Advertisement
ಗಣಿನಾಡು ಬಳ್ಳಾರಿ ಜಿಲ್ಲೆ ವಿಭಜಿಸಿ ಹೊಸಪೇಟೆಯನ್ನು ವಿಜಯನಗರ ಜಿಲ್ಲೆಯನ್ನಾಗಿ ಮಾಡಲು ಜಿಲ್ಲೆಯಲ್ಲಿ ಮೊದಲಿನಿಂದಲೂ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಬಳ್ಳಾರಿಯನ್ನು ಅಖಂಡವಾಗಿ ಮುಂದುವರಿಸಬೇಕೆಂದು ಬಳ್ಳಾರಿ ನಗರ ಬಂದ್ ಆಚರಿಸಿದರೆ, ಹೊಸಪೇಟೆಯಲ್ಲಿ ವಿಜಯನಗರ ಜಿಲ್ಲೆ ರಚನೆ ಮಾಡಬೇಕು ಎಂದು ಅಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗಿತ್ತು. ಈ ಕುರಿತು ಜಿಲ್ಲೆಯ ಜನಪ್ರತಿನಿ ಧಿಗಳ ಸಭೆ ಕರೆದಿದ್ದ ಸಿಎಂ ಯಡಿಯೂರಪ್ಪ ವಿಧಾನಸಭೆ ಉಪಚುನಾವಣೆ ನೆಪದಲ್ಲಿ ಜಿಲ್ಲೆಯ ವಿಭಜನೆ ವಿಷಯವನ್ನು ತಾತ್ಕಾಲಿಕವಾಗಿ ಮುಂದೂಡಿದ್ದರು. ಇದಕ್ಕಾಗಿ ಮತ್ತೂಂದು ಸಭೆ ನಡೆಸಿ ನಿರ್ಣಯ ಕೈಗೊಳ್ಳುವುದಾಗಿಯೂ ಹೇಳಿದ್ದರು.
Related Articles
ಬಳ್ಳಾರಿ: ಗಣಿ ನಾಡು ಬಳ್ಳಾರಿ ಜಿಲ್ಲೆಯ ವಿಭಜನೆ ಸದ್ಯಕ್ಕಿಲ್ಲ ಎಂಬ ಸಿಎಂ ಯಡಿಯೂರಪ್ಪ ಹೇಳಿಕೆ ಖುಷಿ ನೀಡಿದ್ದು, ನಮ್ಮ ಬೇಡಿಕೆಗೆ ಮನ್ನಣೆ ಸಿಕ್ಕಿರುವುದು ಸಂತಸವಾಗಿದೆ ಎಂದು ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಯಡಿಯೂರಪ್ಪ ಬಳ್ಳಾರಿ ಜಿಲ್ಲೆ ವಿಭಜನೆ ಮಾಡುವ ವಿಷಯವನ್ನು ಸದ್ಯಕ್ಕೆ ಕೈ ಬಿಟ್ಟಿರುವುದು ಸಂತಸ ನೀಡಿದೆ. ಜಿಲ್ಲೆ ವಿಭಜನೆ ಆಗಬಾರದು, ಅಖಂಡ ಜಿಲ್ಲೆಯಾಗಿರಬೇಕು ಎಂಬುದು ಬಳ್ಳಾರಿ ಜನರ ಅಪೇಕ್ಷೆಯಾಗಿತ್ತು. ವಿಜಯನಗರದ ಸಚಿವ ಆನಂದ್‌ಸಿಂಗ್ ಅವರಲ್ಲಿ ಸಹ ನಾನು ಇದನ್ನೇ ಮನವಿ ಮಾಡಿಕೊಂಡಿದ್ದೇನೆ.
