ಸಿಂಧನೂರು: ಮೊದಲ ಹಂತವಾಗಿ ಕೋವಿಡ್ ವ್ಯಾಕ್ಸಿನ್ ನೀಡುವ ಅಭಿಯಾನ ಕೈಗೆತ್ತಿಕೊಂಡ ಬೆನ್ನಲ್ಲೇ ಹಲವು ಎಡವಟ್ಟುಗಳು ನಡೆದಿವೆ. ಮುಂಚಿತವಾಗಿಯೇ ವ್ಯಾಕ್ಸಿನ್ ಗೆ ಸಂಬಂಧಿಸಿದಂತೆ ಆಸ್ಪತ್ರೆ ಹಾಗೂ ಅಲ್ಲಿನ ಸಿಬ್ಬಂದಿ ಸಂಖ್ಯೆಯನ್ನು ನಮೂದಿಸಲಾಗಿದೆ. ಈ ವೇಳೆ ನಗರದಲ್ಲಿನ ಕೆಲ ಆಸ್ಪತ್ರೆಗಳನ್ನು ಸಿಂಧನೂರು ತಾಲೂಕಿನ ವ್ಯಾಕ್ಸಿನ್ ಪಟ್ಟಿಯ ಬದಲು ರಾಯಚೂರು ತಾಲೂಕಿಗೆ ಸೇರಿಸಲಾಗಿದೆ.
ಸಹನಾ ಆಸ್ಪತ್ರೆಯ 58 ಸಿಬ್ಬಂದಿಗೆ ಇಂತಹ ಸಮಸ್ಯೆ ಎದುರಾಗಿದೆ. ಜೊತೆಗೆ ಇನ್ನು ಕೆಲವು ಆಸ್ಪತ್ರೆಯವರ ಹೆಸರುಗಳು ಪಟ್ಟಿಯಲ್ಲಿ ಮಾಯವಾಗಿವೆ ಎಂಬ ದೂರು ಕೇಳಿಬಂದಿವೆ. ಪ್ರತಿ ವ್ಯಾಕ್ಸಿನ್ ಗೂ ಪಕ್ಕಾ ಲೆಕ್ಕ ಇರುವುದರಿಂದ ಈಗಿನ ಹಂತದಲ್ಲಿ ತಪ್ಪುಗಳ ಸರಿಪಡಿಕೆಗೆ ಅವಕಾಶವಿಲ್ಲ ಎಂಬ ಮಾತು ಕೇಳಿಬಂದಿದ್ದು, ಗೊಂದಲಕ್ಕೆ ಆಸ್ಪದ ನೀಡಿದೆ.
ಟಿಎಚ್‌ಒಗೆ ಸಲ್ಲಿಕೆ: ಸದ್ಯ ಖಾಸಗಿ ಆಸ್ಪತ್ರೆ, ಮೆಡಿಕಲ್‌ನ 900ಕ್ಕೂ ಹೆಚ್ಚು ಸಿಬ್ಬಂದಿಯಿದ್ದಾರೆ. ಅವರ ಹೆಸರುಗಳನ್ನು ಇಲಾಖೆಗೆ ಸಲ್ಲಿಸುವಾಗ ತಪ್ಪುಗಳಾಗಿವೆ. ಆಧಾರ್ ಜೊತೆಗೆ ಇತರ ಗುರುತಿನ ಚೀಟಿಗಳನ್ನು ಸಲ್ಲಿಸಬೇಕು ಎಂಬ ಸೂಚನೆ ನೀಡಲಾಗಿತ್ತು. ಆಧಾರ್ ಮಾತ್ರ ನೀಡಿದ ಹಿನ್ನೆಲೆಯಲ್ಲಿ ಹಲವರ ಹೆಸರುಗಳು ತಪ್ಪಿ ಹೋಗಿವೆ. 50-60 ಸಿಬ್ಬಂದಿ ಒಂದು ಖಾಸಗಿ ಆಸ್ಪತ್ರೆಯಲ್ಲಿದ್ದರೆ, ಅದರಲ್ಲಿನ ಅರ್ಧ ಸಿಬ್ಬಂದಿ ಹೆಸರು ಮಾತ್ರ ವ್ಯಾಕ್ಸಿನ್ ಪಟ್ಟಿಯಲ್ಲಿವೆ. ರಾಜ್ಯ ಹಾಗೂ ಜಿಲ್ಲಾಮಟ್ಟದಿಂದ ಇದೀಗ ಪಟ್ಟಿಯಲ್ಲಿರುವವರಿಗೆ ಮಾತ್ರ ವ್ಯಾಕ್ಸಿನ್ ಬರಲಿದೆ. ಉಳಿದವರ ಪಾಡೇನು ಎಂಬ ಪ್ರಶ್ನೆಗೆ ಸದ್ಯ ಉತ್ತರ ಇಲ್ಲದಾಗಿದೆ.
