ರಾಯಚೂರು: ನವೋದಯ ಶಿಕ್ಷಣ ಸಂಸ್ಥೆ 371 ಜೆ ವಿರುದ್ಧ ನ್ಯಾಯಾಲಯದಲ್ಲಿ ದಾಖಲಿಸಿದ ರಿಟ್ ಅರ್ಜಿ ಹಿಂಪಡೆಯುವಂತೆ ಆಗ್ರಹಿಸಿ ಮಾ.7ರಂದು ರಾಯಚೂರು ಬಂದ್‌ಗೆ ಕರೆ ನೀಡಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಸ್ಥೆಯ ಮುಖ್ಯಸ್ಥರು ಕೋರ್ಟ್ ಸಲ್ಲಿಸಿದ ಅರ್ಜಿಯಲ್ಲಿ 371 ಜೆ ವಿರುದ್ಧದ ಅನೇಕ ಅಂಶಗಳು ಗಮನಕ್ಕೆ ಬಂದಿವೆ. ಈ ಸಂಸ್ಥೆಯ ಪರ ತೀರ್ಪು ಬಂದಲ್ಲಿ ಈ ಭಾಗಕ್ಕೆ ಸಿಕ್ಕಿರುವ ಮೀಸಲಾತಿಗೆ ಕೊಡಲಿ ಪೆಟ್ಟು ಬಿದ್ದಂತಾಗಲಿದೆ. ಅಲ್ಲದೇ, ಇದೇ ವಿಚಾರ ಮುಂದಿಟ್ಟುಕೊಂಡು ಇನ್ನೂ ಅನೇಕರು ನ್ಯಾಯಾಲಯಕ್ಕೆ ಹೋದರೆ ಕಷ್ಟವಾಗಲಿದೆ. ಹೀಗಾಗಿ ಈ ವಿಚಾರವನ್ನು ಆರಂಭಿಕ ಹಂತದಲ್ಲೇ ಮೊಟಕುಗೊಳಿಸಬೇಕಿದೆ ಎಂದರು.
ಪಕ್ಷಾತೀತವಾಗಿ ನಡೆಸಿದ ಹೋರಾಟಕ್ಕೆ ಮಣಿದು ಮೀಸಲಾತಿಯಡಿ 106 ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಒಪ್ಪಿದ್ದಾರೆ. ಆದರೆ, ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿ ಹಿಂಪಡೆಯುವ ವಿಚಾರ ಮಾತ್ರ ತಿಳಿಸಿಲ್ಲ. ಈ ಕುರಿತು ಚರ್ಚಿಸಲು ರಾಜಕೀಯ ನಾಯಕರ ನೇತೃತ್ವದ ಸಭೆಗೆ ಸಂಸ್ಥೆ ಮುಖ್ಯಸ್ಥ ಎಸ್.ಆರ್.ರೆಡ್ಡಿ ಅವರಿಗೆ ಆಹ್ವಾನ ನೀಡಿದರೂ ಬಂದಿಲ್ಲ ಎಂದು ದೂರಿದರು.
ಅಂದು ಇಡೀ ರಾಯಚೂರು ಬಂದ್ ಮಾಡುವ ಕುರಿತು ಈಗಾಗಲೇ ಎಲ್ಲ ಸಂಘಟನೆಗಳ ಜತೆ ಚರ್ಚಿಸಲಾಗಿದೆ. ಶಾಲಾ-ಕಾಲೇಜುಗಳಿಗೆ ರಜೆ ನೀಡಲು ಮನವಿ ಮಾಡಲಾಗಿದೆ. ಸಾರಿಗೆ ಸಂಚಾರ ನಿಲ್ಲಿಸುವಂತೆಯೂ ಒತ್ತಾಯಿಸಲಾಗುವುದು. ತುರ್ತು ಸೇವೆ, ವೈದ್ಯಕೀಯ ಸೇವೆ ಹೊರತಾಗಿಸಿ ಯಾವುದೇ ರೀತಿ ಸೇವೆ ಇರುವುದಿಲ್ಲ. ಈ ಹೋರಾಟದ ಉದ್ದೇಶ ಸರ್ಕಾರಕ್ಕೆ ನಮ್ಮ ಸ್ಪಷ್ಟ ಸಂದೇಶ ರವಾನಿಸಬೇಕಿದ್ದು, ಮೀಸಲಾತಿಯಲ್ಲಿ ಆಗುವ ಅನ್ಯಾಯ ತಡೆಗಟ್ಟುವುದೇ ಆಗಿದೆ ಎಂದರು.
