ನವದೆಹಲಿ: ಪಶ್ಚಿಮಬಂಗಾಳದ ಸಂದೇಶ್ ಖಾಲಿ ಪ್ರದೇಶದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜಿಲ್ಲಾ ಪರಿಷತ್ ಪ್ರಧಾನ್, ತೃಣಮೂಲ ಕಾಂಗ್ರೆಸ್ ಮುಖಂಡ ಷಹಜಹಾನ್ ಶೇಕ್ ಶಾಮೀಲಾಗಿರುವ ಬಗ್ಗೆ ಕೋಲ್ಕತಾ ಹೈಕೋರ್ಟ್ ಮಂಗಳವಾರ ಅಸಮಧಾನವ್ಯಕ್ತಪಡಿಸಿದ್ದು, ಘಟನೆ ನಡೆದು 19 ದಿನ ಕಳೆದಿದ್ದರೂ ಕೂಡಾ ಇನ್ನೂ ಆರೋಪಿಯನ್ನು ಬಂಧಿಸಲು ಪೊಲೀಸರು ಅಸಮರ್ಥರಾಗಿರುವ ಬಗ್ಗೆ ಕಿಡಿಕಾರಿದೆ.
ಇದನ್ನೂ ಓದಿ:Amit Shah ವಿರುದ್ಧ ಹೇಳಿಕೆ; ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಗೆ ಜಾಮೀನು
ಮಂಗಳವಾರ ಮುಖ್ಯನ್ಯಾಯಮೂರ್ತಿ ಟಿಎಸ್ ಶಿವಜ್ಞಾನಂ ಮತ್ತು ಜಸ್ಟೀಸ್ ಹಿರಣ್ಮಯಿ ಭಟ್ಟಾಚಾರ್ಯ ಅವರನ್ನೊಳಗೊಂಡ ವಿಭಾಗೀಯ ಪೀಠವು ಹೈಕೋರ್ಟ್ ನ ಸಮನ್ವಯ ಪೀಠ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಪಶ್ಚಿಮಬಂಗಾಳ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿ, ಸಂದೇಶ ಖಾಲಿ ಪ್ರದೇಶದಲ್ಲಿ ಜಾರಿಗೊಳಿಸಿದ್ದ 144 ಸೆಕ್ಷನ್ ಅನ್ನು ರದ್ದುಗೊಳಿಸಿ, ವಿಪಕ್ಷ ನಾಯಕ ಸುವೇಂದು ಅಧಿಕಾರಿ ಹಾಗೂ ಮತ್ತೊಬ್ಬ ಶಾಸಕರಿಗೆ ಹಿಂಸಾಚಾರ ಪೀಡಿತ ಪ್ರದೇಶಕ್ಕೆ ಭೇಟಿ ನೀಡಲು ಅನುಮತಿ ಕಲ್ಪಿಸಿಕೊಟ್ಟಿರುವುದಾಗಿ ವರದಿ ವಿವರಿಸಿದೆ.
ಹಿಂಸಾಚಾರ ಸಂಭವಿಸಿದ ಪ್ರದೇಶಕ್ಕೆ ಭೇಟಿ ನೀಡಲು ಕೋಲ್ಕತಾ ಹೈಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ ಹಿರಿಯ ಬಿಜೆಪಿ ನಾಯಕ, ಪಶ್ವಿಮಬಂಗಾಳದ ವಿಧಾನಸಭೆಯ ವಿಪಕ್ಷ ನಾಯಕ ಸುವೇಂದು ಅಧಿಕಾರಿ ಪಶ್ಚಿಮಬಂಗಾಳದ ಉತ್ತರ 24 ಪರಾಗಣ ಜಿಲ್ಲೆಯ ಸಂದೇಶ ಖಾಲಿ ಪ್ರದೇಶ ತಲುಪಿರುವುದಾಗಿ ವರದಿ ವಿವರಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಏಕಸದಸ್ಯ ಪೀಠ ನೀಡಿರುವ ಆದೇಶದ ಬಗ್ಗೆ ಮಧ್ಯಪ್ರವೇಶಿಸುವುದಿಲ್ಲ ಹೈಕೋರ್ಟ್ ಚೀಫ್ ಜಸ್ಟೀಸ್ ತಿಳಿಸಿದ್ದು, ಮತ್ತೊಬ್ಬ ಬಿಜೆಪಿ ಶಾಸಕ ಶಂಕರ್ ಘೋಷ್ ಅವರಿಗೆ ಅಧಿಕಾರಿ ಜತೆ ಸಂದೇಶ್ ಖಾಲಿಗೆ ಭೇಟಿ ನೀಡವಂತೆ ಅನುಮತಿ ನೀಡಿದೆ.