Advertisement
ನಮ್ಮ ಬೇಡಿಕೆಗೆ ಸಿಎಂ ಯಡಿಯೂರಪ್ಪ ಮನ್ನಣೆ ನೀಡಿರುವುದು ಸಂತಸವಾಗಿದೆ ಎಂದರು. ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರಿಗೆ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿಯನ್ನು ನೀಡಿದರೆ ಒಳ್ಳೆಯದು. ಸಚಿವ ಆನಂದ್‌ಸಿಂಗ್ ಅವರಿಗೆ ನೀಡಿದರೂ ಒಳ್ಳೆಯದು. ಶ್ರೀರಾಮುಲುಗೆ ನೀಡಿದರೆ ಮಾಜಿ ಸಚಿವ ಜನಾರ್ದನ ರೆಡ್ಡಿಯವರಂತೆ ಜಿಲ್ಲೆಯನ್ನು ಹೆಚ್ಚು ಅಭಿವೃದ್ಧಿಪಡಿಸುತ್ತಾರೆ. ಆನಂದ್‌ಸಿಂಗ್, ಶ್ರೀರಾಮುಲು ಇಬ್ಬರಲ್ಲಿ ಯಾರಿಗಾದರೂ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ನೀಡಲಿ ಎಂದರು.
ಉಪ ಚುನಾವಣೆ ಟ್ರಂಪ್ ಕಾರ್ಡ್?: ವಿಜಯನಗರ ಕ್ಷೇತ್ರದ ಶಾಸಕ ಆನಂದ್‌ಸಿಂಗ್ ಸಚಿವರಾಗುತ್ತಿದ್ದಂತೆ ಬಳ್ಳಾರಿ ವಿಭಜಿಸಿ ಹೊಸಪೇಟೆಯನ್ನು ವಿಜಯನಗರ ಜಿಲ್ಲೆಯನ್ನಾಗಿ ರಚಿಸುವುದು ಬಹುತೇಕ ಖಚಿತ ಎಂಬ ಮಾತುಗಳು ಎಲ್ಲೆಡೆ ಕೇಳಿಬರುತ್ತಿತ್ತು. ಆದರೆ, ಆನಂದ್‌ಸಿಂಗ್‌ಗೆ ಸಚಿವ ಸ್ಥಾನ ನೀಡುತ್ತಿದ್ದಂತೆ ಸಿಎಂ ಯಡಿಯೂರಪ್ಪ ಜಿಲ್ಲೆಯ ವಿಭಜನೆ ಸದ್ಯಕ್ಕಿಲ್ಲ ಎಂಬ ಹೇಳಿಕೆ,
ಸಚಿವ ಬಿ. ಶ್ರೀರಾಮುಲು, ಶಾಸಕ ಜಿ. ಸೋಮಶೇಖರರೆಡ್ಡಿ ಅವರನ್ನು ಸಮಾಧಾನ ಪಡಿಸುವ ಸಲುವಾಗಿ ನೀಡಿದ್ದಾರಾ ಅಥವಾ ವಿಜಯನಗರ ಜಿಲ್ಲೆ ರಚನೆ ವಿಷಯವನ್ನು ಕೇವಲ ಉಪಚುನಾವಣೆಯಲ್ಲಿ ಟ್ರಂಪ್ ಕಾರ್ಡ್‌ನ್ನಾಗಿ ಮಾತ್ರ ಬಳಸಿಕೊಂಡಿದ್ದಾರಾ ಅಥವಾ ಆನಂದ್‌ಸಿಂಗ್‌ಗೆ ಸಚಿವ ಸ್ಥಾನ ನೀಡಿ ಸಮಾಧಾನ ಪಡಿಸಿದ್ದಾರಾ ಎಂಬ ಆರೋಪಗಳು ಕೇಳಿಬರುತ್ತಿದ್ದು, ಜಿಲ್ಲೆಯ ವಿಭಜನೆ ವಿಚಾರ ಮುಂದಿನ ದಿನಗಳಲ್ಲಿ ಉಭಯ ತಾಲೂಕುಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
* ವೆಂಕೋಬಿ ಸಂಗನಕಲ್ಲು