ಬೆಂಗಳೂರು/ ಹಿರೇಕೆರೂರು: ಉಪ ಚುನಾವಣೆ ನೆಪದಲ್ಲಿ ಸಚಿವ ಸಂಪುಟ ವಿಸ್ತರಣೆ ಮುಂದೂಡಿಕೆ ಬಗ್ಗೆಯೂ ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ್ ತಮ್ಮ ಆಕ್ರೋಶವನ್ನು ಬಹಿರಂಗವಾಗಿ ಟ್ವೀಟ್ ಮೂಲಕ ಹೊರಹಾಕಿದ್ದಾರೆ. ಜತೆಗೆ ಇತರೆ ಆಕಾಂಕ್ಷಿಗಳು ನಾಯಕರ ಮುಂದೆ ಅತೃಪ್ತಿ ವ್ಯಕ್ತಪಡಿಸಿದ್ದು, ಇದು ಬೇರೆ ಸ್ವರೂಪ ಪಡೆಯುವ ಸಾಧ್ಯತೆ ಇದೆ.
ಸಂಪುಟ ವಿಸ್ತರಣೆ ಮಾಡದೆ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗುತ್ತಿದೆ. ಕಾಂಗ್ರೆಸ್ ಶಾಸಕರಿಗೆ ಅಪಮಾನ ಮಾಡಿದೆ. ಸಚಿವ ಸಂಪುಟ ವಿಸ್ತರಣೆ ಮುಂದೂಡಿಕೆ ಪಕ್ಷದ ಹೆಸರಿನಲ್ಲಿ ಸರ್ವಾ ಧಿಕಾರವನ್ನು ಎತ್ತಿ ಹಿಡಿಯುವ ನಿಲುವಾಗಿದೆ ಎಂದು ಬಿ.ಸಿ.ಪಾಟೀಲ್ ತುಸು ಖಾರವಾಗಿಯೇ ಆರೋಪಿಸಿದ್ದಾರೆ. ಸಂಪುಟ ವಿಸ್ತರಣೆ ಪದೇ ಪದೆ ಮುಂದೂಡುತ್ತಿರುವುದು ಶಾಸಕರಿಗೆ ಮಾಡುತ್ತಿರುವ ಅಪಮಾನ. ಪ್ರಜಾಪ್ರಭುತ್ವ ವಿರೋಧಿ ನೀತಿಯೂ ಹೌದು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ,ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ,ಉಪ ಮುಖ್ಯಮಂತ್ರಿ ಡಾ.ಪರಮೇಶ್ವರ್‌ಗೆ ಟ್ವೀಟ್ ಮಾಡಿದ್ದಾರೆ.
ಹಿರೇಕೆರೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಹಿರೇಕೆರೂರು ಕ್ಷೇತ್ರಕ್ಕೆ ಕಳೆದ 36 ವರ್ಷಗಳಿಂದ ಸಚಿವ ಸ್ಥಾನ ಸಿಕ್ಕಿಲ್ಲ. ಹಾವೇರಿ, ಗದಗ, ಧಾರವಾಡ ಮೂರೂ ಜಿಲ್ಲೆಗಳಲ್ಲಿ ನಾನೊಬ್ಬನೇ ಲಿಂಗಾಯಿತ ಶಾಸಕ. ಈ ಬಗ್ಗೆ ಸಮುದಾಯದಲ್ಲೂ ಅಸಮಾಧಾನವಿದೆ. ಆದಷ್ಟು ಬೇಗ ಸಂಪುಟ ವಿಸ್ತರಣೆ ಮಾಡಬೇಕು. ಎಷ್ಟು ಜನಕ್ಕೆ ಸಾಧ್ಯವೋ ಅಷ್ಟು ಜನರಿಗೆ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಇದೇ ರೀತಿಯ ಅಸಮಾಧಾನ ಸಚಿವಾಕಾಂಕ್ಷಿಗಳೂ ಹೊರಹಾಕಿದ್ದಾರೆ. ಉಪ ಚುನಾವಣೆ ನೆಪದಲ್ಲಿ ಸಂಪುಟ ವಿಸ್ತರಣೆ ಮುಂದೂಡುವುದು ಸರಿಯಲ್ಲ ಎಂದಿದ್ದಾರೆ. ಈಗ ವಿಸ್ತರಣೆ ಮಾಡಿದರೆ ಆಗುವ ನಷ್ಟವಾದರೂ ಏನು? ಎಂದು ಪ್ರಶ್ನಿಸಿರುವ ಅವರು, ಆಷಾಢ, ಶ್ರಾವಣ, ಪಿತೃಪಕ್ಷ ಆಯ್ತು ಈಗ ಉಪ ಚುನಾವಣೆ ನೆಪ ಹೇಳುವುದು ಬೇಡ ಎಂದು ಪಕ್ಷದ ನಾಯಕರಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಸಂಪುಟ ವಿಸ್ತರಣೆ ಮುಂದೂಡುತ್ತ ಹೋದರೆ ಪ್ರಜಾಪ್ರಭುತ್ವಕ್ಕೆ ಅರ್ಥವೇ ಇರುವುದಿಲ್ಲ. ಯಾವ ಉದ್ದೇಶಕ್ಕಾಗಿ ವಿಸ್ತರಣೆ ಮಾಡುತ್ತಿಲ್ಲ ಎಂಬುದು ಗೊತ್ತಾಗುತ್ತಿಲ್ಲ. ಸರ್ಕಾರ ರಚನೆಯಾಗಿ ಐದು ತಿಂಗಳು ಕಳೆದರೂ ಸಂಪುಟ ವಿಸ್ತರಣೆಗೆ ಇಲ್ಲಸಲ್ಲದ ಕಾರಣ ಹೇಳುತ್ತ ಮುಂದೂಡುತ್ತಲೇ ಬರಲಾಗುತ್ತಿದೆ. ಆಷಾಢ, ಶ್ರಾವಣ, ಪಿತೃಪಕ್ಷ ಅಂತ ಹೇಳಿ ಈಗ ಉಪಚುನಾವಣೆ ಎಂಬ ಕಾರಣ ನೀಡಲಾಗುತ್ತಿದೆ. ನಮ್ಮ ಹಿಂದೆಯೂ ಅನೇಕ ಕಾರ್ಯಕರ್ತರು, ಮುಖಂಡರಿದ್ದಾರೆ. ನಾವು ಏನೋ ನಿರೀಕ್ಷೆ ಇಟ್ಟುಕೊಂಡಿರುತ್ತೇವೆ. ಪಕ್ಷ ಸಂಘಟನೆ ಹಾಗೂ ಲೋಕಸಭಾ ಚುನಾವಣೆ ಹಿತದೃಷ್ಟಿಯಿಂದ ಆದಷ್ಟು ಬೇಗ ಸಂಪುಟ ವಿಸ್ತರಣೆ ಮಾಡಬೇಕು ಎಂಬುದು ನನ್ನ ನಿಲುವು. ನನ್ನ ಮನಸ್ಸಿನ ಭಾವನೆ ಟ್ವೀಟ್ ಮಾಡಿದ್ದೇನೆ ಎಂದರು.
ಇಂದು ವೇಣುಗೋಪಾಲ್ ಬೆಂಗಳೂರಿಗೆ
ಉಪ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸೋಮವಾರ ಬೆಂಗಳೂರಿಗೆ ಆಗಮಿಸುವ ಸಾಧ್ಯತೆಯಿದೆ. ಬಾಗಲಕೋಟೆ, ಬಳ್ಳಾರಿ, ಶಿವಮೊಗ್ಗ ಜಿಲ್ಲಾ ಮುಖಂಡರ ಜತೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಮಾತುಕತೆ ನಡೆಸಲಿದ್ದಾರೆ. ರಾಮನಗರ ಹಾಗೂ ಮಂಡ್ಯ ಕ್ಷೇತ್ರ ಜೆಡಿಎಸ್‌ಗೆ ಬಿಟ್ಟುಕೊಡುವ ಬಗ್ಗೆ ಜಿಲ್ಲಾ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದು ಆ ಎರಡೂ ಜಿಲ್ಲೆಯ ನಾಯಕರ ಜತೆಯೂ ವೇಣುಗೋಪಾಲ್ ಚರ್ಚಿಸಲಿದ್ದಾರೆ ಎಂದು ಹೇಳಲಾಗಿದೆ.
ಸಚಿವ ಸಂಪುಟ ಮುಂದೂಡುವಂತೆ ನಾನು ರಾಹುಲ್ ಗಾಂಧಿಗೆ ಸಲಹೆ ನೀಡಿಲ್ಲ. ಅವರನ್ನು ಭೇಟಿಯೇ ಮಾಡಿಲ್ಲ. ದೆಹಲಿಯಲ್ಲಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಆದಷ್ಟು ಬೇಗ ಸಂಪುಟ ವಿಸ್ತರಣೆ, ನಿಗಮ-ಮಂಡಳಿಗಳಿಗೆ ನೇಮಕಾತಿ ಮಾಡಿ ಎಂದು ಸಲಹೆ ನೀಡಿದ್ದೆ.
– ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