Advertisement

ಸಂಪುಟ ಉಪಸಮಿತಿ ಕಣ್ಣೊರೆಸುವ ತಂತ್ರ

07:25 AM Jun 17, 2019 | Lakshmi GovindaRaj |

ಬೆಂಗಳೂರು: ಜಿಂದಾಲ್‌ಗೆ ಭೂಮಿ ಪರಭಾರೆ ಮಾಡುವ ಸಂಬಂಧ ಸಚಿವ ಸಂಪುಟದ ತೀರ್ಮಾನವನ್ನು ಪುನರ್‌ ಪರಿಶೀಲಿಸಲು ಉಪಸಮಿತಿ ರಚನೆ ಮಾಡಿರುವುದು ಕೇವಲ ಕಣ್ಣೊರೆಸುವ ತಂತ್ರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದ್ದಾರೆ.

Advertisement

ಸಿಎಂ ಗೃಹ ಕಚೇರಿಗೆ ಮುತ್ತಿಗೆ ಹಾಕುವ ಸಂಬಂಧ ಪ್ರತಿಭಟನಾ ರ್ಯಾಲಿ ಹೊರಡುವ ಮುನ್ನ ಮಾತನಾಡಿದ ಅವರು, ಜಿಂದಾಲ್‌ ಕಂಪೆನಿಗೆ ಭೂಮಿ ಮಾರಾಟ ವಿಚಾರದಲ್ಲಿ ಸರ್ಕಾರ ಹಠ ಹಿಡಿದಿರುವುದನ್ನು ಗಮನಿಸಿದರೆ ಇದರಲ್ಲಿ ಭಾರೀ ಭ್ರಷ್ಟಾಚಾರ ಅಥವಾ ಕಿಕ್‌ಬ್ಯಾಕ್‌ ಪಡೆದಿರುವ ಅನುಮಾನ ಮೂಡುತ್ತಿದೆ.

ಕೂಡಲೇ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್‌ ಮುಖಂಡರೇ ಸರ್ಕಾರದ ಈ ತೀರ್ಮಾನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಬೆಲೆ ಬಾಳುವ ಭೂಮಿಯನ್ನು ಖಾಸಗಿ ಕಂಪೆನಿಗೆ ಸರ್ಕಾರ ಯಾವ ಕಾರಣಕ್ಕೆ ಮಾರಾಟ ಮಾಡಲು ಮುಂದಾಗಿದೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಹೇಳಿದರು.

ಜನರ ಪರ ಹೋರಾಟ: ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಮಾತನಾಡಿ, ನಾವು ಜನರ ಪರವಾಗಿ ಹೋರಾಟ ಮಾಡುತ್ತಿದ್ದೇವೆ. ಮುಖ್ಯಮಂತ್ರಿಗಳು ಜಿಂದಾಲ್‌ ಕಂಪೆನಿಗೆ ಭೂಮಿ ಮಾರಾಟ ಮಾಡುವುದಕ್ಕೂ ಮೊದಲು ಜನರೊಂದಿಗೆ ಚರ್ಚೆ ನಡೆಸಬೇಕು. ಅನ್ನದಾನ ಸಂಕಷ್ಟಕ್ಕೆ ಸಿಲುಕಿದ್ದಾನೆ. ಸಾಲಮನ್ನಾ ಘೋಷಣೆಯಾಗಿಯೇ ಉಳಿದಿದೆ. ಈಗಲೂ ಬ್ಯಾಂಕ್‌ಗಳಿಂದ ನೋಟಿಸ್‌ ನೀಡಲಾಗುತ್ತಿದೆ. ರೈತರ ಖಾತೆಗೆ ಜಮೆ ಮಾಡಿದ್ದ ಹಣವನ್ನು ಹಿಂಪಡೆಯಲಾಗಿದೆ. ಇದು ಸಮ್ಮಿಶ್ರ ಸರ್ಕಾರ ನಡೆದುಕೊಳ್ಳುವ ರೀತಿ ಎಂದು ಕಿಡಿ ಕಾರಿದರು.

