Advertisement

ಹಿಂದೂಗಳಲ್ಲಿನ ಹಿಂಜರಿಕೆ ಭಾವನೆ ತೊಡೆದು ಹಾಕಲು ಕರೆ

03:09 PM Sep 02, 2017 | Team Udayavani |

ಮೂಡಿಗೆರೆ: ಹಿಂದೂ ಧರ್ಮ ಒಂದು ಜೀವನ ಪದ್ದತಿ. ಎಲ್ಲರನ್ನೂ ಒಪ್ಪಿಕೊಳ್ಳುವ ಹಾಗೂ ಅಪ್ಪಿಕೊಳ್ಳುವ ವಿಶ್ವದಲ್ಲಿನ ಏಕೈಕ ಧರ್ಮವಾಗಿದೆ ಎಂದು ಆರ್‌ಎಸ್‌ಎಸ್‌ ಪ್ರಮುಖ್‌ ಡಾ| ಕಲ್ಲಡ್ಕ ಪ್ರಭಾಕರ್‌ ಭಟ್‌ ತಿಳಿಸಿದರು.

Advertisement

ಅವರು ಪಟ್ಟಣದ ಸಾರ್ವಜನಿಕ ಮಹಾ ಗಣಪತಿ ಸೇವಾ ಸಮಿತಿ ಹಮ್ಮಿಕೊಂಡಿದ್ದ ಏಕದಶ ರುದ್ರ ಹೋಮ ಪೂಜೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು. ಸಾವಿರಾರು ವರ್ಷಗಳಿಂದ ನಡೆದ ಆಕ್ರಮಣ ಮತ್ತು ಒಗ್ಗಟ್ಟಿನ ಕೊರತೆಯಿಂದ ಇಂದು ಹಿಂದೂಗಳಲ್ಲಿ ಉಂಟಾಗಿರುವ ಹಿಂಜರಿಕೆಯ ಭಾವನೆಯನ್ನು ಮೊದಲು ತೊಡೆದುಹಾಕಬೇಕು. ನಮ್ಮಲ್ಲಿನ ಸ್ವಾಭಿಮಾನ ಬಿಟ್ಟಿದ್ದರಿಂದ ಅಖಂಡ ಭಾರತದ ಕನಸನ್ನು ಮರೆತು ದೇಶ ಒಡೆಯುವ ಹಂತಕ್ಕೆ ತಲುಪಿದೆ ಎಂದ ಅವರು, ಜಗತ್ತಿನಲ್ಲಿ ಹಿಂದೂ ಧರ್ಮ ಬಿಟ್ಟರೆ ಬೇರೆ ಯಾವುದೇ ಧರ್ಮ ಸರ್ವೇಜನ ಸುಖೀನೋಭವಂತು ಎಂಬುದನ್ನು ಹೇಳಿಕೊಟ್ಟಿಲ್ಲ. ತಾಯಿಯನ್ನು ಪೂಜಿಸುವ ಏಕೈಕ ಧರ್ಮವಿದ್ದರೆ ಅದು ನಮ್ಮದು ಮಾತ್ರ. ಈ ಕಾರಣದಿಂದಲೆ ನವರಾತ್ರಿ ಹೆಸರಿನಲ್ಲಿ
ತಾಯಿ ಅವತಾರವಾದ ದುರ್ಗಿಯನ್ನು ಪೂಜೆ ಮಾಡುವ ಮೂಲಕ ಅಮ್ಮನ ಸೇವೆ, ತ್ಯಾಗ, ಸಮರ್ಪಣೆಗಳನ್ನು ನೆನಪಿಸಿಕೊಳ್ಳಲಾಗುತ್ತದೆ ಎಂದರು.

