Advertisement
ಆರೋಪ, ಪ್ರತ್ಯಾರೋಪಗಳ ಮಧ್ಯೆ ರಾಜಕೀಯ ಪಕ್ಷಗಳ ನಾಯಕರ ಪ್ರಚಾರದ ಅಬ್ಬರ ಜೋರಾಗಿದೆ. ಆದರೆ ಕ್ಷೇತ್ರ ಜ್ವಲಂತ ಸಮಸ್ಯೆಗಳ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂಬ ಆರೋಪವೇ ಗಂಭೀರಾಗಿದೆ. ಬಿಜೆಪಿಯವರು ರಮೇಶ ಭೂಸನೂರ ಅವರ ಗೆಲುವಿನ ಮೂಲಕ ಕ್ಷೇತ್ರವನ್ನು ಮರಳಿ ಪಡೆಯಲು ಅಬ್ಬರ ಪ್ರಚಾರದ ಮೂಲಕ ಹವಣಿಸುತ್ತಿದ್ದಾರೆ.
Related Articles
Advertisement
ಜನತಾ ಪರಿವಾರದ ಹಿನ್ನೆಲೆಯ ಅದರಲ್ಲೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬ ನಿಷ್ಠರಾಗಿದ್ದ ಎಂ.ಸಿ.ಮನಗೂಳಿ ಅವರ ನಿಧನದ ಬಳಿಕ ಕ್ಷೇತ್ರಕ್ಕೆ ಉತ್ತರಾಧಿಕಾರಿ ಯಾರು ಎಂಬ ಚರ್ಚೆ ಆರಂಭಗೊಂಡಿತ್ತು. ಸಹಜವಾಗಿ ಮನಗೂಳಿ ಅವರ ಪುತ್ರ ಅಶೋಕ ಜೆಡಿಎಸ್ ಅಭ್ಯರ್ಥಿಯಾಗಲಿದ್ದಾರೆ ಎಂದೇ ಭಾವಿಸಲಾಗಿತ್ತು. ಆದರೆ ಉಪ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿಕೆ ನೀಡುತ್ತಲೇ ಅಶೋಕ ಮನಗೂಳಿ ಸ್ಥಳೀಯ ಕಾಂಗ್ರೆಸ್‌ನತ್ತ ಮುಖ ಮಾಡಿದರು. ಸ್ಥಳೀಯ ನಾಯಕರ ವಿರೋಧದ ಮಧ್ಯೆಯೂ ಕೈ ಪಕ್ಷ ಸೇರ್ಪಡೆಯಾಗಿದ್ದರು. ಅಲ್ಲದೇ ಅಭ್ಯರ್ಥಿಯಾಗಿಯೂ ಘೋಷಣೆಯಾಗಿ, ಸ್ಪರ್ಧೆಯನ್ನೂ ಮಾಡಿದ್ದಾರೆ.
ತಮ್ಮ ಒಂದು ಕಾಲದ ಜೊತೆಗಾರರಾಗಿದ್ದ ಎಂ.ಸಿ.ಮನಗೂಳಿ ಅವರ ಪುತ್ರ ಅಶೋಕ ಕಾಂಗ್ರೆಸ್ ಸೇರಿದ್ದು, ಅವರನ್ನು ಗೆಲ್ಲಿಸುವ ಪಣ ತೊಟ್ಟಂತೆ ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಕ್ಷೇತ್ರದಲ್ಲಿ ಹಲವು ಸುತ್ತಿನಲ್ಲಿ ಪ್ರಚಾರ ನಡೆಸಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯದ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುಜೇìವಾಲ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಯು.ಟಿ.ಖಾದರ, ಸ್ಥಳೀಯ ಪ್ರಭಾವಿ ನಾಯಕರಾದ ಎಂ.ಬಿ.ಪಾಟೀಲ, ಶಿವನಂದ ಪಾಟೀಲ ಅವರಂಥ ಘಟಾಘಟಿಗಳು ಅಶೋಕ ಮನಗೂಳಿ ಪರ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಇತ್ತ ಜೆಡಿಎಸ್ ಪಕ್ಷ ಉಪ ಚುನಾವಣೆ ಕಣಕ್ಕೆ ಧುಮುಕಲು ನಿರ್ಧರಿಸಿದ್ದಲ್ಲದೇ ಅಂತಿಮ ಕ್ಷಣದಲ್ಲಿ ಪದವೀಧರೆ ನಾಜಿಯಾ ಅಂಗಡಿ ಎಂಬ ಮಹಿಳೆಯನ್ನು ಕಣಕ್ಕೆ ಇಳಿಸಿದೆ. ನಾಜಿಯಾ ಘೋಷಣೆ ಬಿಜೆಪಿ ಜೊತೆಗಿನ ಒಳ ಒಪ್ಪಂದ ಎಂದು ಕಾಂಗ್ರೆಸ್ ಟೀಕೆ ಮಧ್ಯೆಯೂ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದಂತೆ ಸ್ವಯಂ ಮಾಜಿ ಪ್ರಧಾನಿ ದೇವೇಗೌಡ ಅವರೇ ಕ್ಷೇತ್ರದಲ್ಲಿ ವಾರದಿಂದ ಠಿಕಾಣಿ ಹೂಡಿ, ಹಳ್ಳಿಗಳ ಗಲ್ಲಿಗಳಲ್ಲಿ ಸುತ್ತಿ ಪ್ರಚಾರದಲ್ಲಿ ತೊಡಗಿದ್ದಾರೆ.
