Advertisement

ವರ್ಷವಾದರೂ ಸೇವೆಗೆ ಸಿಗದ ಕಾಲ್‌ ಸೆಂಟರ್‌

12:16 PM Jun 01, 2017 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರಿನ ಜನತೆ ವಿವಿಧ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದ ದೂರುಗಳಿಗೆ ಒಂದೇ ವೇದಿಕೆಯಲ್ಲಿ ಪರಿಹಾರಿ ಕೊಡಿಸಲು ಬಿಬಿಎಂಪಿಯಿಂದ ಉದ್ದೇಶಿಸಿರುವ ಅತ್ಯಾಧುನಿಕ ಕಾಲ್‌ ಸೆಂಟರ್‌ ಸ್ಥಾಪನೆ ಕಾರ್ಯ ಆರಂಭವಾಗಿ ವರ್ಷ ಕಳೆದರೂ ದೂರು ಸ್ವೀಕಾರ ಕಾರ್ಯ ಇನ್ನೂ ಆರಂಭವಾಗಿಲ್ಲ. ಪರಿಣಾಮ ಮಳೆಗಾಲದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ದೂರು ನೀಡಲು ನಾಗರಿಕರು ಪರದಾಡಬೇಕಿದೆ.

Advertisement

ನಗರದ ಸ್ಥಳೀಯ ಸಂಸ್ಥೆಗಳಾದ ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ, ಬಿಡಿಎ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ದೂರುಗಳನ್ನು ಒಂದೇ ಕಡೆ ಸ್ವೀಕರಿಸಲು ಅತ್ಯಾಧುನಿಕ ಕಾಲ್‌ ಸೆಂಟರ್‌ ನಿರ್ಮಿಸಲು ಪಾಲಿಕೆ ಮುಂದಾಗಿತ್ತು. ಆ ಹಿನ್ನೆಲೆಯಲ್ಲಿ ಪಾಲಿಕೆ ಕೇಂದ್ರ ಕಚೇರಿ ಕಟ್ಟಡಕ್ಕೆ ಹೊಂದಿಕೊಂಡಂತಿರುವ ಕಟ್ಟಡದ 6ನೇ ಮಹಡಿಯಲ್ಲಿ 4.5 ಕೋಟಿ ವೆಚ್ಚದಲ್ಲಿ ಕಾಲ್‌ ಸೆಂಟರ್‌ ನಿರ್ಮಿಸುವ ಕಾರ್ಯಕ್ಕೆ ಕಳೆದ ವರ್ಷ ಮೇ ತಿಂಗಳಲ್ಲಿ ಈ ಹಿಂದಿನ ಮೇಯರ್‌ ಚಾಲನೆ ನೀಡಿದ್ದರು.

ಕಾಲ್‌ಸೆಂಟರ್‌ ಯೋಜನೆಗೆ ಚಾಲನೆ ನೀಡಿದ ವೇಳೆ ಹಿಂದಿನ ಮೇಯರ್‌ ಮಂಜುನಾಥ ರೆಡ್ಡಿ, ನಾಲ್ಕು ತಿಂಗಗಳಲ್ಲಿ ಕಾಲ್‌ ಸೆಂಟರ್‌ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರಿಗೆ ಸೇವೆ ಆರಂಭಿಸಲಿದೆ ಎಂಬ ಭರವಸೆ ನೀಡಿದ್ದರು. ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪಾಲಿಕೆಯ ಮಹತ್ವಾಕಾಂಕ್ಷಿ ಯೋಜನೆ ವರ್ಷ ಕಳೆದರೂ ಕಾರ್ಯಾರಂಭ ಮಾಡದೆ ನೆನೆಗುದಿಗೆ ಬಿದ್ದಂತಾಗಿದೆ.

ಈಗಾಗಲೇ ಅಗತ್ಯ ಉಪಕರಣಗಳು, ಹವಾನಿಯಂತ್ರಿತ ವ್ಯವಸ್ಥೆ, ಕಂಪ್ಯೂಟರ್‌ಗಳ ಖರೀದಿ, ಒಳಾಂಗಣ ವಿನ್ಯಾಸ ಸೇರಿದಂತೆ ಹಲವು ಕಾರ್ಯಗಳು ಪೂರ್ಣಗೊಂಡು 5 ತಿಂಗಳು ಕಳೆದಿದೆ. ಆದರೆ, ಕಾಲ್‌ಸೆಂಟರ್‌ ಸೇವೆ ಒದಗಿಸಲು ಅಗತ್ಯವಾದ ಸಾಫ್ಟ್ವೇರ್‌ ಅಳವಡಿಕೆ ಕಾರ್ಯ ವಿಳಂಬವಾಗಿರುವುದರಿಂದ ಸೇವೆ ಆರಂಭಿಸಲು ಸಾಧ್ಯವಾಗುತ್ತಿಲ್ಲ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. 

ಸಾಫ್ಟ್ವೇರ್‌ ಅಳವಡಿಕೆ ವಿಳಂಬ!: ಪಾಲಿಕೆಯಿಂದ ನಿರ್ಮಿಸಲಾಗಿರುವ ಕಾಲ್‌ಸೆಂಟರ್‌ ನಿರ್ವಹಣೆಯನ್ನು ಹೊರಗುತ್ತಿಗೆ ನೀಡಲು ಪಾಲಿಕೆ ತೀರ್ಮಾನಿಸಿದ್ದು, ಅದರ ಹಿನ್ನೆಲೆಯಲ್ಲಿ ಟೆಂಡರ್‌ ಪ್ರಕ್ರಿಯೆ ನಡೆಸಲು ಪೂರ್ವ ಸಿದ್ಧತೆ ನಡೆಸಿದೆ. ಆದರೆ, ಕಾಲ್‌ಸೆಂಟರ್‌ ಸೇವೆ ಒದಗಿಸಲು ಅವಶ್ಯಕವಾದ ಸಾಫ್ಟ್ವೇರ್‌ ಅಳವಡಿಕೆ ಕಾರ್ಯಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಒಪ್ಪಿಗೆ ದೊರೆಯದ ಹಿನ್ನೆಲೆಯಲ್ಲಿ ಕಾಲ್‌ಸೆಂಟರ್‌ ಕಾರ್ಯಾರಂಭ ವಿಳಂಬವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. 

