Advertisement
ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರ (ಟ್ರಾಯ್) 2017ರ ಮಾರ್ಚ್ 3ರಂದು ಕೇಬಲ್ ಗ್ರಾಹಕರು ಹಾಗೂ ಡೈರೆಕ್ಟ್ ಟು ಹೋಮ್ ಬಳಕೆದಾರರಿಗಾಗಿ ನೂತನ ಬ್ರಾಡ್‌ಕಾಸ್ಟಿಂಗ್ ಅಂಡ್ ಕೇಬಲ್ ಸರ್ವೀಸಸ್ ನಿಯಮಗಳನ್ನು ಜಾರಿಗೆ ತಂದಿತ್ತು. 2018ರ ಜುಲೈ ಮೂರರ ವೇಳೆಗೆ ಇದನ್ನು ಜಾರಿ ಮಾಡುವ ಚೌಕಟ್ಟನ್ನು ಟ್ರಾಯ್ ರೂಪಿಸಿ 2018ರ ಡಿಸೆಂಬರ್ 29 ಹಳೆಯ ದರ, ಚಂದಾ ಮಾದರಿಗೆ ಕೊನೆಯ ದಿನ ಎಂದು ಹೇಳಿತ್ತು.
Related Articles
ಗ್ರಾಹಕರಿಗೆ ಹೊಸ ಮಾದರಿ ದುಬಾರಿಯಾಗುತ್ತದೆ ಎಂಬ ವಾದವಿದೆ. ಕನ್ನಡದ ಉದಾಹರಣೆಯನ್ನೇ ತೆಗೆದುಕೊಂಡು ಒಂದು ಮಟ್ಟಿಗೆ ವಿಷಯವನ್ನು ವಿಶ್ಲೇಷಿಸಬಹುದು. 130 ರೂ.ಗಳ ಕನಿಷ್ಠ ಶುಲ್ಕದಲ್ಲಿ 100 ಉಚಿತ ಚಾನೆಲ್‌ಗಳು ಬರುತ್ತವೆ. ಅದರಲ್ಲಿ ಡಿಡಿ ಡೈರೆಕ್ಟ್‌ನ 28 ಚಾನೆಲ್ ಪ್ರಸಾರ ಕಡ್ಡಾಯ. ಅಂದರೆ, ಉಳಿದ 72 ಚಾನೆಲ್‌ಗಳನ್ನು ಚಂದಾದಾರರೇ ಆಯ್ಕೆ ಮಾಡಿಕೊಳ್ಳಬಹುದು. ಇದರಿಂದ ಸೇವಾದಾತರು “ತುರುಕುವ’ ಚಾನೆಲ್‌ಗಳ ಬದಲಾಗಿ ನಾವು ನಮಗೆ ಬೇಕಾದ ಎಫ್ಟಿಎ ಚಾನೆಲ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಚಾಲ್ತಿಯಲ್ಲಿ 500ಕ್ಕೂ ಹೆಚ್ಚು ಎಫ್ಟಿಎ ಚಾನೆಲ್‌ಗಳಿವೆ. ಉಚಿತ ಕನ್ನಡ ಚಾನೆಲ್‌ಗಳ ಹೊರತಾಗಿ ಈಗ ಲಭ್ಯ ಇರುವ ಶುಲ್ಕ ಸಹಿತ ಕನ್ನಡ ಚಾನೆಲ್‌ಗಳ ಖರೀದಿಗೆ ಸರಿಸುಮಾರು 118 ರೂ. ವೆಚ್ಚವಾಗುತ್ತದೆ. ಅಂದರೆ ಬರೀ ಕನ್ನಡದ ವೀಕ್ಷಕ ಮಾಸಿಕ 258 ರೂ. ಮತ್ತು ಅದಕ್ಕೆ ಶೇ. 18ರ ಜಿಎಸ್‌ಟಿ ಎಂದರೆ ಸುಮಾರು 300 ರೂ.ಗಳ ಶುಲ್ಕ ತೆರಬೇಕಾಗುತ್ತದೆ.
