ಬೆಂಗಳೂರು: ಅಕ್ರಮ ಆಸ್ತಿ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ತಪ್ಪಾಗಿ ಲೆಕ್ಕ ಮಾಡಿದ್ದೇ, ಜಯಲಲಿತಾ ಖುಲಾಸೆಗೆ ಕಾರಣವಾಗಿದೆ ಎಂಬುದನ್ನು ಪತ್ತೆ ಮಾಡಲಾಗಿತ್ತು. ಈ ವಿಚಾರವನ್ನು ಕರ್ನಾಟಕ ತನ್ನ ಮೇಲ್ಮನವಿಯಲ್ಲಿ ಸುಪ್ರೀಂ ಕೋರ್ಟ್‌ಗೆ ಕೂಡ ಹೇಳಿತ್ತು.
1991ರಿಂದ 1996 ಅವಧಿಯಲ್ಲಿ ಜಯಲಲಿತಾ ಅಕ್ರಮ ಆಸ್ತಿ ಶೇ.10ಕ್ಕಿಂತ ಕಡಿಮೆ(ಶೇ.8.12 ರಷ್ಟು- ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹೇಳಿದ್ದ ಕ್ಕಿಂತ ಕಡಿಮೆ) ಇದೆ ಎಂದು ಹೇಳಲಾಗಿತ್ತು. ಆದರೆ ಈ ಲೆಕ್ಕಚಾರದಲ್ಲಿ ತಪ್ಪಾಗಿದೆ ಎಂಬುದನ್ನು ಪತ್ತೆ ಮಾಡಲಾಗಿತ್ತು. ನೈಜ ಲೆಕ್ಕಾಚಾರ ಪ್ರಕಾರ ಅಕ್ರಮ ಆಸ್ತಿ ಪ್ರಮಾಣ ಶೇ.168ರಷ್ಟಾಗುತ್ತದೆ ಎಂದು ಕರ್ನಾಟಕ ಸರ್ಕಾರ ಹೇಳಿತ್ತು.
ಲೆಕ್ಕಾಚಾರ ಹೇಗೆ?: ಹೈಕೋರ್ಟ್ ತೀರ್ಪಿ ನಲ್ಲೇ ಅಕ್ರಮ ಆಸ್ತಿ ಲೆಕ್ಕಾಚಾರ ತಪ್ಪಾಗಿದೆ ಎನ್ನಲಾಗಿತ್ತು. ಅಕ್ರಮ ಆಸ್ತಿ ಮೊತ್ತ 16.32 ಕೋಟಿ ರೂ. (2,82,36,812+1,35,00,000) ಇದರ ಶೇಕಡಾವಾರು ಆದಾಯದ 76.7ರಷ್ಟು ಆಗುತ್ತದೆ. ಜೊತೆಗೆ ಕಟ್ಟಡ ನಿರ್ಮಾಣಗಳನ್ನೂ ಗಣನೆಗೆ ತೆಗೆದುಕೊಂಡೆರೆ (ಆರೋಪಿಗಳೇ ಒಪ್ಪಿಕೊಂಡಂತೆ) 19.9 ಕೋಟಿ (16,32,36,812 +3,58,53,055) ಅಂದರೆ ಒಟ್ಟು ಅಕ್ರಮ ಆಸ್ತಿ ಪ್ರಮಾಣದ ಶೇಕಡಾವಾರು ಆದಾಯದ 93.6ರಷ್ಟಾಗುತ್ತದೆ.
ಮೇಲ್ಮನವಿಯಲ್ಲಿ ಲೆಕ್ಕಾಚಾರದ ದೋಷ ದಿಂದಾಗಿ 3.58 ಕೋಟಿ ರೂ. ಕಡಿಮೆ ಮತ್ತು ಆರೋಪಿಗಳೇ ಕಟ್ಟಡದ ಮೌಲ್ಯ 8.68 ಕೋಟಿ ರೂ. ಎಂದು ಹೇಳಿದ್ದರೂ, ಕೋರ್ಟ್ 5.1 ಕೋಟಿ ರೂ. ಎಂದು ಹೇಳಲಾಗಿತ್ತು.
ಅಲ್ಲದೇ ಜಯಾ ಪಬ್ಲಿಕೇಶನ್ ಅನ್ನೂ ಲೆಕ್ಕ ಹಿಡಿದರೆ, ಅದರ ಮೌಲ್ಯ 22.75 ಕೋಟಿ ರೂ.(16,32,36,812 + 3,58,53,055 + 2,85,05,140) ಅಂದರೆ ಒಟ್ಟು ಆದಾಯದ ಶೇಕಡಾವಾರು 123.5ರಷ್ಟು ಅಕ್ರಮ ಆಸ್ತಿಯಾಗುತ್ತದೆ. ಅಲ್ಲದೇ ಜಯಲಲಿತಾ ಸಾಕುಮಗನ ಮದುವೆ ಖರ್ಚನ್ನು ಒಟ್ಟು ಖರ್ಚಿಗೆ ಸೇರಿಸದೇ ಇದ್ದಿದ್ದು ಪತ್ತೆಮಾಡಲಾಗಿತ್ತು. ಇದನ್ನೂ ಸೇರಿಸಿದರೆ, ಅಕ್ರಮ ಆಸ್ತಿ ಪ್ರಮಾಣ ಶೇ.168 ಆಗುತ್ತದೆ ಎನ್ನಲಾಗಿತ್ತು.
ಪ್ರಕರಣದಲ್ಲಿ ಅಕ್ರಮ ಆಸ್ತಿ 2.82 ಕೋಟಿ ರೂ. ಪರಿಗಣಿಸಿ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಆದರೆ ವಿಶೇಷ ನ್ಯಾಯಾಲಯ ಅಕ್ರಮ ಆಸ್ತಿ ಮೊತ್ತ 53.6 ಕೋಟಿ ಎಂದು ಹೇಳಿತ್ತು.