Advertisement

ರವಿಪೂಜಾರಿ ಹೆಸರಲ್ಲಿ ಬೆದರಿಕೆ ಕರೆ

11:57 AM Nov 22, 2017 | Team Udayavani |

ಬೆಂಗಳೂರು: ಜೆ.ಸಿ.ನಗರ ಎಸಿಪಿ ಮಂಜುನಾಥ್‌ ಬಾಬು ಅವರು ಆರ್‌.ಟಿ.ನಗರದ ದಿನ್ನೂರು ಮುಖ್ಯರಸ್ತೆಯಲ್ಲಿರುವ ಶೆಟ್ಟಿ ಲಂಚ್‌ ಹೋಂ ಮಾಲೀಕನ ಮೇಲೆ ನಡೆಸಿದ ಹಲ್ಲೆ ಪ್ರಕರಣ ಇದೀಗ ಹೊಸ ಸ್ವರೂಪ ಪಡೆದುಕೊಂಡಿದೆ.

Advertisement

ಪ್ರಕರಣ ತೀವ್ರತೆ ಪಡೆದುಕೊಳ್ಳುತ್ತಿದ್ದಂತೆ ಭೂಗತಪಾತಕಿಗಳ ಎಂಟ್ರಿ ಆಗಿದ್ದು, ಹೋಟೆಲ್‌ ಮಾಲೀಕ ರಾಜೀವ್‌ ಶೆಟ್ಟಿಗೆ ಮಂಗಳೂರು ಮೂಲದ ಭೂಗತಪಾತಕಿ ರವಿಪೂಜಾರಿ ಹೆಸರಿನಲ್ಲಿ ಬೆದರಿಕೆ ಕರೆಗಳು ಬರುತ್ತಿವೆ. ಇದರಿಂದ ಆತಂಕಕ್ಕೊಳಗಾಗಿರುವ ರಾಜೀವ್‌ ಶೆಟ್ಟಿ ಬೃಹತ್‌ ಬೆಂಗಳೂರು ಹೋಟೆಲ್‌ಗ‌ಳ ಸಂಘದ ಸದಸ್ಯರ ಜತೆ ಹೋಗಿ ಆರ್‌.ಟಿ.ನಗರ ಮತ್ತು ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದಾರೆ.

ಪ್ರಕರಣ ಕುರಿತು ವಿಚಾರಣೆ ನಡೆಸಿದ ಡಿಸಿಪಿ ಚೇತನ್‌ಸಿಂಗ್‌ ರಾಥೋಡ್‌ ಎಸಿಪಿ ಕರ್ತವ್ಯ ಲೋಪ ವೆಸಗಿರುವುದು ಕಂಡು ಬಂದಿದ್ದು, ಕ್ರಮಕೈಗೊಳ್ಳಬಹುದು ಎಂದು ಹಿರಿಯ ಅಧಿಕಾರಿಗಳಿಗೆ ವರದಿ ನೀಡಿದ ಬೆನ್ನಲ್ಲೇ ಹೋಟೆಲ್‌ ಮಾಲೀಕ ರಾಜೀವ್‌ ಶೆಟ್ಟಿಗೆ ಭೂಗತಪಾತಕಿ ರವಿಪೂಜಾರಿ ಹೆಸರಿನಲ್ಲಿ ಕರೆ ಬಂದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಮತ್ತೂಂದೆಡೆ ಎಸಿಪಿ ಮಂಜುನಾಥ್‌ ಬಾಬು ಪರವಾಗಿ ಉಡುಪಿ ಜಿಲ್ಲಾ ದಲಿತ ಸಂಘರ್ಷ ಸಮಿತಿ, ಮಹಾತ್ಮಗಾಂಧಿ ಶಾಂತಿ ಸೌಹಾರ್ದ ವೇದಿಕೆ, ಹೆಬ್ಟಾಳ ಬೀದಿ ವ್ಯಾಪಾರಿಗಳ ಸಂಘ, ಡಿಎಸ್‌ಎಸ್‌ ಸೇರಿದಂತೆ ಸ್ಥಳೀಯ ಸುಮಾರು 27ಕ್ಕೂ ಅಧಿಕ ಸಂಘಟನೆಗಳು ಸಭೆ ನಡೆಸಿವೆ. ಈ ಸಭೆಯಲ್ಲಿ ಸುಮಾರು ಗಂಗಾನಗರ ಮತ್ತು ಆರ್‌.ಟಿ.ನಗರ ವಾರ್ಡ್‌ನ ಇಬ್ಬರು ಬಿಜೆಪಿ ಕಾರ್ಪೋರೇಟರ್‌ಗಳು ಸೇರಿದಂತೆ 500ಕ್ಕೂ ಅಧಿಕ ಮಂದಿ ಸೇರಿದ್ದರು.

