Advertisement

ಕುತೂಹಲಕ್ಕೆ ಕಾರಣವಾದ ಪಂಜರ ಕೃಷಿ ಮೀನುಗಳ ಸಾವು

09:55 PM Dec 11, 2020 | mahesh |

ಕುಂದಾಪುರ: ಕೊರೊನಾ ಅನಂತರದ ಜೀವನಕ್ಕೆ ಆಧಾರವಾಗಿ ನೂರಾರು ಮಂದಿ ಪಂಜರಕೃಷಿ ಮೀನುಗಾರಿಕೆಯಲ್ಲಿ ತೊಡಗಿಕೊಂಡರೆ ಈಗ ಪಂಜರ ಮೀನುಗಾರಿಕೆಗೆ ಆಘಾತ ಒದಗಿದೆ. ತಲಾ 2 ಸಾವಿರದಂತೆ ಮೀನು ಮರಿಗಳಿದ್ದ 115ರಷ್ಟು ಪಂಜರಗಳಲ್ಲಿದ್ದ 1 ಲಕ್ಷಕ್ಕೂ ಅಧಿಕ ಮೀನುಗಳು ಸಾವಿಗೀಡಾಗಿವೆ ಎಂಬ ಆತಂಕವಿದೆ. ಇದಕ್ಕೆಲ್ಲ ಈಚೆಗೆ ಸಮುದ್ರದ ನೀರಿನ ಬಣ್ಣ ಬದಲಾದುದೇ ಕಾರಣ ಎಂಬ ಅನುಮಾನವೂ ಇದೆ. ಪರಿಹಾರಕ್ಕಾಗಿ ಮೀನುಗಾರರು ಮೊರೆ ಇಡುತ್ತಿದ್ದಾರೆ.

Advertisement

ಪಂಜರ ಕೃಷಿ
ಆತ್ಮನಿರ್ಭರ ಭಾರತ ಯೋಜನೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮೀನುಗಾರಿಕಾ ಇಲಾಖೆ ಕೈಗೊಂಡ ಪಂಜರ ಕೃಷಿ ಮೀನುಗಾರಿಕೆಗೆ ಸಬ್ಸಿಡಿಗೆ 1 ಸಾವಿರಕ್ಕೂ ಮಿಕ್ಕಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಮನೆಸಮೀಪ, ಪ್ರತ್ಯೇಕ ಕೊಳ ಇಲ್ಲದೇ ಕಡಿಮೆ ಖರ್ಚಿನಲ್ಲಿ, ಸ್ಥಳೀಯ ಮೀನನ್ನೇ ಆಹಾರವಾಗಿ ಬಳಸಿ ಪಂಜರ ಕೃಷಿ ಮೀನುಗಾರಿಕೆ ಮಾಡಬಹುದಾಗಿದ್ದು 20ಗಿ10 ಅಡಿಯ ಗೂಡಿನಲ್ಲಿ ಮೀನುಗಳನ್ನು ಸಾಕುವುದೇ ಪಂಜರ ಕೃಷಿ. ಮೀನಿನ ಮರಿ ಖರೀದಿ, ಗೂಡು, ಮೀನಿಗೆ ಆಹಾರ, ಕೂಲಿ ಇತ್ಯಾದಿ ಸೇರಿ 1,500 ಮೀನಿಗೆ 2.85 ಲಕ್ಷ ರೂ. ಖರ್ಚಾಗುತ್ತದೆ. ಬಲಿತ ಮೀನು ತಲಾ 1 ಕೆಜಿ ತೂಗಿದರೂ 400 ರೂ. ಧಾರಣೆಯಂತೆ 300 ಮೀನುಗಳ ಲೆಕ್ಕ ಬಿಟ್ಟು 1,200 ಕೆಜಿಗೆ 4.80 ಲಕ್ಷ ರೂ. ಆದಾಯ ಬರುತ್ತದೆ. ಬಲಿತ ಮೀನು 3ರಿಂದ 4 ಕೆಜಿವರೆಗೆ ಬರುವ ಕಾರಣ 12 ಲಕ್ಷ ರೂ.ಗೂ ಹೆಚ್ಚು ಆದಾಯ ಬರುವ ನಿರೀಕ್ಷೆಯಲ್ಲಿ ಮೀನುಗಾರರಿದ್ದರು.

