Advertisement

ಕಾಲ್‌ ಮಾಡ್ತಾರೆ.. ಯುವತಿಯರೇ ಹುಷಾರ್‌!

06:00 AM Dec 09, 2018 | Team Udayavani |

ಬೆಂಗಳೂರು: ಉದ್ಯೋಗ ಆಧಾರಿತ ವೆಬ್‌ಸೈಟ್‌ಗಳಲ್ಲಿ ಬಯೋಡಾಟಾ, ಫೇಸ್‌ಬುಕ್‌ ಖಾತೆ ಸೇರಿ ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲಿ ಮೊಬೈಲ್‌ ನಂಬರ್‌ಗಳನ್ನು ನಮೂದಿಸುವ ಮುನ್ನ ಯುವತಿಯರು ಒಮ್ಮೆ ಯೋಚಿಸುವುದು ಒಳಿತು!

Advertisement

ಹೌದು. ಸಾಮಾಜಿಕ ಜಾಲತಾಣಗಳು ಹಾಗೂ ವೆಬ್‌ಸೈಟ್‌ಗಳಲ್ಲಿ ಯುವತಿಯರ ಮೊಬೈಲ್‌ ಸಂಖ್ಯೆ ಪಡೆಯುವ ದುಷ್ಕರ್ಮಿಗಳು, ಬಳಿಕ ಲೈಂಗಿಕ ಕಿರುಕುಳ ನೀಡುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳು ಹಾಗೂ ಸಿಐಡಿ ಸೈಬರ್‌ ಠಾಣೆ, ನಗರ ಸೈಬರ್‌ ಠಾಣೆಯಲ್ಲಿ ನೊಂದ ಯುವತಿಯರು ಈ ಕುರಿತು ದೂರು ದಾಖಲಿಸುತ್ತಿದ್ದಾರೆ. ದಿನವೊಂದಕ್ಕೆ ಕನಿಷ್ಠ ಒಬ್ಬರಾದರೂ ಈ ರೀತಿಯ ದೂರು ದಾಖಲಿಸುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ದೂರವಾಣಿ ನಂಬರ್‌ ಪಡೆದುಕೊಳ್ಳುವ ಅಪರಿಚಿತ ದುಷ್ಕರ್ಮಿಗಳು ಅಶ್ಲೀಲ ಸಂದೇಶಗಳನ್ನು ಕಳುಹಿಸುವುದು, ಅಸಭ್ಯವಾಗಿ ಮಾತನಾಡುವುದು, ಕೆಲವೊಮ್ಮೆ ಕೆಲಸದ ಆಮಿಷವೊಡ್ಡಿ ಲೈಂಗಿಕ ಕ್ರಿಯೆಗೂ ಆಹ್ವಾನಿಸುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಅಷ್ಟೇ ಅಲ್ಲ, ಹಣ ಪಡೆದು ವಂಚಿಸುತ್ತಿರುವ ಪ್ರಕರಣಗಳೂ ಹೆಚ್ಚುತ್ತಿವೆ.

ಹೀಗೊಂದು ಪ್ರಕರಣ:
ಇಂಜಿನಿಯರಿಂಗ್‌ ಪದವಿ ಪೂರ್ಣಗೊಳಿಸಿ ಕೆಲಸದ ನಿರೀಕ್ಷೆಯಲ್ಲಿದ್ದ ಚಿಕ್ಕಮಗಳೂರು ಮೂಲದ ಯುವತಿಯೊಬ್ಬರು ಉದ್ಯೋಗ ಆಧಾರಿತ ವೆಬ್‌ಸೈಟ್‌ನಲ್ಲಿ ಸ್ವ- ವಿವರ ಅಪ್‌ಲೋಡ್‌ ಮಾಡಿದ್ದರು. ಇದರಲ್ಲಿದ್ದ ನಂಬರ್‌ ಪಡೆದ ಅಪರಿಚಿತ ಯುವಕನೊಬ್ಬನಿಂದ ಸತತ ಐದು ತಿಂಗಳು ಲೈಂಗಿಕ ಕಿರುಕುಳ ಅನುಭವಿಸಿರುವ ಘಟನೆ ಜೆ.ಪಿ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಾಫ್ಟ್ವೇರ್‌ ಇಂಜಿನಿಯರ್‌ ಆಗಿರುವ ಸಂತ್ರಸ್ತೆ ಯುವತಿಯೊಬ್ಬರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು, ಆರೋಪಿ ಬಳಸುತ್ತಿದ್ದ ಮೊಬೈಲ್‌ ನಂಬರ್‌ನ ಸಿಡಿಆರ್‌ ಮಾಹಿತಿ ಪಡೆದ ಪೊಲೀಸರು ಆಕೆಗೆ ಕಿರುಕುಳ ನೀಡುತ್ತಿದ್ದ ಕಿಶೋರ್‌ ಅಲಿಯಾಸ್‌ ಅಭಿಷೇಕ್‌ (32) ಎಂಬಾತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

