ರಾಣಿಬೆನ್ನೂರ: ನಗರದ ಮೇಡ್ಲೆರಿ ರಸ್ತೆಯ ಲಯನ್ಸ್ ಶಾಲಾ ಭವನದಲ್ಲಿ ಸ್ವಾಕರವೇ, ಲಯನ್ಸ್, ಲಿಯೋ ಸಂಸ್ಥೆ, ಶಂಕರ್ ಕಣ್ಣಿನ ಆಸ್ಪತ್ರೆ, ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಉದ್ಘಾಟಿಸಿ ಮಾತನಾಡಿದ ಲಯನ್ಸ್ ಸೇವಾ ಸಂಸ್ಥೆಯ ಅಧ್ಯಕ್ಷ ಬಸವರಾಜ ಬಡಿಗೇರ, ಸಮಾಜದಲ್ಲಿ ಬಹುತೇಕ ಬಡವರೇ ಹೆಚ್ಚಿದ್ದಾರೆ. ಕಣ್ಣು ತಪಾಸಣೆಗೊಳಪಡಬೇಕಾದರೆ, ಅನೇಕ ರೀತಿ ಆರ್ಥಿಕ ಸಮಸ್ಯೆಗಳನ್ನು ಎದುರಿಸುವುದನ್ನು ಕಾಣುತ್ತೇವೆ. ಜನಸಾಮಾನ್ಯರಿಗೆ ಇಂತಹ ಶಿಬಿರ ಸಹಕಾರಿ ಆಗಿವೆ ಎಂದರು.
ಪ್ರೊ| ಬಿ.ಬಿ.ನಂದ್ಯಾಲ ಮಾತನಾಡಿ, ಈ ವರ್ಷದ ಅಧ್ಯಕ್ಷರ ಸೇವಾ ಅವಧಿಯಲ್ಲಿ ಅನೇಕ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಅದರಲ್ಲಿ ಸಾವಿರಕ್ಕೂ ಹೆಚ್ಚು ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿದೆ. ಸೇವಾ ಕಾರ್ಯವೇ ತಮ್ಮ ಸಂಸ್ಥೆಯ ಪ್ರಮುಖ ಗುರಿಯಾಗಿದೆ ಎಂದರು. ಶಿಬಿರದಲ್ಲಿ 400ಕ್ಕೂ ಹೆಚ್ಚು ಫಲಾನುಭವಿಗಳು ಪಾಲ್ಗೊಂಡಿದ್ದರು.
ಅದರಲ್ಲಿ 74 ಫಲಾನುಭವಿಗಳು ಶಸ್ತ್ರಚಿಕಿತ್ಸೆಗೆ ಆಯ್ಕೆಯಾಗಿದ್ದು, ಅವರನ್ನು ಶಿವಮೊಗ್ಗದ ಶಂಕರ್ ಕಣ್ಣಿನ ಆಸ್ಪತ್ರೆಗೆ ಕಳುಹಿಸಲಾಯಿತು. ಸೋಮವಾರ ಫಲಾನುಭವಿಗಳ ಶಸ್ತ್ರಚಿಕಿತ್ಸೆ ನಡೆಯಲಿದೆ ಎಂದು ಶಂಕರ್ ಕಣ್ಣಿನ ಆಸ್ಪತ್ರೆಯ ವ್ಯವಸ್ಥಾಪಕ ಶಂಕರ್ ಅವರು ತಿಳಿಸಿದರು.
ಸ್ವಾಕರವೇ ಅಧ್ಯಕ್ಷ ನಿತ್ಯಾನಂದ ಕುಂದಾಪುರ, ನಗರಘಟಕದ ಅಧ್ಯಕ್ಷ ಅಭಿಲಾಷ ಬದಾಮಿ, ಡಿ.ಜಿ.ಮುರುಳಿ, ಯುವರಾಜ ಬಾರಾಟಕ್ಕೆ, ಎಪಿಎಂಸಿ ಸದಸ್ಯ ಬಸವರಾಜ ಹುಲ್ಲತ್ತಿ, ಜಿಲ್ಲಾಧ್ಯಕ್ಷ ಕೊಟ್ರೇಶಪ್ಪ ಎಮ್ಮಿ, ವಿನೋದ ಜಂಬಿಗಿ, ಚನ್ನವೀರಗೌಡ ಪಾಟೀಲ, ವಿಕ್ರಮ್ ಸಣ್ಣಮನಿ, ಶೇಖಪ್ಪ ನಾಡರ, ಅಶೋಕ ಹೊಟ್ಟಿಗೌಡ್ರ ಇದ್ದರು.