Advertisement

California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

01:50 AM Jan 10, 2025 | Team Udayavani |

ಈಟನ್‌ ಫೈರ್‌ (ಲಾಸ್‌ ಏಂಜಲೀಸ್‌): “ನಾವಿದ್ದದ್ದು ಈಗಿನ ಕಾಳ್ಗಿಚ್ಚಿನ ಕೆನ್ನಾಲಗೆಗೆ ಸಿಕ್ಕ ಎರಡನೇ ಅತೀ ದೊಡ್ಡ ಪ್ರದೇಶ. ನಮ್ಮ ಮನೆಯಿಂದ ಸುಮಾರು 15 ಮೈಲು ದೂರದಲ್ಲಿ ಬೆಂಕಿಯ ಕೆನ್ನಾಲಗೆ ವ್ಯಾಪಿಸಿತ್ತು. ನಮಗೆ ಕಾಳ್ಗಿಚ್ಚು ಹೊಸದಲ್ಲ. ಆದರೆ ಈ ಬಾರಿಯ ಭೀಕರತೆ ಆತಂಕ ಹುಟ್ಟಿಸಿದ್ದು ನಿಜ. ನಮ್ಮ ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’.

Advertisement

ಕ್ಯಾಲಿಫೋರ್ನಿಯಾ ಪ್ರದೇಶದ ಕಾಳ್ಗಿಚ್ಚಿನ ಅಪಾಯಕ್ಕೆ ಸಿಲುಕಿ ಪಾರಾಗಿರು ವವರಲ್ಲಿ ಮಂಗಳೂರು ಮೂಲದ ಅನಂತ ಪ್ರಸಾದ್‌ ಕುಟುಂಬವೂ ಒಂದು. ಅವರೇ ಹೇಳುವಂತೆ, “ಈ ಬಾರಿಯ ಕಾಳ್ಗಿಚ್ಚಿನಷ್ಟು ಭೀಕರವಾದುದನ್ನು ಹಿಂದೆ ಕಂಡಿಲ್ಲ’. ಅವರು ಲಾಸ್‌ ಏಂಜಲೀಸ್‌ನಲ್ಲಿ ಸುಮಾರು 20 ವರ್ಷಗಳಿಂದ ನೆಲೆಸಿದ್ದಾರೆ.

2021ರಲ್ಲೂ ಇಂಥದ್ದೇ ಕಾಳ್ಗಿಚ್ಚು ವ್ಯಾಪಿಸಿ ಆತಂಕ ಸೃಷ್ಟಿಸಿತ್ತಂತೆ. ಆದರೆ ಈ ಬಾರಿಯ ಕಾಳ್ಗಿಚ್ಚು ಉಂಟು ಮಾಡಿರುವ ಆತಂಕ, ಅದರ ಭೀಕರತೆ ಸಣ್ಣದಲ್ಲ.

“ನಾನು ಇದುವರೆಗೂ ಬೆಂಕಿಯ ಭೀಕರತೆ ಈ ಪ್ರಮಾಣದಲ್ಲಿ ಕಂಡಿಲ್ಲ’ ಎನ್ನುತ್ತಾರೆ ಅನಂತ ಪ್ರಸಾದ್‌.”ಬೆಂಕಿ ಮೊದಲು ಕಂಡಿದ್ದು ಪ್ಯಾಲಿಸಿಡೀಸ್‌ ಪ್ರದೇಶದಲ್ಲಿ. ಜ. 7ರಂದು. ಸಂಜೆ (ಅಲ್ಲಿನ ಸಮಯ) 6.30 ಇರಬಹುದು. ಆಗ ಬೆಂಕಿಯ ಅಪಾಯದ ಆತಂಕವಿದ್ದರೂ ಬೆಳಗಾಗುವಷ್ಟರಲ್ಲಿ ನಾವಿರುವ ಈಟನ್‌ ಫೈರ್‌  ಭಾಗಕ್ಕೂ ವ್ಯಾಪಿಸುತ್ತದೆ ಅಂದುಕೊಂಡಿರಲಿಲ್ಲ. ಆದರೆ ಬೆಳಗಿನ ಜಾವ 4.30 ಸುಮಾರಿಗೆ ನಮ್ಮ ಭಾಗಕ್ಕೂ ಬೆಂಕಿ ವ್ಯಾಪಿಸುವ ಸಾಧ್ಯತೆ ಹೆಚ್ಚಾಯಿತು. ಅಷ್ಟರಲ್ಲಿ ನಮ್ಮ ಮೊಬೈಲ್‌ಗೆ ಎಮರ್ಜೆನ್ಸಿ ಸಂದೇಶ (ಅಲರ್ಟ್‌) ಬಂದಿತು. ಹೀಗೆ ಸಂದೇಶ ಬಂದ ಮೇಲೆ ಯೋಚಿಸಲು ಹೆಚ್ಚು ಸಮಯವಿರದು. ಕೈಗೆ ಸಿಕ್ಕಿದ್ದನ್ನು ಬಾಚಿ ಕೊಂಡು ಅಲ್ಲಿಂದ ಸುರಕ್ಷಿತ ಸ್ಥಳಕ್ಕೋ, ಸ್ಥಳೀಯ ಆಡಳಿತ ಕಲ್ಪಿಸಿದ ಶಿಬಿರಕ್ಕೋ ತೆರಳಬೇಕು’ ಎಂದು ತಮ್ಮ ಸಂಕಷ್ಟದ ಅನುಭವವನ್ನು ಉದಯ ವಾಣಿ ಪ್ರತಿನಿಧಿಯೊಂದಿಗೆ ಹಂಚಿಕೊಂಡರು ಅನಂತ ಪ್ರಸಾದ್‌.

