ಶಾಮ ಬೆಳಗ್ಗಿನಿಂದ ಸಂಜೆವರೆಗೂ ಬೀದಿಯ ಹುಡುಗರೊಂದಿಗೆ ಹರಟೆ ಹೊಡೆಯುತ್ತಾ ಸಮಯ ಕಳೆಯುತ್ತಿದ್ದ. ಮನೆಯಲ್ಲಿ ಕಷ್ಟವಿದ್ದರೂ ಕೆಲಸಕ್ಕೆ ಹೋಗುತ್ತಿರಲಿಲ್ಲ. ಒಂದು ದಿನ ತುಪ್ಪ ಮಾರುವ ವ್ಯಾಪಾರಸ್ಥನೊಬ್ಬ ಶಾಮನ ಬಳಿ ಬಂದು ಸಹಾಯ ಮಾಡುವಂತೆ ಕೇಳಿಕೊಂಡ. ಅವನು ಹೇಳುವ ಕೆಲಸ ಮಾಡಿದರೆ ಕೈತುಂಬಾ ದುಡ್ಡು ಕೊಡುವುದಾಗಿ ಹೇಳಿದ. ದುಡ್ಡಿನ ವಿಚಾರ ಕೇಳಿಯೇ ಶಾಮ ಸಂತಸಗೊಂಡ.
ವ್ಯಾಪಾರಿ ಸಂತೆಯಲ್ಲಿ ತುಪ್ಪ ಮಾರಲು ತುಪ್ಪದ ಗಡಿಗೆಯನ್ನು ಐದು ಮೈಲಿ ಹೊತ್ತು ಹೋಗಬೇಕಾಗಿತ್ತು. ಶಾಮ ಹೆಗಲ ಮೇಲೆ ತುಪ್ಪದ ಗಡಿಗೆ ಹೊತ್ತುಕೊಂಡ. ಇಬ್ಬರೂ ಸಂತೆ ಕಡೆ ಹೆಜ್ಜೆ ಹಾಕುತ್ತಾ ಹೊರಟರು. ಒಂದು ಮೈಲಿ ದಾರಿ ಕ್ರಮಿಸಿರಬಹುದು. ದಾರಿಯುದ್ದಕ್ಕೂ ಶಾಮನ ತಲೆಯಲ್ಲಿ ದುಡ್ಡಿನ ವಿಚಾರವೇ ತುಂಬಿಕೊಂಡಿದ್ದವು. ಕೈಗೆ ನೋಟುಗಳು ಬರುತ್ತಿದ್ದಂತೆ ಅದನ್ನು ಹೇಗೆಲ್ಲಾ ಖರ್ಚು ಮಾಡಬೇಕೆನ್ನುವುದನ್ನು ಲೆಕ್ಕಾಚಾರ ಹಾಕತೊಡಗಿದ.
ಮೊದಲು ಒಂದು ಕೋಳಿ ಮರಿಯನ್ನು ಸಾಕಿ, ದೊಡ್ಡದು ಮಾಡಿ ಅದರ ಮೊಟ್ಟೆಗಳಿಂದ ಹತ್ತಾರು ಮರಿಗಳನ್ನು ಮಾಡಿಸಿ, ಆಮೇಲೆ ಅದನ್ನು ಮಾರುವುದು. ಅದರ ಲಾಭದಿಂದ ಬಂದ ದುಡ್ಡಲ್ಲಿ ಒಂದು ಕುರಿಯನ್ನು ಕೊಳ್ಳಬೇಕು. ಕುರಿ ಸಾಕಾಣಿಕೆ ಮಾಡಿ, ಹಸುಗಳನ್ನು ಕೊಂಡುಕೊಳ್ಳಬೇಕು. ಹಾಲಿನ ವ್ಯಾಪಾರ ಮಾಡಿ ಸಂಪಾದಿಸಿದ ಹಣದಿಂದ ಭೂಮಿ ಕೊಂಡುಕೊಳ್ಳಬೇಕು. ಬೆಳೆ ತೆಗೆದು, ಲಕ್ಷಾಂತರ ರೂಪಾಯಿ ಸಂಪಾದಿಸಿ, ದೊಡ್ಡ ಮನೆ ಕಟ್ಟಿಸಿ ಸುಂದರವಾದ ಹುಡುಗಿಯೊಬ್ಬಳನ್ನು ಮದುವೆ ಮಾಡಿಕೊಳ್ಳಬೇಕು. ಊರಿನವರೆಲ್ಲಾ ತನಗೆ ಗೌರವ ನೀಡಬೇಕು. ಊರಿನ ಪಂಚಾಯಿತಿ ಕಟ್ಟೆಯ ಮೇಲೆ ನಾನು ನ್ಯಾಯ ತೀರ್ಮಾನ ಮಾಡಬೇಕು. ಆಗ ಹೆಂಡತಿ ಊಟಕ್ಕೆ ಹೊತ್ತಾಯೆ¤ಂದು ಮನೆಗೆ ಬರುವಂತೆ ಕರೆಯಬೇಕು. ನಾನು ಈಗ ಆಗೋದಿಲ್ಲವೆಂದು ತಲೆಯಲ್ಲಾಡಿಸುತ್ತೇನೆ. ಹೀಗೆ ಅಂದುಕೊಂಡು ತಲೆಯಲ್ಲಾಡಿಸಿದನು ಶಾಮ. ಹೆಗಲ ಮೇಲಿದ್ದ ತುಪ್ಪದ ಗಡಿಗೆ ಕೆಳಕ್ಕೆ ಬಿದ್ದು ಒಡೆದುಹೋಯ್ತು. ವ್ಯಾಪಾರಿಗೆ ಆಕಾಶವೇ ಕಳಚಿಬಿದ್ದಂತಾಯಿತು. ಅವನು ಬೊಬ್ಬೆ ಹೊಡೆದುಕೊಂಡ. ಕೈಗೆ ಬಂದ ತುತ್ತು ಬಾಯಿಗೆ ಬಾರದೇ ಹೋಯಿತಲ್ಲಾ ಎಂದು ಸಪ್ಪೆ ಮೋರೆ ಹಾಕಿಕೊಂಡು ಶಾಮ ಬಂದ ದಾರಿಯಲ್ಲೆ ವಾಪಾಸ್ಸಾದ.
– ಸಿ. ರವೀಂದ್ರ ಸಿಂಗ್, ಕೋಲಾರ