Advertisement
ಸೋಷಿಯಲ್ ಮೀಡಿಯಾ ಅಥವಾ ಸಾಮಾಜಿಕ ಮಾಧ್ಯಮವನ್ನು ನಾವು ಕೃತಕ ಜಗತ್ತು ಎಂದು ಭಾವಿಸಿ ಅದನ್ನು ಅಣಕಿಸುತ್ತೇವೆ. ಅದರಲ್ಲಿ ವಾಸ್ತವ ಏನೂ ಇಲ್ಲ. ಜನರೆಲ್ಲ ಬಹಳ ಫೇಕ್ ಆಗಿ ವರ್ತಿಸುತ್ತಾರೆ. ಪ್ಲೀಸ್ ಅದನ್ನೆಲ್ಲ ಸೀರಿಯಸ್ ಆಗಿ ತೊಗೊಳ್ಬೇಡಿ ಎಂದೂ ಹೇಳುತ್ತೇವೆ. ಸರಿ ಒಪ್ಪಿಕೊಳ್ಳೋಣ.
Related Articles
Advertisement
ಹಾಗಿದ್ದರೆ ಮನುಷ್ಯನ ಮೂಲ ಗುಣ ಅಥವಾ ಅವನ ಪ್ರಕೃತಿಯೇ ನಕಾರಾತ್ಮಕವಿರಬಹುದಾ? ಇರಬಹುದೇನೋ?! ಈ ಕಾರಣದಿಂದಾಗಿಯೇ ನಾವು ಸಾರರಹಿತವಾದದ್ದು ಯಾವುದಿದೆಯೋ ಅದನ್ನು ಸಾರಭರಿತವೆಂದು ಭಾವಿಸಿಬಿಟ್ಟಿರಬಹುದಾ? ಇದರಿಂದಾಗಿ ಯಾವುದು ನಿಜಕ್ಕೂ ನಮ್ಮ ಪಾಲಿಗೆ ವೇಸ್ಟ್ ಆಗಬೇಕಿತ್ತೋ ಅದೇ ನಮ್ಮ ಟೇಸ್ಟ್ ಆಗಿ ಬದಲಾಗಿದೆಯೇ?
ಅದೇಕೆ ಸೋಷಿಯಲ್ ಮೀಡಿಯಾದಲ್ಲಿ ನಾವು ಜನರ ಗುಣವನ್ನು ಸುಲಭವಾಗಿ ಅರ್ಥಮಾಡಿಕೊಂಡಿದ್ದೇವೆ ಎಂದು ವಾದಿಸುತ್ತೇವೆ. ಅವರ ಮಾತುಗಳನ್ನು ಏನಕೇನ ಏಕ್‌ದಂ ಇದೇ ಎಂದು ತೀರ್ಪು ನೀಡಿಬಿಡುತ್ತೇವೆ. ಆ ವ್ಯಕ್ತಿಯ ಗುಣ ಇಂತಿಂಥದ್ದು ಎಂದು ಹೇಳಿಬಿಡುತ್ತೇವೆ. ಆದರೆ ಇಷ್ಟೆಲ್ಲ ಮಾಡುವ ನಾವು ಅದೇಕೆ ಸಾಮಾಜಿಕ ಮಾಧ್ಯಮಗಳಲ್ಲಿನ ನಮ್ಮ ವ್ಯಕ್ತಿತ್ವ-ವರ್ತನೆಯ ಬಗ್ಗೆ ತೃಣಮಾತ್ರವೂ ಅರ್ಥಮಾಡಿಕೊಳ್ಳುವುದಿಲ್ಲ?
