Advertisement

ಸ್ವಾವಲಂಬಿ ಬದುಕಿಗೆ ಆಸರೆಯಾದ ಪಂಜರದ ಮೀನು ಕೃಷಿ

07:17 PM Oct 04, 2021 | Team Udayavani |

ತೆಕ್ಕಟ್ಟೆ:ಆತನಿಗೆ ಬಾಲ್ಯದಿಂದಲೇ ಕೃಷಿ, ಹೈನುಗಾರಿಕೆ, ಮೀನುಗಾರಿಕೆ ಮೊದಲಾದವುಗಳಲ್ಲಿ ಆಕರ್ಷಣೆ ಹೆಚ್ಚಾಗಿತ್ತು. ಅದಕ್ಕೆ ಬೇಕಾದ ಪೂರಕ ವಾತಾವರಣವೂ ಊರಲ್ಲಿತ್ತು.  ಲಾಭನಷ್ಟದ ಬಗ್ಗೆ ಚಿಂತೆಯೇ ಮಾಡಲಿಲ್ಲ. ಈಗ ಪಂಜರ ಮೀನು ಕೃಷಿಯೂ ಆಸಕ್ತಿ ವಹಿಸಿದವರಿಗೆ ಲಾಭ ತರಬಲ್ಲದು ಎಂಬ ಆಶಾಭಾವನೆ ಮೂಡಿಸುತ್ತಿದ್ದಾನೆ ಆಕರ್ಷ್‌ ಪೂಜಾರಿ.

Advertisement

ಈತ ಕೋಟ ವಿವೇಕ ಜೂನಿಯರ್‌ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ. ಬೇಳೂರಿನ ದೇಲಟ್ಟು ಗೋವಿಂದ ಪೂಜಾರಿ ಹಾಗೂ ವಸಂತಿ ಪೂಜಾರಿ ಈತನ ಹೆತ್ತವರು.

ಪಂಜರದ ಮೀನು ಕೃಷಿಯೆಡೆಗೆ ಆಕರ್ಷಣೆ
ಆಕರ್ಷ್‌ ಬಾಲ್ಯದಿಂದಲೂ ಕೃಷಿ, ಹೈನುಗಾರಿಕೆ, ಕೋಳಿ ಸಾಕಾಣಿಕೆ ಕುರಿತಾಗಿ ಆಸಕ್ತಿ ವಹಿಸಿದ್ದನು. ಇದಕ್ಕೆ ಪೂರಕವಾಗಿ ಮಾವ ಬಸವ ಪೂಜಾರಿ ಅವರು ಮಾರ್ಗದರ್ಶನ ನೀಡಿದ್ದರು. ಅಲ್ಲದೆ ಯೂಟ್ಯೂಬ್‌ನಿಂದ ಮಾಹಿತಿ ಸಂಗ್ರಹಿಸಿ ಕಾಟ್ಲಾ, ರೋಬೋ ಹಾಗೂ ವಿವಿಧ ಜಾತಿಗೆ ಸೇರಿದ ಸುಮಾರು 800ಕ್ಕೂ ಅಧಿಕ ಮೀನಿನ ಮರಿಗಳನ್ನು ಬಳಸಿ ಮನೆ ಸಮೀಪದ ಸಣ್ಣಹೊಳೆಯಲ್ಲಿ ಪ್ರಾಯೋಗಿಕವಾಗಿ ಪಂಜರದ ಮೀನು ಕೃಷಿ ಆರಂಭಿಸಿದ್ದ.

ಪಂಜರ ರಚನೆ
ಪಿವಿಸಿ ಪೈಪ್‌ ಹಾಗೂ ಬಲೆಗಳನ್ನು ಬಳಸಿಕೊಂಡು, ಸುಮಾರು 5 ಸಾವಿರಕ್ಕೂ ಅಧಿಕ ಮೀನು ಸಾಕಣೆ ಮಾಡುವ ಸಾಮರ್ಥ್ಯ ಹೊಂದಿದ 12 ಅಡಿ ಅಗಲ ಹಾಗೂ 8 ಅಡಿ ಎತ್ತರದ ಪಂಜರವನ್ನು 25 ಸಾವಿರ ರೂ. ವೆಚ್ಚದಲ್ಲಿ ಸಿದ್ಧಪಡಿಸಿದ್ದಾನೆ.