Advertisement
ಕೆಲವು ಡಿಟಿಎಚ್ ಮಾದರಿಯಲ್ಲಿ 160, 180 ರೂ.ಗಳ ಮಾಸಿಕ ಶುಲ್ಕದಲ್ಲಿ ಕನ್ನಡ ಚಾನೆಲ್ ನೋಡುವ ವೀಕ್ಷಕರಿಗೆ ಇದು ದುಬಾರಿಯಾಗುತ್ತದೆ. ಕೇಬಲ್‌ನಲ್ಲಿ ಕನಿಷ್ಠ ಶುಲ್ಕವೇ 250 ರೂ. ಇದೆ. ಬೆಂಗಳೂರಿನಂತ ನಗರ ಭಾಗದ ಕೇಬಲ್ ವೀಕ್ಷಕರಿಗೆ ಹೆಚ್ಚಿನ ದರವೇ ಇದೆ. ಈ ಹಂತದಲ್ಲಿ ಎರಡೂ ಅಂಶಗಳು ಗಮನಾರ್ಹ. ನೆನಪಿರಲಿ, 130 ರೂ.ಗಳ ನಿಗದಿತ ಕನಿಷ್ಠ ಶುಲ್ಕವನ್ನು ಕೂಡ ಸೇವಾದಾತರು ಕಡಿಮೆ ಮಾಡಿ ಆಫರ್ ಕೊಡಲು ಅವಕಾಶ ಕಲ್ಪಿಸಲಾಗಿದೆ. ಇಷ್ಟಕ್ಕೂ ಸೇವಾದಾತರೇ ಪೇ ಚಾನೆಲ್‌ಗಳ ಗೊಂಚಲನ್ನು ರೂಪಿಸಿ ಚಂದಾದಾರರ ಮುಂದೆ ಆಯ್ಕೆಗೆ ಇಡಬಹುದು ಎಂದು ಟ್ರಾಯ್ ಹೇಳಿದೆ. ಈಗಿನ ವಿದ್ಯಮಾನಗಳನ್ನು ನೋಡಿದರೆ ಗೊಂಚಲಗಳು ವೀಕ್ಷಕರಿಗೆ ಲಾಭ ಒದಗಿಸುವುದು ಖಚಿತ.
19 ರೂ.ನಷ್ಟು ಸಸ್ತಾ!ಚಾನೆಲ್‌ಗಳ ಮಾಲೀಕರು ತಮ್ಮದೇ ಆದ ಚಾನೆಲ್ ಗೊಂಚಲನ್ನು ಸೃಷ್ಟಿಸಿ, ಬಿಡಿ ಬಿಡಿ ಚಾನೆಲ್‌ಗಳ ಬೆಲೆಗಿಂತ ಕಡಿಮೆ ಮೊತ್ತಕ್ಕೆ ಒದಗಿಸಬಹುದು. ಇಂಥ ಗೊಂಚಲಿನಲ್ಲಿ ಯಾವುದೇ ಎಫ್ಟಿಎ ಚಾನೆಲ್ ಇರುವಂತಿಲ್ಲ. ಒಂದೇ ಚಾನೆಲ್‌ನ ಎಸ್‌ಡಿ, ಹೆಚ್‌ಡಿ ಕೂಡ ಸೇರಿರುವಂತಿಲ್ಲ. ಒಂದು ಗೊಂಚಲಿನಲ್ಲಿರುವ ಚಾನೆಲ್‌ಗಳ ವಾಸ್ತವ ಅ ಲಾ ಕಾರ್ಟೆ(ಚಾನೆಲ್‌ನ ಬಿಡಿ ದರ) ಎಂಆರ್‌ಪಿ 19 ರೂ.