“ನಮ್ಮದೂ ಅದೇ ಸ್ಥಿತಿ. ಅಲರ್ಟ್‌ ಬಂದ ಮರುಕ್ಷಣವೇ ಕನಿಷ್ಠ ವಸ್ತುಗಳೊಂದಿಗೆ ನಾವೂ ಮಂದಿ (ಪತ್ನಿ, ಇಬ್ಬರು ಮಕ್ಕಳು ಹಾಗೂ ನಾದಿನಿ) ಹಾಗೂ ನಮ್ಮ ನಾಯಿಯೊಂದಿಗೆ ಸ್ನೇಹಿತನ ಮನೆಗೆ ಹೊರಟೆವು. ಸ್ವಂತ ವಾಹನವಿ ಲ್ಲದಿದ್ದರೆ, ಹೆಚ್ಚು ವಯಸ್ಸಾಗಿದ್ದರೆ, ಸ್ಥಳೀಯ ಆಡಳಿತ ಸಿಬಂದಿ ನೆರವಿಗೆ ಬರುತ್ತಾರೆ’ ಎಂದರು.

Advertisement

“ಗಾಳಿಯ ವೇಗವೇ ಹೆಚ್ಚು ಭಯ ತರಿಸು ವಂಥದ್ದು. ಕಾರಣ ಗಾಳಿಯ ಬಿರುಸು ಕಡಿಮೆ ಯಾಗದೇ ಬೆಂಕಿಯೂ ಆರದು ಹಾಗೂ ಸ್ಥಳೀಯ ಸಂಬಂಧಪಟ್ಟ ಇಲಾಖೆಯ ಸಿಬಂದಿಯ ಬೆಂಕಿ ಆರಿಸುವ ಪ್ರಯತ್ನಕ್ಕೆ ಸಂಪೂರ್ಣ ಯಶ ಸಿಗದು. ಈಗ ಸದ್ಯಕ್ಕೆ ಗಾಳಿಯ ಭಯ ಕಡಿಮೆಯಾಗಿದೆ. ಹಾಗಾಗಿ ಮತ್ತೆ ವಾಪಸು ನಮ್ಮ ಮನೆಗೆ ಬಂದಿದ್ದೇವೆ. ಹಾಗೆಂದು ನೆಮ್ಮದಿಯಿಂದ ಇರುವ ಹೊತ್ತು ಇನ್ನೂ ಬಂದಿಲ್ಲ. ನಾಳೆ (ಶುಕ್ರವಾರ) ಬೀಸಲಿರುವ ಸಾಂಟಾ ಆನಾ ವಿಂಡ್ಸ್‌ನ ತೀವ್ರತೆಯನ್ನು ಆಧರಿಸಿ ಉಳಿದದ್ದು ನಿರ್ಧಾರವಾಗಲಿದೆ. ಪರಿಸ್ಥಿತಿ ಏನೂ ಆಗಬಹುದು’ ಎನ್ನುತ್ತಾರೆ ಅವರು.

ಪ್ರಸ್ತುತ ಇವರು ಇರುವ ಪ್ರದೇಶದಲ್ಲಿ ಬೆಂಕಿಯ ಜ್ವಾಲೆ ಕಡಿಮೆಯಾಗಿದ್ದರೂ ಹಾಲಿ ವುಡ್‌ ಮತ್ತಿತರ ಮೂರ್‍ನಾಲ್ಕು ಪ್ರದೇಶಗಳಲ್ಲಿ ಬೆಂಕಿ ವ್ಯಾಪಿಸಿಕೊಂಡಿದೆ. ಗಾಳಿ ಅದನ್ನು ಈ ಕಡೆಗೂ ತಂದು ಹಾಕಬಹುದಾದ ಆತಂಕವೂ ಇದೆ. ಈಗಾಗಲೇ ಬೆಂಕಿ ವ್ಯಾಪಿಸಿಕೊಂಡ ಮೇಲೆ ಎರಡು ಬಾರಿ ಸ್ಥಳಾಂತರಗೊಂಡಿದ್ದಾರಂತೆ.

