ಹುಣಸೂರು: ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಬಣ ರೈತರ ಎಲ್ಲಾ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕೆಂದು ಆಗ್ರಹಿಸಿ ನಗರಸಭಾ ಮೈದಾನದಲ್ಲಿ ಸಾಲ ಮನ್ನಾಕ್ಕೆ ಅರ್ಜಿ ಸಲ್ಲಿಸುವ ಅಭಿಯಾನ ನಡೆಯಿತು.
ಸಂಘದ ಕೋಡಿಹಳ್ಳಿ ಚಂದ್ರಶೇಖರ್ ಬಣದ ತಾಲೂಕು ಅಧ್ಯಕ್ಷ ಬೆಟ್ಟೇಗೌಡ ಮಾತನಾಡಿ, ಕಳೆದ 5 ವರ್ಷಗಳಿಂದ ಸತತ ಬರಗಾಲ ರೈತರನ್ನು ಕಂಗೆಡಿಸಿದೆ. ಈ ಬಾರಿ ಸಮದ್ಧ ಮಳೆಯಾಗಿದ್ದರೂ ಈ ಹಿಂದಿನ ಸಾಲವನ್ನು ರೈತ ತೀರಿಸಲು ಸಾಧ್ಯವಾಗದ ಪರಿಸ್ಥಿತಿ ಬಂದೊದಗಿದೆ.
ರೈತರ ವಿವಿಧ ರೀತಿಯ ಎಲ್ಲಾ ಸಾಲಗಳನ್ನೂ ಮನ್ನಾ ಮಾಡಲು ಒತ್ತಾಯಿಸಿ ರೈತಸಂಘ ರಾಜ್ಯಾದ್ಯಂತ ರೈತರ ಸಾಲ ಮನ್ನಾಕ್ಕೆ ಅರ್ಜಿ ಸಲ್ಲಿಸುವ ಅಭಿಯಾನ ಕೈಗೊಂಡಿದೆ ಎಂದು ಹೇಳಿದರು.
ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ನ.9ರಂದು ಮೈಸೂರಿನ ಹಿನ್ಕಲ್ನಲ್ಲಿ ನಡೆಯುವ ಬೃಹತ್ ಅಭಿಯಾನದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸಾಲ ಮನ್ನಾ ಅರ್ಜಿಗಳನ್ನು ನೀಡಲಿದ್ದಾರೆ. ತಾಲೂಕಿನಲ್ಲಿ 20ಸಾವಿರ ರೈತರಿಗೆ ಅರ್ಜಿಗಳನ್ನು ಮನೆಮನೆಗೆ ತೆರಳಿ ವಿತರಿಸಲಾಗುವುದೆಂದರು.
ಅಭಿಯಾನದಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕೃಷ್ಣಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಮ್ಮ, ಪದಾಧಿಕಾರಿಗಳಾದ ರಾಮೇಗೌಡ, ನಾಗರಾಜು, ಸತ್ಯ ಎಂಎಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ, ಮುಖಂಡರಾದ ಹೊನ್ನಪ್ಪರಾವ್ ಕಾಳಿಂಗೆ, ಸತ್ಯನಾರಾಯಣ ಕರಾಡೆ ಮತ್ತಿತರರಿದ್ದರು.