ಗಿಂತ ಹೆಚ್ಚಾಗಿರುವಂತಿಲ್ಲ. ಅಂದರೆ, 19 ರೂ.ಗಿಂತ ಹೆಚ್ಚು ದರವಿಟ್ಟಿದ್ದನ್ನು ಗೊಂಚಲಿಗೆ ಸೇರಿಸುವಂತಿಲ್ಲ. ಈ ನಿಯಮ ಡಿಟಿಎಚ್ ಚಂದಾದಾರರಿಗೆ ತುಂಬಾ ಮುಖ್ಯವಾಗುತ್ತದೆ. ಸಾಮಾನ್ಯವಾಗಿ ಕ್ರೀಡಾ ಚಾನೆಲ್‌ಗಳಿಗೆ ವಿಶೇಷ ಸಂದರ್ಭಗಳಲ್ಲಿ 40-50 ರೂ. ದರ ಇರಿಸುವುದು ಜಾಯಮಾನವಾಗಿತ್ತು. ಉದಾಹರಣೆಗೆ- ಟಿ20 ವಿಶ್ವಕಪ್, ಐಪಿಎಲ್ ಸಂದರ್ಭದಲ್ಲಿ ನೇರ ಪ್ರಸಾರವಾಗುವ ಚಾನೆಲ್‌ನ ದರ ಹೆಚ್ಚುತ್ತಿತ್ತು. ಈಗ ಅದಕ್ಕೆ ಬ್ರೇಕ್ ಬೀಳಲಿದೆ. ಇದೇ ರೀತಿ ಕೆಲವು ನಿರ್ದಿಷ್ಟ ಚಾನೆಲ್‌ಗಳನ್ನು ಅ ಲಾ ಕಾರ್ಟೆ ಸ್ವರೂಪದಲ್ಲಿ ಪಡೆಯಲು ಕೂಡ ನಿರ್ಬಂಧಿಸಲಾಗುತ್ತಿತ್ತು. ಸಾಮಾನ್ಯ ಪ್ಲಾನ್‌ನಲ್ಲಿರುವ ಗ್ರಾಹಕ ಈ ಚಾನೆಲ್ ಸಬ್‌ಸ್ಕೈಬ್ ಮಾಡುವಂತಿಲ್ಲ ಎನ್ನಲಾಗುತ್ತಿತ್ತು. ಇನ್ನೊಂದು ನಿಯಮ ಕೂಡ ಗಮನಿಸಬೇಕು. ಒಂದು ಚಾನೆಲ್‌ಅನ್ನು ಓರ್ವ ಗ್ರಾಹಕ ಆಯ್ಕೆ ಮಾಡಿಕೊಂಡು ಅವನು ಬಯಸುವ ಅವಧಿಯವರೆಗಿನ ಶುಲ್ಕ ಪಾವತಿಸಿದರೆ, ಈ ಸಮಯದಲ್ಲಿ ಯಾವುದೇ ಸಂದರ್ಭದಲ್ಲಾಗುವ ಚಾನೆಲ್ ದರದ ಏರಿಕೆ ಅವನನ್ನು ಬಾಧಿಸುವಂತಿಲ್ಲ. ಲಾಕಿಂಗ್ ಅವಧಿಯಲ್ಲಿಯೂ ಶುಲ್ಕ ಏರಿಕೆ ಅಸಮ್ಮತ. ಒಂದು ಗೊಂಚಲಿನಿಂದ ಒಂದು ಚಾನಲ್‌ನ್ನು ಕೈಬಿಡಲಾದರೆ ಅದಕ್ಕೆ ಪರ್ಯಾಯ ಎಂದು ಏಕಾಏಕಿ ಬೇರೆ ಚಾನೆಲ್ ಕೊಡುವಂತಿಲ್ಲ. ಜಾರಿ ಹೇಗೆ?