Advertisement

ಆರೋಪಿ ಬಂಧನದ ಬಳಿಕ ಆತ ಮತ್ತಷ್ಟು ಯುವತಿಯರಿಗೆ ಇದೇ ರೀತಿ ಲೈಂಗಿಕ ಕಿರುಕುಳ ನೀಡಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಕೆಲವರು ತಮಗಾದ ಕೆಟ್ಟ ಅನುಭವವನ್ನು ಹೇಳಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೆಕ್ಸ್‌ಗೆ ಒಪ್ಪಿದರೆ ಕೆಲಸ ಗ್ಯಾರಂಟಿ ಎಂದಿದ್ದ ಖದೀಮ
ಇಂಜಿನಿಯರಿಂಗ್‌ ಪೂರ್ಣಗೊಳಿಸಿದ ಚಿಕ್ಕಮಗಳೂರಿನ ಸಂತ್ರಸ್ತ ಯುವತಿ ಕಳೆದ ಐದು ತಿಂಗಳ ಹಿಂದೆ ಕೆಲಸಕ್ಕಾಗಿ ಉದ್ಯೋಗ ಆಧರಿತ ವೆಬ್‌ಸೈಟ್‌ನಲ್ಲಿ ಸ್ವ-ವಿವರ (ರೆಸ್ಯೂಮೆ) ಅಪ್‌ಲೋಡ್‌ ಮಾಡಿದ್ದರು. ಕೆಲ ದಿನಗಳ ಬಳಿಕ ದೂರವಾಣಿ ಕರೆ ಮಾಡಿದ್ದ ಕಿಶೋರ್‌ ತಾನು ಮಂಗಳೂರಿನ ಇನ್‌ಪೋಸಿಸ್‌ ಸಂಸ್ಥೆಯಲ್ಲಿ ಜ್ಯೂನಿಯರ್‌ ಎಚ್‌.ಆರ್‌ ಎಂದು ಪರಿಚಯಿಸಿಕೊಂಡಿದ್ದ.ಬಳಿಕ ಕ್ವಿಕ್ಕರ್‌ ಡಾಟ್‌ ಕಾಮ್‌ನಲ್ಲಿ ನಿಮ್ಮ ರೆಸ್ಯೂಮೆ ಪಡೆದುಕೊಂಡಿದ್ದು, ನಿಮ್ಮ ಹೆಸರು ಶಾರ್ಟ್‌ಲಿಸ್ಟ್‌ ಮಾಡಲಾಗಿದೆ. ಹೀಗಾಗಿ 1800 ರೂ.ಗಳನ್ನು ಶುಲ್ಕ ಪಾವತಿಸಬೇಕು ಎಂದು ಹೇಳಿದ್ದ. ಇದನ್ನು ನಂಬಿದ್ದ ಯುವತಿ ಆರೋಪಿ ನೀಡಿದ್ದ ಅಕೌಂಟ್‌ ನಂಬರ್‌ಗೆ ಹಣ ಪಾವತಿಸಿದ್ದರು.
ಇದಾದ ಕೆಲವೇ ದಿನಗಳಲ್ಲಿ ಮಧ್ಯರಾತ್ರಿ ದೂರವಾಣಿ ಕರೆ ಮಾಡಿದ್ದ ಕಿಶೋರ್‌, ಅಶ್ಲೀಲವಾಗಿ ಮಾತನಾಡಿದ್ದಾನೆ. 

