ಲಕ್ನೋ/ಹೊಸದಿಲ್ಲಿ: ಫೇಸ್ ಬುಕ್ ದತ್ತಾಂಶ ದುರ್ಬಳಕೆ ಮಾಡಿಕೊಂಡ ಆರೋಪ ಹೊತ್ತಿರುವ ಚುನಾವಣಾ ವಿಶ್ಲೇಷಣಾ ಸಂಸ್ಥೆ ಕೇಂಬ್ರಿಜ್ ಅನಾಲಿಟಿಕಾ, ಕರ್ನಾಟಕದಲ್ಲಿ ಕಾಂಗ್ರೆಸ್ ಪರ ಚುನಾವಣಾ ಪ್ರಚಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಕಾವೇರಿ ನೀರು ಹಂಚಿಕೆ ವಿಚಾರ, ಬರ ಪರಿಹಾರ, ಕೃಷಿ ಸಾಲ ಮನ್ನಾ, ನೀರಿನ ಕೊರತೆ, ಹಿಂದಿ ಭಾಷೆಯ ಹೇರಿಕೆ ಮತ್ತು ಅಲ್ಪಸಂಖ್ಯಾಕರು ಮತ್ತು ದಲಿತರ ವಿಷಯಗಳನ್ನು ಇಟ್ಟುಕೊಂಡು ಚುನಾವಣೆಯನ್ನು ಎದುರಿಸುವ ಪ್ರಸ್ತಾವ ಮಾಡಿತ್ತು ಎಂದು ‘ದ ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಅಷ್ಟೇ ಅಲ್ಲ, ಉತ್ತರ ಪ್ರದೇಶದಲ್ಲಿ ಬಿಜೆಪಿ ಯಶಸ್ಸಿನಿಂದಾಗಿ ಕರ್ನಾಟಕದಲ್ಲೂ ಬಿಜೆಪಿ ಹೆಚ್ಚು ಬಲವಾಗಿದೆ. ಇದಕ್ಕೆ ಸ್ಮಾರ್ಟ್‌ಫೋನ್ ಬಳಕೆಯೇ ಕಾರಣ. ವ್ಯಾಪಕವಾಗಿ ಇಂಟರ್ನೆಟ್ ದತ್ತಾಂಶ ಬಳಕೆಯಾಗುತ್ತಿದ್ದು, ಕರ್ನಾಟಕದಲ್ಲೂ ಇದು ಮಹತ್ವದ ಪಾತ್ರ ವಹಿಸಲಿದೆ ಎಂದು ಕೇಂಬ್ರಿಜ್ ಅನಾಲಿಟಿಕಾ ತನ್ನ ವರದಿಯಲ್ಲಿ ಉಲ್ಲೇಖೀಸಿತ್ತು. ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢದ ಚುನಾವಣೆಗಾಗಿ ಕೂಡ ಆಯಾ ರಾಜ್ಯಗಳ ಸ್ಥಳೀಯ ವಿಚಾರಗಳನ್ನು ಮುಂದಿಟ್ಟುಕೊಂಡು ಯಾವ ರೀತಿ ಚುನಾವಣೆ ಎದುರಿಸಲು ರಣತಂತ್ರ ರೂಪಿಸಬೇಕು ಎಂಬ ಬಗ್ಗೆ ಪ್ರಸ್ತಾವನೆ ಸಲ್ಲಿಸಿ, ಒಪ್ಪಂದಕ್ಕೂ ಮುಂದಾಗಿತ್ತು.
ಮುಚ್ಚಳಿಕೆ ಬರೆಸಿಕೊಳ್ಳಿ: ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಫೇಸ್ ಬುಕ್‌ನಿಂದ ಮುಚ್ಚಳಿಕೆ ಬರೆಯಿಸಿಕೊಳ್ಳಿ ಎಂದು ಮಾಹಿತಿ ತಂತ್ರಜ್ಞಾನಕ್ಕಾಗಿರುವ ಸಂಸತ್ ಸ್ಥಾಯಿ ಸಮಿತಿ ಕೇಂದ್ರ ಸರಕಾರಕ್ಕೆ ಸೂಚಿಸಿದೆ. ಬಿಜೆಪಿ ಸಂಸದ ಅನುರಾಗ್ ಠಾಕೂರ್ ನೇತೃತ್ವದ ಸಮಿತಿ ಫೇಸ್ ಬುಕ್‌ಗೆ ಕಳುಹಿಸಲಾಗಿರುವ ಎಲ್ಲಾ ಲಿಖೀತ ಮಾಹಿತಿಯ ಪ್ರತಿ ನೀಡಬೇಕು ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಇಲೆಕ್ಟ್ರಾನಿಕ್ಸ್ ಸಚಿವಾಲಯಕ್ಕೆ ಹೇಳಿದೆ.
