Advertisement

ಕಳಪೆ ಕಾಮಗಾರಿ ವಿರುದ್ಧ ಕೈ ಅಭಿಯಾನ ಶೀಘ್ರ

02:30 PM May 12, 2022 | Team Udayavani |

ಬ್ಯಾಡಗಿ: ಹಿಂದೆಂದೂ ಕಂಡರಿಯದಂತಹ ಕಳಪೆ ಕಾಮಗಾರಿ ಇದೀಗ ಕ್ಷೇತ್ರದಲ್ಲಿ ನಡೆಯುತ್ತಿದೆ. ಸಾರ್ವಜನಿಕರ ಹಣ ಇನ್ಯಾರಧ್ದೋ ಜೇಬು ಸೇರುತ್ತಿದೆ. ಮುಖ್ಯಮಂತ್ರಿಗಳಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇದ್ದರೆ ಸ್ವತಃ ತನಿಖೆ ಮಾಡಿಸಿ ವರದಿ ಪಡೆದುಕೊಳ್ಳಲಿ. ತಮ್ಮದೇ ಸರ್ಕಾರದ ಶಾಸಕರ ಬಣ್ಣ ಬಯಲಾಗಲಿದೆ ಎಂದು ಕಾಂಗ್ರೆಸ್‌ ಮುಖಂಡ ಎಸ್‌.ಆರ್‌.ಪಾಟೀಲ ತಿರುಗೇಟು ನೀಡಿದರು.

Advertisement

ಬುಧವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳಪೆ ಕಾಮಗಾರಿ ವಿರುದ್ಧ ಕಾಂಗ್ರೆಸ್‌ ಶೀಘ್ರದಲ್ಲೇ ಅಭಿಯಾನ ಆರಂಭಿಸಲಿದ್ದು, ಹಂತ ಹಂತವಾಗಿ ಕಳಪೆಯಾಗಿರುವ ಕಾಮಗಾರಿಗಳನ್ನು ಸಾರ್ವಜನಿಕರಿಗೆ ತೋರಿಸಲಾಗುವುದು. ಕಳಪೆ ಕಾಮಗಾರಿ ವಿರುದ್ಧ ಈಗಾಗಲೇ ಸಾರ್ವಜನಿಕರು ತಮ್ಮ ಮೊಬೈಲ್‌ಗ‌ಳಲ್ಲಿ ಕಳಿಹಿಸಿರುವ ಫೋಟೋಗಳನ್ನು ಪ್ರದರ್ಶಿಸಿದರು.

40 ವರ್ಷದಿಂದ ಜನರ ಜತೆಗಿದ್ದೇನೆ: ನಾನು ಹಣ ಮಾಡಬೇಕೆಂಬ ಉದ್ದೇಶದಿಂದ ರಾಜಕಾರಣಕ್ಕೆ ಬಂದಿಲ್ಲ. ಜನಸೇವೆ ಮಾಡಲೆಂದು ಈ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದೇನೆ ವಿನಃ, ಹಣ ಮಾಡುವುದಕ್ಕಲ್ಲ. ಕಳೆದ 40 ವರ್ಷದಿಂದ ಜನರ ಜೊತೆಗಿದ್ದೇನೆ. ಅಧಿಕಾರದ ಹತಾಶೆ ಇದ್ದಿದ್ದರೆ ಕಾಂಗ್ರೆಸ್‌ನಲ್ಲಿ ಏನೆಲ್ಲಾ ಅವಕಾಶಗಳಿದ್ದವು. ಆದರೆ, ಬ್ಯಾಡಗಿ ಕ್ಷೇತ್ರದ ಜನರ ಸೇವೆ ಮಾಡಲೆಂದು ಈ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದೇನೆ. ಕಳೆದ 4 ದಶಕಗಳಿಂದ ಜನರ ಜತೆಗಿದ್ದೇನೆ. ಅಧಿಕಾರದ ಹತಾಶೆ ಯಾರಿಗಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.

ಅತ್ಯುತ್ತಮ ಪುರಸಭೆ: ನನ್ನ ಅವಧಿಯಲ್ಲಿಯೇ ಸ್ಥಳೀಯ ಪುರಸಭೆ 5 ಬಾರಿ ರಾಜ್ಯದಲ್ಲಿಯೇ ಅತ್ಯುತ್ತಮ ಪುರಸಭೆ ಎಂಬ ಪ್ರಶಸ್ತಿಗೆ ಭಾಜನವಾಗಿದೆ. ಸಂಗೂರು ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ರೈತರ ಮತ್ತು ಕೆಲಸಗಾರರ ಹಿತ ಕಾಪಾಡುವ ಮೂಲಕ ಲಾಭದಲ್ಲಿರುವಂತೆ ನೋಡಿಕೊಂಡಿದ್ದೇನೆ ಎಂದರು.

