ತೆಲಂಗಾಣದ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿರುವ ಜ್ಯುಬಿಲಿ ಹಿಲ್ಸ್ ಕ್ಷೇತ್ರದಲ್ಲಿ ಮಾಜಿ ಕ್ರಿಕೆಟಿಗ, ಕಾಂಗ್ರೆಸ್ ನಾಯಕ ಅಜರುದ್ದೀನ್ ಸ್ಪರ್ಧಿಸಿದ್ದಾರೆ. ಆಂಧ್ರಪ್ರದೇಶ ವಿಭಜನೆಗೊಂಡು ತೆಲಂಗಾಣ ರಚನೆಯಾದಾಗ ಅದು ಹೊಸ ರಾಜ್ಯಕ್ಕೆ ಜ್ಯುಬಿಲಿ ಹಿಲ್ಸ್ ಕ್ಷೇತ್ರ ಸೇರ್ಪಡೆಯಾಗಿತ್ತು. 2009ರಿಂದಲೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಭಾವಶಾಲಿಯಾಗಿತ್ತು. 2014ರಲ್ಲಿ ತೆಲಂಗಾಣಕ್ಕೆ ಆ ಕ್ಷೇತ್ರ ವರ್ಗಾವಣೆ ಆದ ಬಳಿಕ ನಡೆದ ಚುನಾವಣೆಯಲ್ಲಿ ಟಿಡಿಪಿಯ ಮಾಗಂಟಿ ಗೋಪಿನಾಥ್ ಗೆದ್ದಿದ್ದರು. 2018ರಲ್ಲಿ ಅವರು ಭಾರತ ರಾಷ್ಟ್ರ ಸಮಿತಿಗೆ ಸೇರ್ಪಡೆಯಾಗಿ ಗೆದ್ದಿದ್ದರು.
ಈ ಕ್ಷೇತ್ರದಿಂದ ಮಾಜಿ ಸಂಸದ ಮೊಹಮ್ಮದ್ ಅಜರುದ್ದೀನ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಲಿ ವಿಧಾನಸಭೆ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. 2009ರ ಚುನಾವಣೆಯಲ್ಲಿ ಅವರು ಉತ್ತರ ಪ್ರದೇಶದ ಮೊರಾದಾಬಾದ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು.
ಕುತೂಲಹಕಾರಿ ಅಂಶವೆಂದರೆ ಅಜರುದ್ದೀನ್‌ಗೆ ಹೈದರಾಬಾದ್ ಮತ್ತು ತೆಲಂಗಾಣ ರಾಜ್ಯ ರಾಜಕೀಯದಲ್ಲಿ ಆಸಕ್ತಿ ಇಲ್ಲವಂತೆ. ಇದರ ಹೊರತಾಗಿಯೂ ಕಾಂಗ್ರೆಸ್‌ನ ವರಿಷ್ಠರ ಜತೆಗೆ ಉತ್ತಮ ಬಾಂಧವ್ಯ ಇರುವುದರಿಂದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿದೆ. ಇದರಿಂದಾಗಿ ಭಿನ್ನಮತವೂ ಸ್ಫೋಟವಾಗಿ, ಪ್ರಮುಖ ನಾಯಕ ಪಿ.ವಿಷ್ಣುವರ್ಧನ ರೆಡ್ಡಿ ಬಿಆರ್‌ಎಸ್‌ಗೆ ಸೇರಿದ್ದಾರೆ. ಕಾಂಗ್ರೆಸ್ ಲೆಕ್ಕಾಚಾರದ ಪ್ರಕಾರ ಅಜರುದ್ದೀನ್ ಮೂಲಕ ಶ್ರೀಮಂತರೇ ಹೆಚ್ಚಾಗಿರುವ ಕ್ಷೇತ್ರವನ್ನು ಮರಳಿ ಗೆಲ್ಲುವ ಉತ್ಸಾಹದಲ್ಲಿದೆ. ಬಿಜೆಪಿ ವತಿಯಿಂದ ಲಂಕಾಲ ದೀಪಕ್ ರೆಡ್ಡಿ ಮಾಜಿ ಕ್ರಿಕೆಟಿಗನನ್ನು ಎದುರಿಸಲಿದ್ದಾರೆ.