Advertisement

ಸಾವಯವ ಕೃಷಿ ಪ್ರೋತ್ಸಾಹಿಸಲು ಅಭಿಯಾನ

04:15 PM Aug 22, 2021 | Team Udayavani |

ಚಿಕ್ಕಬಳ್ಳಾಪುರ: ಬರಪೀಡಿತ ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಅಂತರ್ಜಲದ ಮಟ್ಟ ವೃದ್ಧಿಸಲು ಆದ್ಯತೆ ನೀಡಿದ ಬಳಿಕ,ಸಾವಯವ ಕೃಷಿ ಪ್ರೋತ್ಸಾಹಿಸುವ ಸಲುವಾಗಿ ರೈತ ಬಂಧು ಅಭಿಯಾನ ಆರಂಭಿಸಲಾಗಿದೆ.

Advertisement

ಜಿಲ್ಲೆಯಲ್ಲಿ ಸ್ವಾತಂತ್ರ್ಯ ದಿನದಂದು ರೈತಬಂಧು ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಎರಡು ತಿಂಗಳವರೆಗೆ ನಡೆಯುವ ಈ ಅಭಿಯಾನದಲ್ಲಿ ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಸಲುವಾಗಿ ಜನಜಾಗೃತಿ ರಥಯಾತ್ರೆ ಮೂಲಕ ಯೋಜನೆ ಕುರಿತು ಜನರಲ್ಲಿ ಅರಿವು ಮೂಡಿಸ ಲಾಗುತ್ತಿದೆ. 2023ರವರೆಗೆ ರೈತರ ಆದಾಯ ದ್ವಿಗುಣಗೊಳಿಸಬೇಕೆಂದು ಪ್ರಧಾನಿ ಮೋದಿ ಅವರ ಸೂಚನೆಯಂತೆ ಅಧಿಕಾರಿಗಳು ಸಹ ರೈತರಿಗೆ ಹೆಚ್ಚಿನ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರತರಾಗಿದ್ದಾರೆ.

ಜನರಲ್ಲಿ ಜಾಗೃತಿ: ರಸಗೊಬ್ಬರದ ಯಥೇತ್ಛ ಬಳಕೆಯಿಂದಾಗಿ ಭೂಮಿಯ ಫಲವತ್ತತೆ ನಸಿಸುತ್ತಿದೆ ಎಂಬ ತಜ್ಞರ ಆತಂಕದ ನಡುವೆ ರೈತರನ್ನು ಸಾವಯವ ಕೃಷಿಯತ್ತ ಆಕರ್ಷಿಸಲು ಸರ್ಕಾರ ಉದ್ಯೋಗ ಖಾತ್ರಿ ಯೋಜನೆ ಮೂಲಕ ರೈತ ಬಂಧು ಅಭಿಯಾನ ಆರಂಭಿಸಿದೆ. ಇದರಿಂದ ಅನುಕೂಲ ಒದಗಿಸಲು ಜಿಪಂ, ತಾಪಂ ಹಾಗೂ ಕೃಷಿ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.

ಇದನ್ನೂ ಓದಿ:ನದಿ ನೀರು ವಿಚಾರವಾಗಿ ಪರಿಹಾರ ಸಾಧ್ಯವಾಗದಿದ್ದರೆ ಜೆಡಿಎಸ್ ನಿಂದ ಹೋರಾಟ: ದೇವೇಗೌಡ

ಎರೆಹುಳು ಗೊಬ್ಬರದ ಉಪಯೋಗ: ಕಪ್ಪು ಬಂಗಾರ ಎಂದು ಕರೆಯುವ ಎರೆಹುಳು ಗೊಬ್ಬರ ಬಳಕೆಯಿಂದಾಗಿ ಬೆಳೆಗೆ ಅಗತ್ಯವಿರುವ ಪೋಷಕಾಂಶಗಳು ಪೂರೈಕೆ ಆಗುವುದಲ್ಲದೆ, ಮಣ್ಣಿನ ಗುಣಮಟ್ಟ ಮತ್ತು ಸೂಕ್ಷ್ಮಾಣು ಜೀವಿಗಳನ್ನು ಹೆಚ್ಚಿಸುತ್ತದೆ. ಎರೆಹುಳು ಗೊಬ್ಬರ ಉತ್ಪಾದನೆ ಮಾಡಿ ಉಪಯೋಗಿಸುವುದರಿಂದ ಕೃಷಿ ಉತ್ಪಾದನೆ ವೆಚ್ಚ ಶೇ.25ರಿಂದ 30 ಕಡಿಮೆ ಮಾಡಬಹುದು, ಎರೆಹುಳು ಗೊಬ್ಬರ ಜೊತೆಗೆ ಜೈವಿಕ ಗೊಬ್ಬರ ಮಿಶ್ರಣದಿಂದ ರೋಗ ಉಂಟು ಮಾಡುವ ಸೂಕ್ಷ್ಮ ಜೀವಿಗಳನ್ನು ನಿಯಂತ್ರಿಸುತ್ತದೆ, ಎರೆಹುಳು ಕೃಷಿ ಅಳವಡಿಕೆಯಿಂದ ಮಣ್ಣಿನ ರಚನೆ ನೀರು ಹೀರುವ ಗುಣ ಗಾಳಿಯಾಡುವ ಗುಣ ಮತ್ತು ಉಷ್ಣತೆಯನ್ನು ಸಮತೋಲನದಲ್ಲಿಡುವ ಜೊತೆಗೆ ಮಣ್ಣಿನ ಭೌತಿಕ ರಾಸಾಯನಿಕ ಮತ್ತು ಜೈವಿಕ ಗುಣ ಹೆಚ್ಚಿಸುತ್ತದೆ ಎನ್ನುತ್ತಾರೆ ತಜ್ಞರು.

