Advertisement

ಕನ್ನಡದ ಉಳಿವಿಗಾಗಿ ನಡೆದ ಅಭಿಯಾನ

06:00 AM Jun 15, 2018 | Team Udayavani |

ಭೌಗೋಳಿಕವಾಗಿ ಅನ್ಯಭಾಷಾ ಸ್ವಾಮಿತ್ವಕ್ಕೊಳಗಾಗಿರುವ ಕಾಸರಗೋಡಿನ ಕನ್ನಡ ಭಾಷೆ ತನ್ನ ಅಸ್ಮಿತೆಯನ್ನುಳಿಸಿಕೊಳ್ಳಲು ಹೆಣಗಾಡುತ್ತಿದೆ. ಕಾಸರಗೋಡಿನ ಕನ್ನಡ ಧ್ವನಿ ಕ್ಷೀಣಿಸುತ್ತಿದೆಯೇ ಎಂಬ ಆತಂಕವಿದೆ. ಈ ಮಧ್ಯೆ ಅದನ್ನು ಉಳಿಸಿ ಬೆಳೆಸುವ ಕಾಯಕದಲ್ಲಿ ಹಲವು ಸಂಸ್ಥೆಗಳು ತಮ್ಮದೇ ಆದ ದೇಣಿಗೆಗಳನ್ನು ನೀಡುತ್ತಿವೆ. ಅವುಗಳಲ್ಲಿ ಕನ್ನಡ ಸಂಸ್ಕೃತಿಯನ್ನೇ ಉಸಿರಾಗಿಸಿಕೊಂಡ “ರಂಗ ಚಿನ್ನಾರಿ’ ಕಾಸರಗೋಡು ಹಮ್ಮಿಕೊಂಡ ನೆನೆ… ನೆನೆ… ಕನ್ನಡ ಗಾನವೆಂಬ ವಿನೂತನ ಕಾರ್ಯಕ್ರಮ ಅಪೇಕ್ಷಣಿಯವಾದುದು.

Advertisement

ಕಾಸರಗೋಡು ಚಿನ್ನಾರವರ ನೇತೃತ್ವದ “ರಂಗ ಚಿನ್ನಾರಿ’ ಸಂಸ್ಥೆಯು  ಸಂಸ್ಕೃತಿಯ ಬೇರುಗಳಿರುವುದು ಹಳ್ಳಿಗಳಲ್ಲಿ ಎಂಬ ಕಲ್ಪನೆಯೊಂದಿಗೆ “ಹಳ್ಳಿಯೆಡೆಗೆ…’ ಎಂಬ ವಿನೂತನ ಅಭಿಯಾನವನ್ನು ಕೈಗೊಂಡಿತು. ಏಳು ಹಳ್ಳಿಗಳಲ್ಲಿ ಪ್ರಸಿದ್ಧ ಗಾಯಕರ ಮೂಲಕ ಕನ್ನಡ ಗೀತೆಗಳ ಝೇಂಕಾರವನ್ನು ಪ್ರತಿಧ್ವನಿಸಿ ಕನ್ನಡ ಸಾಂಸ್ಕೃತಿಕ ವಲಯವನ್ನು ನಿರ್ಮಿಸುವ ಕಾರ್ಯವನ್ನು ಮಾಡಿತು. ಮೇ ತಿಂಗಳ 13ರಿಂದ 19ರ ತನಕ ಉಪ್ಪಳ, ಬದಿಯಡ್ಕ ಕೊಂಡೆವೂರು, ಮುಳ್ಳೇರಿಯಾ, ಏತಡ್ಕ, ಕಾಟುಕುಕ್ಕೆ ಹಾಗೂ ಮೀಯಪದವಿನಲ್ಲಿ ಈ ಅಭಿಯಾನ ನಡೆಯಿತು.ಕೆ.ಎಸ್‌. ನರಸಿಂಹಸ್ವಾಮಿ, ಗೋಪಾಲಕೃಷ್ಣ ಅಡಿಗ, ದ. ರಾ. ಬೇಂದ್ರೆ, ಸುಬ್ರಾಯ ಚೊಕ್ಕಾಡಿ, ಎನ್‌.ಎಸ್‌. ಲಕ್ಷ್ಮೀನಾರಾಯಣ ಭಟ್‌ ಮುಂತಾದ ಕವಿಗಳ ಸಾಹಿತ್ಯಕ್ಕೆ ರವೀಂದ್ರ ಪ್ರಭು, ಸೀಮಾ ರಾಯ್ಕರ್‌, ಕಿಶೋರ್‌ ಪೆರ್ಲ ಮೊದಲಾದವರು ತಮ್ಮ ಶಾರೀರ ಮಾಧುರ್ಯದಿಂದ ಜೀವ ತುಂಬಿದರು. ಸಿ. ಅಶ್ವತ್ಥ್ರವರು ಹಾಡಿ ಪ್ರಸಿದ್ಧಿ ತಂದ ಹಾಡುಗಳನ್ನು ಈ ಗಾಯಕರು ಚ್ಯುತಿಯಿಲ್ಲದೆ ಹಾಡಿ ಮನಗೆದ್ದರು. ಪ್ರತಿ ಕಾರ್ಯಕ್ರಮ ಆ ಪ್ರದೇಶದ ಸ್ಥಳ ದೇವರ ಸ್ತುತಿಯೊಂದಿಗೆ ಆರಂಭಗೊಂಡು ದೀಪವು ನಿನ್ನದೇ… ಯಾವ ಮೋಹನ ಮುರಳಿ ಕರೆಯಿತೋ… ಒಳಿತು ಮಾಡೋ ಮನುಜ… ಒಂದಿರುಳು ಕನಸಿನಲ್ಲಿ… ಕುರುಬರೊ ನಾವು ಕುರುಬರೊ… ಮುಂತಾದ ಭಾವನಾತ್ಮಕ ಹಾಡುಗಳು ಸಹೃದಯರಿಗೆ ಮುದ ನೀಡಿತು. ಪಕ್ಕಾ ವಾದ್ಯದಲ್ಲಿ ಅಭಿಜಿತ್‌ ಶೆಣೈ , ತಬ್ಲಾದಲ್ಲಿ ಪುರುಷೋತ್ತಮ ಕೊಪ್ಪಲ, ಕೀಬೋರ್ಡ್‌ ಹಾಗೂ ರಿದಂ ಪ್ಯಾಡ್‌ ವಾದಕರಾಗಿ ರಾಜೇಶ್‌ ಭಾಗವತ್‌ ಸಾಥಿಯನ್ನಿತ್ತರು.

 ರಾಜಾರಾಮ ರಾವ್‌ ಟಿ.

Advertisement

Udayavani is now on Telegram. Click here to join our channel and stay updated with the latest news.

Next