Advertisement
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮತ್ತು ಚಿಕ್ಕ ಮಗಳೂರಿನಿಂದ ಈ ಕರೆಗಳು ಪಾಕಿಸ್ಥಾನಕ್ಕೆ ಹೋಗಿದೆ ಎನ್ನಲಾಗುತ್ತಿದೆ. ಒಬ್ಬನೇ ವ್ಯಕ್ತಿ ಬೆಳ್ತಂಗಡಿಯಿಂದ ಚಿಕ್ಕಮಗಳೂರು ಕಡೆಗೆ ತೆರಳುವ ಸಂದರ್ಭದಲ್ಲಿ ಈ ಕರೆಗಳನ್ನು ಮಾಡಲಾಗಿದೆಯೇ ಅಥವಾ ಪ್ರತ್ಯೇಕ ವ್ಯಕ್ತಿಗಳು ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ತೀವ್ರಗೊಂಡಿದೆ. ಇದರಿಂದಾಗಿ ಪೊಲೀಸರು ತಮ್ಮ ಮುಂಜಾಗ್ರತಾ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಿದ್ದಾರೆ.
ಖುದ್ದು ಜಿಲ್ಲಾ ವರಿಷ್ಠಾಧಿಕಾರಿಗಳು ಪ್ರತಿ ಗಂಟೆಗೊಮ್ಮೆ ತಮ್ಮ ಅಧೀನ ಅಧಿಕಾರಿಗಳಿಂದ ಭದ್ರತೆ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಸಾರ್ವ ಜನಿಕ ಸ್ಥಳಗಳಲ್ಲಿ ಸಮವಸ್ತ್ರದಲ್ಲಿ ಮಾತ್ರವಲ್ಲದೆ, ಮಫ್ತಿಯಲ್ಲಿ ಗಸ್ತು ತಿರುಗಬೇಕು. ಸಂಶಯ ಬಂದಲ್ಲಿ ತೀವ್ರ ತಪಾಸಣೆ ನಡೆಸಬೇಕು ಎಂದು ಸೂಚಿಸಲಾಗಿದೆ.
Related Articles
Advertisement
ಪ್ರಮುಖವಾಗಿ ಬೆಂಗಳೂರಿನಲ್ಲಿಯೂ ಹೈಅಲರ್ಟ್ ಸೂಚಿಸಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್, ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ಹೆಚ್ಚಳಕ್ಕೆ ಸೂಚಿಸಿದ್ದಾರೆ. ಜತೆಗೆ ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಕಳುಹಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ವಿಶೇಷ ಭದ್ರತೆ ಪಡೆಗಳು, ಗರುಡ ಪಡೆಗಳು ತಮ್ಮ ವಾಹನಗಳಲ್ಲಿ ಮೆಟ್ರೋ, ರೈಲು ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಗಸ್ತು ತಿರುಗುತ್ತಿದ್ದಾರೆ. ಇದೇ ವೇಳೆ ಪ್ರತಿ ಠಾಣೆಯ ಬೀಟ್ ಸಿಬಂದಿಗೆ ಹೆಚ್ಚು ನಿಗಾವಹಿಸುವಂತೆ ಸೂಚಿಸಲಾಗಿದೆ. ನಗರಕ್ಕೆ ಪ್ರವೇಶಿಸುವ ನಾಲ್ಕು ಕಡೆಗಳಲ್ಲೂ ವಾಹನ ತಪಾಸಣೆ ಕಾರ್ಯ ಮುಂದುವರಿದಿದೆ.
ಸೆಟಲೈಟ್ ಕರೆ ಸಮುದ್ರಕಡೆಯಿಂದ ಬಂತೇ?
ಈ ಮಧ್ಯೆ ಚಿಕ್ಕಮಗಳೂರು ಮತ್ತು ದ.ಕ. ಜಿಲ್ಲೆಗೆ ಸಂಪರ್ಕ ಕಲ್ಪಿಸಿದ ಸೆಟಲೈಟ್ ಫೋನ್ ಕರೆ ಸಮುದ್ರ ಮಾರ್ಗದಿಂದ ಬಂದಿರುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬಂದಿದೆ. ಹಡಗಿನಲ್ಲಿ ಸಮುದ್ರ ಮಾರ್ಗದಲ್ಲಿ ಸಂಚರಿಸುವ ಸಂದರ್ಭ ನೆಟ್‌ವರ್ಕ್ ಸಮಸ್ಯೆಯಿಂದ ಏನಾದರೂ ಇಂತಹ ಗೊಂದಲ ಉಂಟಾಗಿದೆಯೇ ಎಂಬ ಕುರಿತೂ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಆದರೆ ಈ ಬಗ್ಗೆ ಯಾವುದೇ ದೃಢೀಕರಣ ಪೊಲೀಸರ ಕಡೆಯಿಂದ ವ್ಯಕ್ತವಾಗಿಲ್ಲ.ಸೆಟಲೈಟ್ ಫೋನ್ ಕರೆ ಬಗ್ಗೆ ತಮಗೆ ಯಾವುದೇ ಮಾಹಿತಿ ಗೊತ್ತಾಗಿಲ್ಲ ಎಂದು ಮಂಗಳೂರಿನ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ. ಎರಡು ಪ್ರತ್ಯೇಕ ಪ್ರಕರಣಗಳ ತನಿಖೆ
ಮಂಗಳೂರಿನ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ತನಿಖೆ ಚುರುಕುಗೊಳಿಸಲಾಗಿದೆ. ಬೆಳ್ತಂಗಡಿಯ ಗ್ರಾಮವೊಂದರ ಗಡಿ ಭಾಗದಿಂದ ಸೆಟಲೈಟ್ ಕರೆ ಮಾಡಿರುವುದನ್ನು ಗಂಭೀರ ವಾಗಿ ಪರಿಗಣಿಸಿರುವ ಪೊಲೀಸರು ಆ ಭಾಗದಲ್ಲಿ ತಪಾಸಣೆ ಕೈಗೊಂಡಿದ್ದಾರೆ. ಕರೆ ಮಾಡಿರುವ ವ್ಯಕ್ತಿ ಯಾರು ಎಂಬುದು ಗೊತ್ತಾಗಿಲ್ಲ. ಅನುಮಾನಾಸ್ಪದ ವ್ಯಕ್ತಿಗಳು ಗಡಿ ಭಾಗದಿಂದ ಸೆಟಲೈಟ್ ಕರೆ ಮಾಡಿ ಅನಂತರ ಪರಾರಿಯಾಗಿರುವ ಶಂಕೆ ಇದೆ. ಅವರು ಮುಂದೆ ಯಾವ ಕಡೆ ಹೋಗಿದ್ದಾರೆ ಎಂಬುದು ತಿಳಿದಿಲ್ಲ. ಹೀಗಾಗಿ ಗಡಿಭಾಗದಲ್ಲಿ ಕೇಂದ್ರ ಗುಪ್ತಚರ ದಳ, ರಾಜ್ಯ ಆಂತರಿಕ ಭದ್ರತಾ ದಳದ ಜತೆಗೆ ದಿಲ್ಲಿ ಮತ್ತು ಬೆಂಗ ಳೂರು ಎನ್‌ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಚಿಕ್ಕಮಗಳೂರಿನಲ್ಲಿಯೂ ಕಿಡಿಗೇಡಿಗಳು ಸೆಟಲೈಟ್ ಕರೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಖಚಿತವಾಗುತ್ತಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.