ಬೇರೆ ಧರ್ಮದವರು ತಮ್ಮ ಮತವನ್ನು ಅರೆದು ಕುಡಿದಿರುತ್ತಾರೆ. ಆದರೆ ನಾವು ನಮ್ಮ ಧರ್ಮಗ್ರಂಥಗಳು ಯಾವುದೆಂಬುದನ್ನೇ ಮರೆತುಬಿಟ್ಟಿದ್ದೇವೆ. ರಾಮಾಯಣ ಒಂದು ಜೀವನ ದರ್ಶನ. ಇದನ್ನು ತಾಯಂದಿರು ಮಕ್ಕಳಿಗೆ ಕಲಿಸಿಕೊಡಬೇಕು. ಶತಮಾನಗಳ ಹಿಂದೆಯೆ ಆರ್ಯಭಟ, ವರಹಾಮಿಹೀರಾ ಮುಂತಾದವರು ಭೂಮಿ ಸೂರ್ಯನ ಸುತ್ತ ಸುತ್ತುತ್ತದೆ ಎಂಬುದನ್ನು ಜಗತ್ತಿಗೆ ಸಾರಿದವರು. ಇಂತಹ ಧಾರ್ಮಿಕತೆಗೆ ಇಂದು ಮತಾಂತರ ಎಂಬ ಪೆಡಂಭೂತ ಲಗ್ಗೆ ಇಟ್ಟಿದ್ದು, ನಮ್ಮ ಹೆಣ್ಣು ಮಕ್ಕಳನ್ನು ಮತಾಂತರಿಸಿ ಭಯೋತ್ಪಾಧನೆಗೆ ಕಳುಹಿಸಿಕೊಡಲಾಗುತ್ತಿದೆ. ಇದಕ್ಕಾಗಿ ಕೇರಳದಲ್ಲಿ ತರಬೇತಿ ಕೇಂದ್ರ ತೆರೆಯಲಾಗಿದೆ ಎಂದರು.

ಕಳೆದ 10 ವರ್ಷಗಳಿಂದ ತಮ್ಮ ಶಾಲೆಯ ಮಕ್ಕಳಿಗೆ ಊಟಕ್ಕಾಗಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ ಬರುತ್ತಿದ್ದ ಸಹಾಯಧನವನ್ನು ಈಗಿನ ಸಿದ್ದರಾಮಯ್ಯ ಸರಕಾರ ತಡೆ ಹಿಡಿದಿದ್ದು, ಅದೇ ಅನ್ಯ ಧರ್ಮಿಯರಿಗೆ ಕೈಎತ್ತಿ ನೀಡುತ್ತಿದೆ. ಆದರೆ ಸಮಾಜ ಇಂದು ಭಿಕ್ಷೆಯ ಮೂಲಕ ಲಕ್ಷಾಂತರ ಹಣವನ್ನು ಶಾಲಾ ಮಕ್ಕಳಿಗೆ ನೀಡಿ, ಅನ್ನ ನೀಡಲು ಸಹಕರಿಸಿದ್ದು, ಅನ್ನ ಕಿತ್ತುಕೊಂಡ ಸರಕಾರಕ್ಕೆ ಧಿಕ್ಕಾರವಿರಲಿ ಎಂದು ಆಕ್ರೋಶವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಅವರನ್ನು ಹ್ಯಾಂಡ್‌ಪೋಸ್ಟ್‌ ಸರ್ಕಲ್‌ನಿಂದ ಪಟ್ಟಣದ ಕೆ.ಎಂ. ರಸ್ತೆ ಮೂಲಕ ಸಾರ್ವಜನಿಕ ಗಣಪತಿ ಪೆಂಡಾಲ್‌ಗೆ ಮೆರವಣಿಗೆ ಮೂಲಕ ಕರೆತರಲಾಯಿತು.  ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯ ಎಂ.ಕೆ.ಪ್ರಾಣೇಶ್‌, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ,  ಜಿ.ಪಂ. ಅಧ್ಯಕ್ಷೆ  ಚೈತ್ರಶ್ರೀ, ತಾ.ಪಂ. ಅಧ್ಯಕ್ಷ ಕೆ.ಸಿ.ರತನ್‌, ಖಾಂಡ್ಯ ಪ್ರವೀಣ, ರಘು ಜನ್ನಾಪುರ ಮತ್ತಿತತರು ಉಪಸ್ಥಿತರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next