ನೂರಕ್ಕೂ ಅಧಿಕ ಗೂಡು
ಇಲ್ಲಿನ ಪಂಚಗಂಗಾವಳಿಯಲ್ಲಿ 115ಕ್ಕೂ ಅಧಿಕ ಗೂಡುಗಳಲ್ಲಿ ಮೀನು ಸಾಕಲಾಗುತ್ತಿದೆ. ಪ್ರತಿ ಪಂಜರ ದಲ್ಲೂ ತಲಾ 2 ಸಾವಿರದಷ್ಟು ಮೀನಿದೆ. ಮೀನು ಗಾತ್ರದಲ್ಲಿ ಬಲಿತಂತೆ ಅದನ್ನು ಪ್ರತ್ಯೇಕಿಸಿ ಮಾರಾಟ ಮಾಡಲಾಗುತ್ತದೆ.

ಸಾವು
ಖಚಿತ ಲೆಕ್ಕ ಇಲ್ಲದೇ ಇದ್ದರೂ 115 ಪಂಜರಗಳ ಭಾಗಶಃ 60 ಶೇ.ದಷ್ಟು ಮೀನುಗಳು ಸಾವಿಗೀಡಾಗುತ್ತಿವೆ ಎನ್ನುತ್ತಾರೆ ಕುಮಾರ ಖಾರ್ವಿ. ಸಾವಿಗೀಡಾದ ಮೀನುಗಳನ್ನು ಪ್ರತ್ಯೇಕಿಸಿ ನೀರಿನಿಂದ ಹೊರತಂದು ಹೂಳಲಾಗುತ್ತಿದೆ ಎನ್ನುತ್ತಾರೆ ರವಿರಾಜ ಖಾರ್ವಿ. ಪ್ರತಿದಿನವೂ ಮೀನುಗಳು ಸಾಯುತ್ತಿದ್ದು ನಿಖರ ಲೆಕ್ಕಕ್ಕೆ ದೊರೆಯುತ್ತಿಲ್ಲ ಎನ್ನುತ್ತಾರೆ ಸಂತೋಷ್‌ ಖಾರ್ವಿ. ಮೀನುಗಾರಿಕಾ ಇಲಾಖೆ ಇದಕ್ಕೆ ಪರಿಹಾರ ನೀಡಬೇಕೆನ್ನುತ್ತಾರೆ ಅನಿಲ್‌ ಖಾರ್ವಿ. ಕೊಳಚೆ ನೀರು ಹೊಳೆಗೆ ಸೇರುವುದೇ ಮೀನುಗಳು ಸಾಯಲು ಕಾರಣ ಎನ್ನುತ್ತಾರೆ ಶಂಕರ ಖಾರ್ವಿ. ತ್ಯಾಜ್ಯ ಸೇರದಂತೆ ಕಟ್ಟುನಿಟ್ಟು ಮಾಡಬೇಕು ಎನ್ನುತ್ತಾರೆ ಸದಾಶಿವ ಖಾರ್ವಿ ಹಾಗೂ ಪ್ರವೀಣ್‌ ಖಾರ್ವಿ. ಖಾರ್ವಿಕೇರಿ, ಮದ್ದುಗುಡ್ಡೆ, ಕೋಡಿ, ಆನಗಳ್ಳಿ, ಟಿ.ಟಿ. ರಸ್ತೆ, ಚರ್ಚ್‌ರಸ್ತೆ, ಈಸ್ಟ್‌ ಬ್ಲಾಕ್‌ ರಸ್ತೆ, ಗಂಗೊಳ್ಳಿ, ಚಿಕ್ಕನ್‌ಸಾಲು ರಸ್ತೆ ಮೊದಲಾದ ಪ್ರದೇಶಗಳ 92 ಜನರ ಗೂಡುಗಳು ಇಲ್ಲಿವೆ.