ಮಾಜಿ ಸಿ.ಎಂ. ಎಚ್.ಡಿ. ಕುಮಾರಸ್ವಾಮಿ, ಸಂಸದ ಪ್ರಜ್ವಲ್ ರೇವಣ್ಣ, ಬಂಡೆಪ್ಪ ಕಾಶಂಪುರ ಅವರಂಥ ನಾಯಕರು ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ. ಪರಿಣಾಮ ಬಿಜೆಪಿ-ಕಾಂಗ್ರೆಸ್ ಮಧ್ಯದ ನೇರ ಹಣಾಹಣಿಯನ್ನು ತ್ರಿಕೋನ ಸ್ಪರ್ಧೆಯಾಗಿ ಮಾರ್ಪಡಿಸಲು ಮುಂದಾಗಿದ್ದಾರೆ. ಇತ್ತ ಆಡಳಿತಾರೂಢ ಬಿಜೆಪಿ ಪಕ್ಷ ಹಳೆ ಮುಖವಾದ ರಮೇಶ ಭೂಸನೂರ ಅವರನ್ನೇ ಕಣಕ್ಕಿಳಿಸಿ, ಮೂರನೇ ಬಾರಿಗೆ ಗೆಲ್ಲಿಸುವ ಉಮೇದಿನಲ್ಲಿದೆ. ಕ್ಷೇತ್ರವನ್ನು ಮರಳಿ ತನ್ನ ತೆಕ್ಕೆಗೆ ಪಡೆಯುವುದಕ್ಕಾಗಿ ಹಿರಿಯ ಸಚಿವ ಗೋವಿಂದ ಕಾರಜೋಳ ಅವರಿಗೆ ಕ್ಷೇತ್ರದ ಚುನಾವಣೆ ಉಸ್ತುವಾರಿ ನೀಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಜಗದೀಶ ಶಟ್ಟರ, ಸಚಿವರಾದ ಶಶಿಕಲಾ ಜೊಲ್ಲೆ, ಸಿ.ಸಿ.ಪಾಟೀಲ, ವಿ.ಸೋಮಣ್ಣ, ಶ್ರೀರಾಮುಲು, ನಟಿ, ಶಾಸಕಿ ತಾರಾ ಅನುರಾಧಾ ಅವರಂಥ ನಾಯಕರೆಲ್ಲ ಕ್ಷೇತ್ರದಲ್ಲಿ ಅಬ್ಬರ ಪ್ರಚಾರ ನಡೆಸಿದ್ದಾರೆ.
ಗಮನೀಯ ಅಂಶ ಎಂದರೆ ಸಿಂದಗಿ ಉಪ ಚುನಾವಣೆ ಕಣ ಅಬ್ಬರದ ಪ್ರಚಾರ ವೇದಿಕೆಯಾಗಿದ್ದರೂ ಯಾವೊಬ್ಬ ನಾಯಕರು ಕ್ಷೇತ್ರದ ಜ್ವಲಂತ ಸಮಸ್ಯೆಗಳ ಕುರಿತು ಗಂಭೀರ ಚಿಂತನೆ, ಚರ್ಚೆ ನಡೆಸಿಲ್ಲ. ಬದಲಾಗಿ ಎಲ್ಲ ನಾಯಕರೂ ರಾಜಕೀಯ ಪ್ರೇರಿತವಾದ ಆರೋಪ-ಪ್ರತ್ಯಾರೋಪ ಅದರಲ್ಲೂ, ವ್ಯಕ್ತಿಗತ ಟೀಕೆಗಳಿಗೆ ಸೀಮಿತವಾಗಿದ್ದಾರೆ. ವ್ಯಕ್ತಿಗತ ಟೀಕೆ-ಟಿಪ್ಪಣೆಗಳೇ ಕ್ಷೇತ್ರದಲ್ಲಿ ಪ್ರಚಾರದ ಸರಕುಗಳಾಗಿರುವ ಕಾರಣ ಸಮಸ್ಯೆಗಳ ಸುಳಿಯಲ್ಲಿರುವ ಕ್ಷೇತ್ರದ ಮತದಾರ ಮೌನಕ್ಕೆ ಶರಣಾಗಿದ್ದಾನೆ.
-ಜಿ.ಎಸ್.ಕಮತರ