ಹೊಸದಿಲ್ಲಿ: ಶಿಕ್ಷಣಕ್ಕಾಗಿ ಸಾಲ ಪಡೆದುಕೊಂಡಿದ್ದೀರಾ? ಇನ್ನು ಅದರ ಬಡ್ಡಿ ಹಾಗೂ ಕಂತನ್ನು ಕೋರ್ಸ್ ಮುಗಿದು ಒಂದು ವರ್ಷದವರೆಗೂ ಪಾವತಿ ಮಾಡಬೇಕಾಗಿಲ್ಲ. ಇಂಥ ವ್ಯವಸ್ಥೆಯನ್ನು ಕೇಂದ್ರ ಸರಕಾರವೇ ಒದಗಿಸಿದೆ. ಅದಕ್ಕಾಗಿಯೇ ಕೇಂದ್ರದ ವತಿಯಿಂದ 6,600 ಕೋಟಿ ರೂ. ಮೊತ್ತವನ್ನು ನೀಡಲಾಗಿದೆ. 2017-18ರಿಂದ 2019-20ನೇ ಸಾಲಿನ ವರೆಗೆ ಸುಮಾರು ಹತ್ತು ಲಕ್ಷ ವಿದ್ಯಾರ್ಥಿಗಳಿಗೆ ಯೋಜನೆ ನೆರವಾಗಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾಬ್ಡೇಕರ್ ಹೇಳಿದ್ದಾರೆ. ಪ್ರತಿ ವರ್ಷ 2,200 ಕೋಟಿ ರೂ. ಮೊತ್ತವನ್ನು ಬಡ್ಡಿ ಪಾವತಿಗಾಗಿಯೇ ಸರಕಾರ ಮೀಸಲಿರಿಸಿದೆ.
ಶೈಕ್ಷಣಿಕ ಸಾಲದಲ್ಲಿ ಇದುವರೆಗೆ, ಸಾಲದ ಕಂತು ಆರಂಭವಾಗಲು ಕೋರ್ಸ್ ಮುಗಿದ ಮೇಲೆ ಒಂದು ವರ್ಷದ ಹೆಚ್ಚುವರಿ ಕಾಲಾವಕಾಶ ಇರುತ್ತಿತ್ತಾದರೂ ಬಡ್ಡಿಯ ಮೊತ್ತವನ್ನು ಸಾಲ ಕೊಟ್ಟಂದಿನಿಂದಲೇ ಪರಿಗಣಿಸಲಾಗುತ್ತಿತ್ತು. ಆದರೆ, ಇನ್ನು ಮುಂದೆ ಸಾಲದ ಕಂತು ಆರಂಭವಾಗುವ ದಿನದಿಂದ ಬಡ್ಡಿ ಲೆಕ್ಕ ಹಾಕಲಾಗುತ್ತದೆ. ಸರಳವಾಗಿ ಹೇಳುವುದಿದ್ದರೆ ಎರಡು ವರ್ಷಗಳ ಸ್ನಾತಕೋತ್ತರ ಪದವಿ ಆಗಿದ್ದರೆ, ಕೋರ್ಸ್ ಮುಗಿದ ಒಂದು ವರ್ಷದವರೆಗೆ ಬಡ್ಡಿ ವಿಧಿಸಲಾಗುವುದಿಲ್ಲ. 2018-19ನೇ ಸಾಲಿನಲ್ಲಿ ಶೈಕ್ಷಣಿಕ ಸಾಲ ಪಡೆದಿದ್ದರೆ, 2019-20 ಮತ್ತು ಒಂದು ವರ್ಷದವರೆಗೆ ಅಂದರೆ 2021ರ ವರೆಗೆ ಅದನ್ನು ಪಾವತಿ ಮಾಡಬೇಕಾಗಿಲ್ಲ.
ಆದಾಯ ಮಿತಿ: ವಾರ್ಷಿಕ ಆದಾಯ 4.5 ಲಕ್ಷ ರೂ.ಗಳಿಗಿಂತ ಕಡಿಮೆ ಇರುವ ಕುಟುಂಬದ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಹರಾಗಿದ್ದಾರೆ. ಈ ಯೋಜನೆ ವ್ಯಾಪ್ತಿಯಲ್ಲಿ 7.50 ಲಕ್ಷ ರೂ. ವರೆಗೆ ಶೈಕ್ಷಣಿಕ ಸಾಲ ಪಡೆಯಲು ಅವಕಾಶ ಇದೆ. ಅದಕ್ಕೆ ಸರಕಾರವೇ ಬಡ್ಡಿ ಪಾವತಿಸಲಿದೆ. ಯೋಜನೆಗಾಗಿ 2009ರಿಂದ 2014ರ ವರೆಗೆ ಪ್ರತಿ ವರ್ಷ 800 ಕೋಟಿ ರೂ. ವೆಚ್ಚ ಮಾಡಿದೆ ಎಂದಿದ್ದಾರೆ ಸಚಿವ ಜಾಬ್ಡೇಕರ್. 2014ರಿಂದ 2017ರ ಅವಧಿಯಲ್ಲಿ ಈ ಯೋಜನೆಗಾಗಿ ಪ್ರತಿ ವರ್ಷ 1,800 ಕೋಟಿ ರೂ. ನೀಡಲಾಗಿದೆ ಎಂದಿದ್ದಾರೆ. ಈ ಯೋಜನೆಗೆ ಬಡ್ಡಿ ಪ್ರಮಾಣವೂ ಕಡಿಮೆ ಇರಲಿದೆ.
ಪಠ್ಯಗಳಲ್ಲಿ ಕ್ಯೂಆರ್ ಕೋಡ್
2019ರಿಂದ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಲ್ಲಿ ಕ್ಯೂಆರ್ ಕೋಡ್‌ಗಳನ್ನು ಅಳವಡಿಸಲಾಗುತ್ತದೆ. ಅದರಿಂದ ವೆಬ್ ಆಧಾರಿತ ಲಿಂಕ್‌ಗಳ ಮೂಲಕ ಆಯಾ ವಿಷಯಕ್ಕೆ ಸಂಬಂಧಿಸಿದ ವೀಡಿಯೋ, ಪ್ರಾತ್ಯಕ್ಷಿಕೆಗಳನ್ನು ನೋಡಲು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಇದರಿಂದ ಆ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯಲಿದೆ.
ಮೂರು ಯೋಜನೆ ವಿಲೀನ: ಸರ್ವಶಿಕ್ಷಾ ಅಭಿಯಾನ್, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನ್ ಮತ್ತು ಟೀಚರ್ಸ್ ಎಜುಕೇಶನ್ (ಟಿ.ಇ) ಅನ್ನು ವಿಲೀನಗೊಳಿಸಲಾಗುತ್ತದೆ ಎಂದೂ ಜಾಬ್ಡೇಕರ್ ತಿಳಿಸಿದ್ದಾರೆ. ಸಾರ್ವಜನಿಕ ಶಿಕ್ಷಣ ಕ್ಷೇತ್ರವನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ಈ ಮೂರು ಯೋಜನೆಗಳನ್ನು ವಿಲೀನಗೊಳಿಸಲು ನಿರ್ಧರಿಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.