ಹೊಸದಿಲ್ಲಿ : ಬಹುನಿರೀಕ್ಷಿತ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾರಿ ಲೆಕ್ಕಾಚಾರಗಳೊಂದಿಗೆ ನಡೆಸಿದ್ದು ಮಹತ್ವದ ಖಾತೆಯಾದ ರಕ್ಷಣಾ ಇಲಾಖೆಯನ್ನು ನಿರ್ಮಲಾ ಸೀತಾರಾಮನ್ ಅವರಿಗೆ ನೀಡಿದ್ದಾರೆ. ಸುರೇಶ್ ಪ್ರಭು ಅವರು ನಿರ್ವಹಿಸುತ್ತಿದ್ದ ರೈಲ್ವೆ ಖಾತೆಯನ್ನು ಪಿಯೂಷ್ ಗೋಯಲ್ ಅವರಿಗೆ ನೀಡಿದ್ದಾರೆ. ಪ್ರಭು ಅವರಿಗೆ ವಾಣಿಜ್ಯ ಖಾತೆಯನ್ನು ನೀಡಲಾಗಿದೆ. ಇನ್ನುಳಿದಂತೆ ಅನಂತ್ ಕುಮಾರ್ ಹೆಗಡೆ ಅವರಿಗೆ ಕೌಶಲಾಭಿವೃದ್ಧಿ ಖಾತೆ ಸಿಕ್ಕಿದೆ.
ಮೊದಲ ಸ್ವತಂತ್ರ ರಕ್ಷಣಾ ಸಚಿವೆ!
58 ರ ಹರೆಯದ ನಿರ್ಮಲಾ ಸೀತಾರಾಮನ್ ಅವರು ಮೊದಲ ಸ್ವತಂತ್ರ ರಕ್ಷಣಾ ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕರ್ನಾಟಕದಿಂದ ರಾಜ್ಯ ಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ರಾಜ್ಯ ಖಾತೆಯಿಂದ ಸಂಪುಟ ದರ್ಜೆಗೆ ಬಡ್ತಿ ಪಡೆದಿದ್ದರು. 1982 ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ಅವರ ಹೆಚ್ಚುವರಿ ಖಾತೆಯಾಗಿ ರಕ್ಷಣಾ ಖಾತೆಯನ್ನು ನಿರ್ವಹಿಸಿದ್ದರು.
ಅನಿವಾರ್ಯ ಪರಿಸ್ಥಿತಿಯಲ್ಲಿ ರಕ್ಷಣಾ ಸಚಿವ ಸ್ಥಾನಕ್ಕೆ ಮನೋಹರ್ ಪರ್ರಿಕರ್ ಅವರು ರಾಜೀನಾಮೆ ನೀಡಿ ಗೋವಾ ಮುಖ್ಯಮಂತ್ರಿಯಾದ ಹಿನ್ನಲೆಯಲ್ಲಿ ರಕ್ಷಣಾ ಖಾತೆ ಖಾಲಿ ಉಳಿದಿತ್ತು. ಖಾತೆಯ ಹೆಚ್ಚುವರಿಯಾಗಿ ಅರುಣ್ ಜೇಟ್ಲಿ ಅವರಿಗೆ ವಹಿಸಲಾಗಿತ್ತು.