ಇದನ್ನೂ ಓದಿ:ತಂತ್ರಜ್ಞಾನ ಆಧಾರಿತ ಹೈನುಗಾರಿಕೆ, ಆಧುನಿಕ ಪದ್ಧತಿ ಅಳವಡಿಕೆಯಿಂದ ಲಾಭದಾಯಕ

Advertisement

ವಿದ್ಯಾರ್ಥಿಯೋರ್ವ ಕಲಿಕೆಯ ಜತೆ ಸ್ವಾವಲಂಬಿ ಬದುಕು ಕಟ್ಟಿಕೊಂಡು ಬಿಡುವಿನ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಮೀನು ಕೃಷಿಯ ಹಾಗೂ ಡೆಕೋರೇಶನ್‌ ಕಾಯಕದಲ್ಲಿ  ತೊಡಗಿಸಿಕೊಂಡಿದ್ದಾನೆ.

ಬಾಲ್ಯದಿಂದಲೂ ಆಕರ್ಷ್‌ ಕಲಿಕೆಯ ಜತೆಗೆ ಸಾಂಪ್ರದಾಯಿಕ ಕೃಷಿ, ಹೈನುಗಾರಿಕೆ, ಮೀನುಗಾರಿಕೆ, ಕೋಳಿ ಸಾಕಾಣಿಕೆ ಹಾಗೂ ತೆಂಗಿನ  ಕಾಯಿ ಕೀಳುವ ಕಾಯಕದಲ್ಲಿ ಆಸಕ್ತಿ ಹೊಂದಿದ್ದಾನೆ.  ಬಿಡುವಿನ ವೇಳೆಯಲ್ಲಿ ಏನಾದರೂ ಚಟುವಟಿಕೆಯಲ್ಲಿ ತೊಡಗಿರುತ್ತಾನೆ ಎಂದು ಆಕರ್ಷ್‌ ಪೂಜಾರಿಯ ತಾಯಿ ವಸಂತಿ ಪೂಜಾರಿ ಹೇಳಿದ್ದಾರೆ.

ಮೀನಿಗೆ ಬೇಡಿಕೆ

ಏರುತ್ತಿರುವ ತಾಪಮಾನ, ಜಲ ಮಾಲಿನ್ಯದಿಂದಾಗಿ ಕಡಲಿನಲ್ಲಿ ಮತ್ಸ್ಯಕ್ಷಾಮ ಉಂಟಾಗಿದೆ. ಹೀಗಾಗಿ ಈ ಮೀನಿಗೆ ಬೇಡಿಕೆ ಇದೆ.  ಈ ಬಾರಿ ಅನುಭವದ ಕೊರತೆಯಿಂದ ಅಷ್ಟೇನು ಲಾಭದಾಯಕವಾಗಿಲ್ಲ. ಮುಂದಿನ ದಿನಗಳಲ್ಲಿ ಸರಕಾರದ ಯೋಜನೆಗಳನ್ನು ಬಳಸಿಕೊಂಡು  ಮೀನು ಕೃಷಿ ವಿಸ್ತರಿಸಬೇಕು ಎನ್ನುವ ಹಂಬಲವಿದೆ.
-ಆಕರ್ಷ್‌ ಪೂಜಾರಿ, ಪಂಜರದ ಮೀನು ಕೃಷಿ ಮಾಡಿದ ವಿದ್ಯಾರ್ಥಿ

– ಟಿ.ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

 

Advertisement

Udayavani is now on Telegram. Click here to join our channel and stay updated with the latest news.

Next