Advertisement
ಉಡುಪಿ ಜಿಲ್ಲೆಯ ಮಣಿಪಾಲ ನಿವಾಸಿ ಆದಿತ್ಯ ರಾವ್ (34) ಬಂಧಿತ ಆರೋಪಿ. ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸಕ್ಕೆ ಅರ್ಜಿ ಹಾಕಿದ್ದು, ಕೆಲಸ ಸಿಗದಿರುವ ಹಿನ್ನೆಲೆಯಲ್ಲಿ ನೊಂದುಕೊಂಡಿದ್ದ. ಬಳಿಕ ಟಾಯ್ಲೆಟ್‌ಗೆ ಹೋಗುವ ವೇಳೆ ಲಗೇಜ್ ಇಡುವ ಸ್ಥಳದಲ್ಲಿ ಶುಲ್ಕ ಕೇಳಲಾಗಿತ್ತು.
Related Articles
Advertisement
ಆ.20ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಕರೆ ಮಾಡಿ ವಿಮಾನ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಬಾಂಬ್ ಇಟ್ಟಿದ್ದೇನೆ ಎಂದಿದ್ದ. ಕೆಲ ಹೊತ್ತಿನ ಬಳಿಕ ಪಾರ್ಕಿಂಗ್‌ಗೆ ಹೋಗುವ ಸ್ಥಳದಲ್ಲಿ ಬಾಂಬ್ ಇಟ್ಟಿದ್ದು, 11 ಗಂಟೆಗೆ ಸ್ಫೋಟಗೊಳ್ಳಲಿದೆ ಎಂದು ಬೆದರಿಕೆ ಹಾಕಿದ್ದ.
ಆ.27ರಂದು ತನ್ನ ಮೊಬೈಲ್ ನಂಬರ್‌ನಿಂದಲೇ ಏರ್‌ಏಷ್ಯಾ ಕೌಂಟರ್ ನಂಬರ್‌ಗೆ ಫೋನ್ ಮಾಡಿ ಕೊಚ್ಚಿ ಹಾಗೂ ಹೈದರಾಬಾದ್ ವಿಮಾನದಲ್ಲಿ ಬಾಂಬ್ ಇಟ್ಟಿದ್ದೇನೆ ಎಂದಿದ್ದ. ಕೆಲ ಹೊತ್ತಿನ ಬಳಿಕ ಮತ್ತೂಮ್ಮೆ ಕರೆ ಮಾಡಿ ಸ್ಫೋಟಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದ ಎಂದು ಪೊಲೀಸರು ತಿಳಿಸಿದರು.
ಲಗೇಜ್ ಇಡೋಕೆ ದುಡ್ಡು!: ಕೆಲ ದಿನಗಳ ಹಿಂದೆ ರೈಲು ನಿಲ್ದಾಣಕ್ಕೆ ಬಂದಿದ್ದ ಆರೋಪಿ ಶೌಚಾಲಯಕ್ಕೆ ಹೋಗಲು ತನ್ನ ಬ್ಯಾಗ್‌ನ್ನು ಲಗೇಜ್ ರೂಮ್‌ನಲ್ಲಿ ಇಡಲು ಹೋಗಿದ್ದ. ಈ ವೇಳೆ ಕೊಠಡಿ ಸಿಬ್ಬಂದಿ ಹಣ ಪಾವತಿಸಬೇಕೆಂದು ಹೇಳಿದ್ದರು. ಇದಕ್ಕೆ ಆಕ್ಷೇಪಿಸಿದ ಆದಿತ್ಯ ಕೇವಲ 10 ನಿಮಿಷಕ್ಕೆ ಹತ್ತಾರು ರೂ. ಪಾವತಿಸಬೇಕಾ ಎಂದು ಪ್ರಶ್ನಿಸಿದಲ್ಲದೆ ಗಲಾಟೆ ಮಾಡಿಕೊಂಡಿದ್ದ.
