ಉಡುಪಿ: ಮಣಿಪಾಲ ವಿ.ವಿ.ಯ ಡಾ| ಟಿಎಂಎ ಪೈ ಭಾರತೀಯ ಸಾಹಿತ್ಯ ಪೀಠವು ಮಣಿಪಾಲದ ಡಾ| ಟಿಎಂಎ ಪೈ ಪ್ಲಾನಿಟೋರಿಯಂ ಆವರಣದಲ್ಲಿರುವ ಡಾ| ಗಂಗೂಬಾೖ ಹಾನಗಲ್ ಸಭಾಂಗಣದಲ್ಲಿ ಫೆ. 25 ಮತ್ತು 26ರಂದು “ಅಡುಗೆ ಮನೆ ಜಗತ್ತು’ ಕುರಿತು ವಿಚಾರ ಸಂಕಿರಣವನ್ನು ಆಯೋಜಿಸಿದೆ.
ಫೆ. 25ರ ಬೆಳಗ್ಗೆ 10ಕ್ಕೆ ಬಂಗಾಲಿ ಲೇಖಕರಾದ ಡಾ| ನವನೀತ ದೇವ್ ಸೇನ್ ಅವರು ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಮಣಿಪಾಲ ವಿ.ವಿ. ಸಹಕುಲಾಧಿಪತಿ ಡಾ|ಎಚ್.ಎಸ್.ಬಲ್ಲಾಳ್ ವಹಿಸುವರು. ಫೆ. 26ರ ಸಂಜೆ 6ಕ್ಕೆ ರಂಗಕರ್ಮಿ ಅರುಂಧತಿ ನಾಗ್ ಸಮಾರೋಪ ಭಾಷಣ ಮಾಡಲಿದ್ದಾರೆ. ವಿಮರ್ಶಕ ಪ್ರೊ| ಟಿ.ಪಿ. ಅಶೋಕ್ ಅವಲೋಕನ ನಡೆಸುವರು ಎಂದು ಪೀಠಾಧ್ಯಕ್ಷೆ ವೈದೇಹಿ ತಿಳಿಸಿದ್ದಾರೆ.
ಒಂದು ಕಾಲದಲ್ಲಿ ಮಹಿಳೆಯರ ಸಾಹಿತ್ಯವೆಂದರೆ “ಅಡುಗೆ ಮನೆ ಸಾಹಿತ್ಯ’ ಎಂದು ಹೇಳುತ್ತಿದ್ದರು. ಒಂದೊಂದು ಕಾಲದಲ್ಲಿ ಮೂಡಿಬಂದ ಅಭಿಪ್ರಾಯಗಳನ್ನೆಲ್ಲಾ ಮೀರಿ ಸಮಕಾಲೀನ ಮಹಿಳೆಯರು ಮುನ್ನಡೆದಿದ್ದಾರೆ. ಈಗ ಅಡುಗೆ
ಮನೆ ಸಾಹಿತ್ಯದ ಕುರಿತೇ ಎರಡು ದಿನಗಳ ವಿಚಾರ ಸಂಕಿರಣವನ್ನು ಸಂಯೋಜಿಸಲಾಗಿದೆ.
ಅಡುಗೆ, ಊಟದ ಉಪಮೆ- ಪ್ರತಿಮೆಗಳು ಮತ್ತೂ ದೊಡ್ಡ ಲೋಕಕ್ಕೆ ಲಗ್ಗೆ ಹಾಕುವ ಮಾರ್ಗವಾಗಿತ್ತು. ಪ್ರೀತಿಯೂ ವ್ಯಕ್ತವಾಗುತ್ತಿತ್ತು.
ಆ ಖಾಸಗಿ ತಾಣದಲ್ಲಿ ಲೋಕದ ಬಗ್ಗೆ ಅವಲೋಕನವೂ ನಡೆಯುತ್ತಿತ್ತು. ಮಹಿಳೆಗೆ ಅಡುಗೆ ಮನೆ ಶಕ್ತಿ ಕೊಡುವ ಸ್ಥಳ. ಪುರಾಣಗಳು, ಗಾಂಧೀ ಮೊದಲಾದ ಚಿಂತಕರು ಅಡುಗೆ ಆಹಾರಗಳನ್ನು ಲಿಂಗ ರಾಜಕೀಯದಾಚೆಗೆ ವಿಸ್ತರಿಸಿ ಅದಕ್ಕೆ ಹೆಣ್ತನ, ಪೋಷಣೆ, ಪ್ರೀತಿಯ ಗುಣ ಕೊಟ್ಟರು. ಅದಕ್ಕೆ ಸಮುದಾಯಗಳನ್ನು ಬೆಸೆಯುವ ಗುಣ ಇದೆ ಎನ್ನುವುದನ್ನು ಪ್ರತಿಪಾದಿಸಿದರು. ಈಗ ಲೋಕವೇ ಒಂದು ಅಡುಗೆ ಮನೆಯಾಗಿದೆ. ಇಲ್ಲಿ ಮಾರುಕಟ್ಟೆಯೂ ಇದೆ. ಜಾಗತಿಕ ರಾಜಕಾರಣವೂ ಅಡಗಿದೆ. ಇವೆಲ್ಲದರ ಹಿನ್ನೆಲೆಯಲ್ಲಿ ಈ ಎರಡು ದಿನ ಉಪನ್ಯಾಸಗಳು, ಕಥೆ-ಕವನ ವಾಚನ, ಅನುಭವಕಥನ, ತಾಳಮದ್ದಲೆ, ಶೋಭಾನೆ, ಸಂಗೀತ, ಮಕ್ಕಳ ಯಕ್ಷಗಾನಗಳು ನಡೆಯಲಿವೆ.