ಸಭೆಯ ನಿರ್ಣಯದ ಪ್ರಕಾರ ಎಸಿಪಿ ಮಂಜುನಾಥ್‌ ಬಾಬು ಒಳ್ಳೆಯ ಅಧಿಕಾರಿ, ರಾಜೀವ್‌ ಶೆಟ್ಟಿ ಅವರೇ ಪೊಲೀಸ್‌ ಪೇದೆಗಳು ಮತ್ತು ಎಸಿಪಿ ಜತೆ ಅನುಚಿತವಾಗಿ ವರ್ತಿಸಿರುವುದರಿಂದ ಲಾಠಿ ಪ್ರಹಾರ ನಡೆಸಿದ್ದಾರೆ ಹೊರತು ಇನ್ಯಾವುದೇ ಕಾರಣವಿಲ್ಲ. ಈ ಹಿನ್ನೆಲೆಯಲ್ಲಿ ಎಸಿಪಿ ವಿರುದ್ಧ ಯಾವುದೇ ಕ್ರಮಕೈಗೊಳ್ಳದ್ದಂತೆ ನಗರ ಪೊಲೀಸ್‌ ಆಯುಕ್ತರಿಗೆ ಮನವಿ ಮಾಡುವುದರ ಜತೆಗೆ,

Advertisement

ಬುಧವಾರ 11 ಗಂಟೆ ಸುಮಾರಿಗೆ ಎಸಿಪಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಲಾಗುವುದು ಎಂದು ಸಂಘಟನೆಗಳ ಸದಸ್ಯ ರವಿಶಂಕರ್‌ ಶೆಟ್ಟಿ “ಉದಯವಾಣಿ’ಗೆ ತಿಳಿಸಿದ್ದಾರೆ. ಸಭೆಯಲ್ಲಿ ಕರವೇ ಅಧ್ಯಕ್ಷ ಪ್ರವೀಣ್‌ ಶೆಟ್ಟಿ, ಬಿಜೆಪಿ ಕಾರ್ಪೋರೇಟರ್‌ಗಳಾದ ಆನಂದ್‌, ನಾಗರಾಜ್‌, ಡಿಎಸ್‌ಎಸ್‌ ಮಂಜು, ಲಯನ್ಸ್‌ ಬಾಲಕೃಷ್ಣ, ಸುಹೇಲ್‌ ಇತರರು ಇದ್ದರು.

ಈ ಮಧ್ಯೆ ಬೃಹತ್‌ ಬೆಂಗಳೂರು ಹೋಟೆಲ್‌ಗ‌ಳ ಸಂಘದ ಅಧ್ಯಕ್ಷ ಚಂದ್ರಶೇಖರ್‌ ಹೆಬ್ಟಾರ ಅವರ ನೇತೃತ್ವದ ತಂಡ ರಾಜೀವ್‌ ಶೆಟ್ಟಿ ಪ್ರಕರಣ ಕುರಿತು ನಗರ ಪೊಲೀಸ್‌ ಆಯುಕ್ತರನ್ನು ಭೇಟಿಯಾಗಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದೆ. ಒಬ್ಬ ಹೋಟೆಲ್‌ ಮಾಲೀಕನ ಮೇಲೆ ಪೊಲೀಸರು ಹಲ್ಲೆ ನಡೆಸಿದಾಗ ರವಿಪೂಜಾರಿ ಅಂತಹ ಭೂಗತಪಾತಕಿ ಕರೆ ಮಾಡಿ ಬೆದರಿಕೆ ಹಾಕುತ್ತಾನೆ ಎಂದರೆ, ಪೊಲೀಸರ ನೈತಿಕತೆಯನ್ನು ಪ್ರಶ್ನಿಸಲೇಬೇಕಾಗುತ್ತದೆ ಎಂದು ಸಂಘದ ಸದಸ್ಯರು “ಉದಯವಾಣಿ’ಗೆ ತಿಳಿಸಿದ್ದಾರೆ.

