ಮಂಗಳೂರು: ರಾಜ್ಯದ ಎಲ್ಲ 314 ನಗರ ಸ್ಥಳೀಯ ಸಂಸ್ಥೆಗಳ ಕಸ ಸಾಗಿಸುವ ವಾಹನ ಚಾಲಕರು, ವಾಟರ್‌ವೆುನ್, ಡಾಟಾ ಅಪರೇಟರುಗಳನ್ನು, ಯುಜಿಡಿ ಕಾರ್ಮಿಕರು, ತ್ಯಾಜ್ಯ ಸಹಾಯಕರನ್ನು ಪೌರ ಕಾರ್ಮಿಕರ ಮಾದರಿಯಲ್ಲಿ ಗುತ್ತಿಗೆ ಪದ್ಧತಿ ಬದಲು ನೇರ ನೇಮಕಾತಿಗೆ ಆಗ್ರಹಿಸಿ ಜು. 1ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆಯೋಜಿಸಲಾಗಿದೆ ಎಂದು ದ.ಕ.-ಉಡುಪಿ ಜಿಲ್ಲೆಯ ಹೊರಗುತ್ತಿಗೆ ನೌಕರರ ಸಂಘದ ಸಂಚಾಲಕ ಬಿ.ಕೆ. ಅಣ್ಣಪ್ಪ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಮುಷ್ಕರಕ್ಕೆ ದ.ಕ. ಜಿಲ್ಲಾ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಗೆ ಒಳಪಟ್ಟ ಎಲ್ಲ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‌ನ ಹೊರ ಗುತ್ತಿಗೆ ನೌಕರರು ಸಹಕಾರ ನೀಡಲಿದ್ದಾರೆ ಎಂದರು.
ಸಫಾಯಿ ಕರ್ಮಾಚಾರಿ ಸಂಘದ ಅಧ್ಯಕ್ಷ ನಾರಾಯಣ ಶೆಟ್ಟಿ, ಮಂಗಳೂರು ವಲಯ ಅಧ್ಯಕ್ಷ ಚೆನ್ನಕೇಶವ ಗೌಡ ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ
ಮಂಗಳೂರು: ಜು. 1ರಿಂದ ಆಯೋಜಿಸಿರುವ ರಾಜ್ಯವ್ಯಾಪಿ ಮುಷ್ಕರದಲ್ಲಿ ದ.ಕ. ಜಿಲ್ಲೆ ವ್ಯಾಪ್ತಿಯ ಪಾಲಿಕೆ ಸಹಿತ ವಿವಿಧ ಸ್ಥಳೀಯಾಡಳಿತದ ಕಾರ್ಮಿಕರು ಪಾಲ್ಗೊಳ್ಳಲಿದ್ದಾರೆ. ದ.ಕ. ಜಿಲ್ಲಾ ಮಟ್ಟದ ಪ್ರತಿಭಟನೆ ಮಂಗಳೂರಿನಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ನಡೆಯಲಿದೆ ಎಂದು ಜಿಲ್ಲಾ ಪೌರ ಕಾರ್ಮಿಕರ ಹಾಗೂ ನಾಲ್ಕನೇ ದರ್ಜೆ ನೌಕರರ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಒಳಚರಂಡಿ (ಯುಜಿಡಿ) ನೇರ ಪಾವತಿ ಪೌರ ಕಾರ್ಮಿಕರು, ಹೆಚ್ಚುವರಿ ಪೌರ ಕಾರ್ಮಿಕರು ಮತ್ತು ಮನೆ ಕಸ ಸಂಗ್ರಹ ಹಾಗೂ ಕಸ ಸಾಗಾಣಿಕೆ ಮಾಡುವ ವಾಹನ ಚಾಲಕರು, ಲೋಡರ್, ಸಹಾಯಕರು ಹಾಗೂ ಪೌರಕಾರ್ಮಿಕರ ಮೇಲ್ವಿಚಾರಕರು ಮತ್ತು ಎಲ್ಲ ಸ್ವಚ್ಛತಾ ಕಾರ್ಮಿಕರನ್ನು ಖಾಯಂಗೊಳಿಸಬೇಕು. ಜತೆಗೆ ವಿವಿಧ ಸ್ಥಳೀಯ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟ ಕಾಲ ರಾಜ್ಯಾದ್ಯಂತ ಪ್ರತಿಭಟನೆ ನಡೆಯಲಿದೆ ಎಂದರು.
ಜಿಲ್ಲಾ ಕಾರ್ಯದರ್ಶಿ ಎಸ್.ಪಿ. ಆನಂದ, ಜಿಲ್ಲಾ ಮುಖಂಡ ಇಶು ಕುಮಾರ್, ಕಮಿಟಿ ಸದಸ್ಯರಾದ ಸುರೇಶ್ ಉರ್ವ, ನಾಗೇಶ್ ಉಪಸ್ಥಿತರಿದ್ದರು.