ರಾಜ್ಯಾದ್ಯಂತ ಉಗ್ರ ಹೋರಾಟ: ರೈತರ ಸಾಲಮನ್ನಾ ಘೋಷಣೆಯಾಗಿಯೇ ಉಳಿದಿದೆ. ಬರ ನಿರ್ವಹಣೆ ವೈಫ‌ಲ್ಯ ಸೇರಿ ಎಲ್ಲ ವಿಷಯದಲ್ಲೂ ಸಮ್ಮಿಶ್ರ ಸರ್ಕಾರ ಸಂಪೂರ್ಣ ವಿಫ‌ಲವಾಗಿದೆ. ರಾಜ್ಯದಲ್ಲಿ ಭೀಕರ ಬರಗಾಲವಿದ್ದು, ಜನರಿಗೆ ಕುಡಿಯುವ ನೀರು ಸಿಗುತ್ತಿಲ್ಲ. ಜಾನುವಾರುಗಳಿಗೆ ಮೇವಿಲ್ಲ. ಹಾಗಿದ್ದರೂ ಒಬ್ಬ ಸಚಿವರೂ ಜಿಲ್ಲಾ ಪ್ರವಾಸ ಮಾಡುತ್ತಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಸರ್ಕಾರವನ್ನು ಬಡಿದೆಬ್ಬಿಸುವ ಜತೆಗೆ ಇದೇ ಧೋರಣೆ ಮುಂದುವರಿಸಿದರೆ ರಾಜ್ಯದೆಲ್ಲೆಡೆ ಹೋರಾಟ ನಡೆಸಲಾಗುವುದು ಎಂದು ಯಡಿಯೂರಪ್ಪ ಎಚ್ಚರಿಕೆ ನೀಡಿದರು.

Advertisement

ಪ್ರತಿಭಟನಾ ರ್ಯಾಲಿಯಲ್ಲಿ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಮಾಜಿ ಡಿಸಿಎಂ ಆರ್‌.ಅಶೋಕ್‌, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ.ರವಿ, ಅರವಿಂದ ಲಿಂಬಾವಳಿ, ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ಮುರುಗೇಶ್‌ ನಿರಾಣಿ, ವಿ.ಸುನೀಲ್‌ ಕುಮಾರ್‌, ಎಸ್‌. ಸುರೇಶ್‌ ಕುಮಾರ್‌, ಉದಯ್‌ ಗರುಡಾಚಾರ್‌, ಹರೀಶ್‌ ಪುಂಜಾ ಸೇರಿದಂತೆ ಹಲವು ಶಾಸಕರು, ಮಾಜಿ ಸಂಸದರು, ಬಿಬಿಎಂಪಿ ಸದಸ್ಯರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಐಎಂಎ ಹಗರಣದಲ್ಲಿ ಸರ್ಕಾರದ ಪ್ರಭಾವಿಗಳೇ ಶಾಮೀಲಾಗಿದ್ದಾರೆ. ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ಹಾಗೂ ಐಎಂಎ ಮುಖ್ಯಸ್ಥ ಮನ್ಸೂರ್‌ ಖಾನ್‌ ಆತ್ಮೀಯರಾಗಿದ್ದರು. ರಾಜಕೀಯ ಪ್ರಭಾವ ಬಳಸಿಕೊಂಡು ಪ್ರಭಾವಿಗಳನ್ನು ರಕ್ಷಿಸಲು ಎಸ್‌ಐಟಿ ರಚಿಸಲಾಗಿದೆ. ಇದು ಅಂತಾರಾಷ್ಟ್ರೀಯ ಮಟ್ಟದ ಹಗರಣವಾಗಿದ್ದು, ಸಿಬಿಐ ತನಿಖೆಗೆ ಒಪ್ಪಿಸಬೇಕು. ಮನ್ಸೂರ್‌ ಖಾನ್‌ ಆಸ್ತಿಯನ್ನು ತಕ್ಷಣವೇ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು.
-ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

ಬೆಂಗಳೂರಿನಲ್ಲಿ 48 ಗಂಟೆ ಅಹೋರಾತ್ರಿ ಧರಣಿ ಬಳಿಕ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿದೆ. ಮುಂದೆ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ, ಧರಣಿ ಮುಂದುವರಿಯಲಿದೆ. ಹಾಗೆಯೇ ತಾಲೂಕು ಮಟ್ಟದಲ್ಲೂ ಹೋರಾಟ ಆರಂಭಿಸುವ ಬಗ್ಗೆ ಸದ್ಯದಲ್ಲೇ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.
-ಎನ್‌.ರವಿಕುಮಾರ್‌, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next