ಶಾಸಕ ಡಾ| ಶಿವರಾಜ್ ಪಾಟೀಲ್ ಮಾತನಾಡಿ, ಸರ್ಕಾರ ಸೀಟು ಹಂಚಿಕೆ ಮಾಡಿರುವುದು ಸಂಸ್ಥೆ ಅಪಥ್ಯವಾಗಿದೆ. 2012ರಿಂದ 371 ಜಾರಿಯಲ್ಲಿದ್ದರೂ ಯಾವುದೇ ಸಮಸ್ಯೆ ಆಗಿರಲಿಲ್ಲ. ಈಗ ಈ ಸಮಸ್ಯೆ ಎದುರಾಗಿದೆ. ಈ ಭಾಗದವರಿಗೆ ಮೊದಲು ಪ್ರವೇಶ ಸಿಗಬೇಕು ಎನ್ನುವುದು ನಮ್ಮ ನಿಲುವಾಗಿದೆ. 371 ಜೆ ಕಾಯ್ದೆಯಾಗಿದೆ. ಆದರೆ, ಇದನ್ನು ಒಪ್ಪದ ಎಸ್.ಆರ್ ರೆಡ್ಡಿ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಕಾಯ್ದೆಯಡಿ ಗೊಂದಲ ಮೂಡಿಸಿ ಸರ್ಕಾರಕ್ಕೆ ವಂಚಿಸಿದ್ದಾರೆ. ಮಾ.8ರಂದು ಬಜೆಟ್ ಅಧಿವೇಶನ ನಡೆಯುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಶಾಸಕರು ಪಕ್ಷಾತೀತವಾಗಿ ಧ್ವನಿ ಎತ್ತುವರು. ಕಲ್ಯಾಣ ಕರ್ನಾಟಕ ಭಾಗದ ಶಾಸಕರು ಪ್ರಶ್ನೆ ಮಾಡಲು ತಿಳಿಸಲಾಗಿದೆ ಎಂದರು.
ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿ ಸಂಚಾಲಕ ರಜಾಕ್ ಉಸ್ತಾದ್ ಮಾತನಾಡಿ, ಈ ಭಾಗದಲ್ಲಿದ್ದುಕೊಂಡು ಮೀಸಲಾತಿ ನೀಡಲು ಒಪ್ಪದಿದ್ದರೆ, ಬೇರೆ ಜಿಲ್ಲೆಯಲ್ಲಿರುವವರು ಮುಂದೆ ಆಕ್ಷೇಪ ಮಾಡುವ ಸಾಧ್ಯತೆ ಇದೆ. ಈಗ ಸರ್ಕಾರ ಮಾತ್ರ ನ್ಯಾಯಾಲಯ ಹೋರಾಟ ನಡೆಸಿದ್ದು, ನಮ್ಮ ಹೋರಾಟ ಸಮಿತಿಯಿಂದಲೂ ನ್ಯಾಯಾಲಯಕ್ಕೆ ಅರ್ಜಿ ಹಾಕಲಾಗುವುದು. ಅಲ್ಲದೇ, ಅನುದಾನ ರಹಿತ ಶಾಲಾ-ಕಾಲೇಜುಗಳ ಒಕ್ಕೂಟದಿಂದಲೂ ನ್ಯಾಯಾಂಗ ಹೋರಾಟ ನಡೆಸುವ ಕುರಿತು ಚಿಂತಿಸಲಾಗುತ್ತಿದೆ ಎಂದರು. ಮಾಜಿ ಶಾಸಕ ಎ.ಪಾಪಾರೆಡ್ಡಿ, ಮುಖಂಡ ರಮಾನಂದ್ ಯಾದವ್ ಗೋಷ್ಠಿಯಲ್ಲಿ ಇದ್ದರು.