ಇದರಿಂದ ಅಸಮಾಧಾನಗೊಂಡಿದ್ದ ಆರೋಪಿ ಆ.27ರಂದು ರೈಲ್ವೆ ನಿಲ್ದಾಣದ ನಿಯಂತ್ರಣ ಕೊಠಡಿಗೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಕರೆ ಮಾಡಿ ನಿಲ್ದಾಣದ ಪಾರ್ಸ್‌ಲ್ ಕೊಠಡಿಗೆ ಬಾಂಬ್ ಇಟ್ಟಿದ್ದೇನೆ. ಇನ್ನು ಕೆಲವೇ ಕ್ಷಣಗಳಲ್ಲಿ ಸ್ಫೋಟಗೊಳ್ಳಲಿದೆ ಎಂದು ಕರೆ ಸ್ಥಗಿತಗೊಳಿಸಿದ್ದ ಎಂದು ಪೊಲೀಸರು ತಿಳಿಸಿದರು.
ಕಳ್ಳತನ ಆರೋಪ: ಇದಕ್ಕೂ ಮೊದಲು ಆರೋಪಿ ಆದಿತ್ಯ ಜಯನಗರದ ಖಾಸಗಿ ಇನ್‌ಶ್ಯೂರೆನ್ಸ್ ಕಂಪನಿಯಲ್ಲಿ ಸೆಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದ. ಈ ವೇಳೆ ಸಹೋದ್ಯೋಗಿಯ ಲ್ಯಾಟ್‌ಟಾಪ್ ಕಳವು ಮಾಡಿ ಸಿಕ್ಕಿ ಬಿದ್ದಿದ್ದು, ಕೆಲಸದಿಂದ ವಜಾ ಮಾಡಿದ್ದರು. ಈ ಸಂಬಂಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮತ್ತೂಂದೆಡೆ ತಾನೂ ವಾಸವಾಗಿದ್ದ ಪಿಜಿಯೊಂದರಲ್ಲಿ ಲ್ಯಾಪ್‌ಟಾಪ್‌ಗ್ಳನ್ನು ಕಳವು ಮಾಡಿದ್ದ. ಈ ಸಂಬಂಧ ಸುದ್ದಗುಂಟೆ ಪಾಳ್ಯ ಪೊಲೀಸರು ಕಳವು ಪ್ರಕರಣ ದಾಖಲಿಸಿ ಬಂಧಿಸಿದ್ದರು.
ನನಗೆ ಬೇಕಿತ್ತು ಮಾಡಿದ್ದೇನೆ ಅಷ್ಟೇ!: ಆರೋಪಿ ಆದಿತ್ಯ ವಿಚಾರಣೆಗೆ ಸಹಕಾರ ನೀಡುತ್ತಿಲ್ಲ. ಎರಡೆರಡು ಪದವಿ ಪಡೆದಿರುವ ಈತ ಸುಲಲಿತವಾಗಿ ಇಂಗ್ಲಿಷ್ ಮಾತನಾಡುತ್ತಾನೆ. ಕಳವು, ಹುಸಿ ಬಾಂಬ್ ಕರೆ ಕುರಿತು ಪ್ರಶ್ನಿಸಿದರೆ, ನನ್ನ ಜೀವನಕ್ಕೆ ಬೇಕಿತ್ತು ಅದಕ್ಕೆ ಲ್ಯಾಪ್‌ಟಾಪ್ ಕಳವು ಮಾಡಿ ಮಾರಾಟ ಮಾಡಿದ್ದೆ. ಕೆಲಸ ಕೊಡದಕ್ಕೆ, ಅವಮಾನ ಮಾಡಿದಕ್ಕೆ ವಿಮಾನ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಕ್ಕೆ ಬೆದರಿಕೆ ಕರೆ ಮಾಡಿದ್ದೇನೆ ಎಂದಷ್ಟೇ ಹೇಳುತ್ತಾನೆ. ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಾನೆ ಎಂದು ಪೊಲೀಸರು ತಿಳಿಸಿದರು.