ಶಿವಪುರ ಬಡಾವಣೆ ಕರ್ತೃ ನಾನೇ: ಬಡವರ ಕಾಲೋನಿಯನ್ನೇ ನಾನು ನೋಡಿಲ್ಲವೆಂದು ಶಾಸಕರ ಹಗುರ ಹೇಳಿಕೆ ಅವರ ಘನತೆಗೆ ತಕ್ಕುದಲ್ಲ. ಪಟ್ಟಣದಲ್ಲಿ ಆಶ್ರಮ ಸಮಿತಿಯಡಿ ಈಗಿನ ಶಿವಪುರ ಬಡಾವಣೆ ನಿರ್ಮಾಣವಾಗಿದ್ದೇ ನನ್ನ ಅವ ಧಿಯಲ್ಲಿ. ಐಡಿಎಸ್‌ಡಿಎಂಸಿ ಹಣದಲ್ಲಿ ಪಟ್ಟಣದೆಲ್ಲೆಡೆ ಕಾಂಪ್ಲೆಕ್ಸ್‌ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದೇನೆ. ಇವೆಲ್ಲಾ ಕೆಲಸಗಳನ್ನು ಮೆಚ್ಚಿಯೇ ರಾಜ್ಯ ಸರ್ಕಾರ ಅತ್ಯುತ್ತಮ ಪುರಸಭೆ ಎಂದು ಘೋಷಿಸಿದೆ ಎಂದರು.

Advertisement

ಸಚಿವರ ತಲೆದಂಡ ಏಕಾಯ್ತು: ರಾಜ್ಯದಲ್ಲಿರುವುದು 40 ಪರ್ಸೆಂಟ್‌ ಸರ್ಕಾರ ಎಂಬ ವಿಷಯ ದೆಹಲಿಯಲ್ಲಿರುವ ಬಿಜೆಪಿ ಹೈಕಮಾಂಡ್‌ಗೆ ತಲುಪಿದೆ. ಅದೇ ಕಮಿಷನ್‌ ವಿಚಾರವಾಗಿ ಸಂತೋಷ್‌ ಪಾಟೀಲ ಎಂಬ ವ್ಯಕ್ತಿಯೊಬ್ಬನ ಸಾವಿಗೆ ಕಾರಣವಾಯಿತು. ಅಷ್ಟೇ ಏಕೆ, ಪ್ರಭಾವಿ ಸಚಿವರೊಬ್ಬರ ರಾಜೀನಾಮೆ ಕೂಡ ಬಿಜೆಪಿ ಹೈಕಮಾಂಡ್‌ ಪಡೆದುಕೊಂಡಿದೆ. ಅಂತಹದ್ದೊಂದು ವಾಸನೆ ಬ್ಯಾಡಗಿ ಮತಕ್ಷೇತ್ರದಲ್ಲಿ ಇದ್ದರೂ ಇರಬಹುದು ಎಂದರು.

ಟೆಂಡರ್‌ ಒಬ್ಬರಿಗೆ-ಕೆಲಸ ಬೇರೊಬ್ಬರಿಗೆ: ಸ್ಥಳೀಯ ಎಪಿಎಂಸಿಯಲ್ಲಿ ಹುಬ್ಬಳ್ಳಿ ಮೂಲದವರು ಗುತ್ತಿಗೆ ಪಡೆದಿರುವುದೇನೋ ನಿಜ. ಆದರೆ, ಅಲ್ಲಿನ ಕಾಮಗಾರಿಯನ್ನು ಯಾರು ಮಾಡುತ್ತಿದ್ದಾರೆ ಎಂಬುದನ್ನು ಅವರೇ ಹೇಳಬೇಕು. ಕೇವಲ ಇದೊಂದು ಉದಾಹರಣೆ. ಇಂತಹ ನೂರಾರು ಸತ್ಯಗಳು ಶೀಘ್ರದಲ್ಲಿಯೇ ಹೊರ ಬರಲಿವೆ ಎಂದರು.

ಮುಖ್ಯರಸ್ತೆಯಲ್ಲಿ ಡಬಲ್‌ ಗೇಮ್‌: ಮುಖ್ಯರಸ್ತೆ ಒತ್ತುವರಿದಾರರಿಗೆ ಯಾವುದೇ ಕಾರಣಕ್ಕೂ ಅಗಲೀಕರಣವಾಗಲ್ಲ ಎಂದು ಹೇಳಿಕೆ ನೀಡುವ ಶಾಸಕರು, ಸಾರ್ವಜನಿಕ ವೇದಿಕೆಯಲ್ಲಿ ಮಾತ್ರ ಅಗಲೀಕರಣ ಮಾಡದಿದ್ದರೆ ರಾಜಕೀಯ ನಿವೃತ್ತಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಇಂತಹ ಡಬಲ್‌ ಗೇಮ್‌ ರಾಜಕಾರಣ ಬಹಳ ದಿನ ನಡೆಯುವುದಿಲ್ಲ. ಬರುವ ದಿನಗಳಲ್ಲಿ ಕ್ಷೇತ್ರದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಈ ವೇಳೆ ಪ್ರಕಾಶ ಬನ್ನಿಹಟ್ಟಿ, ರಮೇಶ ಮೋಟೆಬೆನ್ನೂರ, ಕರಬಸಪ್ಪ ನಾಯ್ಕರ್‌, ಜಗದೀಶ ದೊಡ್ಮನಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next