Advertisement

ಕನಿಷ್ಠ 50 ಘಟಕ ನಿರ್ಮಾಣ ಗುರಿ: ರಸಗೊಬ್ಬರ ಬಳಕೆಯಿಂದ ಜನರ ಆರೋಗ್ಯದ ಮೇಲೆ ಆಗುತ್ತಿರುವ ದುಷ್ಪರಿಣಾಮ ತಡೆಗಟ್ಟುವ ಉದ್ದೇಶದಿಂದ ಸರ್ಕಾರ ನರೇಗಾ ಯೋಜನೆ ಬಳಸಿಕೊಂಡು ರೈತರಿಗೆ ಸಾವಯವ ಕೃಷಿಯತ್ತ ಆಕರ್ಷಿಸಲು ರೈತಬಂಧು ಅಭಿಯಾನಕ್ಕೆ ಚಾಲನೆ ನೀಡಿ ಗ್ರಾಪಂ ಮಟ್ಟದಲ್ಲಿ ಕನಿಷ್ಠ 50 ಘಟಕ ನಿರ್ಮಸಲು ಯೋಜನೆ ರೂಪಿಸಲಾಗಿದೆ. ಅದಕ್ಕಿಂತ ಹೆಚ್ಚು ಮಾಡಲು ಪಿಡಿಒಗಳಿಗೆ ಸೂಚನೆ ನೀಡಲಾಗಿದೆ, ಎರಡು ಮಾದರಿಯಲ್ಲಿ ತೊಟ್ಟಿ ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ರೈತರು ಈ ಯೋಜನೆ ಸದ್ಬಳಕೆ ಮಾಡಿಕೊಳ್ಳಲು ವ್ಯಾಪಕ ಅರಿವು ಮೂಡಿಸಲಾಗುತ್ತಿದೆ.

ರೈತ ಬಂಧು ಅಭಿಯಾನದ ಉದ್ದೇಶ
ಆರ್ಥಿಕ ಅಸ್ಥಿರತೆಯ ರಾಸಾಯನಿಕ ಗೊಬ್ಬರದ ಬದಲಾಗಿ ಎರೆಹುಳು ಗೊಬ್ಬರ ಉಪಯೋಗದಿಂದ ಉತ್ಪಾದನೆ ವೆಚ್ಚಕಡಿಮೆ ಆಗುವುದರಿಂದ ರೈತರ ಆದಾಯ ಹೆಚ್ಚಿಸಲು ಅನುಕೂಲವಾಗುತ್ತದೆ, ತ್ಯಾಜ್ಯ ವಸ್ತುಗಳ ಸದ್ಬಳಕೆಯಿಂದಕೃಷಿ ಡೇರಿ ಪರಿಸರ ಮಾಲಿನ್ಯಕಡಿಮೆಗೊಳಿಸಿ, ಸ್ವಚ್ಛ ಪರಿಸರ ಸೃಷ್ಟಿಸಲು ಅನುಕೂಲವಾಗುತ್ತದೆ, ರೈತರಲ್ಲಿ ಎರೆಹುಳು ಗೊಬ್ಬರ ಉತ್ಪಾದನೆ ಅದರ ಉಪಯುಕ್ತತೆ ಹಾಗೂ ಸಾವಯವ ಕೃಷಿ ಉತ್ತೇಜಿಸುವ ಬಗ್ಗೆ ಜಾಗೃತಿ ಮೂಡಿಸುವುದು, ಗ್ರಾಮೀಣ ಜನರಿಗೆ ಸ್ಥಳೀಯವಾಗಿ ಉದ್ಯೋಗ ನೀಡಿ ಸ್ವಾವಲಂಬಿಗಳನ್ನಾಗಿ ಬದುಕುವಂತೆ ಮಾಡುವುದು.