ನಿಯಮಗಳನ್ನು ರೂಪಿಸುವಾಗ ಟ್ರಾಯ್ ಒಂದು ಮಾತನ್ನು ಹೇಳಿತ್ತು. ಪ್ರತಿ ಗ್ರಾಹಕನಿಗೆ ಕೇಬಲ್ ಅಥವಾ ಡಿಷ್ ಮಾಲೀಕ ಒಂದು ಮುದ್ರಿತ ಚಾನೆಲ್ ಪಟ್ಟಿಯನ್ನು ಒದಗಿಸಬೇಕು. ಅದರಲ್ಲಿ ಗ್ರಾಹಕ ತನ್ನ ಆಯ್ಕೆಯ ಉಚಿತ ಹಾಗೂ ಪೇ ಚಾನೆಲ್‌ಗಳನ್ನು ಗುರುತಿಸಬೇಕು. ಈ ಆಯ್ಕೆ ಪಟ್ಟಿಯ ಒಂದು ಪ್ರತಿಯನ್ನು ಸೇವಾದಾತ ಗ್ರಾಹಕನಿಗೂ ಕೊಡಬೇಕು. ಆತನ ಪೇ ಚಾನೆಲ್, ಗೊಂಚಲಿನ ಆಯ್ಕೆ ಆಧಾರವಾಗಿ ಶುಲ್ಕ ಮತ್ತು ಅದರ ಮೇಲಿನ ಜಿಎಸ್‌ಟಿ ಸೇರಿಸಿ ಚಂದಾ ಪಾವತಿಸಬೇಕಾಗುತ್ತದೆ. ಚಾನೆಲ್‌ಗಳ ಆಯ್ಕೆಗೆ ಲಾಕಿಂಗ್ ಅವಧಿ ಇರುತ್ತದೆ ಎಂದು ಹೇಳಲಾಗಿದ್ದರೂ ಆ ಅವಧಿ ಎಷ್ಟು ಎಂದು ನಿರ್ದಿಷ್ಟಪಡಿಸಿದ್ದು ನಿಯಮಗಳಲ್ಲಿ ಕಾಣಿಸಿಲ್ಲ. ಈಗಿನ ಪರಿಷ್ಕೃತ ಆದೇಶದಲ್ಲಿ ಚಂದಾದಾರರ ಚಾನೆಲ್ ಆಯ್ಕೆಗೆ ಆಯಾ ಸೇವಾದಾತರು ಅವರದೇ ಮಾದರಿಗಳನ್ನು ಪರಿಚಯಿಸಲು ಸ್ವಾತಂತ್ರ್ಯ ನೀಡಲಾಗಿದೆ. ಕೆಲವು ಸಂಭಾವ್ಯ ಗೊಂದಲಗಳಿಗೆ ಟ್ರಾಯ್ ಮುಂಚಿತವಾಗಿಯೇ ಉತ್ತರಿಸಿದೆ. ಡಿಟಿಎಚ್‌ನಲ್ಲಿ ಒಂದು ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಸಂಪರ್ಕಗಳಿದ್ದರೆ ಹೆಚ್ಚುವರಿ ಸಂಪರ್ಕವನ್ನು ಮೊಬೈಲ್‌ನ ಎರಡನೇ ಸಿಮ್, ಪ್ಲಾನ್, ಎಸ್‌ಟಿ ಮಾದರಿಯಲ್ಲಿಯೇ ಪರಿಗಣಿಸಲಾಗುತ್ತದೆ. ಪ್ರಮೋಷನ್ ಮಾದರಿಯಲ್ಲಿ ಬೇಕಿದ್ದರೆ ಸೇವಾದಾತ ಮಾಸಿಕ ಶುಲ್ಕ 130ರಲ್ಲಿ ರಿಯಾಯಿತಿ ಕೊಡಬಹುದು. ಪ್ರತಿ ಗ್ರಾಹಕನಿಗೆ ಒಂದು ನಿರ್ದಿಷ್ಟ ಐಡಿಯನ್ನು ಸೃಷ್ಟಿಸಬೇಕಾಗುತ್ತದೆ. ಇದು ಈಗಾಗಲೇ ಡಿಷ್ ಮಾದರಿಯಲ್ಲಿ ಇದ್ದರೂ, ಕೇಬಲ್ ಸಂಪರ್ಕಿತ ಗ್ರಾಹಕರಲ್ಲಿ ಇರಲಿಲ್ಲ. ಇನ್ನು ಮುಂದೆ ಅಲ್ಲೂ ಐಡಿ ಬರಲಿದೆ. ನೋಂದಾಯಿತ ಮೊಬೈಲ್‌ಗೆ ಎಸ್‌ಎಂಎಸ್ ರೂಪದಲ್ಲಿ ಈ ಮಾಹಿತಿ ಒದಗಿಸಲಾಗುತ್ತದೆ. ಎಲ್ಲ ಡಿಷ್ ಕಂಪನಿಗಳು, ಕೇಬಲ್ ಮಾಧ್ಯಮದವರು ಕೊಡುವ ಚಾನೆಲ್‌ಗಳ ದರ ಎಲ್ಲ ಪ್ಲಾಟ್‌ಫಾರಂಗಳಲ್ಲಿ ಒಂದೇ ಇರುವುದು ಕಡ್ಡಾಯವಾಗಿದೆ. ಕೇಬಲ್ ಅಥವಾ ಡಿಷ್‌ನಲ್ಲಿ ತಾತ್ಕಾಲಿಕ ರಾಮ ತೆಗೆದುಕೊಳ್ಳಲು ಕೂಡ ಅವಕಾಶ ಸಿಕ್ಕಲಿದೆ. 15 ದಿನಗಳ ಮುನ್ನ ಸೂಚನೆ ಕೊಟ್ಟು ಒಂದು ತಿಂಗಳಿಗೆ ಕಡಿಮೆ ಇಲ್ಲದಂತೆ ಸೇವಾ ಸ್ಥಗಿತಕ್ಕೆ ಮನ ಸಲ್ಲಿಸಬಹುದು. ತಿಂಗಳ ಗುಣಾಕಾರದಲ್ಲಿಯೇ ಸೇವಾ ವಿರಾಮವನ್ನು ಮುಂದುವರೆಸಬಹುದು. ಆದರೆ ಟ್ರಾಯ್ ಈ ವಿರಾಮದ ಅವಧಿಯ ಶುಲ್ಕ, ಮಿನಿಮಮ್ ಕುರಿತು ಯಾವುದೇ ಸ್ಪಷ್ಟನೆ ನೀಡಿಲ್ಲ. ವಂಚನೆಗೆ ಕೊನೆ ಎಂದು?
ಸೇವಾ ಗುಣಮಟ್ಟದಲ್ಲಿ ವ್ಯತ್ಯಯ ಕೇಬಲ್ ವೀಕ್ಷಕರ ಬಲು ದೊಡ್ಡ ಸವಾಲಾದರೆ ಡಿಟಿಎಚ್ ಚಂದಾದಾರರನ್ನು ಆ ಸೇವೆಯ ಕಂಪನಿಗಳು ಭಿನ್ನ ಭಿನ್ನವಾಗಿ ವಂಚಿಸುವುದರಲ್ಲಿ ಸಿದ್ದಹಸ್ತರು. ಉಚಿತ ಗ್ರಾಹಕ ಸೇವಾ ಸಂಖ್ಯೆಯನ್ನು ಕೊಡಬೇಕು ಎಂಬ ನಿಯಮವಿದ್ದರೂ ಡಿಷ್ ಟಿ 1860ದಿಂದ ಆರಂಭವಾಗುವ ನಂಬರ್‌ಅನ್ನೇ ಸ್ಕ್ರೀನ್ ಮೇಲೆ ಪ್ರದರ್ಶಿಸುತ್ತದೆ. ಮೌಲ್ಯಾಧಾರಿತ ಸೇವೆಗಳಲ್ಲಂತೂ ಮಾಡುವ ಮೋಸದಲ್ಲಿ ಅವರು ಕಡಿಮೆ, ಇವರು ಹೆಚ್ಚು ಎನ್ನುವಂತಿಲ್ಲ. ಹೊಸ ಮಾದರಿಯಲ್ಲಿಯೂ ಅವರ “ಕೈಚಳಕ’ ಮುಂದುವರೆಯಲಿದೆ. ಸರ್ಕಾರ, ಟ್ರಾಯ್ ಮೇಲುಸ್ತರದ ಸಮಸ್ಯೆಗಳನ್ನು ತೆಗೆದುಕೊಂಡಷ್ಟೇ ಗಂಭೀರವಾಗಿ ಚಂದಾದಾರರ ಮಟ್ಟದ ಗೊಂದಲ, ವಂಚನೆಗಳನ್ನು ಪರಿಗಣಿಸುವ ಕಾಲ ಬರಬೇಕು. – ಮಾ.ವೆಂ.ಸ.ಪ್ರಸಾದ್, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