ವಿಜಯಪುರ: ಪಂಚಮಸಾಲಿಗೆ ಸಮುದಾಯಕ್ಕೆ ಪ್ರವರ್ಗ 2-ಎ ಮೀಸಲಾತಿ ಸೌಲಭ್ಯ ಸಿಗುವ ವರೆಗೂ ನಮ್ಮ ಸಮಾಜದ ಹೋರಾಟ ಮುಂದುವರೆಯಲಿದೆ ಎಂದು ಬಿಜೆಪಿ ಶಾಸಕ, ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಸೋಮವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ ಮೀಸಲು ಸೌಲಭ್ಯ ನೀಡುವ ಕುರಿತು ಕ್ರಮ ಕೈಗೊಳ್ಳುವುದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೂರು ತಿಂಗಳ ಕಾಲಾವಕಾಶ ಕೋರಿದ್ದಾರೆ. ಅಲ್ಲದೇ ಮೀಸಲು ಸೌಲಭ್ಯಕ್ಕೆ ಬೇಡಿಕೆ ಇರಿಸಿರುವ ಎಲ್ಲ ಸಮುದಾಯಗಳಿಗೆ ನ್ಯಾಯ ಸಲ್ಲಿಸುವುದಾಗಿ ಹೇಳಿದ್ದಾರೆ. ಆದರೆ ಬೇಡಿಕೆ ಈಡೇರುವವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.
ಇನ್ನು ನಾನು ಪಂಚಮಸಾಲಿ ಸಮುದಾಯದ ಮೀಸಲು ಹೋರಾಟದ ಮುಂಚೂಣಿಯಲ್ಲಿದ್ದರೂ ಕೇವಲ ನಮ್ಮ ಸಮಾಜಕ್ಕೆ ಮಾತ್ರ ಮೀಸಲಾತಿ ಬೇಕೆಂದು ಪಟ್ಟು ಹಿಡಿದಿಲ್ಲ. ಬದಲಾಗಿ ಹಿಂದುಳಿದ ಇತರೆ ಸಮುದಾಯಗಳಿಗೂ ಮೀಸಲು ಸೌಲಭ್ಯ ಕೊಡುವಂತೆ ಸದನದ ಹೊರಗೆ ಹಾಗೂ ಒಳಗೆ ಹೋರಾಟ ಮಾಡಿದ್ದೇನೆ. ಹೀಗಾಗಿ ಸಾಮಾಜಿಕ ನ್ಯಾಯಕಾಗಿ ಅರ್ಹ ಎಲ್ಲ ಸಮುದಾಯಗಳಿಗೆ ಮೀಸಲು ಸೌಲಭ್ಯ ಸಿಗುವ ವರೆಗೆ ಹೋರಾಟ ಮುಂದುವರೆಸುವುದಾಗಿ ಹೇಳಿದರು.
ಇದನ್ನೂ ಓದಿ:ಕೈಗಾರಿಕಾ ಪ್ರದೇಶದಲ್ಲಿಯೇ ಟೌನ್ ಶಿಪ್ ನಿರ್ಮಾಣಕ್ಕೆ ಚಿಂತನೆ: ಸಚಿವ ನಿರಾಣಿ
ರಾಜ್ಯದಲ್ಲಿ ಶಾಸ್ವತ ಹಿಂದುಳಿದ ಆಯೋಗವಿದ್ದು, ಕಾಲಕಾಲಕ್ಕೆ ಈ ಆಯೋಗ ಮೀಸಲಾತಿ ಪರಿಶೀಲಿಸಿ, ಬದಲಾವಣೆ ಮಾಡುತ್ತದೆ. ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಿಂದುಳಿದಿರುವಿಕೆ ಅವಲೋಕಿಸುತ್ತದೆ. ಅಭಿವೃದ್ಧಿ ಹೊಂದದ ಸಮುದಾಯಗಳಿಗೆ ಮೀಸಲು ಸೌಲಭ್ಯ ನೀಡುವ ಅಗತ್ಯದ ಕುರಿತು ಹಾಗೂ ಅಭಿವೃದ್ಧಿ ಕಂಡಿರುವ ಸಮುದಾಯಗಳನ್ನು ಮೀಸಲಾತಿ ಸೌಲಭ್ಯದಿಂದ ಕೈ ಬಿಡಲು ಸರ್ಕಾರಕ್ಕೆ ಶಿಫಾರಸು ಮಾಡುವ ಅಧಿಕಾರ ಹೊಂದಿದೆ. ನಮ್ಮ ಸಮುದಾಯದ ಮೀಸಲು ಸೌಲಭ್ಯದ ವಿಷಯದಲ್ಲಿ ಆಯೋಗ ನ್ಯಾಯ ಸಮ್ಮತ ನಿರ್ಧಾರಕ್ಕೆ ಬರಲಿದೆ ಎಂಬ ವಿಶ್ವಾಸವಿದೆ ಎಂದರು.