ನಾವು ಜೀವನ ಪರ್ಯಂತ ಕೂಡಿಸುವ ಭಾವದಿಂದ ಪ್ರೇರಿತವಾಗಿರುವ ಜೀವಿಗಳು, ಆದರೆ ನಾವಿಲ್ಲಿ (ಸೋಷಿಯಲ್ ಮೀಡಿಯಾಗಳಲ್ಲಿ) ಕಳೆದುಕೊಳ್ಳುತ್ತಾ ಸಾಗುವುದೇಕೆ? ಅದೇಕೆ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಬಗ್ಗೆ, ತನ್ನ ದೃಷ್ಟಿಕೋನದ ಬಗ್ಗೆ ಆದರ, ಗೌರವ ಮತ್ತು ಸ್ವಾಗತವನ್ನು ನಿರೀಕ್ಷಿಸುತ್ತಾನೆ. ಆದರೆ ಅನ್ಯ ಜನರ ದೃಷ್ಟಿಕೋನವನ್ನು ಒಪ್ಪದೆ, ಅದನ್ನು ಅಪಮಾನಿಸುವುದಕ್ಕೆ ಹಿಂದೆ ಮುಂದೆ ಯೋಚಿಸುವುದಿಲ್ಲ?
ಬಿತ್ತಿದ್ದನ್ನೇ ಬೆಳೆಯುತ್ತೇವೆನಾವು ಚಿಕ್ಕವರಿದ್ದಾಗಿನಿಂದಲೂ “ಏನು ಬಿತ್ತುತ್ತೇವೋ ಅದನ್ನೇ ಬೆಳೆ ಯುತ್ತೀವಿ’ ಎನ್ನುವ ಹಿತವಚನವನ್ನು ಬಾಯಿಪಾಠ ಮಾಡಿ ಬೆಳೆದಿದ್ದೇವೆ. ಈ ಮಾತು ನಮ್ಮ ನಾಲಗೆಯ ಮೇಲೆಯೇ ಇದೆ. ಹೀಗಿರುವಾಗ ಇನ್ನೊಬ್ಬರಿಗೆ ಅಪಮಾನ ಮಾಡುತ್ತಾ ನಮಗೆ “ಮಾನದ ಮಹಲ…’ ಹೇಗೆ ನಿರ್ಮಿಸಿಕೊಳ್ಳಬಲ್ಲೆವು? ಅದೇಕೆ ನಾವು ವಿಷ ಬೀಜವನ್ನು, ಮುಳ್ಳನ್ನು ಬಿತ್ತಿ ಹೂವಿನ ಗಿಡವನ್ನೇಕೆ ನಿರೀಕ್ಷಿಸುತ್ತೇವೆ? ನಮ್ಮ ಸುತ್ತಲಿನ ವಿದ್ಯಮಾನಗಳನ್ನೆಲ್ಲ ಬಾಲಿಷ ಮತ್ತು ನಗಣ್ಯವೆಂದು ಭಾವಿಸುತ್ತಾ , “ಸ್ವಯಂ’ ಅನ್ನು ಮಾತ್ರ ಪ್ರೌಢ ಮತ್ತು ಗಣಮಾನ್ಯವೆಂದು ರುಜುವಾತುಪಡಿಸಿಕೊಳ್ಳುವುದು ಏಕೆೆ? ಹೇಗೆ? ಈ ವಿಷಯವಾಗಿ ಮನಃಶಾಸ್ತ್ರಜ್ಞರು ಹೇಳುತ್ತಾರೆ- ಯಾವಾಗ ನಮ್ಮ ಬಗ್ಗೆ ನಮಗೆ ಗೌರವವಿರುವುದಿಲ್ಲವೋ, ನಮ್ಮ ತಲೆಯಲ್ಲಿ ಸ್ವಯಂ ಬಗ್ಗೆ ಅಸ್ವೀಕಾರ, ಅನಾದರ, ಅಸಹಮತಿಯ ಭಾವವನ್ನು ತುಂಬಿಕೊಂಡಿರು ತ್ತೇವೋ ಆಗ ಮಾತ್ರವೇ ನಾವು ಇನ್ನೊಬ್ಬರಿಂದ ಸ್ವೀಕಾರ, ಆದರ ಮತ್ತು ಸಹಮತಿಯನ್ನು ತೀವ್ರವಾಗಿ ಬಯಸುತ್ತೇವೆ. ಈ ಸಮಯದಲ್ಲಿ ನಾವು, ನಮಗೆ ಯಾವುದನ್ನು ಕೊಟ್ಟು ಕೊಳ್ಳಲು ಆಗುತ್ತಿಲ್ಲವೋ ಅದನ್ನು ಇನ್ನೊ ಬ್ಬರಿಗೆ ಹೇಗೆ ಕೊಡಬಲ್ಲೆವು ಎನ್ನುವುದನ್ನು ಮರೆತುಬಿಡುತ್ತೇವೆ. ಕೊಡುಕೊಳ್ಳುವಿಕೆ
ನಾವು ಇನ್ನೊಬ್ಬರಿಂದ ಏನನ್ನು ನಿರೀಕ್ಷಿಸುತ್ತೀವೋ ಅದನ್ನು ಅವರೂ ನಮ್ಮಿಂದ ನಿರೀಕ್ಷಿಸುತ್ತಾರಲ್ಲವೇ? ಇದು ಕೊಡುಕೊಳ್ಳುವಿಕೆಯ ಪ್ರಕ್ರಿಯೆ ಯಷ್ಟೆ. ಸೋಷಿಯಲ್ ಮೀಡಿಯಾ ಎಂದು ಕರೆಸಿಕೊಳ್ಳುವ ಈ ಮಾಧ್ಯ ಮದಲ್ಲಿ ನಾವು ಬಯಸದೆಯೇ ಅನ್‌ಸೋಷಿಯಲ್ ಆಗುತ್ತಾ ಹೊರಟಿ ದ್ದೇವೆ. ಅದರಲ್ಲಿ ದಕ್ಕುವ ತಿರಸ್ಕಾರ, ಅಪಮಾನ, ದ್ವೇಷವನ್ನೆಲ್ಲ ಸಹಜವೆಂದು ಸ್ವೀಕರಿಸಿ ಅದರಿಂದ ಪ್ರಭಾವಿತರಾಗುತ್ತಿದ್ದೇವೆ. ಏಕೆಂದರೆ ಈ ಎಲ್ಲಾ ನಕಾರಾತ್ಮಕ ಭಾವನೆಗಳು ನಮ್ಮೊಳಗೆ ಗಟ್ಟಿಯಾಗಿ ಬೆಸೆದುಕೊಂಡುಬಿಟ್ಟಿವೆ. ಈಗ ವಿಚಾರಮಾಡಲೇಬೇಕಾದ ಸಂಗತಿಯೆಂದರೆ ನಾವು ಸ್ವಯಂ ನಿಂದಲೇ ತುಂಡರಿಸಿಕೊಂಡಿರುವಾಗ, ಸಂಸಾರದೊಂದಿಗೆ ಕೂಡಿಕೊಳ್ಳು ವುದು ಹೇಗೆ? ಸಂಸಾರದೊಂದಿಗೆ ಕೂಡಿಕೊಳ್ಳಬೇಕು ಎಂದಾದರೆ ಮೊದಲು ನಮ್ಮೊಂದಿಗೆ ನಾವು ಜೊತೆಯಾಗಬೇಕು. ಆಗ ಮಾತ್ರ ಸಮಾಜವನ್ನು ಮುರಿದುಬೀಳದಂತೆ ಕಾಪಾಡಲು ನಾವೆಲ್ಲ ಶಕ್ತರಾಗುತ್ತೇವೆ. ನಮ್ಮೊಂದಿಗೆ ನಾವು ಸ್ನೇಹ ಭಾವ ಬೆಳೆಸಿಕೊಂಡಾಗ ಮಾತ್ರ ಸಮಸ್ತ ಸಂಸಾರವನ್ನು ಅಂಥದ್ದೇ ದೃಷ್ಟಿಯಲ್ಲಿ ನೋಡಬಲ್ಲೆವು. ಬೇಕಿದ್ದರೆ ಗಮನಿಸಿ ನೋಡಿ. ಶ್ರೇಷ್ಠ ವ್ಯಕ್ತಿತ್ವದ ವ್ಯಕ್ತಿಗಳಿಗೆ “ಇನ್ನೊಬ್ಬರ ಕನಿಷ್ಠತೆಯ ಮೇಲೆ ಸ್ವಯಂ ಶ್ರೇಷ್ಠತೆಯ ಮಹಲನ್ನು ಕಟ್ಟಿನಿಲ್ಲಿಸಲಾಗದು’ ಎನ್ನುವ ಸತ್ಯದ ಅರಿವಿರುತ್ತದೆ. ನಮ್ಮ ಸಂಪರ್ಕಕ್ಕೆ ಬರುವ ವ್ಯಕ್ತಿಯನ್ನು ಚಿಕ್ಕವನೆಂದು ಸಾಬೀತು ಮಾಡಿ ನಾವು ದೊಡ್ಡವರಾಗುವುದಕ್ಕೆ ಸಾಧ್ಯವಿಲ್ಲ ಎನ್ನುವುದು ಇಂಥವರಿಗೆ ಗೊತ್ತಿರುತ್ತದೆ. ಯಾವಾಗ ನಾವು ಇನ್ನೊಬ್ಬರಲ್ಲಿ ಕೀಳರಿಮೆ ಹುಟ್ಟುಹಾಕುವ ಪ್ರಯತ್ನವನ್ನು ನಿಲ್ಲಿಸುತ್ತೀವೋ ಆಗ ಮಾತ್ರ ನಮ್ಮಲ್ಲೂ ಸ್ವಾಭಿಮಾನದ ಪ್ರತಿಷ್ಠಾಪನೆ ಆಗುತ್ತದೆ. ನಕಾರಾತ್ಮಕತೆಯ ಕಿಡಿಯಿಂದ ಸಕಾರಾತ್ಮಕ ಜ್ಯೋತಿ ಬೆಳಗುವುದಕ್ಕೆ ಸಾಧ್ಯವಿದೆಯೇ? ನಮ್ಮ ಜೀವನ ಆಭಾಸಗಳಿಂದಲ್ಲ, ಭಾವನೆಗಳಿಂದ ನಡೆಯುವಂಥದ್ದು. ನಮ್ಮ ವಾಸ್ತವಿಕ ಜೀವನದ ಭಾವನೆಗಳ ಪ್ರತಿಬಿಂಬ ಸೋಷಿಯಲ್ ಮೀಡಿಯಾ. ಸೋಷಿಯಲ್ ಮೀಡಿಯಾದೊಳಗಿನ ನಮ್ಮ ಭಾವನೆಗಳ ಪ್ರತಿರೂಪವೇ ವಾಸ್ತವಿಕ ಜೀವನ.
ಬನ್ನಿ ನಮ್ಮ ಪ್ರತಿಬಿಂಬವನ್ನು ನೋಡಿಕೊಂಡು ಬಿಂಬವನ್ನು ಸುಧಾರಿಸಿ ಕೊಳ್ಳೋಣ. ಬಿಂಬ ಸುಧಾರಿಸಿ ಸುಂದರವಾದರೆ ಪ್ರತಿಬಿಂಬವೂ ಸುಂದರವಾಗುತ್ತದಲ್ಲವೇ? ಮಹಾದೇವ ಶಿವ ಮತ್ತು ಜಗಜ್ಜನನಿ ಶಕ್ತಿಯ ಆಶಿರ್ವಾದ ನಮ್ಮೆಲ್ಲರ ಮೇಲೆ ಸದಾಇರಲಿ ಎಂಬ ಪ್ರಾರ್ಥನಿಯೊಂದಿಗೆ… ಅಶುತೋಶ್ ರಾಣಾ ಬಾಲಿವುಡ್ ನಟ