ಕಾಸರಗೋಡು: ಬೆಂಗಳೂರಿನಲ್ಲಿ ವಾಸವಿರುವ ನಾವು ಎಷ್ಟೇ ಪ್ರಯತ್ನಿಸಿದರೂ ಮಾಡಲು ಸಾಧ್ಯವಾಗದ ಒಂದು ಚಿತ್ರ ಪ್ರದರ್ಶನವನ್ನು ಏರ್ಪಡಿಸಿದ ರಂಗಚಿನ್ನಾರಿ ಸಂಸ್ಥೆಯವರು ಒಂದು ಚಳುವಳಿಯ ಮೊದಲ ಹೆಜ್ಜೆಯನ್ನಿಟ್ಟಿದ್ದಾರೆ ಎಂದು ನನಗನ್ನಿಸುತ್ತಿದೆ. ಇಂಥ ಪ್ರಯತ್ನ ಇಲ್ಲಿ ಆರಂಭವಾಗಿ ಕರ್ನಾಟಕಕ್ಕೂ ಹಬ್ಬಿ, ಪ್ರತಿ ಊರುಗಳಲ್ಲೂ ಈ ರೀತಿಯ ರಂಗಮಂದಿರ ನಿರ್ಮಿಸಲ್ಪಟ್ಟು ಕಲಾತ್ಮಕ ಚಿತ್ರಗಳ ಚಳುವಳಿ ಪ್ರಾರಂಭವಾಗಬೇಕಾಗಿದೆ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹೇಳಿದರು.
ಅವರು ಕಾಸರಗೋಡಿನ ಖ್ಯಾತ ಸಾಹಿತ್ಯಿಕ, ಸಾಂಸ್ಕೃತಿಕ ಸಂಸ್ಥೆ ರಂಗ ಚಿನ್ನಾರಿ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಅವರ ಸಹಕಾರ ದೊಂದಿಗೆ ಸಂಸ್ಥೆಯ ದಶಮಾನೋತ್ಸವದ ಅಂಗವಾಗಿ ಏರ್ಪಡಿಸಿದ ಗಿರೀಶ್ ಕಾಸರವಳ್ಳಿ ಚಲನಚಿತ್ರೋತ್ಸವದ ಸಮಾರೋಪದಲ್ಲಿ ಮಾತನಾಡಿದರು. ಪ್ರದರ್ಶನ ಸೌಲಭ್ಯದಿಂದ ವಂಚಿತ ರಾದ ಒಳ್ಳೆಯ ಸಿನೆಮಾಗಳು ಜನರನ್ನು ಮುಟ್ಟಲು, ತಟ್ಟಲು ಇಂತಹ ಚಳವಳಿ ಗಳಿಂದ ಸಾಧ್ಯವಾಗುತ್ತದೆ ಎಂದರು. ಸಿನೆಮಾ ರಂಗದಲ್ಲಿ ತಾನು ಬೆಳೆದು ಬಂದ ರೀತಿಯನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕಾದಂಬರಿಕಾರ ಗೋಪಾಲಕೃಷ್ಣ ಪೈ ಅವರು ಮಾತನಾಡಿ, ಗಡಿ ಪ್ರದೇಶವಾದ ಕಾಸರಗೋಡಿನಲ್ಲಿ, ಅದರಲ್ಲೂ ತಾನು ಹುಟ್ಟಿದ ಪ್ರದೇಶದಲ್ಲಿ ಚಲನಚಿತ್ರಗಳ ಅಭಿಯಾನ ಪ್ರಾರಂಭವಾದ ಕುರಿತು ಸಂತಸ ವ್ಯಕ್ತಪಡಿಸಿದರಲ್ಲದೆ ರಂಗಚಿನ್ನಾರಿಯ ಈ ಸಾಧನೆ ಉಳಿದವರಿಗೂ ಮಾದರಿ ಯಾಗಲಿ ಎಂದರು.
