೊಮ್ಮೆ ಅತೃಪ್ತ ಶಾಸಕರ ಜೊತೆ ಮುಂಬೈಗೂ ಹೋಗಿದ್ದರು. ಈ ವಿಚಾರವನ್ನು ಖುದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದ ಆಡಿಯೋದಲ್ಲಿ ಬಹಿರಂಗಗೊಂಡಿತ್ತು. ಇದೀಗ ಮತ್ತೆ ಆಪರೇಷನ್ ಕಮಲದ ಗುಮ್ಮ ಭಾರೀ ಸುದ್ದು ಮಾಡುತ್ತಿರುವ ಸಂದರ್ಭದಲ್ಲಿ ಶಾಸಕ ಸುಧಾಕರ್‌ರ ರಾಜಕೀಯ ನಡೆ ಸಾಕಷ್ಟು ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿದೆ.