Advertisement

ಹರಿದು ಬಂದ ಮಾನವೀಯ ನೆರವು

05:24 PM Mar 24, 2019 | Naveen |

ಧಾರವಾಡ: ಕಿಲ್ಲರ್‌ ಕಾಂಪ್ಲೆಕ್ಸ್‌ ಪಕ್ಕದ ಕಟ್ಟಡಗಳ ಮಾಲೀಕರು ಕೂಡ ಕಾರ್ಯಾಚರಣೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಕಾಂಪ್ಲೆಕ್ಸ್‌ ಪಕ್ಕದಲ್ಲಿಯೇ ಇರುವ ರೇವಣಕರ್‌ ಕಾರ್‌ ಶೋರೂಮ್‌ ಕಳೆದ ಆರು ದಿನಗಳಿಂದ ಮಾಧ್ಯಮ ಪ್ರತಿನಿಧಿಗಳ ಕೇಂದ್ರವಾಗಿ ಮಾರ್ಪಟ್ಟಿದೆ. ದಿನದ 24 ಗಂಟೆಗಳ ಕಾಲ ಇದನ್ನು ಶೋರೂಮ್‌ ಮಾಲೀಕರು ತೆರೆದಿಟ್ಟಿದ್ದಾರೆ. ಮೊದಲ ಮಹಡಿಯಲ್ಲಿರುವ ಪೀಠೊಪಕರಣಗಳನ್ನು ಸಹ ರಕ್ಷಣಾ ಸಿಬ್ಬಂದಿ ವಿಶ್ರಾಂತಿಗೆ ಅನುವು ಮಾಡಿಕೊಟ್ಟಿದ್ದಾರೆ. ಕಾಂಪ್ಲೆಕ್ಸ್‌ ಹಿಂಬದಿಯಲ್ಲಿರುವ ಹಿರೇಮನಿ ಕುಟುಂಬಸ್ಥರು ಸಹ ಕಾರ್ಯಾಚರಣೆಗೆ ಅಗತ್ಯವಾದ ಸಹಕಾರ ನೀಡಿದ್ದಾರೆ.

Advertisement

ಸಿದ್ಧಾರೂಢ ಮಠದಿಂದ ಪ್ರಸಾದ
‌ಕಳೆದ ಆರು ದಿನಗಳಿಂದ ಸ್ಥಳದಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಮತ್ತು ಅಗ್ನಿಶಾಮಕದಳ ಸಿಬ್ಬಂದಿ ಅಷ್ಟೇಯಲ್ಲ, ಸಾರ್ವಜನಿಕರು, ಮಾಧ್ಯಮ ಪ್ರತಿನಿಧಿಗಳಿಗೆ ಅನೇಕ ಸಂಘ-ಸಂಸ್ಥೆಗಳು ಮತ್ತು ಸ್ವಯಂ ಪ್ರೇರಣೆಯಿಂದ ವೈಯಕ್ತಿಕವಾಗಿಯೂ ಜನರು ಊಟ, ನೀರು, ಮಜ್ಜಿಗೆ, ಬಾಳೆಹಣ್ಣು ಪೂರೈಕೆ ಮಾಡುತ್ತಿದ್ದಾರೆ. ಸಿದ್ಧಾರೂಢ ಮಠದಿಂದ ಪ್ರತಿದಿನ ಸಾವಿರ ಜನರಿಗೆ ಆಗುವಷ್ಟು ಊಟ ಮತ್ತು ತಿಂಡಿ ಪೂರೈಕೆಯಾಗುತ್ತಿದೆ. ಸ್ವಯಂ ಪ್ರೇರಿತವಾಗಿ ಅವರೇ ತಮ್ಮ ಮಠದ ವಾಹನದಲ್ಲಿ ಪ್ರಸಾದ ತಂದು ಸ್ಥಳದಲ್ಲಿದ್ದವರಿಗೆ ಬಡಿಸಿ, ಸ್ವಚ್ಛತೆಗೆ ಮುಂಜಾಗ್ರತಾ ಕ್ರಮ ವಹಿಸಿ ಸೇವೆ ಮಾಡುತ್ತಿದ್ದಾರೆ.

ನಾಲ್ಕು ದಿನದಿಂದ ಮಜ್ಜಿಗೆ ಕೊಡ್ತಾ ಇದ್ದೇನೆ. ದಿನಾಲೂ 200 ಗ್ಲಾಸ್‌ ಮಜ್ಜಿಗೆ ಮಾಡಿ ಹಂಚುತ್ತಿದ್ದೇನೆ. ಜನರೆಲ್ಲ ಕಷ್ಟ ಪಡುತ್ತಿರುವಾಗ ನನ್ನಿಂದಾದ ಸಹಾಯ ಮಾಡಬೇಕೆನ್ನಿಸಿತು. ಅದಕ್ಕೆ ಮಾಡುತ್ತಿದ್ದೇನೆ.
ಸುವರ್ಣ,
ಕುಮಾರೇಶ್ವರ ನಗರ ನಿವಾಸಿ

ಮಡಿದವರ ಕುಟುಂಬಗಳ ಕಷ್ಟ ಒಂದೆಡೆಯಾದರೆ, ಸಿಲುಕಿದವರನ್ನು ಉಳಿಸಿಕೊಳ್ಳಲು ಜನರು ಪಡುತ್ತಿರುವ ಕಷ್ಟ ದೊಡ್ಡದು. ಅವರಿಗೆ ಸಹಾಯವಾಗಲೆಂದು ಇಂದು ರಾಗಿ ಅಂಬಲಿ ಮಾಡಿಕೊಂಡು ಬಂದು ಹಂಚಿದ್ದೇನೆ. ನಾಳೆಯೂ ತಂದು ಸೇವೆ ಮುಂದುವರಿಸುವೆ.
ಮಹಾದೇವಿ ಹಿರೇಮಠ,
ಧಾರವಾಡ ನಿವಾಸಿ

ನಮ್ಮ ಮಾಲೀಕರು ತುಂಬಾ ಒಳ್ಳೆಯವರು, ಕಟ್ಟಡ ದುರಂತ ಸಂಭವಿಸಿದ ದಿನಂದಲೇ ಕಾರ್ಯಾಚರಣೆ, ಮಾಧ್ಯಮ ಮಿತ್ರರು, ಅಧಿಕಾರಿಗಳು ಯಾರೇ ಬಂದರು ಅವರಿಗೆ ಅವಕಾಶ ನೀಡುವಂತೆ ಸಲಹೆ ನೀಡಿದರು. ಅವರ ಆದೇಶದಂತೆ ನಾವು ನಡೆದುಕೊಳ್ಳುತ್ತಿದ್ದೇವೆ.
ಆನಂದ ಜೋಡಳ್ಳಿ,
ರೇವಣಕರ್‌ ಶೋರೂಮ್‌ ವ್ಯವಸ್ಥಾಪಕ

Advertisement
Advertisement

Udayavani is now on Telegram. Click here to join our channel and stay updated with the latest news.

Next