ರವಿಪೂಜಾರಿ ಹೆಸರಲ್ಲಿ ಬೆದರಿಕೆ ಕರೆ: ಸೋಮವಾರ ರಾತ್ರಿ 10.30ರ ಸುಮಾರಿಗೆ ಆಸ್ಟ್ರೇಲಿಯಾದಿಂದ ಕರೆ ಮಾಡಿದ ಭೂಗತಪಾತಕಿ ರವಿಪೂಜಾರಿ ಹೆಸರಿನ ವ್ಯಕ್ತಿ, ಆರಂಭದಲ್ಲಿ ತುಳುವಿನಲ್ಲಿ ಮಾತನಾಡಿದ್ದಾನೆ. ನಂತರ ಹೋಟೆಲ್‌ ಸಿಬ್ಬಂದಿ ಮಾತನಾಡುತ್ತಿರುವುದು ಎಂದು ತಿಳಿದ ಕೂಡಲೇ ಹಿಂದಿಯಲ್ಲಿ ಮಾತನಾಡಿದ್ದಾನೆ. “ಇನ್ನು ಅರ್ಧಗಂಟೆಯಲ್ಲಿ ಹೋಟೆಲ್‌ ಬಂದ್‌ ಮಾಡದಿದ್ದರೆ, ನಮ್ಮ ಹುಡುಗರು ನಿಮ್ಮ ಹೋಟೆಲ್‌ ಮೇಲೆ ದಾಳಿ ಮಾಡುತ್ತಾರೆ.

ಗ್ರಾಹಕರು ಇದ್ದಾರೆನ್ನುವುದನ್ನ ಸಹ  ನೋಡುವುದಿಲ್ಲ ಗುಂಡಿನ ದಾಳಿ ನಡೆಸುತ್ತಾರೆ. ಜತೆಗೆ ರಾಜೀವ್‌ ಶೆಟ್ಟಿಯನ್ನು ಸಹ ಕೊಲ್ಲುತ್ತಾರೆ ಎಂದು ಎಚ್ಚರಿಕೆ ನೀಡಿ ಕರೆ ಸ್ಥಗಿತಗೊಳಿಸಿದ್ದಾರೆ. ಅನಂತರ ಮಂಗಳವಾರ 12.30ರ ಸುಮಾರಿಗೆ ಮತ್ತೂಮ್ಮೆ ಕರೆ ಮಾಡಿದ ರವಿಪೂಜಾರಿ ಹೆಸರಿನ ವ್ಯಕ್ತಿ, ಇದು ಕೊನೆಯ ಗಡುವು ನಾನೊಂದು ಸಂದೇಶವನ್ನು ಕಳುಹಿಸಿದ್ದೇನೆ. ಅದನ್ನು ನಿಮ್ಮ ರಾಜೀವ್‌ ಶೆಟ್ಟಿಗೆ ತೋರಿಸಿ ಎಂದು ತಾಕೀತು ಮಾಡಿ ಕರೆ ಸ್ಥಗಿತಗೊಳಿಸಿದ್ದಾನೆ.