ವೇದಿಕೆಯಲ್ಲಿ ಆದರ್ಶ ಫಿಲಂ ಇನ್‌ಸ್ಟಿಟ್ಯೂಟ್‌ನ ನಟನಾ ವಿಭಾಗದ ಮಾಜಿ ಪ್ರೊಫೇಸರ್‌ರೂ, ಪೂನಾ ಫಿಲಂ ಇನ್‌ಸ್ಟಿಟ್ಯೂಟ್ ಪದವೀಧರರೂ, ಬಿಳಿ ಹೆಂಡ್ತಿ ಚಲನಚಿತ್ರದ ನಾಯಕರೂ ಆಗಿರುವ ಅನಿಲ್ ಕುಮಾರ್, ಹಿರಿಯ ಚಲನಚಿತ್ರ ಪತ್ರಕರ್ತ ಬಾ.ನಾ.ಸುಬ್ರಹ್ಮಣ್ಯ, ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷರೂ, ನಾಟಕಕಾರರು ಆಗಿರುವ ರಾಮಚಂದ್ರ ಬೈಕಂಪಾಡಿ, ಡಾ| ಶ್ರೀಪಾದ ರಾವ್ ಮೊದಲಾದವರು ಉಪಸ್ಥಿತರಿದ್ದರು.
ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ದ್ವೀಪ, ಗುಲಾಬಿ ಟಾಕೀಸ್, ತಾಯಿ ಸಾಹೇಬ ಚಲನಚಿತ್ರಗಳು ಪ್ರದರ್ಶಿಸಲ್ಪಟ್ಟವು. ಪ್ರದರ್ಶನದ ನಂತರ ಪ್ರೇಕ್ಷಕರೊಂದಿಗೆ ಸಂವಾದ ಏರ್ಪಡಿಸಲಾಯಿತು. ಸವಿತಾ ಟೀಚರ್, ವಿಜಯಲಕ್ಷ್ಮೀ ಶ್ಯಾನುಭೋಗ್, ಬಿ.ಎನ್. ರಾವ್, ಡಾ| ಸುದೇಶ್ ರಾವ್, ಸುಬ್ಬಣ್ಣ ಶೆಟ್ಟಿ, ಜ್ಯೋತಿಪ್ರಭಾ ಎಸ್.ರಾವ್ ಸೇರಿದಂತೆ ಹಲವಾರು ಸಾಹಿತಿಗಳು ಭಾಗವಹಿಸಿದರು.
ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರನ್ನು ಕಾಸರಗೋಡಿನ ಸಮಸ್ತ ಕಲಾಸಕ್ತರ ಪರವಾಗಿ ರಂಗಚಿನ್ನಾರಿ ಸಂಸ್ಥೆಯವರು ಲಕ್ಷ್ಮೀ ದೀಪವನ್ನು ನೀಡಿ ಗೌರವಿಸಿದರು. ರಂಗ ಚಿನ್ನಾರಿಯ ನಿರ್ದೇಶಕರಾದ ಕಾಸರಗೋಡು ಚಿನ್ನಾ ಅವರು ಪ್ರಾಸ್ತಾವಿಕ ಮಾತು ಗಳನ್ನಾಡಿದರು. ಮತ್ತೋರ್ವ ನಿರ್ದೇಶಕ ಸತ್ಯನಾರಾಯಣ ಕೆ. ಸ್ವಾಗತಿಸಿದರು. ಕೆ. ಸತೀಶ್ಚಂದ್ರ ಭಂಡಾರಿ ವಂದಿಸಿದರು. ಕವನಾ ನಾಯಕ್ ಅವರು ಪ್ರಾರ್ಥನೆ ಹಾಡಿದರು. ಕಲಾಕ್ಷೇತ್ರದಲ್ಲಿ ಸಾಧನೆಗೈದ ಖ್ಯಾತ ತುಳು ನಾಟಕಕಾರ, ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್‌ಬೈಲ್, ತುಳು ಅಕಾಡೆಮಿ ಪ್ರಶಸ್ತಿ ವಿಜೇತ ಯೋಗೀಶ್ ರಾವ್ ಚಿಗುರುಪಾದೆ, ನಟ, ನಿರ್ದೇಶಕ ಜಗನ್ ಪವಾರ್ ಅವರನ್ನು ರಂಗಚಿನ್ನಾರಿ ಪರವಾಗಿ ಗಿರೀಶ್ ಕಾಸರವಳ್ಳಿ ಅವರು ಶಾಲು ಹೊದೆಸಿ, ಸ್ಮರಣಿಕೆಯನ್ನು ನೀಡಿ ಗೌರವಿಸಿದರು.