Advertisement

ಕಾಲ್‌ಸೆಂಟರ್‌ ಕಾರ್ಯನಿರ್ವಹಣೆಗೆ ಹೇಗೆ?: ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ, ಬಿಡಿಎ ಹೀಗೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕುಂದು ಕೊರತೆಗಳನ್ನು ಸದ್ಯ ಜನರು ಆಯಾ ಇಲಾಖೆಯ ನಿಯಂತ್ರಣ ಕೊಠಡಿಗೆ ಕರೆ ಮಾಡಿ ದೂರು ನೀಡುತ್ತಿದ್ದಾರೆ. ಆದರೆ, ಪಾಲಿಕೆಯಿಂದ ನಿರ್ಮಿಸುವ ಕಾಲ್‌ ಸೆಂಟರ್‌ಗೆ ಕರೆ ಮಾಡಿದರೆ, ನಾಗರಿಕರ ದೂರುಗಳನ್ನು ಆಲಿಸಲಿರುವ ಸಿಬ್ಬಂದಿ, ನಂತರ ಅವುಗಳನ್ನು ಆಯಾ ಇಲಾಖೆ ಅಧಿಕಾರಿಗಳಿಗೆ ರವಾನೆ ಮಾಡಲಿದ್ದಾರೆ. 

ಇದರೊಂದಿಗೆ ನಗರದಲ್ಲಿ ಎಷ್ಟು ಮಳೆ ಬಂದಿದೆ, ಮಳೆಯ ಕುರಿತು ಮುನ್ಸೂಚನೆ ಸೇರಿದಂತೆ ಹಲವು ಮಾಹಿತಿಗಳು ನಿರಂತರವಾಗಿ ಸೆಂಟರ್‌ನಲ್ಲಿ ಲಭ್ಯವಾಗಲಿವೆ. ಆ ಮೂಲಕ ನಗರದಲ್ಲಿ ಮಳೆ ಅನಾಹುತ ಸಂಭವಿಸುವ ಪ್ರದೇಶಗಳಲ್ಲಿನ ಜನತೆಗೆ ಮುನ್ನೆಚ್ಚರಿಕೆ ನೀಡುವ ಜತೆಗೆ, ಪಾಲಿಕೆಯ ವ್ಯಾಪ್ತಿಯಲ್ಲಿ ರಸ್ತೆಗಳು, ಘನತ್ಯಾಜ್ಯ ನಿರ್ವಹಣೆ ಸೇರಿದಂತೆ ಯೋಜನೆಗಳ ಕುರಿತು ಸಲಹೆ ಹಾಗೂ ಜಾಗೃತಿ ಮೂಡಿಸಲು ಕಾಲ್‌ಸೆಂಟರ್‌ ಬಳಸಿಕೊಳ್ಳಬಹುದಾಗಿದೆ. 

ನಿರ್ವಹಣಾ ಕೊಠಡಿಗಳು ರದ್ದು?: ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ನಿರ್ಮಾಣವಾಗುತ್ತಿರುವ ಹೊಸ ಅತ್ಯಾಧುನಿಕ ಕಾಲ್‌ ಸೆಂಟರ್‌ ಕಾರ್ಯಾರಂಭ ಮಾಡಿದ ನಂತರ ಪಾಲಿಕೆಯ ಎಂಟು ವಲಯಗಳಲ್ಲಿನ ನಿರ್ವಹಣಾ ಕೊಠಡಿಗಳು ರದ್ದಾಗಲಿವೆ. ಪಾಲಿಕೆಯ ಎಲ್ಲ 198 ವಾರ್ಡ್‌ಗಳ ಸಮಸ್ಯೆಗಳನ್ನು ಹೊಸ ಕಾಲ್‌ಸೆಂಟರ್‌ನಿಂದಲೇ ಆಲಿಸುವ ವ್ಯವಸ್ಥೆ ಜಾರಿಗೆ ಬರಲಿದೆ.

ಪಾಲಿಕೆಯಿಂದ ನಿರ್ಮಿಸುತ್ತಿರುವ ಕಾಲ್‌ಸೆಂಟರ್‌ನಿಂದ ಶೀಘ್ರ ಆರಂಭವಾಗುವುದರಿಂದ ಮಳೆಗಾಲದಲ್ಲಿ ಎದುರಾಗುವ ಅನಾಹುತಗಳನ್ನು ನಿಭಾಯಿಸುವುದು ಸುಲಭವಾಗಲಿದೆ. ಈಗಾಗಲೇ ಎರಡು ಭಾರಿ ಕಾಲ್‌ಸೆಂಟರ್‌ಗೆ ಭೇಟಿ ಪರಿಶೀಲನೆ ನಡೆಸಿದ್ದು, 15 ದಿನಗಳೊಳಗೆ ಕಾಲ್‌ಸೆಂಟರ್‌ ಕಾರ್ಯವನ್ನು ಪೂರ್ಣಗೊಳಿಸಿ ಕಾರ್ಯಾರಂಭಗೊಳಿಸಬೇಕು ಎಂದು ಸೂಚಿಸಲಾಗಿದೆ. 
– ಜಿ.ಪದ್ಮಾವತಿ, ಮೇಯರ್‌

* ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next