Advertisement

ಕೇಕ್‌ ಉತ್ಸವ: ಗಮನ ಸೆಳೆದ ಮಿಕ್ಕಿಮೌಸ್‌

09:49 PM Dec 27, 2019 | Lakshmi GovindaRaj |

ಮೈಸೂರು: ನಗರದಲ್ಲಿ ಆರಂಭವಾಗಿರುವ ಮಾಗಿ ಉತ್ಸವ ಅಂಗವಾಗಿ ನಂಜರಾಜ ಬಹದ್ದೂರ್‌ ಛತ್ರದಲ್ಲಿ ಕೇಕ್‌ ಉತ್ಸವಕ್ಕೆ ಶಾಸಕ ಎಲ್‌. ನಾಗೇಂದ್ರ ಚಾಲನೆ ನೀಡಿದರು. ಜಿಲ್ಲಾಡಳಿತ, ಹೋಟೆಲ್ಸ್‌, ರೆಸ್ಟೋರೆಂಟ್ಸ್‌ ಹಾಗೂ ಬೇಕರಿ ಮಾಲೀಕರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಕೇಕ್‌ ಉತ್ಸವ ಮಾಗಿ ಉತ್ಸವಕ್ಕೆ ಮತ್ತಷ್ಟು ಮೆರುಗು ನೀಡುತ್ತಿದೆ. ಹೊಸ ವರ್ಷದ ಸಂಭ್ರಮಾಚರಣೆಯೊಂದಿಗೆ ಪ್ರವಾಸಿಗಗರು, ಸಿಹಿ ತಿನಿಸು ಪ್ರಿಯರಿಗೆ ಮುದ ತಂದಿದೆ.

Advertisement

ವಿಶಿಷ್ಟ ಕೇಕ್‌ ಪ್ರದರ್ಶನ ಹಾಗೂ ಮಾರಾಟ: ಲಾಯಲ್‌ ವರ್ಲ್ಡ್ ಅರೋಮ ಬೇಕರಿಯಿಂದ ತಯಾರಿಸಿರುವ 110 ಕೆ.ಜಿ. ತೂಕದ ಮೈಸೂರಿನ ಹಿನಕಲ್‌ ವಿನ್ಸೆಂಟ್‌ ಚರ್ಚ್‌, ಡಾಲ್ಫಿನ್‌ ಬೇಕರಿಯಿಂದ ತಯಾರಾದ 290 ಮತ್ತು 260 ಕೆ.ಜಿ. ತೂಕದ ಮಿಕ್ಕಿಮೌಸ್‌ ಕೇಕ್‌, ಕಣ್ಣನ್ಸ್‌ ಬೇಕರಿಯಿಂದ ತಯಾರಾದ ಸುಮಾರು 15 ಕೆ.ಜಿ.ತೂಕ, ಬಿಎಡಬ್ಲೂ ಕಾರ್‌, ಸ್ವೀಟ್‌ ಪ್ಯಾಲೆಸ್‌ನ ಕಿತ್ತೂರು ರಾಣಿ ಚನ್ನಮ್ಮ ಕೇಕ್‌, ಮಾಸ್ಟರ್‌ ಬೇಕರಿಯಿಂದ ತಯಾರಿಸಿದ ಸುಮಾರು 10 ಕೆ.ಜಿ. ಫ್ಲವರ್‌ ಕೇಕ್‌ ಹಾಗೂ ಮನೆಯ ಅಂಗಳದ ಅಲಂಕಾರಿಕಾ ಕಪಾಟುಗಳು ಪ್ರಮುಖ ಆಕರ್ಷಣೆಯಾಗಿದ್ದವು. ಇವುಗಳೊಂದಿಗೆ, ಆಂಗ್ರಿ ಬರ್ಡ್‌, ವಿವಿಧ ವೆಡ್ಡಿಂಗ್‌ ಕೇಕ್‌ಗಳು, ಕಿಡ್ಸ್‌ ಕೇಕ್‌, ಲಾಲಿಪಾಪ್‌ ನಂತಹ ವಿಶಿಷ್ಟ ಕೇಕ್‌ಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕಿಡಲಾಗಿದೆ.

ನಾನಾ ಪ್ಲೇವರ್‌ಗಳು: ಮೈಸೂರು ಸೇರಿದಂತೆ ಇತರೆ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬಂದಿದ್ದ ವ್ಯಾಪಾರಿಗಳು ವಿವಿಧ ಬಗೆಯ ಕೇಕ್‌ಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕಿರಿಸಿದ್ದು, ನಾನಾ ಪ್ಲೇವರ್‌ಗಳಿಂದ ತಯಾರಿಸಿದ ಪೇಸ್ಟ್ರಿ ಕೇಕ್‌, ಫ್ರೂಟ್‌ ಕೇಕ್‌, ಫ್ಲಮಿಂಗ್‌ ಕೇಕ್‌ ಹಾಗೂ ಚಾಕೊಲೇಟ್‌, ವೆನಿಲಾ, ಮಿಲ್ಕ್ ಪೇಸ್ಟ್ರೀ, ಚೀಸ್‌ ಕೇಕ್‌, ಫ್ಲಾರಿಡ ಪೇಸ್ಟ್ರೀ, ಪುಡ್ಡಿಂಗ್‌ ಸೇರಿದಂತೆ ನಾನಾ ನಮೂನೆ, ವಿವಿಧ ಸ್ವಾದ ಭರಿತ ಕೇಕ್‌ಗಳು ಪ್ರಧಾನ ಆಕರ್ಷಣೆಯಾಗಿವೆ.