ಭೇಟಿ; ಸಮೀಕ್ಷೆ
ಶುಕ್ರವಾರ ಮೀನುಗಾರಿಕಾ ಇಲಾಖೆ ಅಧಿಕಾರಿ ಹೇಮಲತಾ ಭೇಟಿ ನೀಡಿ ಹಾನಿಯ ಸಮೀಕ್ಷೆ ನಡೆಸಿದ್ದಾರೆ. ಶನಿವಾರ ಮಂಗಳೂರಿನ ಮೀನುಗಾರಿಕಾ ಕಾಲೇಜಿನ (ಸಿಎಂಎಫ್ಆರ್‌ಐ) ಪರಿಣತರು ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಸಮುದ್ರದ ನೀರು ಬಣ್ಣ ಬದಲಾದ ಕಾರಣ ಇಂತಹ ಅವಾಂತರ ನಡೆದಿದೆಯೇ ಎಂದು ಅವರು ಪರಿಶೀಲಿಸಿ ತಿಳಿಸಲಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಸಮುದ್ರದ ನೀರಿನ ಬಣ್ಣ ಬದಲಾದುದೇ ಕಾರಣ ಎನ್ನುವುದು ಪರಿಣತರ ಅಭಿಪ್ರಾಯ. ವೈರಸ್‌ ದಾಳಿ ಮಾಡಿದ ಮಾದರಿಯಲ್ಲಿದ್ದು ಮೀನಿನ ಮೃತದೇಹಗಳಿಂದಾಗಿ ಕಾಯಿಲೆ ಹರಡುತ್ತಿದೆ. ಆದ್ದರಿಂದ ತತ್‌ಕ್ಷಣ ಪ್ರತ್ಯೇಕಿಸಬೇಕಾದ ಅನಿವಾರ್ಯ ಇದೆ.

Advertisement

ಪ್ರಸ್ತಾವ ಕಳುಹಿಸಲಾಗುವುದು
ಮೀನುಗಳ ಸಾವು ಗಮನಕ್ಕೆ ಬಂದಿದ್ದು ಇಲಾಖೆಯಿಂದ ಸಮೀಕ್ಷೆ ಮಾಡಲಾಗಿದೆ. ಪರಿಹಾರಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗುವುದು. ಈವರೆಗೆ ಇಂತಹ ದುರ್ಘ‌ಟನೆ ನಡೆಯದ ಕಾರಣ ಯಾವ ರೀತಿಯ ಪರಿಹಾರ ನೀಡಬೇಕೆಂದು ಇಲಾಖೆಯಿಂದ ಸೂಚನೆ ಬರಬೇಕಿದೆ. ಮೀನುಗಾರಿಕೆಗೆ ತೆರಳಿದಾಗ ಅವಘಡ ಸಂಭವಿಸಿದರೆ ಮಾತ್ರ ಪರಿಹಾರ ನೀಡಲು ಸದ್ಯ ಅವಕಾಶ ಇದೆ. ಈ ಹಿಂದೆ ಸಿಗಡಿ ಕೃಷಿ ನಾಶವಾದಾಗಲೂ ಪರಿಹಾರಕ್ಕೆ ಅವಕಾಶ ಇರಲಿಲ್ಲ. ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಲು ಮನವಿ ಮಾಡಲಾಗಿದೆ.
– ಗಣೇಶ್‌, ಉಪ ನಿರ್ದೇಶಕರು, ಮೀನುಗಾರಿಕಾ ಇಲಾಖೆ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next