ಈ ಕುರಿತು “ಉದಯವಾಣಿ’ ಜತೆ ಮಾತನಾಡಿದ ರಾಜೀವ್‌ ಶೆಟ್ಟಿ, ಈ ವಿಚಾರ ಇಷ್ಟು ದೊಡ್ಡಮಟ್ಟಕ್ಕೆ ಹೋಗುತ್ತದೆ ಎಂದು ಊಹಿಸಿರಲಿಲ್ಲ. ರವಿಪೂಜಾರಿ ಹೆಸರಿನ ಕರೆಯಿಂದ ಆತಂಕಗೊಂಡಿದ್ದು, ನಗರ ಪೊಲೀಸ್‌ ಆಯುಕ್ತರನ್ನು ನೇರವಾಗಿ ಕಂಡು, ಕರೆಯ ಆಡಿಯೋ ಮತ್ತು ಸಂದೇಶವನ್ನು ಸಲ್ಲಿಸಿ ದೂರು ನೀಡುತ್ತೇನೆ ಎಂದು ತಿಳಿಸಿದರು.

ಇನ್ನು ಅಂದಿನ ಘಟನೆಯನ್ನು ವಿವರಿಸಿದ ರಾಜೀವ್‌ ಶೆಟ್ಟಿ, ಕುಂದಾಪುರದ ಕೋಟೇಶ್ವರ ಮೂಲದ ನಾನು ಕಳೆದ 15 ವರ್ಷಗಳಿಂದ ಹೋಟೆಲ್‌ ನಡೆಸಿಕೊಂಡು ಬರುತ್ತಿದ್ದೇನೆ. ಎಂದಿಗೂ ಇಂತಹ ಘಟನೆ ನಡೆದಿರಲಿಲ್ಲ. ಯಾವುತ್ತು ಪೊಲೀಸ್‌ ಅಧಿಕಾರಿಗಳಾಗಲಿ, ಪೇದೆಗಳಾಗಲಿ ಬಂದು ನಮ್ಮ ಜತೆ ಈ ರೀತಿ ನಡೆದುಕೊಂಡಿರಲಿಲ್ಲ. ಆದರೆ, ಎಸಿಪಿ ಮಂಜುನಾಥ್‌ ಬಾಬು ಅವರು ಏಕೆ ಆ ರೀತಿ ನಡೆದುಕೊಂಡರು ಎಂದು ತಿಳಿಯುತ್ತಿಲ್ಲ.

ಜೀವನದಲ್ಲಿ ಆದರ್ಶ ಇಟ್ಟುಕೊಂಡು ಬದುಕುತ್ತಿದ್ದವರು ನಾವು. ಘಟನೆಯಿಂದ ಬಹಳ ನೋವಾಗಿದೆ ಎಂದು ಅಸಮಾಧಾನವ್ಯಕ್ತಪಡಿಸಿದರು. ಇದುವರೆಗೂ ಯಾವುದೇ ನೋಟಿಸ್‌ ಬಂದಿಲ್ಲ. ಒಂದು ವೇಳೆ ಕೊಟ್ಟಿದ್ದರು ದಂಡ ಕಟ್ಟಿರುತ್ತಿದ್ದೆ. ಪೊಲೀಸ್‌ ಅಧಿಕಾರಿಗಳು ಇಲ್ಲದ ಆರೋಪಗಳನ್ನು ಮಾಡುವ ಮೂಲಕ ವಿನಾಃಕಾರಣ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ನ.9ರ ತಡರಾತ್ರಿ 11.46ರ ಸುಮಾರಿಗೆ ಏಕಾಏಕಿ ಎಸಿಪಿ ಮಂಜುನಾಥ್‌ ಬಾಬು ಹೋಟೆಲ್‌ಗೆ ನುಗ್ಗಿದರು. ಇದನ್ನು ಕಂಡ ನಮ್ಮ ಯುವಕ ಪೊಲೀಸರು ಬಂದಿದ್ದಾರೆ ಎಂದ, ತಿರುಗಿ ನೋಡುತ್ತಿದ್ದಂತೆ ನನ್ನ ಕುತ್ತಿಗೆಗೆ ಕೈ ಹಾಕಿ ಲಾಠಿಯಿಂದ ಹಲ್ಲೆ ನಡೆಸಿದರು ಎಸಿಪಿ. ಸರ್‌ ಯಾಕೆ ಹೊಡಿತ್ತಿದ್ದಿರಿ ಎಂದರು ಬಿಡದೆ ಹಲ್ಲೆ ನಡೆಸಿದರು, ಗ್ರಾಹಕರನ್ನು ಹೊರ ಕಳುಹಿಸಿದರು.