ಅನಂತ್‌ ಪ್ರಸಾದ್‌ ಇರುವ ಈಟನ್‌ ಫೈರ್‌ ಪ್ರದೇಶ 400-500 ಮನೆಗಳು ಇವೆ. ಎಲ್ಲ ಕುಟುಂಬಗಳೂ ಈಗ ಸ್ಥಳಾಂತರವಾಗಿವೆ. ಆದರೆ ಕನ್ನಡದ ಮಂದಿ ಕಡಿಮೆ. ಹೆಚ್ಚೆಂದರೆ ಮೂರ್‍ನಾಲ್ಕು ಕುಟುಂಬಗಳಿವೆಯಂತೆ.

ವಿದ್ಯುತ್‌ ಇಲ್ಲ, ಕತ್ತಲೆಯೇ ಎಲ್ಲ
“ಇಂಥ ಬೆಂಕಿ ಅನಾಹುತ ಘಟಿಸಿದಾಗಲೆಲ್ಲ ಮೊದಲು ಕೈಗೊಳ್ಳುವ ಮುನ್ನೆಚ್ಚರಿಕೆ ಕ್ರಮವೆಂದರೆ ವಿದ್ಯುತ್‌ ಸರಬರಾಜನ್ನು ಕಡಿತಗೊಳಿಸುವುದು. ನಮ್ಮಲ್ಲಿ ಎರಡು ದಿನಗಳಿಂದ ಕತ್ತಲೆ ವ್ಯಾಪಿಸಿಕೊಂಡಿದೆ.ವಿದ್ಯುತ್‌ ಈ ಕ್ಷಣದವರೆಗೂ ಬಂದಿಲ್ಲ. ನಾಳೆಯ ಗಾಳಿ ಸಾಗಿ ಹೋಗಿ ಸಹಜ ಸ್ಥಿತಿ ಮರಳುವವರೆಗೆ ವಿದ್ಯುತ್‌ ಸೌಲಭ್ಯ ಸಿಗುವ ಸಾಧ್ಯತೆ ಅನಿಶ್ಚಿತತೆ ಇದ್ದೇ ಇದೆ. ಗ್ಯಾಸ್‌ ಬಳಕೆಯಷ್ಟೇ. ಇದರಿಂದ ಏನಾದರೂ ಆಹಾರ ಮಾಡಿಕೊಳ್ಳಬಹುದು. ಆದರೆ ದಿನವೆಲ್ಲ ಕತ್ತಲೆಯಲ್ಲೇ ಕಳೆಯಬೇಕು’ ಎನ್ನುತ್ತಾರೆ ಅನಂತ್‌ ಪ್ರಸಾದ್‌.

ನೆಟ್‌ ವರ್ಕ್‌ ಸಮಸ್ಯೆ ಇಲ್ಲವೇ ಎಂಬ ಪ್ರಶ್ನೆಗೆ, “ಅದಕ್ಕೂ ಸಮಸ್ಯೆ ಇದೆ. ಗುಡ್ಡದ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಟವರ್‌ಗಳು ಹಾನಿಗೊಳಗಾಗಿವೆ. ನೆಟ್‌ವರ್ಕ್‌ಗಾಗಿ ಹೊರಗೆ ಬರಬೇಕು. ಪುಣ್ಯಕ್ಕೆ ನನ್ನ ಮನೆಯಿಂದ ಸುಮಾರು ಒಂದು ಮೈಲು ದೂರದಲ್ಲೇ ಸ್ವಲ್ಪ ನೆಟ್‌ ವರ್ಕ್‌ ಸಿಗುತ್ತದೆ. ಉಳಿದ ಕಡೆ ಗೊತ್ತಿಲ್ಲ.