ಇದೇ ವೇಳೆ ಸಭೆಯಲ್ಲಿ ದೇಶದ ಡಿಜಿಟಲ್ ಅರ್ಥ ವ್ಯವಸ್ಥೆಗೆ ಸಂಬಂಧಿಸಿದಂತೆ ಮಾಹಿತಿ ತಂತ್ರಜ್ಞಾನ ಮತ್ತು ಇಲೆಕ್ಟಾನಿಕ್ಸ್ ಸಚಿವಾಲಯದ ಜತೆ ಸೂಕ್ತ ಮಾಹಿತಿ ಇಲ್ಲ ಎಂಬ ಅಂಶದ ಬಗ್ಗೆ ಸ್ಥಾಯಿ ಸಮಿತಿ ಅಚ್ಚರಿ ವ್ಯಕ್ತಪಡಿಸಿದೆ. ನಿಯಮಗಳನ್ನು ಬಲಪಡಿಸದೇ ಇದ್ದರೆ ವಿಶ್ವದ ಇತರ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ದೇಶದ ಮಾಹಿತಿ ತಂತ್ರಜ್ಞಾನ ವ್ಯವಸ್ಥೆ ಹಿಂದುಳಿದೀತು ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಕಳೆದ ತಿಂಗಳು ಬಳಕೆದಾರರ ಮಾಹಿತಿ ದುರುಪಯೋಗ ಆರೋಪಕ್ಕೆ ಕೇಂದ್ರ ಸರಕಾರ ಫೇಸ್ ಬುಕ್ ಗೆ ನೋಟಿಸ್ ನೀಡಿತ್ತು. ಅದಕ್ಕೆ ಜಾಲತಾಣ ಸಂಸ್ಥೆ ಉತ್ತರ ನೀಡಿದ್ದು, ಅದು ಸರಕಾರದ ಪರಿಶೀಲನೆಯಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಸಲಹೆ ಆಹ್ವಾನ: ಆನ್ ಲೈನ್ ಮಾಹಿತಿ ಸುರಕ್ಷತೆಯಲ್ಲಿ ಭಾರತ ಕೈಗೊಳ್ಳಬೇಕಾದ ಕ್ರಮ ಇನ್ನೂ ಹಲವು ಇವೆ ಎಂದು ಸದಸ್ಯರು ಹೇಳಿದ್ದಾರೆ. ಅದಕ್ಕೆ ಪೂರಕವಾಗಿ ಸಮಿತಿ ಅಧ್ಯಕ್ಷ ಠಾಕೂರ್ ಮಾಹಿತಿ ಸುರಕ್ಷತೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಸಲಹೆ ಮತ್ತು ಮಾಹಿತಿ ನೀಡುವಂತೆ ಆಹ್ವಾನ ನೀಡಿದ್ದಾರೆ.
ಪ್ರಚಾರಕ್ಕೆ ಪ್ರಸ್ತಾವ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಕೇಂಬ್ರಿಜ್ ಅನಾಲಿಟಿಕಾ ಮುಖ್ಯಸ್ಥ ಅಲೆಕ್ಸಾಂಡರ್ ನಿಕ್ಸ್ ರಾಹುಲ್ ಗಾಂಧಿ ಲಂಡನ್‌ನಲ್ಲಿ 2017ರ ಆಗಸ್ಟ್‌ನಲ್ಲಿ ಭೇಟಿ ಮಾಡಿದ್ದರು. ಈ ವೇಳೆ 2019ರ ಚುನಾವಣೆಯ ಪ್ರಚಾರ ತಂತ್ರಕ್ಕಾಗಿ ಕೇಂಬ್ರಿಜ್ ಅನಾಲಿಟಿಕಾ 50 ಪುಟಗಳ ವರದಿಯನ್ನು ಸಲ್ಲಿಸಿತ್ತು. ಇದಕ್ಕೆ 2.5 ಕೋಟಿ ರೂ. ವೆಚ್ಚದ ಪ್ರಸ್ತಾವವನ್ನೂ ಮಾಡಿತ್ತು. ಆದರೆ ಕಾಂಗ್ರೆಸ್ ಮಾತ್ರ ಕೇಂಬ್ರಿಜ್ ಅನಾಲಿಟಿಕಾ ಜತೆ ಯಾವುದೇ ರೀತಿಯ ಸಂಪರ್ಕ ಹೊಂದಿಲ್ಲ ಎಂದು ಹೇಳಿಕೊಂಡಿತ್ತು. ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಬಳಿಕ ಕಾಂಗ್ರೆಸ್‌ಗೆ ಈ ಪ್ರಸ್ತಾವ ಸಲ್ಲಿಸಲಾಗಿತ್ತು. ಅದಕ್ಕೆ ಪೂರಕವಾಗಿ ಕರ್ನಾಟಕ, ಮಧ್ಯಪ್ರದೇಶ, ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸಲು ಎಲ್ಲ ರೀತಿಯ ಪ್ರಯತ್ನ ಮಾಡುವ ಬಗ್ಗೆಯೂ ಪ್ರಸ್ತಾವ ಮಾಡಲಾಗಿತ್ತು.