ಇಷ್ಟು ವರ್ಷಗಳ ಕಾಲ ಪೊಲೀಸರಿಂದ ಯಾವುದೇ ದೌರ್ಜನ್ಯವಾಗಿಲ್ಲ. ಇದೀಗ ಎಸಿಪಿ ಅವರು ನನ್ನನ್ನು ಏಕೆ ಗುರಿಯಾಗಿಸಿಕೊಂಡಿದ್ದಾರೆ ಎಂದು ತಿಳಿಯುತ್ತಿಲ್ಲ ಎಂದು ತಿಳಿಸಿದರು. ಘಟನೆ ಕುರಿತು ಪ್ರತಿಕ್ರಿಯೆಗೆ ಎಸಿಪಿ ಮಂಜುನಾಥ್‌ ಬಾಬು ಅವರನ್ನು ಸಂಪರ್ಕಿಸಿದರೂ ಕರೆ ಸ್ವೀಕರಿಸಲಿಲ್ಲ.

ಆಡಿಯೋದಲ್ಲೇನಿದೆ?
-ರವಿಪೂಜಾರಿ-ರಾಜೀವ್‌ ಶೆಟ್ಟಿ ಇದ್ದಾರಾ?(ತುಳುವಿನಲ್ಲಿ)
-ಯುವಕ-ಆ ರಾಜೀವ್‌ ಶೆಟ್ಟಿ ಅವ್ರು ಇಲ್ಲ.
-ರವಿಪೂಜಾರಿ-ಯಾವಾಗ ಬರ್ತಾರೆ?(ಹಿಂದಿ)
-ಯುವಕ-ಅರ್ಧ ಗಂಟೆಯಲ್ಲಿ ಬರುತ್ತಾರೆ
-ರವಿಪೂಜಾರಿ-ರವಿ ಮಾತನಾಡುತ್ತಿದ್ದೇನೆ. ರವಿ ಪೂಜಾರಿ ಮಾತನಾಡುತ್ತಿದ್ದೇನೆ. ಒಂದು ಕೆಲಸ ಮಾಡು, ಅರ್ಧ ಗಂಟೆಯಲ್ಲಿ ಶೆಟ್ಟಿ ಲಂಚ್‌ ಹೋಂ ಬಂದ್‌ ಮಾಡದಿದ್ದರೆ, ನಮ್ಮ ಯುವಕರು ಬಂದು ನಿಮ್ಮ ಮೇಲೆ ದಾಳಿ ಮಾಡಿ ಗುಂಡು ಹಾರಿಸುತ್ತಾರೆ. ಗ್ರಾಹಕರು, ಮಾಲೀಕರು ಅಂತಾನೂ ನೋಡಲ್ಲ ಪೈರಿಂಗ್‌ ಮಾಡ್ತಾರೆ.

ಏನಾದ್ರು ಹೆಚ್ಚು ಕಡಿಮೆ ಆದ್ರೆ ನಾವು ಹೊಣೆಯಾಗುವುದಿಲ್ಲ.ಅರ್ಧಗಂಟೆಯಲ್ಲಿ ಹೋಟೆಲ್‌ ಬಂದ್‌ ಮಾಡ್ಬೇಕು ಅರ್ಥ ಆಯ್ತಾ? ರವಿ ಪೂಜಾರಿ ಯಾರು ಅಂತಾ ರಾಜೀವ್‌ ಶೆಟ್ಟಿಗೆ ಚೆನ್ನಾಗಿ ಗೊತ್ತು. ಇಡೀ ಕರ್ನಾಟಕಕ್ಕೆ ಗೊತ್ತು. ಅರ್ಥ ಮಾಡಿಕೋ ಆಯ್ತಾ.. ಈ ಸಂದೇಶವನ್ನು ರಾಜೀವ್‌ ಶೆಟ್ಟಿಗೆ ತಿಳಿಸಿಬಿಡು ಅರ್ಥ ಆಯ್ತ. ಹುಷಾರು…