ಇದನ್ನೂ ಓದಿ:ಪ್ರೀತಿಸಿ ಮದುವೆಯಾಗುವುದಿಲ್ಲವೆಂದ ಯುವಕ : ಪೊಲೀಸರ ಸಮ್ಮುಖದಲ್ಲೇ ಜೋಡಿಗೆ ವಿವಾಹ
ರಾಯಚೂರು ದಾರಿ: ಸಹನಾ ಮಕ್ಕಳ ಆಸ್ಪತ್ರೆಯ 58 ಸಿಬ್ಬಂದಿ ಪೈಕಿ 38 ಸಿಬ್ಬಂದಿ ಗುರುತಿಸಲಾಗಿದೆ. ಪಟ್ಟಿಯಲ್ಲಿ ಇಲ್ಲದವರಿಗೆ ಹೆಚ್ಚುವರಿಯಾಗಿ ವ್ಯಾಕ್ಸಿನ್ ಸರಬರಾಜು ಮಾಡಲು ಅವಕಾಶವಿಲ್ಲ ಎನ್ನಲಾಗುತ್ತಿದೆ. ಸಿಂಧನೂರು ಬದಲು ರಾಯಚೂರು ತಾಲೂಕಿನ ಪಟ್ಟಿಗೆ ಸೇರ್ಪಡೆಯಾಗಿರುವ ಆಸ್ಪತ್ರೆಯವರು ವ್ಯಾಕ್ಸಿನ್ ಪಡೆಯಲು ಅಲ್ಲಿಗೆ ಹೋಗಬೇಕಾದ ಅನಿವಾರ್ಯತೆಯಿದೆ. ಈ ನಡುವೆ ವ್ಯಾಕ್ಸಿನ್ ಪೂರೈಕೆ ಮಾಡುವಾಗಲೇ ರಾಯಚೂರು ತಾಲೂಕಿನ ಬದಲು ಸಿಂಧನೂರಿಗೆ ಕಳಿಸಬೇಕು ಎಂಬ ಬೇಡಿಕೆ ಇಡಲಾಗಿದೆ. ಬೆಳಗ್ಗೆ 10ರಿಂದ ಸಂಜೆ 5ರೊಳಗಿನ ನಿಗದಿತ ಸಮಯದಲ್ಲೇ ವ್ಯಾಕ್ಸಿನ್ ನೀಡಬೇಕಿದ್ದು, ವೇಳಾಪಟ್ಟಿ ಪಾಲನೆಯೊಂದಿಗೆ ವ್ಯಾಕ್ಸಿನ್ ಅಭಿಯಾನದಲ್ಲಿ ತಲೆದೋರಿದ ಸಮಸ್ಯೆಗಳು ಹೇಗೆ ಪರಿಹರಿಸುತ್ತಾರೆ ಎನ್ನುವ ಪ್ರಶ್ನೆಗೆ ಆರೋಗ್ಯ ಇಲಾಖೆಯೇ ಉತ್ತರಿಸಬೇಕಿದೆ.
ಖಾಸಗಿ ಆಸ್ಪತ್ರೆಯವರೇ ಜಿಲ್ಲೆ, ಬ್ಲಾಕ್ ಹೆಸರು ನಮೂದಿಸುವಾಗಲೇ ತಪ್ಪು ಮಾಡಿದ್ದರಿಂದ ಹೀಗಾಗಿದೆ.ಇದರಲ್ಲಿ ಆರೋಗ್ಯ ಇಲಾಖೆ ಸಮಸ್ಯೆಯಿಲ್ಲ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದು, ಪರಿಹಾರ ಕಂಡುಕೊಳ್ಳಲಾಗುವುದು.
ಡಾ| ನಂದಕುಮಾರ್, ಸಿಂಧನೂರು ತಾಲೂಕು ಆರೋಗ್ಯಾಧಿಕಾರಿ