ಬೆಂಗಳೂರು: ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಹೊಸ ದರ ನಿಗದಿ ನಿಯಮವನ್ನು ಖಂಡಿಸಿ ದಕ್ಷಿಣ ಭಾರತ ಆಪರೇಟರ್ಸ್ ಅಸೋಸಿಯೇಷನ್‌ನಿಂದ ಗುರುವಾರ ಬಂದ್ ಹಮ್ಮಿಕೊಂಡಿದ್ದು, ಬೆಳಗ್ಗೆ 6 ರಿಂದ ರಾತ್ರಿ 10ರವರೆಗೆ ದಕ್ಷಿಣ ಭಾರತದ ವಿವಿಧ ರಾಜ್ಯಗಳ ಕೇಬಲ್ ಸೇವೆಗಳು ಬಂದ್ ಆಗಲಿವೆ. ಅಲ್ಲದೆ ರಾಜ್ಯದ 80 ಲಕ್ಷಕ್ಕೂ ಹೆಚ್ಚಿನ ಕೇಬಲ್ ಸಂಪರ್ಕದಲ್ಲಿ ವ್ಯತ್ಯಯವಾಗಲಿದೆ. ಟ್ರಾಯ್‌ನ ಹೊಸ ನಿಯಮದಿಂದ ವಿಭಿನ್ನ, ಪ್ರತ್ಯೇಕ ದರಗಳು ಜಾರಿಗೆ ಬರಲಿವೆ.
ಪ್ರಸ್ತುತ ನಗರ ಭಾಗದ ಗ್ರಾಹಕರು 300 ರೂ, ಗ್ರಾಮೀಣ ಗ್ರಾಹಕರು 150 ರೂ. ನೀಡಿ 400 ಕ್ಕೂ ಹೆಚ್ಚಿನ ಚಾನೆಲ್‌ಗಳನ್ನು ಪಡೆಯುತ್ತಿದ್ದಾರೆ. ಟ್ರಾಯ್ ಹೊಸ ನೀತಿಯಿಂದ ಈಗ ಎಲ್ಲಾ ಗ್ರಾಹಕರು ಜಿಎಸ್‌ಟಿ ಸೇರಿ 154 ರೂ.ಕಡ್ಡಾಯವಾಗಿ ಪಾವತಿಸಬೇಕಿದೆ. ನಂತರ ತಮ್ಮ ಇಚ್ಚೆಯ ಚಾನೆಲ್‌ಗಳಿಗೆ ಪ್ರತ್ಯೇಕ ಶುಲ್ಕ ಹಾಗೂ ತೆರಿಗೆ ನೀಡಬೇಕಿದೆ. ಇದರಿಂದಾಗಿ ಕೇಬಲ್ ಆಪರೇಟರ್ ಹಾಗೂ ವೀಕ್ಷಕರಿಗೆ ಹೊರೆ ಆಗುತ್ತಿದೆ.
ಹೀಗಾಗಿ, ಟ್ರಾಯ್ ನಿಯಮ ವಿರೋಧಿಸಿ ರಾಜ್ಯಾದ್ಯಂತ ಬಂದ್ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಕೇಬಲ್ ಆಪರೇಟರ್ ಸಂಘದ ಅಧ್ಯಕ್ಷ ಪ್ಯಾಟ್ರಿಕ್ ರಾಜು ತಿಳಿಸಿದ್ದಾರೆ. ಉಚಿತವಾಗಿ ನೀಡುತ್ತಿರುವ 100 ಚಾನೆಲ್‌ಗಳಲ್ಲಿ 24 ದೂರದರ್ಶನ ಚಾನೆಲ್‌ಗಳು, ಸುದ್ದಿ ಚಾನೆಲ್‌ಗಳೇ ಇವೆ. ಮನೋರಂಜನೆ, ಕ್ರೀಡಾ ಚಾನೆಲ್‌ಗಳು ಸಾಕಷ್ಟು ಕಡಿಮೆ ಇವೆ. ಅಲ್ಲದೇ ಪ್ರಸ್ತುತ ಕೇಬಲ್ ಆಪರೇಟರ್ ನೀಡುತ್ತಿರುವಷ್ಟು ಚಾನೆಲ್‌ಗಳನ್ನು ಈ ಹೊಸ ನಿಯಮದಡಿ ಪಡೆದರೆ ತಿಂಗಳ ಶುಲ್ಕ ಒಂದು ಸಾವಿರ ರೂ.ದಾಟುತ್ತದೆ. ಕನ್ನಡ ಚಾನೆಲ್‌ಗಳ ಪೈಕಿ ಎಲ್ಲಾ ನ್ಯೂಸ್ ಚಾನೆಲ್‌ಗಳು ಮಾತ್ರ ಉಚಿತವಿದ್ದು, ಉಳಿದ ಎಲ್ಲಾ ಮನೋರಂಜನಾ ಚಾನೆಲ್‌ಗಳಿಗೆ ಪ್ರತ್ಯೇಕ ಶುಲ್ಕ ನೀಡಬೇಕಿದೆ. ಅಲ್ಲದೆ, ಈ ಹಿಂದೆ ಕೇಬಲ್ ಅಪರೇಟರ್ಗಳೇ ಶೇ.5ರಷ್ಟು ತೆರಿಗೆ ಕಟ್ಟುತ್ತಿದ್ದರು. ಆದರೆ, ಈಗ ಶುಲ್ಕದ ಜತೆ ಶೇ.18 ರಷ್ಟು ಜಿಎಸ್‌ಟಿ ಕಟ್ಟಬೇಕಾಗಿದೆ. ಇದು ಗ್ರಾಹಕ ವಿರೋಧಿ ನಡೆ ಎಂದರು.