ಜತೆಗೆ, ಆನ್‌ಲೈನ್‌ ಸೆಕ್ಸ್‌ ಬಗ್ಗೆಯೂ ಮಾತನಾಡಿ ಅಸಭ್ಯವಾಗಿ ವರ್ತಿಸಿದ್ದಾನೆ. ತನ್ನನ್ನು ಭೇಟಿಯಾಗಿ ಇಷ್ಟ ಪೂರೈಸಿದರೆ ಕೆಲಸ ಪಕ್ಕಾ ಎಂದಿದ್ದ. ಇದರಿಂದ ನೊಂದ ಯುವತಿ ಕಿಶೋರ್‌ ನಂಬರ್‌ ಬ್ಲಾಕ್‌ ಮಾಡಿದ್ದರು. ಕೆಲದಿನಗಳ ಬಳಿಕ ಮತ್ತೂಂದು ನಂಬರ್‌ನಿಂದ ಕರೆ ಮಾಡಿದ್ದ ಆರೋಪಿ ಜತೆ ಮಾತನಾಡಲು ಯುವತಿ ನಿರಾಕರಿಸಿದ್ದಾರೆ. ಈ ವೇಳೆ ಆತ ವ್ಯಾಟ್ಸ್‌ಆ್ಯಪ್‌ನಲ್ಲಿ ಅಶ್ಲೀಲ ಚಿತ್ರ ಸಂದೇಶಗಳನ್ನು ಕಳುಹಿಸಿದ್ದಾನೆ. ಇದರಿಂದ ನೊಂದ ಯುವತಿ, ಸದ್ಯದಲ್ಲೇ ನಾನು ವಿವಾಹವಾಗಲಿದ್ದು, ದಯವಿಟ್ಟು ಈ ರೀತಿ ಕಿರುಕುಳ ನೀಡಬೇಡಿ ಎಂದು ಮನವಿ ಮಾಡಿಕೊಂಡಿದ್ದಳು. ಆದರೂ, ಕಿಶೋರ್‌ ತನ್ನ ಚಾಳಿ ಮುಂದುವರಿಸಿದ್ದ. ಇದರಿಂದ ಪೊಲೀಸರಿಗೆ ದೂರು ನೀಡುವುದಾಗಿ ತಿಳಿಸಿದ್ದಕ್ಕೆ ಜೀವ ಬೆದರಿಕೆ ಒಡ್ಡಿದ್ದ.

ಕಿಶೋರ್‌ ಕಿರುಕುಳದಿಂದ ಬೇಸತ್ತು ಯುವತಿ, ದೂರವಾಣಿ ಸಂಭಾಷಣೆ, ಆತ ಕಳುಹಿಸಿದ್ದ ಅಶ್ಲೀಲ ಸಂದೇಶಗಳ ಸಮೇತ ದೂರು ನೀಡಿದ ಕೂಡಲೇ ಕ್ರಮ ವಹಿಸಿ ಹನುಮಂತನಗರದಲ್ಲಿ ವಾಸವಿದ್ದ ಆತನನ್ನು ಬಂಧಿಸಲಾಗಿದೆ. ಪದವಿ ಪೂರ್ಣಗೊಳಿಸಿರುವ ಕಿಶೋರ್‌, ಸ್ವಿಗ್ಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಉದ್ಯೋಗ ಆಧಾರಿತ ವೆಬ್‌ಸೈಟ್‌ಗಳಲ್ಲಿ ಯುವತಿಯರ ವಿವರ ಕದಿಯುತ್ತಿದ್ದ ಎಂದು ತಿಳಿದಿದ್ದಾಗಿ ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next