3 ದಿನ ಕೇಕ್‌ ಶೋ: ಡಾಲ್ಫಿನ್‌, ಅರೋಮ, ಮಾಸ್ಟರ್‌ ಬೇಕರ್ಸ್‌, ಕಣ್ಣನ್‌ ಬೇಕರಿ, ದಿ ಬ್ರೇಕ್‌ ಹೌಸ್‌, ಫಾಸ್ಟ್‌ ಕೇಕ್‌ ಹಾಗೂ ರಾಮಣ್ಣ ಅಂಡ್‌ ಸನ್ಸ್‌ ಚುರುಮುರಿ ಮಳಿಗೆ ಸೇರಿ ಒಟ್ಟು 8 ಮಳಿಗೆಗಳಲ್ಲಿ ಕೇಕ್‌ ಉತ್ಸವ ಮೂರು ದಿನಗಳ ಕಾಲ ನಡೆಯಲಿದೆ.

ಒಂದೇ ಸೂರಿನಡಿ ಲಭ್ಯ: ಉತ್ಸವಕ್ಕೆ ಚಾಲನೆ ನೀಡಿದ ಎಲ್‌.ನಾಗೇಂದ್ರ ಮಾತನಾಡಿ, ಒಂದೇ ಸೂರಿನಡಿ ವಿಶಿಷ್ಟ ಮಾದರಿಯ ಕೇಕ್‌ಗಳು ಪ್ರದರ್ಶನ ಮತ್ತು ಮಾರಾಟವಾಗುತ್ತಿರುವುದು ಸಾಂಸ್ಕೃತಿಕ ನಗರಿಗೆ ತಕ್ಕದ್ದಾಗಿದೆ. ಇಷೊಂದು ಮಾದರಿ ಕೇಕ್‌ಗಳನ್ನು ಇದೇ ಮೊದಲ ಬಾರಿಗೆ ವೀಕ್ಷಿಸುತ್ತಿದ್ದೇನೆ ಎಂದರು.

Advertisement

ಹೆಚ್ಚಿನ ಆಕೃತಿ ನಿರ್ಮಾಣ: ಕಳೆದ ವರ್ಷ ಮಾಗಿ ಉತ್ಸವಕ್ಕೆ ನನ್ನನ್ನು ಆಹ್ವಾನಿಸಿಲ್ಲದಿದ್ದರಿಂದ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. “ಎರಡು ಮೂರು ದಿನಗಳಲ್ಲಿ ಮಳಿಗೆದಾರರಿಗೆ ಹೇಳಿದ್ದರಿಂದ ಹೆಚ್ಚಿನ ಆಕೃತಿಗಳನ್ನು ಪ್ರದರ್ಶಿಸಲು ಸಾಧ್ಯವಾಗಿಲ್ಲ. ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ, ಮುಂದಿನ ವರ್ಷದಿಂದ 10 ದಿನಗಳ ಮುಂಚಿತವಾಗಿ ಮಳಿಗೆದಾರರಿಗೆ ಮಾಹಿತಿ ನೀಡಿ ಹೆಚ್ಚಿನ ಆಕೃತಿಗಳನ್ನು ನಿರ್ಮಿಸುವಂತೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು.

ಬೇಕಾಬಿಟ್ಟಿ ಆಯೋಜನೆ: ಪ್ರತಿ ಮಾಗಿ ಉತ್ಸವದಲ್ಲಿ ಏರ್ಪಡಿಸುವ ಕೇಕ್‌ ಉತ್ಸವ ವಿಶಿಷ್ಟ ರೀತಿಯಲ್ಲಿ ರೂಪುಗೊಳ್ಳುತ್ತಿತ್ತು. ಜೊತೆಗೆ ನಾನಾ ಮಾದರಿ, ಕಲಾಕೃತಿಯುಳ್ಳ ಕೇಕ್‌ಗಳು ಪ್ರದರ್ಶನದಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದವು. ಆದರೆ ಈ ಬಾರಿ ಅಧಿಕಾರಿಗಳು ಮತ್ತು ಸಂಘಟನೆಗಳ ಸಂವಹನ ಕೊರತೆ ಹಾಗೂ ಅಸಡ್ಡೆಯ ಪರಿಣಾಮ ಕೆಲವೇ ಕೆಲವು ಮಳಿಗೆಗಳಲ್ಲಿ ಬೇಕರಿ ತಿನಿಸುಗಳನ್ನಿರಿಸಿರುವುದು ಜನರಲ್ಲಿ ಬೇಸರ ಮೂಡಿಸಿದೆ. ಬೆಕರಿಗಳಲ್ಲಿ ಸಿಗುವ ಸಾಮಾನ್ಯ ತಿನಿಸುಗಳು ಇಲ್ಲಿಯೂ ಸಿಗುತ್ತಿವೆ. ಹೀಗಿದ್ದಮೇಲೆ ಕೇಕ್‌ ಉತ್ಸವ ಮಾಡದಿದ್ದರೇನು ಎಂದು ಮೈಸೂರಿಗರು ಸಂಘಟಕರ ವಿರುದ್ಧ ಹರಿಹಾಯ್ದರು.

Advertisement

Udayavani is now on Telegram. Click here to join our channel and stay updated with the latest news.

Next