ಹೊಸದಿಲ್ಲಿ: ಅಂದಾಜು 6,456 ಕೋಟಿ ರೂ. ವೆಚ್ಚದ ರೈಲು ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರದ ಸಂಪುಟ ಸಮಿತಿ ಒಪ್ಪಿಗೆ ನೀಡಿದೆ ಎಂದು ರೈಲ್ವೇ ಇಲಾಖೆ ಹೇಳಿದೆ.
ಈವರೆಗೆ ಸಂಪರ್ಕ ಸಾಧಿಸಲು ಸಾಧ್ಯವಾಗದ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು ಈ ಯೋಜನೆಗಳಿಂದ ಸಾಧ್ಯವಾಗಲಿದೆ. ಈಗಿರುವ ಮಾರ್ಗಗಳ ಸಾಮರ್ಥ್ಯವನ್ನು ಹೆಚ್ಚಿಸುವುದರ ಜತೆಗೆ ಆರ್ಥಿಕ ಪ್ರಗತಿಗೆ ಅನುಕೂಲವಾಗುವ ರೀತಿಯಲ್ಲಿ ಪೂರೈಕೆ ಸರಪಳಿ ಬಲಗೊಳಿಸಲು ಸಾಧ್ಯವಾಗಲಿದೆ ಎಂದು ಸಚಿವಾಲಯ ಹೇಳಿದೆ.
ಈಗ ಒಪ್ಪಿಗೆ ನೀಡಲಾಗಿರುವ ರೈಲು ಯೋಜನೆಗಳ ಪೈಕಿ 3 ಪ್ರಾಜೆಕ್ಟ್ ಗಳು ಒಡಿಶಾ, ಝಾರ್ಖಂಡ್, ಪಶ್ಚಿಮ ಬಂಗಾಲ ಮತ್ತು ಛತ್ತೀಸ್‌ಗಢದ 7 ಜಿಲ್ಲೆಗಳನ್ನು ಸಂಪರ್ಕಿಸಲಿವೆ. ಈಗಿರುವ ಜಾಲವನ್ನು 300 ಕಿ.ಮೀ.ಗೆ ಹೆಚ್ಚಿಸಲಿದೆ. 14 ಹೊಸ ರೈಲು ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗುತ್ತದೆ. 2 ಹೊಸ ಮಾರ್ಗಗಳು ಮತ್ತು ಒಂದು ಮಲ್ಟಿ ಟ್ರ್ಯಾಕಿಂಗ್ ಯೋಜನೆಗಳು ಇದರಲ್ಲಿ ಸೇರಿವೆ. ಜಮ್ಶೆಡ್‌ಪುರ್-ಪುರಿಲಿಯಾ-ಅಸಾನ್‌ಸೋಲ್ 121 ಕಿ.ಮೀ. ಉದ್ದದ ಮಾರ್ಗಕ್ಕೆ 2170 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಅದೇ ರೀತಿ ಉಳಿದ 2 ಮಾರ್ಗಗಳಾದ ಸಾರಡೇಗಾ-ಬಲಮುಂಡಾ ಡಬಲ್ ಲೈನ್ ಹಾಗೂ ಬಾರ್ಗಾರೋಡ್-ನವಾಪಾರ ರಸ್ತೆ ಹೊಸ ಮಾರ್ಗಗಳನ್ನು ಹಾಕಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.
ಏನೇನು ಲಾಭ? ಹೊಸ ರೈಲು ಯೋಜನೆಗಳಿಂದ 1,300 ಹಳ್ಳಿಗಳ 11 ಲಕ್ಷ ಜನರಿಗೆ ಲಾಭವಾಗಲಿದೆ. ಮಲ್ಟಿ ಟ್ರ್ಯಾಕಿಂಗ್ ಯೋಜನೆಗಳಿಂದ 1,300 ಹಳ್ಳಿಗಳು ಮತ್ತು 19 ಲಕ್ಷ ಜನರಿಗೆ ಪ್ರಯೋಜನವಾಗಲಿದೆ. ಕೃಷಿ ಉತ್ಪನ್ನಗಳು, ರಸಗೊಬ್ಬರ, ಕಲ್ಲಿದ್ದಿಲು, ಕಬ್ಬಿಣದ ಅದಿರು, ಸ್ಟೀಲ್, ಸಿಮೆಂಟ್ ಮತ್ತು ಸುಣ್ಣ ಇತ್ಯಾದಿ ವಸ್ತುಗಳ ಸಾರಿಗೆಗೂ ಹೆಚ್ಚು ಲಾಭವಾಗಲಿದೆ ಎಂದು ಇಲಾಖೆ ತಿಳಿಸಿದೆ.