Advertisement
ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಕಾಣಿಸಿಕೊಂಡು ಜನಜೀವನ ಅಸ್ತವ್ಯಸ್ತಗೊಂಡಿರುವ ಹಿನ್ನೆಲೆಯಲ್ಲಿ ಮೊದಲಿಗೆ ರಕ್ಷಣೆ ಹಾಗೂ ಸ್ಪಂದನಾ ಕಾರ್ಯಗಳತ್ತ ಗಮನ ಹರಿಸುವಂತೆ ವರಿಷ್ಠರು ಸೂಚನೆ ನೀಡಿದ್ದಾರೆ. ಹಾಗಾಗಿ ಬುಧವಾರ ತರಾತುರಿಯಲ್ಲಿ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಹಿಂದಿರುಗಿದ ಯಡಿಯೂರಪ್ಪ ಅವರು, ಬಳಿಕ ಬೆಳಗಾವಿಗೆ ತೆರಳಿ ಪ್ರಗತಿ ಪರಿಶೀಲನೆ ನಡೆಸಿ ತುರ್ತಾಗಿ ರಕ್ಷಣಾ ಕಾರ್ಯ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
Related Articles
Advertisement
ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಬರಿಗೈನಲ್ಲಿ ವಾಪಾಸ್ಸಾಗುವಂತಾಯಿತು. ಬುಧವಾರ ಮಧ್ಯಾಹ್ನ 1.30ರ ಸುಮಾರಿಗೆ ದೆಹಲಿ ವಿಮಾನ ನಿಲ್ದಾಣದಿಂದ ಹೊರಟ ಯಡಿಯೂರಪ್ಪ ಅವರು, ಸಂಜೆ 5ರ ಹೊತ್ತಿಗೆ ಡಾಲರ್ ಕಾಲೋನಿ ನಿವಾಸ ತಲುಪಿದರು. ಸಂಜೆ 5.45ರ ಹೊತ್ತಿಗೆ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಬೆಳಗಾವಿಗೆ ತೆರಳಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ರಕ್ಷಣಾ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಳ್ಳುವಂತೆ ಸೂಚಿಸಿದರು.
ಆಕಾಂಕ್ಷಿಗಳಲ್ಲಿ ತಳಮಳ: ಬಿಜೆಪಿ ಸರ್ಕಾರ ರಚನೆಯಾಗಿ 13 ದಿನಗಳಾದರೂ ಸಂಪುಟ ರಚನೆಯಾಗದ ಕಾರಣ ಸಚಿವಾಕಾಂಕ್ಷಿಗಳಲ್ಲಿ ತಳಮಳ ಸೃಷ್ಟಿಯಾಗಿದೆ. ವಿಶ್ವಾಸಮತ ಸಾಬೀತುಪಡಿಸಿದ ನಂತರ ಕೆಲವೇ ದಿನಗಳಲ್ಲಿ ಸಂಪುಟ ರಚನೆಯಾಗಲಿದೆ ಎಂಬ ನಿರೀಕ್ಷೆಯಲ್ಲಿ ಸಚಿವಾಕಾಂಕ್ಷಿಗಳಿದ್ದರು. ಆದರೆ 10 ದಿನ ಕಳೆದರೂ ಸಂಪುಟ ರಚನೆಗೆ ವರಿಷ್ಠರಿಂದ ಹಸಿರು ನಿಶಾನೆ ಸಿಗದ ಕಾರಣ ತಮಗೆ ಸಂಪುಟದಲ್ಲಿ ಅವಕಾಶ ಸಿಗುವುದೋ, ಇಲ್ಲವೋ ಎಂಬ ಆತಂಕದಲ್ಲಿ ದಿನ ಕಳೆಯುವಂತಾಗಿದೆ. ಜತೆಗೆ, ಯಡಿಯೂರಪ್ಪ ಅವರ ಪ್ರಮಾಣ ವಚನ ಸ್ವೀಕಾರ ದಿನಾಂಕ, ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ವರಿಷ್ಠರ ನಡೆ ಸಚಿವಾಕಾಂಕ್ಷಿಗಳಲ್ಲಿ ಇನ್ನಷ್ಟು ಒತ್ತಡ ಸೃಷ್ಟಿಸಿದೆ ಎನ್ನಲಾಗಿದೆ.
ಕೆಲ ದಿನಗಳ ಬಳಿಕ ದೆಹಲಿಗೆ: ರಾಜ್ಯದಲ್ಲಿ ತಲೆದೋರಿರುವ ಪ್ರವಾಹ ಹಾಗೂ ಸುಷ್ಮಾ ಸ್ವರಾಜ್ ಅವರ ನಿಧನದ ಹಿನ್ನೆಲೆಯಲ್ಲಿ ಸಂಪುಟ ರಚನೆ ಬಗ್ಗೆ ಚರ್ಚಿಸಲು ಸಾಧ್ಯವಾಗಿಲ್ಲ. ಹಾಗಾಗಿ, ಕೆಲ ದಿನಗಳ ಬಳಿಕ ದೆಹಲಿಗೆ ಭೇಟಿ ನೀಡಿ ಚರ್ಚೆ ನಡೆಸುವುದಾಗಿ ಯಡಿಯೂರಪ್ಪನವರ ನೇತೃತ್ವದ ನಿಯೋಗವೇ ತಿಳಿಸಿತು. ಇದಕ್ಕೆ ಹೈಕಮಾಂಡ್ ಸಮ್ಮತಿಸಿದೆ. ಈ ಹಿನ್ನೆಲೆಯಲ್ಲಿ ವಾರಾಂತ್ಯ ಇಲ್ಲವೇ ಮುಂದಿನ ವಾರದಲ್ಲಿ ಯಡಿಯೂರಪ್ಪ ನೇತೃತ್ವದ ನಿಯೋಗ ಮತ್ತೂಮ್ಮೆ ವರಿಷ್ಠರ ಭೇಟಿಗೆ ದೆಹಲಿ ಯಾತ್ರೆ ಕೈಗೊಳ್ಳಲಿದೆ ಎಂದು ಮೂಲಗಳು ಹೇಳಿವೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕೇಂದ್ರ ಸಚಿವರನ್ನು ಭೇಟಿಯಾಗಿದ್ದೇನೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ತಲೆದೋರಿರುವ ಹಿನ್ನೆಲೆಯಲ್ಲಿ ಮೊದಲಿಗೆ ಪರಿಹಾರ ಕಾರ್ಯಗಳನ್ನು ಕೈಗೊಳ್ಳಿ. ನಂತರ ಸಂಪುಟ ರಚನೆ ಬಗ್ಗೆ ಚರ್ಚಿಸೋಣ ಎಂದು ವರಿಷ್ಠರು ಸೂಚಿಸಿದ್ದಾರೆ. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿಯವರು ಸೇರಿದಂತೆ ಎಲ್ಲ ಸಂಸದರು, ಶಾಸಕರಿಗೆ ಆಯಾ ಕ್ಷೇತ್ರಗಳಲ್ಲಿ ಇರುವಂತೆ ಸೂಚನೆ ನೀಡಿದ್ದೇನೆ. ಆ.10 ಇಲ್ಲವೇ 11ಕ್ಕೆ ಮತ್ತೆ ದೆಹಲಿಗೆ ತೆರಳಲಿದ್ದೇನೆ.-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