ಮಂಗಳೂರಿನಲ್ಲಿರುವ ನಮ್ಮ ಕುಟುಂಬ ದೊಂದಿಗೆ ಮಾತನಾಡಿದ್ದೇನೆ. ವ್ಯಾಟ್ಸ್‌ ಆ್ಯಪ್‌ನಲ್ಲೂ ಸಂಪರ್ಕಿಸಲು ಕೆಲವೊಮ್ಮೆ ಸಾಧ್ಯವಾಗುತ್ತಿದೆ. ಈ ಹೊತ್ತಿಗೆ ನಾವು ಸುರಕ್ಷಿತ ವಾಗಿದ್ದೇವೆ, ಗಾಬರಿ ಪಡುವಂತಿಲ್ಲ, ಹಾಗೆಂದು ಸಹಜ ಸ್ಥಿತಿಗೆ ಬರಬೇಕಿದೆ’ ಎಂದು ಹೇಳಿದರು.ಅನಂತ್‌. ಅಲ್ಲಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಸಾಂಟಾ ಆನಾ ವಿಂಡ್ಸ್‌ ಎಂದರೆ ಭಯವೇಕೆ?
ಈಗ ಈ ಪ್ರದೇಶದಲ್ಲಿ ದೊಡ್ಡ ಆತಂಕ ಕಾಡುತ್ತಿರುವುದು ಸಾಂಟಾ ಆನಾ ವಿಂಡ್ಸ್‌ ನದ್ದು. ಏಕೆಂದರೆ ಇದು ಬೆಂಕಿಯ ಕೆನ್ನಾಲಗೆಯನ್ನು ಮತ್ತಷ್ಟು ದೂರದವರೆಗೆ ವ್ಯಾಪಿಸಲೂ ಸಹಾಯ ಮಾಡಬಹುದು ಎಂಬುದು.ಸಾಂತಾ ಆನಾ ವಿಂಡ್ಸ್‌ ನೇವಡಾ ಮತ್ತು ಉತಾಹ್‌ ಪ್ರದೇಶದ ಕಡೆಯಿಂದ ದಕ್ಷಿಣ ಕ್ಯಾಲಿಫೋರ್ನಿಯಾದ ಕಡೆಗೆ ಬೀಸುತ್ತದೆ. ಬಹುತೇಕ ಶುಷ್ಕ ಹಾಗೂ ಬಿಸಿಯಾದ ಗಾಳಿಯಿದು. ಸಾಮಾನ್ಯವಾಗಿ ಈ ಶೀತ ಹವಾಮಾನದ ಸಂದರ್ಭದಲ್ಲೇ ಹೆಚ್ಚಿನ ಬಾರಿ ಈ ಮಾರುತ ಬೀಸತೊಡಗುತ್ತದೆ. ಕೆಲವೊಮ್ಮೆ ಗಾಳಿಯ ಅತಿಯಾದ ಒತ್ತಡ ಇರುವಂಥ ಪ್ರದೇಶ ಪರ್ವತ ಪ್ರದೇಶಗಳಿಂದ ಆವರಿಸಿಕೊಂಡಾಗ ಅದು ಮತ್ತೂಂದೆಡೆ ನುಗ್ಗುತ್ತದೆ. ಇದರ ರಭಸ ಹೆಚ್ಚು. ಹಾಗಾಗಿ ಸಾಂಟಾ ಆನ್‌ ವಿಂಡ್ಸ್‌ನ ಭಯ ಕಾಡತೊಡಗಿದೆ.

ಸ್ಥಳೀಯ ಆಡಳಿತದ ಸಂದೇಶ: ಇವರು ಇರುವ ಪ್ರದೇಶದ ರಸ್ತೆಗಳ ದೀಪಗಳು ಯಾವುದೂ ಹೊತ್ತಿ ಕೊಳ್ಳುತ್ತಿಲ್ಲ. ಟ್ರಾಫಿಕ್‌ ಸಿಗ್ನಲ್‌ಗ‌ಳೂ ಕೆಲಸ ಮಾಡುತ್ತಿಲ್ಲ. ಒಟ್ಟಿನಲ್ಲಿ ಬೆಂಕಿಯೊಂದೇ ಚಲಿಸುತ್ತಿರುವಂಥದ್ದು. ಉಳಿದೆಲ್ಲವೂ ಸ್ತಬ್ಧ.

ಅಮೆರಿಕದ ಕಾಳ್ಗಿಚ್ಚಿನ ಪ್ರತ್ಯಕ್ಷದರ್ಶಿ ವರ್ತಮಾನ
ಮಂಗಳೂರಿನ  ಉರ್ವ ಮಾರ್ಕೆಟ್‌ ಬಳಿಯ ಮಠದಕಣಿ ಮೂಲದ ಅನಂತ ಪ್ರಸಾದ್‌ ಲಾಸ್‌ ಏಂಜಲೀಸ್‌ನ ಪ್ರಾದೇಶಿಕ ಕಂಪೆ ನಿಯಲ್ಲಿ ಎಲೆಕ್ಟ್ರಿಕ್‌ ಅಡ್ವೆಸರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಾಳ್ಗಿಚ್ಚಿನ ಪರಿಸ್ಥಿತಿಯ ಬಗ್ಗೆ ಉದಯವಾಣಿಯೊಂದಿಗೆ ಅನುಭವ ಹಂಚಿಕೊಂಡಿದ್ದಾರೆ.

(ನಿರೂಪಣೆ: ವಿಧಾತ್ರಿ ಭಟ್‌)

Advertisement

Udayavani is now on Telegram. Click here to join our channel and stay updated with the latest news.

Next