ಆದ್ಯತೆ ಕಾಮಗಾರಿಗಳು
ಬದು ನಿರ್ಮಾಣ,ಕೃಷಿಹೊಂಡ,ಕೊಳವೆ ಬಾವಿ ಮರುಪೂರಣ ಘಟಕಗಳ ನಿರ್ಮಾಣ, ಪಂಚಾಯ್ತಿ ವ್ಯಾಪ್ತಿಯ ರೈತರ ಜಮೀನಿನಲ್ಲಿ ಅನುಷ್ಠಾನ,
ಸೋಕ್‌ಪಿಟ್‌(ಬಚ್ಚಲು ಗುಂಡಿ), ಸಮಗ್ರಕೆರೆ ಅಭಿವೃದ್ಧಿ,ಕಾಲುವೆಗಳ ಪುನಶ್ಚೇತನ,ಕೆರೆ ಹೂಳು ತೆಗೆಯುವುದು,ಕೆರೆ ಏರಿ,ಕೋಡಿ ದುರಸ್ತಿ, ರೈತರ ಜಮೀನಿಗೆ ನೀರು ಹರಿದು ಹೋಗುವ ಕಾಲುವೆಗಳ ಪುನಶ್ಚೇತನ ಮತ್ತುಕೆರೆಯಂಚಿನಲ್ಲಿ ಅರಣ್ಯೀಕರಣ ಕಾಮಗಾರಿ, ರಸ್ತೆ ಬದಿ ನೆಡುತೋಪು, ಬ್ಲಾಕ್‌ ಪ್ಲಾಂಟೇಶನ್‌, ಕೃಷಿ ಅರಣ್ಯೀಕರಣ, ರೈತರ ಜಮೀನಿನಲ್ಲಿ ತೋಟಗಾರಿಕೆ ಬೆಳೆ ಬೆಳೆಯಲು ಅವಕಾಶ, ಬೋರ್‌ವೆಲ್‌ ರಿಚಾರ್ಜ್‌ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ರಸಗೊಬ್ಬರದ ಬಳಕೆಯಿಂದ ಭೂ ಫಲವತ್ತತೆ ಕ್ಷೀಣಿಸುತ್ತಿದೆ. ಅದನ್ನು ತಡೆಗಟ್ಟುವ ಸಲುವಾಗಿ ನರೇಗಾಯೋಜನೆಯಡಿ ಸಾವಯವ ಕೃಷಿಗೆ ಉತ್ತೇಜನ ನೀಡಲು ರೈತಬಂಧು ಅಭಿಯಾನ ನಡೆಸಲಾಗುತ್ತಿದೆ. ರೈತರು ಇದರ ಸದ್ಬಳಕೆ ಮಾಡಿಕೊಂಡರೆ ಆರ್ಥಿಕವಾಗಿ ಸದೃಢರಾಗಿ, ಆರೋಗ್ಯವಂತ ಬೆಳೆಬೆ ಳೆಯಲು ಸಹಕಾರಿಆಗುತ್ತದೆ.
-ಬಿ.ಶಿವಕುಮಾರ್‌, ಜಿಪಂ
ಉಪ ಕಾರ್ಯದರ್ಶಿ, ಚಿಕ್ಕಬಳ್ಳಾಪುರ

ಪಿಡಿಒಗಳು ನರೇಗಾ ಎಂಜಿನಿಯರ್‌ಗಳಿಗೆ ಚಿಂತಾಮಣಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಎರೆಹುಳು ಗೊಬ್ಬರ ತಯಾರಿಕೆ ಕುರಿತು ತರಬೇತಿ
ನೀಡಲಾಗಿದೆ. ಅನುಮೋದನೆ ನೀಡಲಾಗಿದೆ. ರೈತರುಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು.
-ಎಂ.ಚಂದ್ರಪ್ಪ, ನರೇಗಾ ಸಹಾಯಕ ನಿರ್ದೇಶಕ,
ಶಿಡ್ಲಘಟ್ಟ ತಾಲೂಕು

ಭೂ ಫಲವತ್ತತೆ ಹೆಚ್ಚಿಸಲು ಮತ್ತು ಸಾವಯವಕೃಷಿಯತ್ತ ರೈತರ ಆಕರ್ಷಿಸಲು ಅಭಿಯಾನ ಆರಂಭಿಸಲಾಗಿದೆ. ರೈತರಿಗೆ ಎರೆಹುಳು ಘಟಕ ನಿರ್ಮಿಸಿಕೊಂಡರೆ ಸಹಾಯಧನ ನೀಡಲಾಗುತ್ತದೆ. ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ರೈತಬಂಧು ಅಭಿಯಾನ ನಡೆಸಲಾಗುತ್ತಿದೆ.
-ಬಿ.ಕೆ.ಚಂದ್ರಕಾಂತ್‌,
ತಾಪಂ ಇಒ, ಶಿಡ್ಲಘಟ್ಟ

-ಎಂ.ಎ.ತಮೀಮ್‌ ಪಾಷ

Advertisement

Udayavani is now on Telegram. Click here to join our channel and stay updated with the latest news.

Next