ಹಳೆಯಂಗಡಿ: ಮೀನುಗಾರಿಕೆಗೆ ಪೂರಕ ವಾಗಿ ಪರ್ಯಾಯ ಉದ್ಯೋಗವಾಗಿರುವ ಪಂಜರ ಮೀನು ಕೃಷಿಯಲ್ಲಿ ಕೇಂದ್ರೀಯ ಸಮುದ್ರ ಮೀನು ಗಾರಿಕಾ ಸಂಶೋಧನಾ ಕೇಂದ್ರದ ಮಾರ್ಗ ದರ್ಶನದಲ್ಲಿ ಇಂಡಿಯನ್ ಪಂಪೆನೋ (ಬಲೆಒಡು) ಮೀನನ್ನು ಸಾಕಾಣಿಕೆ ನಡೆಸಿ, ಕೇವಲ 5 ತಿಂಗಳಿನಲ್ಲಿ ಮಾರಾಟಕ್ಕೆ ಯೋಗ್ಯ ವಾಗಿ ಉತ್ತಮ ಆದಾಯ ತಂದುಕೊಟ್ಟ ಅಪರೂಪದ ಚಿತ್ರಣ ಹಳೆಯಂಗಡಿ ಗ್ರಾಮ ಪಂಚಾಯತ್‌ನ ಕೊಳುವೈಲು ಪ್ರದೇಶ ದಲ್ಲಿ ಕಂಡು ಬಂದಿದೆ. ಇದು ಕರ್ನಾಟಕ ದಲ್ಲಿಯೇ ಪ್ರಥಮ ಪ್ರಯೋಗವಾಗಿ ರುವುದು ವಿಶೇಷವಾಗಿದೆ.
ಇಂಡಿಯನ್ ಪಂಪೆನೋ (ಬಲೆಒಡು) ಮೀನಿನ ಮರಿಗಳನ್ನು ಕೇರಳದ ತಿರುವನಂತ ಪುರದಿಂದ ತಂದು ಅದನ್ನು ಕಾರವಾರದ ಕೇಂದ್ರದಲ್ಲಿ ಸುಮಾರು ಒಂದೂವರೆ ತಿಂಗಳು ಬೆಳೆಸಿ, ಹಳೆಯಂಗಡಿಯ ಕೊಳುವೈಲು ಪ್ರದೇಶದಲ್ಲಿನ ನಂದಿನಿ ನದಿಯ ಉಪ್ಪು ನೀರಿನ ದಡದಲ್ಲಿ ಫಲಾನುಭವಿಗಳಾದ ಭುಜಂಗ, ಯೋಗೀಶ್, ಗೋವಿಂದ, ಕೃಷ್ಣಪ್ಪ ಅವರನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ಯೋಜನೆಯಲ್ಲಿ ಆಯ್ಕೆ ಮಾಡಿ ಮಂಗಳೂರಿನ ಮೀನುಗಾರಿಕಾ ಇಲಾಖೆ ಹಾಗೂ ಹಳೆಯಂಗಡಿ ಗ್ರಾಮ ಪಂಚಾಯತ್‌ನ ಮೂಲಕ ಅನುಷ್ಠಾನಗೊಳಿಸಲಾಯಿತು.