5 ಕೋಟಿ ಬೇಕು: ಇನ್ನು ಮಂಗಳವಾರ ಮಧ್ಯಾಹ್ನ ಕರೆ ಮಾಡಿದ ರವಿಪೂಜಾರಿ ಹೆಸರಿನ ವ್ಯಕ್ತಿ ರಾಜೀವ್‌ ಶೆಟ್ಟಿ ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡು ಸಂದೇಶವೊಂದನ್ನು ಕಳುಹಿಸಿದ್ದಾನೆ. ಹೋಟೆಲ್‌ ಮುಚ್ಚಬಾರದೆಂದರೆ 5 ಕೋಟಿ ರೂ. ಕೊಡಬೇಕು.ಇಲ್ಲವಾದರೆ ದಾರುಣವಾಗಿ ಹತ್ಯೆಗೈಯಬೇಕಾಗುತ್ತದೆ ಎಂದು ಎಚ್ಚರಿಕೆ ಸಂದೇಶ ಕಳುಹಿಸಿದ್ದಾನೆ.

ಡಿಸಿಪಿ ಚೇತನ್‌ ಸಿಂಗ್‌ ರಾಥೋಡ್‌ ಎಸಿಪಿ ಮಂಜುನಾಥ್‌ ವಿರುದ್ಧ ವಿಚಾರಣೆ ನಡೆಸಿ ವರದಿ ನೀಡಿದ್ದು, ಇದನ್ನು ನಗರ ಪೊಲೀಸ್‌ ಆಯುಕ್ತರಾದ ಟಿ.ಸುನೀಲ್‌ ಕುಮಾರ್‌ ಅವರಿಗೆ ತಲುಪಿಸಿದ್ದೇನೆ. ಮುಂದಿನ ಕ್ರಮವನ್ನು ಆಯುಕ್ತರು ನಿರ್ಧರಿಸುತ್ತಾರೆ.
-ಮಾಲಿನಿ ಕೃಷ್ಣಮೂರ್ತಿ, ಹೆಚ್ಚುವರಿ ಪೊಲೀಸ್‌ ಆಯುಕ್ತೆ 

ರವಿಪೂಜಾರಿ ಹೆಸರಿನಲ್ಲಿ ಆಸ್ಪ್ರೆàಲಿಯಾದಿಂದಲೇ ಕರೆ ಬಂದಿದೆ ಎಂದು ಹೇಳಲು ಸಾಧ್ಯವಿಲ್ಲ. ಸ್ಥಳೀಯರೇ ಇಂಟರ್‌ನೆಟ್‌ ಕಾಲ್‌ ಮಾಡಿರಬಹುದು. ಎಸಿಪಿ ಹಲ್ಲೆ ನಡೆಸಿರುವ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ. ತಪ್ಪಿದರೆ ರಾಜೀವ್‌ ಶೆಟ್ಟಿ ಮೇಲೆ ಕ್ರಮಕೈಗೊಳ್ಳಲಿ. ಎಸಿಪಿ ಅವರಿಗೆ ತಕ್ಕಶಾಸ್ತಿ ಆಗಲೇ ಬೇಕು. ಹಲ್ಲೆ ಖಂಡಿಸಿ ಮಾನವ ಆಯೋಗಕ್ಕೂ ದೂರು ನೀಡುತ್ತೇವೆ. ಒಂದು ವೇಳೆ ನ್ಯಾಯ ಸಿಗದಿದ್ದರೆ ಕಾನೂನು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ.
-ಚಂದ್ರಶೇಖರ್‌ ಹೆಬ್ಟಾರ ಬಿ., ಬೃಹತ್‌ ಬೆಂಗಳೂರು ಹೋಟೆಲ್‌ಗ‌ಳ ಸಂಘದ ಅಧ್ಯಕ್ಷ 

Advertisement

Udayavani is now on Telegram. Click here to join our channel and stay updated with the latest news.

Next