ಕಲಬುರಗಿ: ಕಳೆದ ಏಪ್ರಿಲ್ ತಿಂಗಳಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಕಲಬುರಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಾ| ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ಅಭ್ಯರ್ಥಿ ಡಾ| ಉಮೇಶ ಜಾಧವ ಅವರಿಗಿಂತ ಹೆಚ್ಚಿನ ಖರ್ಚು ಮಾಡಿದ್ದಾರೆ.
ನಾಮಪತ್ರ ಸಲ್ಲಿಸಿದ ದಿನದಿಂದ ಹಿಡಿದು ಚುನಾವಣೆ ದಿನದ ವರೆಗೂ ಮಾಡಲಾದ ಖರ್ಚು-ವೆಚ್ಚಗಳನ್ನು ವಿವರವಾಗಿ ಕಲಬುರಗಿ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ರಾಜ್ಯ ಚುನಾವಣಾ ಆಯೋಗಕ್ಕೆ ಜುಲೈ 3ರಂದು ಸಲ್ಲಿಸಿದ್ದು, ಅದರ ಪ್ರಕಾರ ಖರ್ಗೆ ಅವರು ಡಾ| ಉಮೇಶ ಜಾಧವಗಿಂತ 21 ಲಕ್ಷ ರೂ. ಹೆಚ್ಚು ಖರ್ಚು ಮಾಡಿದ್ದಾರೆ.
ಖರ್ಗೆ 64,00,845 ಲಕ್ಷ ರೂ. ಖರ್ಚು ಮಾಡಿದ್ದರೆ ಡಾ| ಜಾಧವ 42,48,386 ರೂ. ಖರ್ಚು ಮಾಡಿದ್ದಾರೆ. ಉಳಿದಂತೆ ಬಿಎಸ್ಪಿ ಕೆ.ಬಿ. ವಾಸು ಮೂರು ಲಕ್ಷ ರೂ. ಖರ್ಚು ಮಾಡಿದ್ದಾರೆ. ಸ್ಪರ್ಧಾ ಅಭ್ಯರ್ಥಿಗಳು ಸಲ್ಲಿಸಿದ್ದ ಖರ್ಚಿನ ವಿವರವನ್ನು ಚುನಾವಣಾ ಖರ್ಚು-ವೆಚ್ಚದ ನೋಡಲ್ ಅಧಿಕಾರಿಗಳು ತಾಳೆ ಹಾಕಿ ಅಂತಿಮಗೊಳಿಸುತ್ತಾರೆ. ಅದರ ಪ್ರಕಾರ ಕಳೆದ ಜೂನ್ ಕೊನೆ ವಾರದಲ್ಲಿ ಖರ್ಚಿನ ಸಮಗ್ರ ವರದಿ ಅಂತಿಮಗೊಳಿಸಲಾಗಿದೆ. ಅಂತಿಮ ವರದಿಯನ್ನು ಆಯೋಗಕ್ಕೆ ಸಲ್ಲಿಸುವ ಮುಖಾಂತರ ಕಲಬುರಗಿ ಲೋಕಸಭಾ ಕ್ಷೇತ್ರದ 2019ರ ಚುನಾವಣೆ ನಿರ್ವಹಣೆಯನ್ನು ಮುಕ್ತಾಯಗೊಳಿಸಿದಂತಾಗಿದೆ.
ಲೋಕಸಭೆ ಚುನಾವಣೆಯ ಸ್ಪರ್ಧಾ ಅಭ್ಯರ್ಥಿ ಭಾರತೀಯ ಚುನಾವಣಾ ಆಯೋಗದ ಪ್ರಕಾರ 75 ಲಕ್ಷ ರೂ. ಮೀರದಂತೆ ಖರ್ಚು ಮಾಡಲು ಅವಕಾಶವಿದೆ. 75 ಲಕ್ಷ ರೂ.ಗಿಂತ ಹೆಚ್ಚಿಗೆ ಖರ್ಚು ಮಾಡುವಂತಿಲ್ಲ. ಒಂದು ವೇಳೆ ಇದನ್ನು ಮೀರಿ ಖರ್ಚು ಮಾಡಿದರೆ ಅಯ್ಕೆಯಾದ ಅಭ್ಯರ್ಥಿ ಆಯ್ಕೆಯನ್ನೇ ಅಸಿಂಧುಗೊಳಿಸಲಾಗುತ್ತದೆ. ಅಲ್ಲದೇ ಸೋತ ಅಭ್ಯರ್ಥಿಗಳು ಖರ್ಚು-ವೆಚ್ಚದ ವಿವರವನ್ನು ಕಡ್ಡಾಯವಾಗಿ ಸಲ್ಲಿಸಬೇಕು.
ಸ್ಪರ್ಧಾ ಅಭ್ಯರ್ಥಿಗಳೆಲ್ಲರೂ ಚುನಾವಣಾ ಖರ್ಚು-ವೆಚ್ಚದ ವಿವರವನ್ನು ದಾಖಲೆಗಳ ಸಮೇತ ನಿಗಧಿತ ಅವಧಿಯೊಳಗೆ ಚುನಾವಣಾಧಿಕಾರಿಗೆ ಸಲ್ಲಿಸಬೇಕು. ಒಂದು ವೇಳೆ ಸಲ್ಲಿಸದೇ ಇದ್ದಲ್ಲಿ ಆರು ವರ್ಷಗಳ ಕಾಲ ಯಾವುದೇ ಚುನಾವಣೆಗೆ ಸ್ಪರ್ಧಿಸದಂತೆ ಕೇಂದ್ರ ಚುನಾವಣಾ ಆಯೋಗ ನಿಷೇಧ ಹೇರುತ್ತದೆ.
ಕಲಬುರಗಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ, ಬಿಎಸ್ಪಿ ಸೇರಿ 12 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಸ್ಪರ್ಧಿಸಿದ ಎಲ್ಲ ಅಭ್ಯರ್ಥಿಗಳು ಚುನಾವಣಾ ಖರ್ಚು-ವೆಚ್ಚದ ವಿವರ ಸಲ್ಲಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಾದ ಧಾರಕೇಶ್ವರಯ್ಯ ಹಾಗೂ ಜಿ. ತಿಮ್ಮರಾಜು, ಆರ್‌ಎಸ್‌ಪಿಯ ಡಿ.ಕೆ. ಕೊಂಕಟೆ ಕೇರೂರ ಅತ್ಯಂತ ಕಡಿಮೆ ಎಂದರೆ ತಲಾ 12500 ರೂ. ಮಾತ್ರ ಖರ್ಚು ಮಾಡಿದ್ದಾರೆ.