ಕ್ರಮಬದ್ಧವಾಗಿ 900 ಮರಿಗಳನ್ನು ಪಂಜರ ಮೀನು ಕೃಷಿಯಲ್ಲಿ ಸಾಕಾಣಿಕೆ ನಡೆಸಲಾಗಿದೆ. ಇದೀಗ ಇದರಲ್ಲಿ 866 ಮೀನುಗಳು ಮಾರಾಟಕ್ಕೆ ಯೋಗ್ಯವಾಗಿ ಸಿಕ್ಕಿದ್ದು ಇದರ ಮೌಲ್ಯ ಅಂದಾಜು ಒಂದು ಲಕ್ಷ ರೂ. ಗೂ ಹೆಚ್ಚಾಗಿದೆ. ಒಂದು ಮೀನು ಸಾಧಾರಣ 300ರಿಂದ 350 ಗ್ರಾಂ.ಗಿಂತ ಹೆಚ್ಚಾಗಿ ತೂಗುತ್ತಿದೆ. ಮಾರುಕಟ್ಟೆಯಲ್ಲಿ ಇದಕ್ಕೆ 400ರಿಂದ 450 ರೂ. ಬೆಲೆಯಿದೆ, ಇದನ್ನು ಕೆಎಫ್‌ಡಿಸಿ ಸಂಸ್ಥೆಯು ಖರೀದಿಸುವ ಒಡಂಬಡಿಗೆ ಮಾಡಿಕೊಂಡಿದೆ. ಈ ಯಶಸ್ಸಿನಿಂದ ಫಲಾನುಭವಿಯ ಮುಖದಲ್ಲಿ ಮಂದಹಾಸ ಮೂಡಿದ್ದು ಹಾಗೂ ಕೇಂದ್ರದ ತಂಡದವರು ಸಹ ತಮ್ಮ ಪ್ರಯೋಗ ಯಶಕಂಡಿದ್ದರಿಂದ ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನು ವಿವಿಧೆಡೆ ಮುಂದುವರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಳೆಯಂಗಡಿ ರಾಜ್ಯದ ಗಮನ ಸೆಳೆದಿದೆ
ಸಂಶೋಧನಾ ಕೇಂದ್ರದವರು ಹಾಗೂ ಮೀನುಗಾರಿಕಾ ಇಲಾಖೆಯು ಹಳೆಯಂಗಡಿಯನ್ನು ಗುರುತಿಸಿ, ಮಾರ್ಗದರ್ಶನ ನೀಡಿದ್ದರಿಂದ ಹಾಗೂ ಪಂಚಾಯತ್‌ನ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸಹಕರಿಸಿದ್ದರಿಂದ ಇಲ್ಲಿ ಯಶಸ್ಸಾಗಿದ್ದೇವೆ, ಆರ್ಥಿಕತೆಯಲ್ಲಿ ಚೇತರಿಕೆಗೆ ಪೂರಕವಾಗಿ ಇದೀಗ ಪಂಜರ ಮೀನು ಕೃಷಿಯಿಂದ ಹಳೆಯಂಗಡಿ ರಾಜ್ಯದ ಗಮನ ಸೆಳೆದಿರುವುದು ಸಂತಸ ತಂದಿದೆ.
-ಮುತ್ತಪ್ಪ ಡವಲಗಿ, ಪಿಡಿಒ, ಹಳೆಯಂಗಡಿ ಗ್ರಾಮ ಪಂಚಾಯತ್
ರಾಜ್ಯದಲ್ಲಿಯೇ ಚೊಚ್ಚಲ ಪ್ರಯತ್ನ ಮೀನು ಕೃಷಿಯಲ್ಲಿ ಅದರಲ್ಲೂ ಪಂಜರ ಮೀನು ಕೃಷಿಯಲ್ಲಿ ಪ್ರಯೋಗಾತ್ಮಕವಾಗಿ ಹಳೆಯಂಗಡಿಯ ಪರಿಸರವನ್ನು ಆಯ್ಕೆಮಾಡಿಕೊಂಡು ನಾವು ಚೊಚ್ಚಲ ಪ್ರಯತ್ನದಲ್ಲಿಯೇ ಯಶಸ್ಸು ಕಂಡಿದ್ದೇವೆ, ನದಿಯ ಪಕ್ಕದಲ್ಲಿರುವವರು ಈ ಪರ್ಯಾಯ ವೃತ್ತಿಯನ್ನು ಬಳಸಿಕೊಂಡು ಆದಾಯಗಳಿಸಬಹುದು.
-ಡಾ| ಪ್ರತಿಭಾ ರೋಹಿತ್, ಮುಖ್ಯಸ್ಥರು, ಕೇಂ.ಸ. ಮೀನುಗಾರಿಕಾ ಸಂಶೋಧನ ಕೇಂದ್ರ
ನರೇಂದ್ರ ಕೆರೆಕಾಡು